ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆಲದ ಹೃದಯ ಬಡಿತ ಕೇಳಿಸಿಕೊಳಿ’

ಬದನವಾಳು: ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶದಲ್ಲಿ ಸಾಹಿತಿ ದೇವನೂರ ಮಹದೇವ ಅಭಿಮತ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮೈಸೂರು: ರಂಗಕರ್ಮಿ ಪ್ರಸನ್ನ ಅವರ ಸುಸ್ಥಿರ ಬದುಕಿನ ಆಲೋಚನೆಯನ್ನು ಮುಖ್ಯವಾಗಿ ಯುವಜನರಿಗೆ ಕೇಳಿಸಬೇಕಾಗಿದೆ. ಇದು ಬೇಕಾಗಿರುವುದು ಎಳೆಯರಿಗೆ ಎಂದು ಸಾಹಿತಿ ದೇವನೂರ ಮಹದೇವ ಸಲಹೆ ಮಾಡಿದರು. ‘ಸುಸ್ಥಿರ ಬದುಕು ಎಂಬುದು ಈ ನೆಲದ ಹೃದಯದ ಬಡಿತ. ನಮ್ಮ ಹೃದಯದ ಬಡಿತವನ್ನೇ ಕೇಳಿಸಿಕೊಳ್ಳದ ಸ್ಥಿತಿಯಲ್ಲಿ ಈಗ ನಾವಿದ್ದೇವೆ. ಇಂಥ ಸ್ಥಿತಿಯಲ್ಲಿ ಬದನವಾಳುವಿನ ಹೃದಯದ ಬಡಿತ ಭಾರತಕ್ಕೂ ಕೇಳಿಸುತ್ತಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

‘ಸುಸ್ಥಿರ ಬದುಕಿನ ಚಿಂತನೆಯನ್ನು ಈ ನೆಲದ ಹೃದಯ ಬಡಿತವನ್ನು ಸಮಾಜ ಕೇಳಿಸಿಕೊಳ್ಳುವುದು ಅಗತ್ಯವಾಗಿದೆ. ಕೇಳಿಸಿಕೊಳ್ಳದೇ ಇದ್ದರೆ ಉಳಿಯುವುದೇ ಕಷ್ಟವಾಗುತ್ತದೆ’ ಎಂದರು. ‘ಮಾಮೂಲಿ ರಾಜಕಾರಣದಿಂದ ಇದನ್ನು ಉಳಿಸುವುದು ಸಾಧ್ಯವಿಲ್ಲ. ಪರ್ಯಾಯವಾಗಿ ಯುವಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಕಾಲೇಜುಗಳಲ್ಲಿ ಇಂಥದೇ ನಾಲ್ಕೈದು ಪರಿಕಲ್ಪನೆಗಳನ್ನು ಒಟ್ಟಾಗಿಸಿ ನಿರಂತರವಾಗಿ ಸಂವಾದ, ವಿಚಾರಗೋಷ್ಠಿ ಆಯೋಜಿಸಬಹುದು’ ಎಂಬುದಾಗಿ  ಸಲಹೆ ಅವರು ಮಾಡಿದರು.

ಕೃಷಿ ವಿಮುಖತೆ ದೊಡ್ಡ ವಂಚನೆ: ಜಾಗತೀಕರಣ, ಉದಾರೀಕರಣ ನೀತಿಗಳ ಹಿಂದೆ ಹಳ್ಳಿಗಳನ್ನು ಖಾಲಿ ಮಾಡಿಸುವ ಹುನ್ನಾರ, ಕೃಷಿ ಬಿಕ್ಕಟ್ಟು ಮೂಡಿಸುವ ಸ್ಪಷ್ಟ ನೀತಿ ಇದೆ. ಈ ನೀತಿಗಳ ಪರಿಣಾಮ ಕೃಷಿ ವಲಯ ಗಂಡಾಂತರದಲ್ಲಿ ಇದ್ದು, ಅದರ ಬಗೆಗೆ ಜಾಗೃತಗೊಳ್ಳಬೇಕಾಗಿದೆ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

‘ಸುಸ್ಥಿರ ಕೃಷಿ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವ ಹಂಗಾಮಿನಲ್ಲಿ ಯಾವ ಬೆಳೆ ಎಂದು ತಿಳಿಯದಷ್ಟು ಹೊಸಪೀಳಿಗೆ ಕೃಷಿಯಿಂದ ದೂರ ಉಳಿದಿದೆ. ಇದು, ಜಾಗತೀಕರಣದ ಪರಿಣಾಮ. ಗಾಂಧೀಜಿ ಅವರಿಗೆ ಹೋರಾಟ ನಡೆಸಲು ವೈರಿ ಯಾರು ಎಂಬುದು ತಿಳಿದಿತ್ತು. ಈಗ ವೈರಿ ನಮ್ಮೊಳಗೇ ಇದ್ದಾನೆ. ಕೃಷಿ, ಸುಸ್ಥಿರ ಬದುಕಿನತ್ತ ಮುಖ ಮಾಡದಿರುವುದು ಮುಂದಿನ ಪೀಳಿಗೆಗೆ ಮಾಡುವ  ದೊಡ್ಡ ವಂಚನೆ’ ಎಂದು ಅವರು ಹೇಳಿದರು.

ಆಲೋಚನೆ, ಇನ್ನಷ್ಟು ಸ್ಪಷ್ಟವಾಗಲಿ: ಸುಸ್ಥಿರ ಪ್ರಸನ್ನ ಅವರ ಆಲೋಚನೆಯ ಕ್ರಮ ಸರಿಯಾಗಿದೆ. ಸರಳ ಬದುಕಿನ ಕ್ರಮ ಮಧ್ಯಮ ವರ್ಗದ ಜನರಿಗೆ ಡಯಟ್‌ ಎನ್ನಿಸಬಹುದು. ಹೀಗಾಗಿ ಸುಸ್ಥಿರ ಎಂಬ ಚಿಂತನೆಯು ಇನ್ನಷ್ಟು ಸ್ಪಷ್ಟವಾಗಬೇಕು ಎಂದು ಲೇಖಕ ರಹಮತ್ ತರೀಕೆರೆ ಅವರು ಪ್ರತಿಕ್ರಿಯಿಸಿದರು. ಮನುಷ್ಯನ ಆಹಾರ ಮತ್ತು ಆರೋಗ್ಯದ ಜೊತೆಗೆ ಜಾಗತೀಕರಣದ ಪರಿಣಾಮ ಮತ್ತು ಸರಳ ಬದುಕಿನ ಅಗತ್ಯವನ್ನು ಜೋಡಿಸುವ ಮೂಲಕ ಜನರಿಗೆ ಅರಿವು ಮೂಡಿಸಬೇಕು. ಇಲ್ಲಿ, ರೈತರೂ ಭಾಗವಹಿಸಿರುವುದು ಅರ್ಥಪೂರ್ಣ. ಆದರೆ, ಕೆಳವರ್ಗದ ಜನರು ತೊಡಗಿಕೊಳ್ಳದೇ ಪೂರ್ಣ ಆಗುವುದಿಲ್ಲ’ ಎಂದರು.

ಕಾರ್ಯತಂತ್ರ ಬೇಕು: ‘ಅಭಿವೃದ್ಧಿ ಹೆಸರಿನಲ್ಲಿ ನಾವು ಎಷ್ಟೆಲ್ಲಾ ಕಳೆದು ಕೊಂಡಿದ್ದೇವೆ ಎಂದು ಗಮನಿಸಬೇಕು. ಅನಾಗರಿಕರಂತೆ ನಿಸರ್ಗ ಕೊಟ್ಟಿರುವುದನ್ನೆಲ್ಲಾ ಕಳೆದುಕೊಳ್ಳುತ್ತಿದ್ದೇವೆ.  ನೈಸರ್ಗಿಕ ಸಂಪತ್ತು ಉಳಿಸುವ ಕಾರ್ಯತಂತ್ರ ನಮ್ಮಲ್ಲಿ ಇಲ್ಲ. ಅದನ್ನು ಸಾಧ್ಯವಾಗಿಸಬೇಕಾಗಿದೆ’ ಎಂದು ಎಂದು ಪರಿಸರವಾದಿ ಅ.ನ. ಯಲ್ಲಪ್ಪ ರೆಡ್ಡಿ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT