ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಅನುವಾದಕರಿಗೆ ತರಬೇತಿ ಅಗತ್ಯ’

ಡಾ.ನೀರ್ಕಜೆ ತಿರುಮಲೇಶ್ವರ ಭಟ್ಟ ಅವರ ಅಭಿನಂದನ ಸಮಾರಂಭ
Last Updated 22 ಫೆಬ್ರುವರಿ 2016, 6:14 IST
ಅಕ್ಷರ ಗಾತ್ರ

ಉಡುಪಿ: ಸಾಮೂಹಿಕ ಯೋಜನೆಯ ಮೂಲಕ ಸಮರ್ಪಕವಾದ ಅನುವಾದ ಮಾಡಲು ಸಾಧ್ಯ ಎಂದು ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಹೇಳಿದರು. 

ಉಡುಪಿ ಎಂಜಿಎಂ ಕಾಲೇಜು, ಭಾರತೀಯ ವಿದ್ಯಾಭವನ ಹಾಗೂ ಉಡುಪಿ ಹವ್ಯಕ ಸಭಾದ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಡಾ. ನೀರ್ಕಜೆ ತಿರುಮಲೇಶ್ವರ ಭಟ್ಟ ಅವರ ಅಭಿನಂದನ ಸಮಾರಂಭದಲ್ಲಿ ಅವರ ‘ದೊರಕಿದ ದಾರಿ’ ಹಾಗೂ ಅವರ ಕುರಿತು ಬರೆದ ‘ಜಗತ್‌ ಸಾಹಿತ್ಯ ಪ್ರವೇಶಿಕೆ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಇತರ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ ಮಾಡುವ ಕಾರ್ಯವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಹಾಗೂ ಕೆಲವು ವಿಶ್ವವಿದ್ಯಾಲಯಗಳು ಮಾಡುತ್ತಿವೆ.

ಆದರೆ, ಕನ್ನಡ ಅಥವಾ ದೇಸೀಯ ಭಾಷೆಗಳಿಂದ ಜರ್ಮನ್‌, ಫ್ರೆಂಚ್‌, ಇಂಗ್ಲಿಷ್‌ನಂತಹ ಭಾಷೆಗಳಿಗೆ ಅನುವಾದ ಮಾಡಲು ನಮ್ಮಲ್ಲಿ ಅನುವಾದಕಾರರ ಕೊರತೆ ಇದೆ. ಹಾಗಾಗಿ ಯುವ ಅನುವಾದಕಾರರಿಗೆ ಸೂಕ್ತ ತರಬೇತಿಯನ್ನು ನೀಡಿದರೆ ಮುಂದಿನ ಮೂರು ವರ್ಷ ಗಳಲ್ಲಿ ಉತ್ತಮ ಅನುವಾದಕಾರರನ್ನು ಸೃಷ್ಟಿಸಬಹುದು ಎಂದರು.

ಕನ್ನಡಿಗರು ಕನ್ನಡದ ಬಗ್ಗೆ ಕೆಲಸ ಮಾಡುತ್ತಾರೆ. ತಮಿಳರು ಸ್ವಲ್ಪಮಟ್ಟಿಗೆ ಅಂಧಾಭಿಮಾನಿಗಳು ಎಂಬ ಮಾತಿತ್ತು. ಅದಕ್ಕೆ ವ್ಯತಿರಿಕ್ತ ಎಂಬಂತೆ ತಮಿಳು ಶಾಸ್ತ್ರೀಯ ಭಾಷಾ ಕೇಂದ್ರ ಮೌನವಾಗಿಯೇ ಕೆಲವೇ ವರ್ಷಗಳಲ್ಲಿ ಅದ್ಭುತ ಕೆಲಸಗಳನ್ನು ಮಾಡುತ್ತಿದ್ದು, ‘ತಿರುವಳ್ಳುವರ್‌’ ಎಂಬ ತಮಿಳಿನ ಪ್ರಾಚೀನ ಕಾವ್ಯವನ್ನು ಜಗತ್ತಿನ 135 ಭಾಷೆಗಳಿಗೆ ಅನುವಾದ ಮಾಡಿದೆ.

ಆದರೆ, ಮೈಸೂರಿನಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಾಪನೆಯಾಗಿ ನಾಲ್ಕು ವರ್ಷಗಳು ಕಳೆದರೂ ಇನ್ನೂ ಯಾವುದೇ ಮಹತ್ವದ ಕೆಲಸವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡದ ಮೊಟ್ಟ ಮೊದಲ ಶಾಸ್ತ್ರೀಯ ಗ್ರಂಥ ‘ಕವಿರಾಜಮಾರ್ಗ’, ಕಾವ್ಯ ‘ಉಮಾಕಾಂಚಿಪುರಾಣ’ ಮತ್ತು ಗ್ರಂಥ ‘ವಡ್ಡಾರಾಧನೆ’ ಇಂಗ್ಲಿಷ್‌ ಹೊರತು ಪಡಿಸಿದರೆ ಬೇರೆ ಯಾವುದೇ ಭಾಷೆಗೆ ಅನುವಾದವಾಗಿಲ್ಲ. ಇದನ್ನು ಗಮನಿಸಿದಾಗ ಕನ್ನಡದ ಪ್ರಾಧ್ಯಾಪಕರು, ಸಾಹಿತಿಗಳು ವಿದ್ವಾತ್ತಿನ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಭಾವನೆ ನಮ್ಮಲ್ಲಿ ವ್ಯಕ್ತವಾಗುತ್ತದೆ.

ಅಲ್ಲದೆ, ನಮ್ಮ ಇಡೀ ಕನ್ನಡ ಸಾಹಿತ್ಯ ಇತ್ತೀಚಿನ ವರ್ಷಗಳಲ್ಲಿ ಯುವಪೀಳಿಗೆಗೆ ಸರಿಯಾದ ಸಂದೇಶ ಕೊಡುವುದರಲ್ಲಿ ಎಡವಿದಂತೆ ಗೋಚರಿಸುತ್ತಿದೆ ಎಂದರು. 

ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ.ಎಸ್‌. ಭಟ್ಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿ ಕಾರಿ ಡಾ. ಎಚ್‌. ಶಾಂತರಾಮ್‌, ಕುಂಜಿ ಬೆಟ್ಟು ಡಾ. ಟಿಎಂಎ ಪೈ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್‌, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಕುಸುಮಾ ಕಾಮತ್‌, ಹಿರಿಯ ಸಾಹಿತಿ ಡಾ. ನೀರ್ಕಜೆ ತಿರುಮಲೇಶ್ವರ ಭಟ್ಟ ಮತ್ತು ಅವರ ಪತ್ನಿ ನಳಿನಾಕ್ಷಿ ಉಪಸ್ಥಿತರಿದ್ದರು.

ಕನ್ನಡದ ಗೌರವವನ್ನು ಕಾಪಾಡಬೇಕಾದರೆ ಕನ್ನಡದ ಪ್ರಾಚೀನ ಗ್ರಂಥಗಳನ್ನು ಇತರ ಭಾಷೆಗಳಿಗೆ ಭಾಷಾಂತರಿಸಬೇಕು.
ಡಾ.ಬಿ.ಎ. ವಿವೇಕ ರೈ
ವಿಶ್ರಾಂತ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT