ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂಗಳ ಕ್ಷಣ’ಕ್ಕೆ ಸಕಲ ಸಿದ್ಧತೆ

Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು (ಐಎಎನ್‌ಎಸ್‌/ಪಿಟಿಐ): ಮಂಗಳನೌಕೆ ಕಕ್ಷೆ ಸೇರಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಆದರೆ, ಆ ಮಹತ್ವದ ಒಂದು ಹೆಜ್ಜೆಯಿರಿಸಲು  ಮೂರೂವರೆ ತಾಸುಗಳಷ್ಟು ಮುಂಚಿ-ತವಾಗಿಯೇ, ಅಂದರೆ ಬೆಳಗಿನ ಜಾವ ೪.೧೭ಕ್ಕೆ ಅಂತಿಮ ಹಂತದ ತಾಂತ್ರಿಕ ಕಾರ್ಯಾಚರಣೆ ಆರಂಭವಾಗುತ್ತದೆ.

ಆ ಕ್ಷಣದಲ್ಲಿ ನೌಕೆಯ ಆಂಟೆನಾವನ್ನು ರೇಡಿಯೊ ಸಂಕೇತಗಳನ್ನು ಸ್ವೀಕರಿಸಲು ಹಾಗೂ ಹೊರಹೊಮ್ಮಿಸಲು ಸನ್ನದ್ಧಗೊಳಿಸ-ಲಾಗುತ್ತದೆ

ನಂತರ ಬೆಳಿಗ್ಗೆ ೬.೫೭ಕ್ಕೆ ನೌಕೆಯನ್ನು ಮಂಗಳ ಗ್ರಹದ ದಿಕ್ಕಿನೆಡೆಗೆ ತಿರುಗಿಸಲಾಗುತ್ತದೆ. ಇದಾದ ಮೇಲೆ ಅತ್ಯಂತ ಮಹತ್ವದ, ಮುಖ್ಯ ದ್ರವ ಎಂಜಿನ್‌ ಅನ್ನು (ಎಲ್‌ಎಎಂ) ಉರಿಸುವ ಕಾರ್ಯಕ್ಕೆ ಬೆಳಿಗ್ಗೆ ೭.೧೭ಕ್ಕೆ ಚಾಲನೆ ನೀಡಲಾಗು-ತ್ತದೆ. ನೌಕೆಯು ನಿರಾತಂಕವಾಗಿ ಅಂಗಾರಕನ ಕಕ್ಷೆ ಸೇರ-ಬೇಕಾದರೆ ಈ ಎಂಜಿನ್‌ ಅನ್ನು ೨೪ ನಿಮಿಷ ಉರಿಸ-ಬೇಕಾ-ಗುತ್ತದೆ. ಅಂದರೆ ೭.೪೧ರವರೆಗೆ ಈ ಎಂಜಿನ್‌ಅನ್ನು ಉರಿಸ-ಲಾಗುತ್ತದೆ.

ಈ ಸಂದರ್ಭದಲ್ಲಿ ನೌಕೆಯು ಸುಮಾರು ೨೫೦ ಕೆ.ಜಿ. ದ್ರವ ಇಂಧನವನ್ನು ಬಳಸಿಕೊಳ್ಳಲಿದೆ. ಒಂದೊಮ್ಮೆ ಈ ಎಂಜಿನ್‌ ಉರಿಯದಿದ್ದರೆ ನೌಕೆಗೆ ಹೆಚ್ಚುವರಿಯಾಗಿ ಅಳವಡಿಸಲಾಗಿರುವ ಸಣ್ಣ ಗಾತ್ರದ ಎಂಟು ಥ್ರಸ್ಟರ್‌ ದ್ರವ ಎಂಜಿನ್‌ಗಳನ್ನು ಉರಿಸಲಾಗುವುದು.

ಮಂಗಳ ಗ್ರಹಕ್ಕೆ ಸಾಪೇಕ್ಷವಾಗಿ ಪ್ರತಿ ಸೆಕೆಂಡಿಗೆ  ೨೨.೨೪  ಕಿ.ಮೀ. ಶರವೇಗದಲ್ಲಿ ಧಾವಿಸುತ್ತಿರುವ ನೌಕೆಯ ವೇಗವನ್ನು ಪ್ರತಿ ಸೆಕೆಂಡ್‌ಗೆ ೪.೪ ಕಿ.ಮೀ.ಗೆ ಇಳಿಸುವುದು ಈ ಎಂಜಿನ್‌ ಉರಿಸುವುದರ ಉದ್ದೇಶ. ನೌಕೆಯು ಮಂಗಳನ ಕಕ್ಷೆಯನ್ನು ಸೇರಬೇಕೆಂದರೆ ಹೀಗೆ ನೌಕೆಯ ವೇಗವನ್ನು ತಗ್ಗಿಸುವುದು ಅತ್ಯಗತ್ಯ.

ಹೆಚ್ಚುಕಡಿಮೆ ೩೦೦ ದಿನಗಳಿಂದ ನಿದ್ರಾವಸ್ಥೆಯಲ್ಲಿದ್ದ ಈ ಎಂಜಿನ್‌ ಅನ್ನು ಸೋಮವಾರ ಪರೀಕ್ಷಾರ್ಥವಾಗಿ ೪ ಸೆಕೆಂಡುಗಳ ಕಾಲ ಯಶಸ್ವಿಯಾಗಿ ಉರಿಸಲಾಗಿದ್ದು, ಇದು ಅಂತಿಮ ಹಂತದ ಯಶಸ್ಸಿನ ಬಗ್ಗೆ ಇಸ್ರೊ ವಿಜ್ಞಾನಿಗಳ ವಿಶ್ವಾಸವನ್ನು ಹೆಚ್ಚಿಸಿದೆ.  ‘ಇದುವರೆಗೆ ಎಲ್ಲವೂ ಯೋಜನೆಯಂತೆ ಸುಸೂತ್ರವಾಗಿ ನಡೆದಿದೆ. ಗಗನನೌಕೆಯ ಸ್ಥಿತಿ ಕೂಡ ಉತ್ತಮವಾಗಿದೆ. ಈಗ ನಾವು ಅಂತಿಮ ಹೆಜ್ಜೆ ಯಶಸ್ವಿಯಾಗುವುದನ್ನು ನೋಡಲು ಕಾಯುತ್ತಿದ್ದೇವೆ’ ಎಂದು ಇಸ್ರೊದ ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಲೆಕ್ಕಾಚಾರದ ಪ್ರಕಾರ ಎಲ್ಲಾ ನೆರವೇರಿದರೆ ನೌಕೆಯು ಅಂಗಾರಕನ ಮೇಲ್ಮೈನಿಂದ ೫೦೦ ಕಿ.ಮೀ. ಎತ್ತರದಲ್ಲಿ ಬೆಳಿಗ್ಗೆ ೭.೫೩ಕ್ಕೆ ಅಂಗಾರಕನನ್ನು ಗಿರಕಿ ಹೊಡೆಯಲು ಆರಂಭಿಸಲಿದೆ. ಆದರೆ ಈ ಸಂದರ್ಭದಲ್ಲಿ ನೌಕೆಯು ಭೂಮಿಯ ಮೇಲಿನ ಗಗನನೌಕೆ ನಿಯಂತ್ರಣಾ ಕೇಂದ್ರದಿಂದ ೨೧.೫ ಕೋಟಿ ಕಿ.ಮೀ. ‘ರೇಡಿಯೊ ದೂರ’ದಲ್ಲಿ ಇರುವುದರಿಂದ ಇಲ್ಲಿನ ಸಂಕೇತವು ನೌಕೆಯನ್ನು ತಲುಪಲು ೧೨.೫ ನಿಮಿಷ ಹಿಡಿಯುತ್ತದೆ.

ಹಾಗೆಯೇ ಅಲ್ಲಿಂದ ಹೊರಟ ಸಂಕೇತವೂ ಇಲ್ಲಿಗೆ ತಲುಪಲು ಅಷ್ಟೇ ಸಮಯ ಹಿಡಿಯುತ್ತದೆ. ಹೀಗಾಗಿ ನೌಕೆಯು ಮಂಗಳನ ಕಕ್ಷೆ ಸೇರಿರುವುದು ದೃಢಪಡಲು ಬೆಳಿಗ್ಗೆ ೮.೧೫ರವರೆಗೆ ಕಾಯಬೇಕಾಗುತ್ತದೆ.

ಪ್ರಧಾನಿ ಮೋದಿ ಸಾಕ್ಷಿ
ಮಂಗಳ ನೌಕೆಯನ್ನು ಆ ಗ್ರಹದ ಕಕ್ಷೆಗೆ ಸೇರಿಸಲು ಬುಧವಾರ ಬೆಳಿಗ್ಗೆ ನಡೆಯುವ ಅಂತಿಮ ಹಂತದ ಕಾರ್ಯಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಿಯಾಗಲಿದ್ದಾರೆ.  ಬಾಹ್ಯಾಕಾಶ ಇಲಾಖೆ ಮುಖ್ಯಸ್ಥರೂ ಆದ ಮೋದಿ   ಇಲ್ಲಿನ ಪೀಣ್ಯದಲ್ಲಿರುವ ಇಸ್ರೊದ ಟೆಲಿಮೆಟ್ರಿ ಟ್ರ್ಯಾಕಿಂಗ್‌ ಮತ್ತು ಕಮ್ಯಾಂಡ್‌ ನೆಟ್‌ವರ್ಕ್‌ನ (ಇಸ್‌ಟ್ರ್ಯಾಕ್‌) ಗಗನನೌಕೆ ನಿಯಂತ್ರಣಾ ಕೇಂದ್ರಕ್ಕೆ ಬೆಳಿಗ್ಗೆ ೬.೪೫ಕ್ಕೆ ಬರಲಿದ್ದಾರೆ.

ಇಸ್ರೊ ಅಧ್ಯಕ್ಷ ಕೆ.ರಾಧಾಕೃಷ್ಣನ್‌ ಮತ್ತು ಯೋಜನೆಯ ಹಿರಿಯ ವಿಜ್ಞಾನಿಗಳು ಪ್ರಧಾನಿಯವರಿಗೆ ಯೋಜನೆಯ ವಿವಿಧ ಘಟ್ಟಗಳ ಬಗ್ಗೆ ವಿವರಿಸುವರು. ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜೀತೇಂದ್ರ ಸಿಂಗ್‌ ಮಂಗಳವಾರ ಬೆಂಗ­ಳೂರು ತಲುಪಿದ್ದಾರೆ. ಮಂಗಳ ನೌಕೆ ಮಂಗಳನ ಕಕ್ಷೆಗೆ ಸೇರುವ ಕ್ಷಣಕ್ಕೆ ವಿದ್ಯಾರ್ಥಿಗಳು ಸಾಕ್ಷಿ­ಯಾಗಲು ಅಗತ್ಯವಿರುವ

ಎಲ್ಲ ಸಿದ್ಧತೆ­ಗಳನ್ನು ಮಾಡಿಕೊಳ್ಳಬೇಕು ಎಂದು ಸಿಬಿಎಸ್‌ಸಿ ಎಲ್ಲ ಶಾಲೆಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.

ಮಂಗಳನಲ್ಲಿ ಗ್ರಹಣ
ನೌಕೆಯು ಮಂಗಳ ಗ್ರಹದ ಕಕ್ಷೆಯನ್ನು ಸಂಧಿಸುವ ಸಂದರ್ಭದಲ್ಲೇ ಆ ಗ್ರಹದಲ್ಲಿ ಸೂರ್ಯಗ್ರಹಣ ವಿದ್ಯಮಾನವೂ ಸಂಭವಿಸಲಿದೆ. ಅಲ್ಲಿ ಗ್ರಹಣ ಬೆಳಿಗ್ಗೆ ೭.೧೨ಕ್ಕೆ ಆರಂಭವಾಗುತ್ತದೆ. ನೌಕೆಯ ಎಂಜಿನ್‌ ಉರಿಯುವ ಸಂದರ್ಭದಲ್ಲೇ ಅದು ಗ್ರಹಣ ವಲಯದಲ್ಲಿ ಹಾದುಹೋಗಲಿದೆ.

ಆದರೆ ಆಗ ಗ್ರಹಣದಿಂದಾಗಿ ಸೂರ್ಯನ ಬೆಳಕು ಇರುವುದಿಲ್ಲವಾದ್ದರಿಂದ ನೌಕೆಯ ಸೌರಫಲಕ­ಗಳಲ್ಲಿ ಎಷ್ಟು ಅಗತ್ಯವೋ ಅಷ್ಟು ಶಕ್ತಿ ಉತ್ಪಾದನೆ ಆಗದಿರುವ ಸಾಧ್ಯತೆ ಇದೆ. ಅಂತಹ ಸಂದರ್ಭ ಎದುರಾದರೆ ಥ್ರಸ್ಟರ್‌ಗಳನ್ನು ಉರಿಸಿ ನೌಕೆಯ ಚಲನೆಗೆ ಬೇಕಾಗಿರುವ ಶಕ್ತಿಯನ್ನು ಪಡೆಯಲಾಗುತ್ತದೆ.

ಈ ಗ್ರಹಣದಿಂದಾಗಿ ಭೂಮಿಯ ಮೇಲಿನ ನಿಯಂತ್ರಣಾ ಕೇಂದ್ರಗಳು ನೌಕೆಯ ಟೆಲಿಮೆಟ್ರಿ (ರೇಡಿಯೊ) ಸಂಕೇತಗಳನ್ನು ಬೆಳಿಗ್ಗೆ ೭.೫೩ರ­ವರೆಗೆ ಗ್ರಹಿಸಲಾರವು ಎಂದು ಯೋಜನೆಯ ನಿರ್ದೇಶಕರಾದ ವಿಜ್ಞಾನಿ ಅಣ್ಣಾದೊರೈ ತಿಳಿಸಿದ್ದಾರೆ. ಎಂಟು ಥ್ರಸ್ಟರ್‌ಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ, ಸೌರಫಲಕಗಳಿಂದ ಒದಗುವ ಶಕ್ತಿ ಸಾಕಾಗದಿದ್ದರೆ ಈ ಥ್ರಸ್ಟರ್‌ಗಳನ್ನು ಉರಿಸಿ ಶಕ್ತಿ ಪಡೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT