ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಂಡತನವೇ ಬಂಡವಾಳ’

ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ ಗೋಷ್ಠಿ
Last Updated 17 ಜನವರಿ 2015, 19:30 IST
ಅಕ್ಷರ ಗಾತ್ರ

ಧಾರವಾಡ: ‘ಭಂಡತನವೇ ಸಣ್ಣ ಪತ್ರಿಕೆಗಳ ಬಂಡವಾಳ. ಅದೇ ಭಂಡತನದೊಂದಿಗೆ ಆರಂಭವಾಗಿ ಸತ್ತ ಪತ್ರಿಕೆಗಳಿಗೆ ಶ್ರದ್ಧಾಂಜಲಿ. ಹಾಗೆಯೇ ಈಗಿರುವ ಪತ್ರಿಕೆಗಳನ್ನು ಬದುಕಿಸಲು ಚಂದಾದಾರರ ಅಗತ್ಯವಿದೆ’ ಎಂದು ಸಭಿಕರ ಸಾಲಿನಲ್ಲಿ ಕುಳಿತು ಪ್ರತಿಕ್ರಿಯಿಸಿದ
ಹಿರಿಯ ಸಾಹಿತಿ ಚಂದ್ರಶೇಖ ಪಾಟೀಲ ಅವರ ಮಾತಿನ ಮೂಲಕ ಎರಡನೇ ದಿನದ ಮೊದಲ ಗೋಷ್ಠಿ ‘ಸಾಹಿತ್ಯದ ಬೆಳವಣಿಗೆ
ಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ’ಕ್ಕೆ ತೆರೆ ಎಳೆಯಲಾಯಿತು.

ಈ ಗೋಷ್ಠಿಯಲ್ಲಿ ನಡೆದ ಚರ್ಚೆಯಲ್ಲಿ ಸಣ್ಣ ಹಾಗೂ ಸಾಹಿತ್ಯ ಪತ್ರಿಕೆಗಳ ಕೊಡುಗೆಯನ್ನು ನೆನಪಿಸಿಕೊಳ್ಳುವುದರ ಜತೆಗೆ ಅವುಗಳ
ಕುರಿತ ತಾತ್ವಿಕ ಚರ್ಚೆ ಕೂಡ ನಡೆಯಿತು. ಚರ್ಚೆಯಲ್ಲಿ ಸಾಹಿತ್ಯ ಪತ್ರಿಕೆಗಳ ಸಂಪಾದಕರಾದ ಸಿದ್ಧಲಿಂಗ ಪಟ್ಟಣಶೆಟ್ಟಿ, ಡಿ.ವಿ.ಪ್ರಹ್ಲಾದ ಭಾಗವಹಿಸಿದ್ದರೆ, ಶೂದ್ರ ಶ್ರೀನಿವಾಸ ಅವರ ಅನುಪಸ್ಥಿತಿಯಲ್ಲಿ ಕವಿ ಬಿ.ಆರ್‌. ಲಕ್ಷ್ಮಣರಾವ್‌ ಪಾಲ್ಗೊಂಡಿದ್ದರು. ಚರ್ಚೆಯ ನಿರ್ದೇಶನವನ್ನು ಕಥೆಗಾರ ರಾಘವೇಂದ್ರ ಪಾಟೀಲ ಮಾಡಿದರು.

ನವ್ಯ, ನವೋದಯ, ದಲಿತ ಬಂಡಾಯ ಹಾಗೂ ನವ್ಯೋತ್ತರ ಸಾಹಿತ್ಯದ ಕುರಿತು ಗೋಷ್ಠಿಯ ಆರಂಭದಿಂದಲೂ ಚರ್ಚೆಯಲ್ಲಿ ಪಾಲ್ಗೊಂಡವರ ಹಾಗೂ ಸಭಿಕರ ನಡುವಿನ ಸಂವಾದ, ಮಾತು, ಪ್ರತಿ ಮಾತು, ಚರ್ಚೆಗಳು ನಡೆಯುತ್ತ ದಿನದ ಆರಂಭದಲ್ಲೇ ಸಂಭ್ರಮ ಕಾವು ಪಡೆಯಿತು.

ಬೆಟಗೇರಿ ಕೃಷ್ಣಶರ್ಮರ ‘ಜಯಂತಿ’, ಪಿ. ಲಂಕೇಶ್‌ ಸಂಪಾದಿಸಿದ ‘ಪಾಂಚಾಲಿ’, ‘ಕವಿತಾ’, ‘ಸಾಕ್ಷಿ’, ‘ಲಹರಿ’, ‘ರುಜುವಾತು’, ‘ಮನ್ವಂತರ’, ‘ಜಯಕರ್ನಾಟಕ’ ಮುಂತಾದ ಪತ್ರಿಕೆಗಳನ್ನು ಉಲ್ಲೇಖ ಮಾಡಿದ ಪಟ್ಟಣಶೆಟ್ಟರು, ‘ನವೋದಯದ ಸಂದರ್ಭದಲ್ಲಿ ಸಣ್ಣ ಪತ್ರಿಕೆಗಳಲ್ಲಿ ವಿಮರ್ಶೆಗೆ ಪ್ರಾಧಾನ್ಯತೆ ಇರಲಿಲ್ಲ. ಆದರೆ, ‘ಜಯಂತಿ’ ಪತ್ರಿಕೆಯ ಮೂಲಕ ವಿಮರ್ಶೆಗೆ ಅವಕಾಶ ಲಭಿಸಿತು.

‘ಜಯಕರ್ನಾಟಕ’ ಆರಂಭದಲ್ಲಿ ವಿಮರ್ಶೆಗಳನ್ನು ಪ್ರಕಟಿಸಲೇ ಇಲ್ಲ. ಜತೆಗೆ ಹೊಸ ಲೇಖಕರ ಬರವಣಿಗೆಗೆ ಅದು ಪ್ರೋತ್ಸಾಹಿಸಲಿಲ್ಲ. ಈ ಕಾರಣಕ್ಕಾಗಿಯೇ ನವೋದಯದ ಪತ್ರಿಕೆಗಳು ಸೋತವು. ‘ಜಯಂತಿ’ ಹೆಚ್ಚು ಓದುಗರನ್ನು ತಲುಪಿತು. ಅದರ ಯಶಸ್ಸಿನಿಂದ ಪ್ರೇರಣೆಗೊಂಡು ಇನ್ನೂ ಅನೇಕ ಪತ್ರಿಕೆಗಳು ಹುಟ್ಟಿಕೊಂಡವು’ ಎಂದು ಹೇಳಿದರು.

‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನವೋದಯ ಕಾಲದ ಎಲ್ಲಾ ಪತ್ರಿಕೆಗಳು ತಮ್ಮೊಳಗೆ ನೋಡಿಕೊಳ್ಳುವುದರ ಬದಲು, ತಮ್ಮ ಸುತ್ತ ನಡೆಯುತ್ತಿದ್ದ ವಿದ್ಯಮಾನಗಳ ಕುರಿತು ಹೆಚ್ಚು ಗಮನ ಕೇಂದ್ರೀಕರಿಸಿದ್ದವು. ಇವು ಪತ್ರಿಕೆಗಳಿಗಷ್ಟೇ ಅಲ್ಲದೆ, ಕೃತಿ ರಚನೆಯಲ್ಲೂ ಇದು ಪ್ರತಿಫಲಿಸಿತು’ ಎಂದು ನಿರ್ದೇಶಕ ರಾಘವೇಂದ್ರ ಪಾಟೀಲ ಮಾತು ಸೇರಿಸಿದರು.

‘ನವ್ಯ ಕಾವ್ಯವು ತನ್ನನ್ನು ತಾನು ಗುರುತಿಸಿಕೊಂಡಿದ್ದೇ ಸಣ್ಣ ಪತ್ರಿಕೆಗಳ ಮೂಲಕ’ ಎಂದು ಕವಿ ಬಿ.ಆರ್‌. ಲಕ್ಷ್ಮಣರಾವ್‌ ತಮ್ಮ ಮಾತು ಆರಂಭಿಸಿದರು.

‘ಕವಿತಾ’, ‘ಲಹರಿ’, ‘ಸಂಕ್ರಮಣ’, ‘ಸಾಕ್ಷಿ’ ಪತ್ರಿಕೆಗಳ ಮೂಲಕವೇ ನವ್ಯದ ಬಗ್ಗೆ ನನ್ನಲ್ಲಿ ಸ್ಪಷ್ಟ ಕಲ್ಪನೆ ಮೂಡಿತ್ತು. ನವ್ಯದ ಕಾಲದಲ್ಲಿ ಪತ್ರಿಕೆಗಳಿಗೆ ವ್ಯಕ್ತಿನಿಷ್ಠ, ಅನುಭವ ನಿಷ್ಠವಾಗಿರುವುದು ಮುಖ್ಯ ಪರಿಕಲ್ಪನೆಯಾಗಿತ್ತು. ನವೋದಯ ಕಾಲಘಟ್ಟದಲ್ಲಿ ಜನರ ಬದ್ಧತೆಯನ್ನು ಬದಿಗೊತ್ತಿ ನವ್ಯ ಸಾಹಿತ್ಯವು ಮುಕ್ತ ಛಂದಸ್ಸಿನತ್ತ ಹೊರಳಿತ್ತು. ಪಾಶ್ಚಿಮಾತ್ಯ ಕಾವ್ಯಗಳಿಂದ ಪ್ರಭಾವಗೊಳಗಾಗಿತ್ತು. ಇವೆಲ್ಲವೂ ಸಣ್ಣ ಪತ್ರಿಕೆಗಳ ಮೂಲಕವೇ ತೆರೆದುಕೊಳ್ಳುತ್ತಾ ಸಾಗಿತು. ಹೀಗಾಗಿ ನವ್ಯ ಸಾಹಿತ್ಯವು ಹೊಸ ಲೇಖಕರ ಬಳಗವನ್ನು ಸೃಷ್ಟಿ ಮಾಡಿತು. ನವ್ಯದ ಕಾಲದಲ್ಲಿ ‘ಪ್ರಜಾವಾಣಿ’ಯಂಥ ದೊಡ್ಡಪತ್ರಿಕೆ ಹೊಸ ಬಗೆಯ ಕವಿತೆಗಳನ್ನು ಪ್ರಕಟಿಸಲು ಆರಂಭಿಸಿತು. ಇದು ಹೊಸ ಲೇಖಕರಿಗೆ ವೇದಿಕೆ ಕಲ್ಪಿಸಿತು. ನವ್ಯಕ್ಕೆ ಬೇಕಾದ ನವಭೂಮಿಕೆ ಹಾಗೂ ಸಿದ್ಧಾಂತವನ್ನು ಹಾಕಿಕೊಡುವಲ್ಲಿ ಆಗಿನ ಕಾಲದ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿತ್ತು’ ಎಂದು ಲಕ್ಷ್ಮಣರಾವ್‌ ಹೇಳಿದರು.

ಅವರ ಮಾತಿಗೆ ದನಿಗೂಡಿಸಿದ ‘ಸಂಚಯ’ ಸಾಹಿತ್ಯ ಪತ್ರಿಕೆಯ ಸಂಪಾದಕ ಡಿ.ವಿ. ಪ್ರಹ್ಲಾದ್‌, ‘1962 ನಂತರದ ನವ್ಯಕಾಲದಲ್ಲಿ ‘ಮನ್ವಂತರ‘ ಹಾಗೂ ‘ಸಾಕ್ಷಿ’ ಪತ್ರಿಕೆಗಳ ಮೂಲಕ ಸಣ್ಣಪತ್ರಿಕೆಗಳ ಉದಯ ಆಯಿತು ಎಂದು ವಿಮರ್ಶಕ ಜಿ.ಎಸ್‌. ಆಮೂರ ಅವರು ಹೇಳಿದ್ದಾರೆ. ಸುಶಿಕ್ಷಿತ ವರ್ಗ ಹಾಗೂ ಅತ್ಯುತ್ತಮ ಸಾಹಿತ್ಯದ ನಡುವಿನ ಕಂದಕವನ್ನು ಮುಚ್ಚುವ ಕೆಲಸವನ್ನು ಈ ಪತ್ರಿಕೆಗಳು ಮಾಡಿದವು. ಉದಯೋನ್ಮುಖ ಹಾಗೂ ಹೊಸ ಪ್ರತಿಭೆಗಳನ್ನು ಪೋಷಿಸುವ ಕೆಲಸವನ್ನು ಇವು ಮಾಡಿವೆ. ರಾಜಕೀಯ ಹಾಗೂ ಕಾವ್ಯ ಕಲ್ಪನೆಗಳ ಸಮನ್ವಯ ಸಾಧಿಸುವಂಥ ಕೆಲಸಗಳು ಸಾಹಿತ್ಯ ಪತ್ರಿಕೆಗಳ ಮುಖ್ಯವಾದ ಗುಣಲಕ್ಷಣಗಳು ಎಂದು ಆಮೂರ ಅವರು ಹೇಳುತ್ತಿದ್ದರು’ ಎಂದು ನೆನಪಿಸಿಕೊಂಡರು.

ಚರ್ಚೆಯಲ್ಲಿನ ಸ್ವಾರಸ್ಯಗಳು
----------------------------

ಅನಿವಾರ್ಯವಾಗಿ ಮೊಟಕು
ಗೋಷ್ಠಿಯ ಆರಂಭದಿಂದಲೂ ಚರ್ಚೆಯಲ್ಲಿ ಪಾಲ್ಗೊಂಡವರ ಹಾಗೂ ಸಭಿಕರ ನಡುವಿನ ಸಂವಾದಗಳು ನಡೆಯುತ್ತಲೇ ಇದ್ದ ಕಾರಣ ಅವಧಿ ಮೀರಿ ಗೋಷ್ಠಿ ಮುಂದುವರಿದಿತ್ತು. ಹೀಗಾಗಿ ಅನಿವಾರ್ಯವಾಗಿ ಗೋಷ್ಠಿಯ ನಿರ್ದೇಶಕರು ಚರ್ಚೆಯನ್ನು ಮೊಟಕುಗೊಳಿಸಿದರು.

ಗುಣಮಟ್ಟದ ಹಂಬಲ
ಜಾತಿ, ಪಂಥ, ಸಾಹಿತ್ಯದ ಗುಂಪುಗಾರಿಕೆ, ಲಿಂಗ, ವಯಸ್ಸು, ಪ್ರಾದೇಶಿಕತೆ, ವೈಚಾರಿಕತೆ ಇವೆಲ್ಲವನ್ನೂ ಮೀರಿ ಗುಣಮಟ್ಟವನ್ನು ಮಾತ್ರ ಕೇಂದ್ರೀಕರಿಸಿ ಒಂದು ಪತ್ರಿಕೆ ಮಾಡಬೇಕು ಎಂಬ ತತ್ವದ ಮೇಲೆ ‘ಸಂಕ್ರಮಣ’ ಪತ್ರಿಕೆ ಆರಂಭಿಸಿದೆವು. ಅಂದು ಮಾತ್ರವಲ್ಲ ಇಂದಿಗೂ ಅದೇ ನನ್ನ ಹಂಬಲವಾಗಿದೆ. ಸಣ್ಣಪತ್ರಿಕೆಗಳ ಮೂಲಕ ಹೊಸಬರು ಹಾಗೂ ಜತೆಯಲ್ಲಿರುವವರಿಗೆ ಹೆಚ್ಚಿನ ಅವಕಾಶ ನೀಡಬೇಕೆಂಬುದೇ ಮುಖ್ಯ ಉದ್ದೇಶ.
– ಸಿದ್ಧಲಿಂಗ ಪಟ್ಟಣಶೆಟ್ಟಿ

ನಿಲ್ಲಿಸಲೇಬೇಕಾದ ಸ್ಥಿತಿ
ದೊಡ್ಡ, ದಿಟ್ಟವಾದ ಪ್ರಯೋಗಗಳನ್ನು ದೊಡ್ಡಪತ್ರಿಕೆಗಳು ಪ್ರಕಟ ಮಾಡುವುದಿಲ್ಲ. ಹೊಸ ಬಗೆಯ ಬರಹ, ಪಂಥ, ವೈಚಾರಿಕತೆಗಳಿಗಾಗಿಯೇ ಈ ಸಣ್ಣ ಪತ್ರಿಕೆಗಳು ಹುಟ್ಟುತ್ತವೆ. ಸಣ್ಣ ಪತ್ರಿಕೆಗಳಲ್ಲಿ ಹೆಸರು ಮಾಡಿದ ಲೇಖಕರ ಕೃತಿಗಳನ್ನು ಆನಂತರದಲ್ಲಿ ದೊಡ್ಡ ಪತ್ರಿಕೆಗಳು ಪ್ರಕಟಿಸಲು ಆರಂಭಿಸಿದವು. ಹೀಗಾದಾಗ ಸಣ್ಣ ಪತ್ರಿಕೆಗಳನ್ನು ನಿಲ್ಲಿಸಲೇಬೇಕಾದ ಅನಿವಾರ್ಯತೆ ಎದುರಾಯಿತು.
– ಗಿರಡ್ಡಿ ಗೋವಿಂದರಾಜ

ಮಹಿಳೆಯರ ಕೊಡುಗೆ
ಮಹಿಳಾ ಸಾಹಿತ್ಯ ಪ್ರತಿನಿಧಿಗಳಿಂದ ಸಣ್ಣಪತ್ರಿಕೆ­ಗಳನ್ನು ಸ್ಥಾಪಿಸಿದ ಮಹಿಳೆಯರ ಕುರಿತು ವಿಷಯ ಪ್ರಸ್ತಾಪವಾಗದ್ದಕ್ಕೆ ಮಹಿಳಾ ಪ್ರತಿನಿಧಿ­ಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಮಹಿಳೆ­ಯರೇ ನಡೆಸು­ತ್ತಿದ್ದ ಪತ್ರಿಕೆಗಳ ಪಟ್ಟಿಯನ್ನು ಅವರು ನಿರ್ದೇಶಕ ರಾಘವೇಂದ್ರ ಪಾಟೀಲ ಅವರಿಗೆ ಕಳುಹಿಸಿದರು. ನಂಜನಗೂಡು ತಿರುಮಲಾಂಬ ಅವರ ‘ಕರ್ನಾಟಕ ನಂದಿ’, ಆರ್‌.ಕಲ್ಯಾಣಮ್ಮ ಅವರ ‘ಸರಸ್ವತಿ’ ಮುಂತಾದ ಪತ್ರಿಕೆಗಳನ್ನು ಉಲ್ಲೇಖಿಸಲೇ ಇಲ್ಲ ಎಂಬ ಆಕ್ಷೇಪ ವ್ಯಕ್ತವಾಯಿತು.

ಉದ್ರಿ ಚಂದಾದಾರರು
ಸಣ್ಣ ಪತ್ರಿಕೆಗಳನ್ನು ನಡೆಸುವುದು ಕಷ್ಟ ಎಂದು ತಿಳಿದೇ ನೀವು (ಗಿರಡ್ಡಿ ಮತ್ತು ಪಟ್ಟಣಶೆಟ್ಟಿ) ಪತ್ರಿಕೆಯನ್ನು ಬಿಟ್ಟಿದ್ದು. ಆದರೂ ಅವರು ಹಾಕಿಕೊಟ್ಟ ಆ ಭದ್ರಬುನಾದಿಯಿಂದ ಇಂದು ‘ಸಂಕ್ರಮಣ’ 50 ವರ್ಷಗಳನ್ನು ಪೂರೈಸಿದೆ. ನೂರಾರು ಜನ ಚಂದಾದಾ
ರರಿದ್ದಾರೆ. ಅವರಲ್ಲಿ 50ಕ್ಕೂ ಹೆಚ್ಚು ಉದ್ರಿಗಳೇ ಇದ್ದಾರೆ.
– ಚಂಪಾ

ಅಂತರ್ಜಾಲದ ನೆರವು
ಸಾಹಿತ್ಯದ ಬೆಳವಣಿಗೆಗೆ ಆಧುನಿಕ ತಂತ್ರಜ್ಞಾನದ ನೆರವು ಪಡೆಯುವುದು ಅಗತ್ಯ. ಅಂತರ್ಜಾಲದಲ್ಲಿ ಜಾಲತಾಣವನ್ನು ತೆರೆಯುವ ಮೂಲಕ ‘ಕೆಂಡಸಂಪಿಗೆ’, ‘ಅವಧಿ’ಯಂಥ ಪತ್ರಿಕೆಗಳು ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಉಂಟು ಮಾಡಿದವು. ಹೊಸ ಮಾಧ್ಯಮದ ಬಳಕೆಯಿಂದ ಕನ್ನಡ ಹಾಗೂ ಸಾಹಿತ್ಯ ಚಳವಳಿ ಕಟ್ಟಲು ಸಹಕಾರಿ. ಇದಕ್ಕೆ ಯಾವ ಚಂದಾದಾರರ ಸದಸ್ಯತ್ವಕ್ಕೂ ಕಾಯುವ ಅಗತ್ಯವಿಲ್ಲ.
– ಜೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT