ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಮಗಳ’ನ್ನು ನೋಡಿದಿರಾ?

Last Updated 7 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ಭಾರತದ ಮಗಳು’ ಸುದ್ದಿಯಲ್ಲಿದ್ದಾಳೆ. ಲೆಸ್ಲೀ ಉಡ್ವಿನ್‌ ಎಂಬ ಇಂಗ್ಲೆಂಡಿನ ಹೆಣ್ಣು ಮಗಳು ನಿರ್ಮಿಸಿದ ಈ ಸಾಕ್ಷ್ಯಚಿತ್ರವನ್ನು ಭಾರತ ಸರ್ಕಾರ ನಿಷೇಧಿಸಿದೆ. 2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಹೆಣ್ಣು ಮಗಳೊಬ್ಬಳ ಮೇಲೆ ನಿರ್ದಯವಾಗಿ ಅತ್ಯಾಚಾರ ನಡೆಸಿ, ಕೋರ್ಟಿನಲ್ಲಿ ಮರಣದಂಡನೆಯ ಶಿಕ್ಷೆ ಪಡೆದು ಈಗ ತಿಹಾರ್‌ ಜೈಲಿನಲ್ಲಿರುವ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್‌ನ ಸಂದರ್ಶನ ಈ ಸಾಕ್ಷ್ಯಚಿತ್ರದಲ್ಲಿದೆ.

ಈ ಸಾಕ್ಷ್ಯಚಿತ್ರದ ವಿರುದ್ಧ ಸಂಸತ್ತಿನಲ್ಲಿ ಪಕ್ಷಭೇದವಿಲ್ಲದೆ ಹಲವಾರು ಸದಸ್ಯರು ಮುಗಿಬಿದ್ದರು. ‘ಈ ಸಾಕ್ಷ್ಯಚಿತ್ರವನ್ನು ಯಾರಾದರೂ ವೀಕ್ಷಿಸಿದರೆ ಭಾರತದ ಘನತೆಗೆ ಕುಂದುಂಟಾಗುತ್ತದೆ. ಹೈಕೋರ್ಟ್‌ನಿಂದ ಮರಣದಂಡನೆ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ಒಬ್ಬ ಅತ್ಯಾಚಾರಿ, ತಾನು ಮಾಡಿದ್ದೇ ಸರಿ ಎನ್ನುವಂತೆ ಮಾತನಾಡಿದ್ದನ್ನು ಪ್ರಸಾರ ಮಾಡಿದರೆ ಆತನನ್ನು ಸಮರ್ಥಿಸಿದಂತೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜಾಗುತ್ತದೆ...’ ಎಂಬೆಲ್ಲ ಮಾತುಗಳನ್ನು ಆಡಲಾಯಿತು. ಟಿ.ವಿ ಚಾನೆಲ್‌ಗಳಲ್ಲಿ ಇದರ ಪರ- ವಿರುದ್ಧ ವಾಗ್ವಾದಗಳು ಜೋರಾಗಿ ನಡೆದವು. ಕೊನೆಗೂ ಸರ್ಕಾರ ಈ ಸಾಕ್ಷ್ಯಚಿತ್ರವನ್ನು ನಿಷೇಧಿಸಿತು.

ಸರ್ಕಾರಕ್ಕೆ ಧನ್ಯವಾದ ಹೇಳಬೇಕು. ಹಾಗೆ ಅದು ನಿಷೇಧಕ್ಕೆ ಒಳಗಾಗಿದ್ದು ಅಲ್ಲವಾಗಿದ್ದಲ್ಲಿ ನಾನು ಹಾಗೂ ನನ್ನಂತೆ ಸಾವಿರಾರು ಜನರು ಜಾಲತಾಣಗಳಲ್ಲಿ ಅದನ್ನು ಹುಡುಕಾಡಿ ನೋಡುತ್ತಿರಲಿಲ್ಲ. ಆ ಸಾಕ್ಷ್ಯಚಿತ್ರವನ್ನು ನೋಡಿದ ಬಳಿಕ ನನಗೆ ನಿಜಕ್ಕೂ ನಿರ್ಭಯ ಪ್ರಕರಣದ ಭಯಾನಕತೆಯ ಅರಿವಾಯಿತು. ಇಡೀ ಸಾಕ್ಷ್ಯಚಿತ್ರವನ್ನು ನಿರ್ದೇಶಕಿ ತುಂಬು ಸಂವೇದನಾಶೀಲರಾಗಿ ಚಿತ್ರಿಸಿದ್ದಾರೆ. 59 ನಿಮಿಷಗಳ ಈ ಸಾಕ್ಷ್ಯಚಿತ್ರದಲ್ಲಿ ಅತ್ಯಾಚಾರಕ್ಕೆ ಒಳಗಾಗಿ 2-3 ದಿನಗಳ ಬಳಿಕ ಸತ್ತೇ ಹೋದ ಜ್ಯೋತಿ ಸಿಂಗ್‌ಳನ್ನು ಎಲ್ಲೂ ತೋರಿಸಿಲ್ಲ.

ಆಕೆಯ ಶವವನ್ನು ಕೂಡಾ! ಆದರೆ ಆಕೆಯ ತಾಯಿ, ತಂದೆ, ನಿಕಟ ಗೆಳೆಯರನ್ನು ಮಾತನಾಡಿಸಲಾಗಿದೆ. ಅವರ ಹೇಳಿಕೆಗಳನ್ನು ಯಾವ ಉದ್ವೇಗ ಅಥವಾ ಉತ್ಪ್ರೇಕ್ಷೆಯೂ ಇಲ್ಲದೆ ತೋರಿಸಲಾಗಿದೆ. ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ಅಪರಾಧಿ ಮುಕೇಶ್‌, ಆತನ ಪರವಾಗಿ ವಾದಿಸಿದ ಇಬ್ಬರು ವಕೀಲರು, ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶೆ ಲೀಲಾ ಸೇಥಿ, ಶಿಕ್ಷೆಗೆ ಒಳಗಾಗಿರುವ ಇನ್ನೊಬ್ಬ ಅಪರಾಧಿ ಅಕ್ಷಯ ಠಾಕೂರ್‌ನ ಪತ್ನಿ ಪುನೀತಾ ದೇವಿ ಮತ್ತು ತಾಯಿ, ಬಲಾತ್ಕಾರಕ್ಕೆ ಒಳಗಾದ ಸಂತ್ರಸ್ತರನ್ನು ಸಲಹುತ್ತಿರುವ ಎನ್‌ಜಿಒ ಒಂದರ ಕಾರ್ಯಕರ್ತೆ, ಹಿರಿಯ ವಕೀಲರು, ಒಬ್ಬ ಸಮಾಜ ವಿಜ್ಞಾನಿ ಹೀಗೆ ಹಲವರ ಹೇಳಿಕೆಗಳನ್ನು ದಾಖಲಿಸಲಾಗಿದೆ.

ದೆಹಲಿಯಲ್ಲಿ ಸಂಜೆಗತ್ತಲಲ್ಲಿ ಚಲಿಸುತ್ತಿರುವ ಬಸ್ಸು, ಅದನ್ನೇರಿದ ಹುಡುಗಿ ಮತ್ತು ಹುಡುಗ, ಆಕೆಯ ಮೇಲೆ ನಡೆದ ಕ್ರೂರ ದಾಳಿ, ಆಕೆಯ ಶೈಕ್ಷಣಿಕ ಹಿನ್ನೆಲೆ, ಆಕೆಯ ತಂದೆ, ತಾಯಿಯ ನೆನಪಿನಂಗಳದಿಂದ ಮೂಡಿಬರುವ ವಿಷಣ್ಣ ಹಿನ್ನೋಟ- ಎಲ್ಲವನ್ನೂ ಚಿತ್ರಿಸಿರುವ ವಿಧಾನ ಒಂದು ಅತ್ಯುತ್ತಮ ಸಾಕ್ಷ್ಯಚಿತ್ರ ಹೇಗಿರಬೇಕು ಎನ್ನುವುದಕ್ಕೂ ಸಾಕ್ಷಿಯಾಗುವಂತಿದೆ. ನೋಡುತ್ತಾ ಹೋದಂತೆ ಹೆಣ್ಣಿನ ಮೇಲಿನ ಅತ್ಯಾಚಾರ ಎಂಬ ರಾಕ್ಷಸೀ ಕೃತ್ಯದ ಬಗ್ಗೆ ಹೇಸಿಗೆ ಹುಟ್ಟುತ್ತದೆ.

ನೋಡುತ್ತಿರುವ ನೀವು ಗಂಡಸಾಗಿದ್ದರೆ ನಿಮ್ಮ ಗಂಡಸು ಜಾತಿಯ ಬಗ್ಗೆಯೇ ಒಳಗಿಂದೊಳಗೆ ನಿಮಗೆ ಅಸಹನೆ, ನಾಚಿಕೆ ಹುಟ್ಟತೊಡಗುತ್ತದೆ. ನೋಡುತ್ತಿರುವ ನೀವು ಹೆಣ್ಣಾಗಿದ್ದಲ್ಲಿ, ‘ಇಂತಹ ಭಯಾನಕ ಪರಿಸರದಲ್ಲಿ ನಾನು ಎಷ್ಟೊಂದು ಎಚ್ಚರದಿಂದ ಬದುಕಬೇಕು’ ಎನ್ನುವ ಒಳಅರಿವು, ಎಚ್ಚರಿಕೆ ಮೂಡುತ್ತದೆ.

ಈ ಸಾಕ್ಷ್ಯಚಿತ್ರದಲ್ಲಿ ಅಪರಾಧಿಗಳ ಪರವಾಗಿ ವಾದಿಸಿದ ವಕೀಲನೊಬ್ಬ ಯಾವ ನಾಚಿಕೆಯೂ ಇಲ್ಲದೆ ಹೇಳುತ್ತಾನೆ- ‘ನಮ್ಮಲ್ಲಿ ಒಳ್ಳೆಯ ಹೆಣ್ಣು ಮಕ್ಕಳು ಸಂಜೆ 6 ಗಂಟೆಯ ಬಳಿಕ ಹುಡುಗರೊಂದಿಗೆ ಹೊರಗೆ ಓಡಾಡುವುದಿಲ್ಲ. ಹಾಗೆ ಓಡಾಡಲೂ ಬಾರದು...!’ ಅಪರಾಧಿಯ ಪರ ವಾದಿಸಿದ ಇನ್ನೊಬ್ಬ ವಕೀಲ ಕೇಳುತ್ತಾನೆ- ‘ನಮ್ಮಲ್ಲಿ 250ಕ್ಕೂ ಹೆಚ್ಚು ಸಂಸತ್‌ ಸದಸ್ಯರ ವಿರುದ್ಧ ಕೊಲೆ, ಬಲಾತ್ಕಾರ, ಸುಲಿಗೆ, ಹಲ್ಲೆಗಳನ್ನು ಮಾಡಿದ ಕ್ರಿಮಿನಲ್‌ ಆರೋಪಗಳಿವೆ; ನೀವು ಎಷ್ಟು ಮಂದಿಗೆ ಗಲ್ಲುಶಿಕ್ಷೆ ಕೊಟ್ಟಿದ್ದೀರಿ?’ (ಈ ಹೇಳಿಕೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ನನಗೂ ಗೊತ್ತಿಲ್ಲ. ಆದರೆ ಸಂಸತ್ತಿನಲ್ಲಿ ಚರ್ಚೆಯ ವೇಳೆ ಯಾರೊಬ್ಬ ಎಂ.ಪಿ.ಯೂ ವಕೀಲರ ಈ ಹೇಳಿಕೆಯ ಬಗ್ಗೆ ಚಕಾರ ಎತ್ತಲಿಲ್ಲ. ಏಕೆಂದರೆ ಅವರು ಯಾರೂ ಈ ಸಾಕ್ಷ್ಯಚಿತ್ರವನ್ನು ನೋಡಿರಲಿಲ್ಲ.)

ಚಿತ್ರದ ನಿರ್ದೇಶಕಿ ಎಷ್ಟೊಂದು ಸೂಕ್ಷ್ಮ ಮನಸ್ಸಿನವರೆಂದರೆ, ಅತ್ಯಾಚಾರದಲ್ಲಿ ಪಾಲ್ಗೊಂಡ ಬಾಲಾಪರಾಧಿಯ ಮುಖವನ್ನೂ ತೋರಿಸಿಲ್ಲ. ಆ ಬಾಲಾಪರಾಧಿಯ ಮನೆಗೆ ತೆರಳಿ ತಂಗಿ, ತಮ್ಮಂದಿರನ್ನು ಮಾತನಾಡಿಸಿದ ದೃಶ್ಯದಲ್ಲೂ ಅವರ ಮುಖಗಳನ್ನು ಬ್ಲರ್‌ ಮಾಡಲಾಗಿದೆ. ಒಂದು ತಿಂಗಳ ಕಾಲ ಬೀದಿಗಿಳಿದು ಪ್ರತಿಭಟನೆ ನಡೆಸಿ ಅಪರಾಧಿಗಳಿಗೆ ತ್ವರಿತ ಶಿಕ್ಷೆ ಆಗುವಂತೆ ನೋಡಿಕೊಂಡ, ಯುವಜನರ ಕೆಚ್ಚಿನ, ಸಾತ್ವಿಕ ಸಿಟ್ಟಿನ ಅಪೂರ್ವ ಪ್ರದರ್ಶನವೂ ಈ ಚಿತ್ರದಲ್ಲಿದೆ.

‘ನಿಜಕ್ಕೂ ಭಾರತದಲ್ಲಿ ಒಂದು ಅದ್ಭುತ ನಾಗರಿಕ ಸಮಾಜವಿದೆ. ಜಗತ್ತಿನ ಯಾವ ದೇಶದಲ್ಲೂ ರೇಪ್‌ ಪ್ರಕರಣದ ಬಗ್ಗೆ ಇಷ್ಟೊಂದು ಬದ್ಧತೆಯಿಂದ ಸ್ವಯಂಹೋರಾಟ ನಡೆದ ಇನ್ನೊಂದು ಪ್ರಕರಣ ನನಗೆ ಗೊತ್ತಿಲ್ಲ’ ಎನ್ನುತ್ತಾರೆ ನಿರ್ದೇಶಕಿ. ಹೌದು, ಪ್ರಮುಖ ಅಪರಾಧಿ ಮುಕೇಶ್‌ ನಿರ್ಲಜ್ಜೆಯಿಂದ ಮಾತನಾಡಿದ್ದಾನೆ. ಆದರೆ ಆತನ ಆ ಮಾತುಗಳ ಮೂಲಕ ನಾವು ಭಾರತದ ಯುವಕರನ್ನು ಅರ್ಥ ಮಾಡಿಕೊಳ್ಳಲೂ ಹೊಸ ದಾರಿಯೊಂದನ್ನು ನಿರ್ದೇಶಕಿ ತೋರಿದ್ದಾರೆ.

‘ಈ ಹಿಂದೆ ಯಾವತ್ತಾದರೂ ಲೈಂಗಿಕ ಸಂಪರ್ಕ ಮಾಡಿದ್ದೀಯ?’ ಎಂಬ ಪ್ರಶ್ನೆಗೆ ಮುಕೇಶ್‌ ಹೇಳುತ್ತಾನೆ- ‘ನಮ್ಮ ಹಳ್ಳಿಯಲ್ಲಿ ಇದು ಸಾಮಾನ್ಯ. ನಾನೂ ನಾಲ್ಕೈದು ವರ್ಷಗಳ ಹಿಂದೆ ಕದ್ದುಮುಚ್ಚಿ ಒಬ್ಬ ಹುಡುಗಿಯ ಸಂಪರ್ಕ ಮಾಡಿದ್ದೆ. ಹಳ್ಳಿಗಳಲ್ಲಿ ತುಟಿ ಚುಂಬನ ಅಪರಾಧ ಎನ್ನುವ ಮನೋಭಾವ ಹುಡುಗಿಯರಲ್ಲಿದೆ. ಆಕೆ ತುಟಿ ಕೊಡಲಿಲ್ಲ. ಆದರೆ ಗಡಿಬಿಡಿಯಲ್ಲೇ ದೇಹ ಕೊಟ್ಟಳು.’

ಸಾಕ್ಷ್ಯಚಿತ್ರವನ್ನು ನೋಡುವಾಗ ಹಲವೆಡೆ ನಾವು ಹನಿಗಣ್ಣಾಗುತ್ತೇವೆ. ಜ್ಯೋತಿಗೆ ಟ್ಯೂಷನ್‌ ಹೇಳಿಕೊಡುತ್ತಿದ್ದ ಗೆಳೆಯ ಹೇಳುತ್ತಾನೆ- ‘ಮೆಡಿಕಲ್‌ ಓದುತ್ತಿದ್ದ ಜ್ಯೋತಿ ಬುದ್ಧಿವಂತೆ. ದಿನಕ್ಕೆ 4-– 5 ಗಂಟೆ ಮಾತ್ರ ನಿದ್ರಿಸುತ್ತಿದ್ದಳು. ಆಕೆಯ ಇಂಗ್ಲಿಷ್‌ ತುಂಬ ಚೆನ್ನಾಗಿತ್ತು. ರಾತ್ರಿವರೆಗೆ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಇಷ್ಟೆಲ್ಲ ನಿನ್ನಿಂದ ಸಾಧ್ಯವೆ... ಎಂದು ಕೇಳಿದಾಗ, ಮನಸ್ಸು ಮಾಡಿದರೆ ಹೆಣ್ಣು ಮಕ್ಕಳಿಂದ ಅಸಾಧ್ಯವಾದ ಕೆಲಸ ಯಾವುದೂ ಇಲ್ಲ ಎಂದಿದ್ದಳು.

ಒಮ್ಮೆ ದಾರಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಒಬ್ಬ ಹುಡುಗನನ್ನು ತರಾಟೆಗೆ ತೆಗೆದುಕೊಂಡಳು. ಆತ ನನಗೆ ಬರ್ಗರ್‌ ತಿನ್ನಲು ಆಸೆಯಾಗಿದೆ, ಅದಕ್ಕೇ ಬೇಡುತ್ತಿದ್ದೇನೆ ಎಂದ. ಜ್ಯೋತಿ ನೇರವಾಗಿ ಹೋಗಿ ಒಂದು ಬರ್ಗರ್‌, ಚಾಕೊಲೇಟುಗಳನ್ನು ತಂದುಕೊಟ್ಟು-, ಇನ್ನು ಮುಂದೆ ಖಂಡಿತಾ ಭಿಕ್ಷೆ ಬೇಡಬಾರದು ಎಂದು ಮಾತು ತೆಗೆದುಕೊಂಡಳು...’

ಜ್ಯೋತಿಯ ತಾಯಿ ಹೇಳುತ್ತಾಳೆ- ‘ಆಕೆಗೆ ದೊಡ್ಡ ಕನಸುಗಳಿದ್ದವು. ವೈದ್ಯಕೀಯ ಓದಿಸಲು ಹಣ ಇಲ್ಲವಲ್ಲ ಎಂದು ಅಪ್ಪ ಹೇಳಿದಾಗ, ನನ್ನ ಮದುವೆಗೆ ಕೂಡಿಡುವ ಹಣವನ್ನು ಓದಿಸಲು ವಿನಿಯೋಗಿಸಿ ಎಂದಿದ್ದಳು. ಆಕೆಯ ಓದಿಗಾಗಿಯೇ ನಾವು ದೆಹಲಿಗೆ ಬಂದೆವು. ನಮ್ಮ ಊರಿನಲ್ಲಿ ಸರಿಯಾದ ಒಂದು ಆಸ್ಪತ್ರೆಯಿಲ್ಲ. ಓದಿ ಪಾಸಾದ ಬಳಿಕ ಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸಿ ಬಡವರಿಗೆ ನೆರವಾಗಬೇಕು ಎಂಬ ಆಸೆ ಆಕೆಗಿತ್ತು...’

ಹಳ್ಳಿಯಲ್ಲಿ ಬಡತನದಲ್ಲಿ ಬೇಯುತ್ತಿರುವ ಬಾಲಾಪರಾಧಿಯ ಅಮ್ಮ ತನ್ನ ಮಗನ ಬಗ್ಗೆ ಹೇಳುತ್ತಾಳೆ- ‘ಸಿಟಿಯಲ್ಲಿ ನನಗೆ ಕೆಲಸ ಮಾಡಲು ಆಗುತ್ತಿಲ್ಲ ಅಮ್ಮಾ ಎನ್ನುತ್ತಿದ್ದ. ಹೊಟ್ಟೆ ಹೊರೀಬೇಕಲ್ಲಪ್ಪ, ಇನ್ನೇನು ಮಾಡುತ್ತೀಯ ಎನ್ನುತ್ತಿದ್ದೆ. ದಿನಕ್ಕೆ 300-– 400 ರೂಪಾಯಿ ದುಡಿಯುತ್ತಿದ್ದ. ಅದರಲ್ಲೇ ನಮ್ಮ ಮನೆ ಸಾಗಬೇಕಿತ್ತು. ಈಗ ಅವನನ್ನು ಅಪರಾಧಿ ಎನ್ನುತ್ತಿದ್ದಾರೆ. ಯಾರ ಸಂಗಕ್ಕೆ ಬಿದ್ದನೋ ಗೊತ್ತಿಲ್ಲ, ಅವನಿನ್ನೂ ಮಗು...’

ಇಡೀ ಚಿತ್ರದಲ್ಲಿ ನಮ್ಮ ಗಮನ ಸೆಳೆಯುವುದು ಅಪರಾಧಿಗಳ ಸಾಮಾಜಿಕ ಪರಿಸರದ ಬಗ್ಗೆ ನಿರ್ದೇಶಕಿ ಸಹಾನುಭೂತಿಯಿಂದ ಎತ್ತುವ ಪ್ರಶ್ನೆಗಳು. ಅದನ್ನೂ ಎಲ್ಲೂ ವಾಚ್ಯವಾಗಿಸಿಲ್ಲ. ಚಿತ್ರದ ಕ್ಯಾಮೆರಾವೇ ಎಲ್ಲವನ್ನೂ ಹೇಳುತ್ತದೆ. ಸ್ಲಮ್‌ನಿಂದ ಬಂದ ಎಲ್ಲ ಅಪರಾಧಿಗಳೂ ಚಿಕ್ಕಂದಿನಿಂದಲೇ ಏಟು, ಅವಮಾನಗಳನ್ನು ಎದುರಿಸಿದವರು. ಅವರ ಪರಿಸರವೇ ಹಾಗಿತ್ತು. ಹಾಗೆಂದೇ ಮುಕೇಶ್‌ ಯಾವ ಅಳುಕೂ ಇಲ್ಲದೆ, ಎಲ್ಲ ಪ್ರಶ್ನೆಗಳಿಗೆ ತನ್ನದೇ ಆದ ನಿಲುವುಗಳೊಂದಿಗೆ ಉತ್ತರಿಸುತ್ತಾನೆ. ಆ ಉತ್ತರಗಳನ್ನು ಕೇಳಿದಾಗ, ನಮ್ಮ ಪರಿಸರ ಎಷ್ಟು ಕೊಳೆತುಹೋಗಿದೆ ಎನ್ನುವುದು ನಮಗೆ ಅರಿವಾಗುತ್ತದೆ.

ಚಿತ್ರದ ಕೊನೆಯಲ್ಲಿ ಒಂದು ತೀರ್ಮಾನವಿದೆ: ವ್ಯಕ್ತಿಗಳನ್ನು ಬದಲಿಸುವುದಲ್ಲ, ಅವರ ಆಲೋಚನಾ ಕ್ರಮಗಳನ್ನು ಬದಲಿಸಬೇಕು- ಅಂತ. ಹೆಣ್ಣೆಂದರೆ ಕೇವಲ ಭೋಗ ವಸ್ತು ಎಂಬ ಮನೋಭಾವವನ್ನು ಬದಲಿಸುವ ಬಗ್ಗೆ ವೀಕ್ಷಕರನ್ನು ಚಿಂತಿಸುವಂತೆ ಈ ಚಿತ್ರ ಮಾಡುವುದು ಸುಳ್ಳಲ್ಲ.

ಸರ್ಕಾರ ಈಗ ಲೆಸ್ಲೀ ಉಡ್ವಿನ್‌ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಮಾತನಾಡುತ್ತಿದೆ. ನಿಯಮಗಳನ್ನು ಉಲ್ಲಂಘಿಸಿದ್ದರೆ ಆಕೆಗೆ ಶಿಕ್ಷೆಯಾಗಲಿ. ಆದರೆ ಇದು ಖಂಡಿತವಾಗಿಯೂ ನಿಷೇಧಿಸಬೇಕಾದ ಚಿತ್ರವಲ್ಲ; ಸಾಧ್ಯವಾದರೆ ಇಡೀ ಕುಟುಂಬದವರು ಒಟ್ಟಾಗಿ ನೋಡಬೇಕಾದ ಸಿನಿಮಾ. ನೋಡಿದವರೆಲ್ಲ ಅದನ್ನೇ ಹೇಳುತ್ತಿದ್ದಾರೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT