ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸಮಾಪ್ತಿ ವರದಿಗೆ ಅವಸರವೇಕೆ?’

ಕಲ್ಲಿದ್ದಲು: ಕುಮಾರ ಮಂಗಲಂ ಬಿರ್ಲಾ ವಿರುದ್ಧ ಪ್ರಕರಣ
Last Updated 12 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಉದ್ಯಮಿ ಕುಮಾರ ಮಂಗಲಂ ಬಿರ್ಲಾ ವಿರುದ್ಧದ ಪ್ರಕರಣ ಕೈಬಿಡಲು ಮುಂದಾಗಿರುವ ಸಿಬಿಐ ಅನ್ನು ಶುಕ್ರವಾರ ತರಾಟೆಗೆ ತೆಗೆದು­ಕೊಂಡ ವಿಶೇಷ ನ್ಯಾಯಾ­ಲಯ, ತರಾತುರಿ­ಯಲ್ಲಿ ಪರಿ­ಸಮಾಪ್ತಿ ವರದಿ ಸಲ್ಲಿಸಿರು­ವು­ದೇಕೆ ಎಂದು ಪ್ರಶ್ನಿಸಿದೆ.

‘ಈ ಪ್ರಕರಣವನ್ನು ಮುಕ್ತಾಯ­ಗೊಳಿಸಲು ಅವಸರಿಸುತ್ತಿರುವುದೇಕೆ? ಪ್ರಕರಣದ ವಿವರಗಳನ್ನು ಒಳಗೊಂಡ ಡೈರಿಯನ್ನು ಏಕೆ ಹಾಜರು ಮಾಡಿಲ್ಲ’ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಭರತ್‌ ಪರಾಶರ್‌ ಅವರು ಈ ಪ್ರಕರಣದ ತನಿಖಾಧಿಕಾರಿ­ಯನ್ನು ಖಾರವಾಗಿ ಪ್ರಶ್ನಿಸಿದರು.

ಮತ್ತೆ ವಿಚಾರಣೆ: ‘ಸುಪ್ರೀಂ’ ನಕಾರ
ಕಾನೂನುಬಾಹಿರವಾಗಿ ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿ ಪಡೆದ ಕಂಪೆನಿಗಳು ಸಲ್ಲಿಸಿರುವ ಮರುಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಸುಪ್ರೀಂ ಕೋರ್ಟ್‌ ಈಗಾಗಲೇ 218 ಕಲ್ಲಿದ್ದಲು ನಿಕ್ಷೇಪ ಮಂಜೂರಾತಿ­ಗಳನ್ನು ಅಕ್ರಮ ಎಂದಿದ್ದು, ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ. ಈ ಮಧ್ಯೆ, ಇಂತಹ ಪರವಾನಗಿಗಳನ್ನು ರದ್ದು ಮಾಡುವುದಾಗಿ ಸರ್ಕಾರ ಕೂಡ ಹೇಳಿದೆ. ಆದರೆ, ಈ ಅಕ್ರಮಕ್ಕೆ ಸರ್ಕಾರ ಕಾರಣ ಎಂದಿರುವ ಕಂಪೆನಿಗಳು, ಕಾನೂನು­ಬಾಹಿರವಾಗಿ ನಡೆದಿರುವ ಪ್ರತಿಯೊಂದು ಮಂಜೂರಾತಿಯನ್ನು ಪರಿಶೀಲಿ­ಸಲು ಸಮಿತಿ ರಚಿಸುವಂತೆ ಒತ್ತಾಯಿಸಿವೆ.

‘ಬಿರ್ಲಾ ಅವರ ಒಡೆತನದ ಹಿಂಡಾಲ್ಕೊ ಕಂಪೆನಿ ಕಲ್ಲಿದಲು ನಿಕ್ಷೇ­ಪದ ಮಂಜೂರಾತಿಗೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತ ಪರಿಶೀಲನಾ ಸಮಿತಿಯ ಮೂಲ ಟಿಪ್ಪಣಿ ನಾಪತ್ತೆಯಾಗಿದೆ’ ಎಂದು ತನಿಖಾಧಿಕಾರಿ ವಿಚಾರಣೆ ವೇಳೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿ­ಸಿದ ನ್ಯಾಯಾಧೀಶರು, ‘ಹಾಗಿದ್ದರೆ ಮೂಲ ಟಿಪ್ಪಣಿ ನಾಪತ್ತೆಯಾಗಿ­ರುವು­ದಕ್ಕೆ ಯಾವುದಾದರು  ಹೇಳಿಕೆಗಳು ಇವೆಯೇ’ ಎಂದು  ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ತತ್ತರಿಸಿದ ತನಿಖಾ­ಧಿಕಾರಿಗೆ ‘ನಿಮ್ಮ ಮೇಲಾ­ಧಿಕಾರಿ­ಗಳನ್ನು ಇಲ್ಲಿಗೆ ಬರಲು ಹೇಳಿ’ ಎಂದು ನ್ಯಾಯಾಧೀಶರು ಸೂಚಿಸಿದರು.

‘ನೀವು ಯಾವ ಆಧಾರದ ಮೇಲೆ ಈ ಪ್ರಕರಣ­ವನ್ನು ಮುಕ್ತಾಯ­ಗೊಳಿಸುವ ನಿರ್ಧಾರ ಕೈಗೊಂಡಿರಿ? ಇದೆಂತಹ ತನಿಖೆ... ನಿಮ್ಮ ಮೇಲಾ­ಧಿಕಾರಿಗಳು ಇದನ್ನು ಗಮನಿಸಲಿಲ್ಲವೆ? ಈ ಪ್ರಕರಣದ ವಿವರ­ವಿರುವ ಪೊಲೀಸರ ಕಡತ ತೆಗೆದುಕೊಂಡು ಬನ್ನಿ ಮತ್ತು ನಿಮ್ಮ ಮೇಲಾಧಿಕಾರಿ­ಯನ್ನು ಈಗಲೇ ಇಲ್ಲಿಗೆ ಬರಲು ಹೇಳಿ’ ಎಂದು ನ್ಯಾಯಾಧೀಶರು ಆದೇಶಿಸಿ­ದರು.

ಪರಿಸಮಾಪ್ತಿ ವರದಿ ಜೊತೆಗೆ ಸಲ್ಲಿಸಿರುವ ಕೆಲವು ಕಾಗದಪತ್ರಗಳು ಖಾಲಿ ಇದ್ದ ಕಾರಣ ಮತ್ತಷ್ಟು ಕೆಂಡಾ­ಮಂಡಲರಾದ ನ್ಯಾಯಾಧೀಶ ಭರತ್‌ ಪರಾಶರ್‌, ‘ಕೋರ್ಟ್‌ಗೆ ಏನನ್ನಾ­ದರೂ ಸಲ್ಲಿಸಬಹುದೆಂದು ಸಿಬಿಐ ಅಂದುಕೊಂಡಿದೆಯೋ ಹೇಗೆ?  ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT