ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಡಾಯಕ್ಕೆ ಅನಕೃ ಬರಹವೇ ಸ್ಫೂರ್ತಿ’

ಪ್ರಜಾವಾಣಿ ವಾರ್ತೆ
Last Updated 26 ಜುಲೈ 2015, 20:28 IST
ಅಕ್ಷರ ಗಾತ್ರ

ಬೆಂಗಳೂರು: ಅನಕೃ ಪ್ರತಿಷ್ಠಾನ ಮತ್ತು ವಿಎಲ್‌ಎನ್ ನಿರ್ಮಾಣ್ ಫೌಂಡೇಶನ್ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ,  ಎಚ್.ಎಸ್.ವೆಂಕಟೇಶಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ  ಅವರಿಗೆ ‘ಅನಕೃ–ನಿರ್ಮಾಣ್ ಸ್ವರ್ಣ ಪ್ರಶಸ್ತಿ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬರಗೂರು ರಾಮಚಂದ್ರಪ್ಪ, ‘ಶ್ರೇಷ್ಠ ಸಾಹಿತಿಯಾಗಿದ್ದ ಅನಕೃ ಅವರ ಬರಹಗಳಿಂದ ನನ್ನ ಬದುಕಿಗೆ ಹೊಸ ತಿರುವು ಸಿಕ್ಕಿತು. ಬಂಡಾಯ ಮನೋಭಾವಕ್ಕೆ ಸ್ಫೂರ್ತಿ ಸಿಕ್ಕಿತು. ಅವರ ಫೋಟೋ ನನ್ನ ಹಳ್ಳಿ ಮನೆಯ ಗೋಡೆ ಮೇಲೆ ಇನ್ನೂ ಇದೆ’ ಎಂದು ಸ್ಮರಿಸಿದರು.

‘ಇಂದು ಅನಕೃ ಪ್ರಶಸ್ತಿ ಪಡೆದ ನಾನು, ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ನರಹಳ್ಳಿ ಬಾಲಸುಬ್ರಹ್ಮಣ್ಯ ಒಂದು ದಿನವೂ ಜಗಳವಾಡಿಲ್ಲ, ನಾವು ಮೂವರು ಕನ್ನಡ ಸಾಹಿತ್ಯ ವಲಯದಲ್ಲಿ ಸೌಹಾರ್ದ ಸಂಬಂಧಕ್ಕೆ  ರೂಪಕವಾಗಿದ್ದೇವೆ’ ಎಂದು ಹಾಸ್ಯವಾಡಿದರು.

ಎಚ್.ಎಸ್. ವೆಂಕಟೇಶಮೂರ್ತಿ ಅವರು ಮಾತನಾಡಿ, ‘ನಲವತ್ತು ವರ್ಷದ ಸುದೀರ್ಘ ಕಾಲದ ಗೆಳೆಯರಾದ  ನಮಗೆ ಒಂದೇ ವೇದಿಕೆಯಲ್ಲಿ ಪ್ರಶಸ್ತಿ ಕೊಟ್ಟಿದ್ದು ತುಂಬಾ ಸಂತಸವನ್ನುಂಟುಮಾಡಿದೆ’ ಎಂದರು. ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಸರ್ಕಾರವೇ ಅನಕೃ ಪ್ರತಿಷ್ಠಾನವನ್ನು ಸ್ಥಾಪಿಸಲು  ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಂಸದ ಎಂ.ವೀರಪ್ಪ ಮೊಯ್ಲಿ, ‘ಕಾದಂಬರಿ ಸಾರ್ವಭೌಮ ಎಂದು ಕನ್ನಡ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಅನಕೃ ಅವರು, ಕನ್ನಡ ಜಾಗೃತಿ ಹುಟ್ಟು ಹಾಕಿದ್ದಲ್ಲದೇ ಬಂಡಾಯದ ಭೀಷ್ಮ ಆಗಿದ್ದರು’ ಎಂದು ಹೇಳಿದರು.

ಅನಕೃ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿ.ಲಕ್ಷ್ಮಿನಾರಾಯಣ ಮಾತನಾಡಿ, ‘1996ರಿಂದ ಪ್ರತಿ ವರ್ಷ ಕನ್ನಡ ನಾಡು ನುಡಿಗೆ ಗಣನೀಯ ಸೇವೆ ಸಲ್ಲಿಸಿದ ಸಾಹಿತಿಯೊಬ್ಬರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ವೆಂಕಟಸುಬ್ಬಯ್ಯ ಅವರ ಸಲಹೆ ಮೇರೆಗೆ ಈ ವರ್ಷದ ಪ್ರಶಸ್ತಿಯನ್ನು ಮೂವರು ಸಾಹಿತಿಗಳಿಗೆ ನೀಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT