ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಿನ್ನಾಭಿಪ್ರಾಯ ಬೀದಿ ಜಗಳವಾಗಬಾರದು’

ಕವಿ ಬಿ.ಆರ್‌.ಲಕ್ಷ್ಮಣರಾವ್‌ ಕೃತಿಗಳ ಲೋಕಾರ್ಪಣೆಯಲ್ಲಿ ಬರಗೂರು ಅಭಿಪ್ರಾಯ
Last Updated 7 ಸೆಪ್ಟೆಂಬರ್ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಭಿನ್ನಾಭಿಪ್ರಾಯಗಳು ಬೀದಿ ಜಗಳ­ವಾ­ಗಬಾರದು. ಬದಲಾಗಿ ಆ ಬಗ್ಗೆ ಸ್ನೇಹ ಸಂವಾದ, ವಾಗ್ವಾದ ನಡೆಯಬೇಕು. ಆದರೆ, ಈಗಿನ ವಿದ್ಯಮಾನ ಗಮನಿಸಿದರೆ ಪ್ರಜಾಸತ್ತಾತ್ಮಕ ಸಂವೇದನೆ ಅಳಿವಿನಂಚಿಗೆ ಹೋಗುತ್ತಿದೆಯೇನೊ ಎಂಬ ಆತಂಕ ಶುರುವಾಗಿದೆ. ವಾಗ್ವಾದಗಳನ್ನು ವೈಚಾರಿಕವಾಗಿ ಸ್ವೀಕರಿಸಲಾಗದ ವಿಕೃತ ಮನಸ್ಸುಗಳು ಇವೆ’

–ಹೀಗೆಂದು ಆತಂಕ ವ್ಯಕ್ತಪಡಿಸಿದ್ದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ. ಅವರು ನಗರದ ಇಂಡಿಯನ್‌ ಇನ್‌­ಸ್ಟಿ­ಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಭಾನು­ವಾರ ‘ಅಂಕಿತ ಪುಸ್ತಕ’ ಆಯೋಜಿಸಿದ್ದ ಕಾರ್ಯಕ್ರಮ­ದಲ್ಲಿ ಮೂರು ಕೃತಿಗಳನ್ನು ಲೋಕಾ­ರ್ಪಣೆ ಮಾಡಿ ಮಾತನಾಡಿದರು.

ಕವಿ ಬಿ.ಆರ್‌.ಲಕ್ಷ್ಮಣರಾವ್‌ ಅವರ ‘ನನ್ನ ಮಟ್ಟಿಗೆ’ (ಹೊಸ ಕವಿತೆಗಳು), ‘ಸುಬ್ಬಾಭಟ್ಟರ ಮಗಳೆ’ (ಭಾವಗೀತೆಗಳು; ನಾಲ್ಕನೆಯ ಮುದ್ರಣ), ‘ಹನಿಗವಿತೆಗಳು’ (ಮೂರನೆಯ ಮುದ್ರಣ) ಲೋಕಾ­ರ್ಪಣೆಯಾದ ಪುಸ್ತಕಗಳು.

‘ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಜಾಸತ್ತಾತ್ಮಕ ಸಂವೇದನೆ ಅಗತ್ಯವಾಗಿದೆ. ಇದನ್ನು ಅರಿವಿನ ನೆಲೆ ಮಾತ್ರವಲ್ಲ; ಅನುಭವದ ನೆಲೆಯಲ್ಲಿ ಹೇಳುತ್ತಿದ್ದೇನೆ. ನಾವು ದ್ವೀಪಗಳಾಗ­ಬಾರದು. ದ್ವೀಪಗಳನ್ನು ದಾಟಿ ಕಾಲವನ್ನು ಬೆಳೆಸಬೇಕಾಗಿದೆ’ ಎಂದು ತಿಳಿಸಿದರು.

‘ನವ್ಯ ಕಾವ್ಯ ಹೆಚ್ಚು ಸಂಕೀರ್ಣವಾಗುತ್ತಾ ತನ್ನ ಸಂವಹನಶೀಲದ ಗುಣದಿಂದ ಹಿಂದೆ ಸರಿಯುತ್ತಿದೆ. ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡುತ್ತಾ ಸಾಗುತ್ತಿದೆ. ಆದರೆ, ಲಕ್ಷ್ಮಣರಾವ್‌ ಅವರಂಥವರು ನವ್ಯ ಸಾಹಿ­ತ್ಯದ ಒಳಗೆ ಇದ್ದು ಪೂರ್ಣ ನವ್ಯ ಸಾಹಿತಿಯಾಗದೆ ಉಳಿದಿದ್ದಾರೆ. ಕಾವ್ಯ ಜನರ ಪಾಲು ಎಂದು ಭಾವಿಸಿದ್ದರಿಂದ ಅವರಿಗೆ ಸಂವೇದನಾಶೀಲ ಗುಣ ಪ್ರಾಪ್ತಿಯಾಗಿದೆ. ಹಾಗಾಗಿ ನವ್ಯಕಾಲದಲ್ಲೂ ಅವರ ಕಾವ್ಯಕ್ಕೆ ಚಾರಿತ್ರಿಕ ಮಹತ್ವವಿದೆ’ ಎಂದು ವಿಶ್ಲೇಷಿಸಿದರು.

‘ಬಿಆರ್‌ಎಲ್‌ ಅವರನ್ನು ಪ್ರೇಮಕವಿ ಎಂದು ಬ್ರ್ಯಾಂಡ್‌ ಮಾಡಲಾಗಿದೆ. ಕೆಲವೊಮ್ಮೆ ಪೋಲಿ ಕವಿ ಎಂದು ಕರೆಸಿಕೊಂಡಿದ್ದಾರೆ. ಈಗ ಅವರ ಪ್ರೇಮಿಗೆ ಹಾಗೂ ಪ್ರೇಮ ಪದ್ಯಗಳಿಗೆ ವಯಸ್ಸಾಗಿದೆ. ಏಕೆಂ­ದರೆ ಕಾವ್ಯದಲ್ಲಿ ಜಿಗಿತ ಉಂಟಾಗಿದೆ’ ಎಂದರು.

ವಿಮರ್ಶಕಿ ಎಂ.ಎಸ್.ಆಶಾದೇವಿ ಅವರು, ‘ಲಕ್ಷ್ಮಣರಾವ್‌ ಅವರು ಮೇಲ್ನೋಟಕ್ಕೆ ನವ್ಯಕಾ­ವ್ಯಕ್ಕೆ ನೀಡುವ ಪ್ರತಿಕ್ರಿಯೆಯಂತಿದ್ದಾರೆ. ಕೆ.ಎಸ್‌. ನರಸಿಂಹಸ್ವಾಮಿ ಅವರ ಸಾಹಿತ್ಯವನ್ನು ಒಪ್ಪಿ­ಕೊಂಡು ಅದನ್ನು ಮುಂದುವರಿಸುತ್ತಿರುವ ಕೊಂಡಿ ಆಗಿದ್ದಾರೆ. ಅರಿವು, ನಂಬಿಕೆ ಅವರ ಕಾವ್ಯದಲ್ಲಿದೆ’ ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕ ಟಿ.ಎನ್‌.ಸೀತಾರಾಂ ಮಾತನಾಡಿ, ‘ಕನ್ನಡ ಕಾವ್ಯಕ್ಕೆ ಜೀವಂತಿಕೆ ಕೊಟ್ಟವರು ಬಿಆರ್‌ಎಲ್‌. ಕೆ.ಎಸ್‌.ನರಸಿಂಹಸ್ವಾಮಿ ಅವರಿಂದ ಸ್ಫೂರ್ತಿ ಪಡೆದವರು. ಆದರೆ, ಕಾವ್ಯ ಕೃಷಿಯಲ್ಲಿ ತಮ್ಮನ್ನು ವಿಭಿನ್ನವಾಗಿ ತೊಡಗಿಸಿಕೊಂಡರು. ಅವರು ಅಂಗಾಂಗಗಳನ್ನು ಆರಾಧಿಸುವ ಪೋಲಿಕವಿ ಹಾಗೂ ಅಂತರಂಗವನ್ನು ಆರಾಧಿಸುವ ಪ್ರೇಮಕವಿ. ಕೆಲವೊಮ್ಮೆ ಈ ಎರಡರ ನಡುವೆ ಅವರಿಗೆ ಗೊಂದಲ ಇರುವಂತೆ ಕಾಣುತ್ತದೆ’ ಎಂದರು.

ಬಿಡುಗಡೆಯಾದ ಪುಸ್ತಕಗಳು: ನನ್ನ ಮಟ್ಟಿಗೆ: ಬೆಲೆ: ರೂ 95, ಹನಿಗವಿತೆಗಳು: ಬೆಲೆ: ರೂ 40, ಸುಬ್ಬಾಭಟ್ಟರ ಮಗಳೆ: ಬೆಲೆ: ರೂ 150.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT