ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಕ ಕಲ್ಯಾಣ ಬಯಸುವ ಕವಿ’

ನರಸಿಂಹ ಪರಾಂಜಪೆ ರಚಿತ ‘ಎದೆಯಾಳದ ಸತ್ಯ’ ಕವನ ಸಂಕಲನ ಬಿಡುಗಡೆ
Last Updated 2 ಏಪ್ರಿಲ್ 2015, 5:01 IST
ಅಕ್ಷರ ಗಾತ್ರ

ಧಾರವಾಡ: ‘ಕವಿಯಾದವನು ಇಡೀ ಲೋಕದ ಕಲ್ಯಾಣವನ್ನು ಬಯಸುತ್ತಾನೆ’ ಎಂದು ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ಹೇಳಿದರು.
ಮಂಗಳವಾರ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಅನ್ವೇಷಣ ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನರಸಿಂಹ ಪರಾಂಜಪೆ ಅವರು ಬರೆದ ‘ಎದೆಯಾಳದ ಸತ್ಯ’ ಎಂಬ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಜೀವನದ ಆಗು ಹೋಗುಗಳನ್ನೆಲ್ಲ ಗ್ರಹಿಸಿ ಅದನ್ನು ಅನುಭವದ ಮೂಲಕ ಹದಗೊಳಿಸಿ ಸೊಗಸು ತುಂಬಿ ಹಂಚಿದಾಗ ಅದು ಜೀವನ್ಮುಖಿ ಕಾವ್ಯವೆನಿಸುತ್ತದೆ. ಕಾವ್ಯದ ಸರಳೀಕರಣ ಕೂಡ ಸುಲಭದ ಮಾತಲ್ಲ. ಈ ಎಲ್ಲ ಗುಣ ಲಕ್ಷಣಗಳಿಂದ ಕೂಡಿದ ನರಸಿಂಹ ಪರಾಂಜಪೆಯವರ ಪ್ರಸ್ತುತ ಕವನ ಸಂಕಲನ ಎದೆಯಾಳದ ಸತ್ಯ, ಅವರನ್ನು ಪ್ರಜ್ಞಾವಂತ ಕವಿಗಳ ಸಾಲಿನ ಮುಂಚೂ­ಣಿಯಲ್ಲಿ ನಿಲ್ಲಿಸುವಂತಹ ಒಂದು ಅಪರೂಪದ ಕೃತಿಯಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ, ‘ಯಾವುದೋ ಕ್ಷಣದಲ್ಲಿ ಒರತೆಯ ಬಾಯಿಗೆ ಸಿಕ್ಕ ಕಲ್ಲು ಸಿಡಿದಾಗ ಜಲರಾಶಿ ಚಿಮ್ಮಿದಂತೆ ಅಡಗಿಕೊಂಡಿರುವ ಕಾವ್ಯ ಪ್ರತ್ಯಕ್ಷವಾಗುವುದೊಂದು ರಹಸ್ಯಮಯ ಉಪಕ್ರಮ. ಅಂಥ ಸಮಯದಲ್ಲಿ ಉದ್ಭವಿಸಿದ ಈ ಸಂಕಲನದ ಅನೇಕ ಕವಿತೆಗಳು ಚಿತ್ರಮಯ ಶೈಲಿಯಲ್ಲಿ ಮೂಡಿನಿಂತಿವೆ’ ಎಂದರು.

ಕವನ ಸಂಕಲನ ಪರಿಚಯಿಸಿದ ನಿವೃತ್ತ ಪ್ರಾಧ್ಯಪಕ ಡಾ.ಬಾಳಣ್ಣ ಶೀಗಿಹಳ್ಳಿ ‘ಯಾವ ಆಟಾಟೋಪ, ಅಬ್ಬರ, ಆಕ್ರೋಶ, ದ್ವೇಷಗಳನ್ನೂ ಕಾಣದ, ಅರಿವಿನ ವಿಸ್ತರಣೆಯಿಂದ ತುಂಬಿ ನಿಂತ ಪರಾಂಜಪೆಯವರ ಕವನಗಳು ಸಂಯಮಶೀಲ ನಡಿಗೆಯಿಂದ ಚಲಿಸುತ್ತ, ಸಂಕೀರ್ಣತೆಯಿಂದ ಬಿಡಿಸಿಕೊಂಡ ಸದ್ಭಾವದ ರಚನೆಗಳಾಗಿ ಅರಳಿನಿಂತಿವೆ’ ಎಂದರು,

ಕೃತಿಕಾರ ನರಸಿಂಹ ಪರಾಂಜಪೆ­ಯವರು ಈ ಸಂಗ್ರಹದ ಕೆಲ ಕವನಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀಧರ ಕುಲಕರ್ಣಿ ಪ್ರಾರ್ಥಿಸಿದರು. ವೆಂಕಟೇಶ ದೇಸಾಯಿ ಸ್ವಾಗತಿಸಿ, ನಿರೂಪಿಸಿದರು. ಪ್ರೊ.ದೀಪಕ ಆಲೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT