ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿವಿಗಳು ಒಂದು ಕೋಮಿನ ಕೇಂದ್ರಗಳಾಗಿವೆ’

Last Updated 26 ಫೆಬ್ರುವರಿ 2014, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮಾನತೆ ಮನೋ­ಭಾವನೆ­ಯನ್ನು ಬಿತ್ತಬೇಕಾದ ವಿಶ್ವ­ವಿದ್ಯಾ­ಲಯ­ಗಳು ಇಂದು ಒಂದು ಕೋಮಿನ ಕೇಂದ್ರಗಳಂತೆ, ದೇವರ ಆಲಯ­ಗಳಂತೆ ಕೆಲಸ ಮಾಡುತ್ತಿವೆ’ ಎಂದು ಸಾಹಿತಿ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.

ದಲಿತ ವಿದ್ಯಾರ್ಥಿ ಒಕ್ಕೂಟವು ಸೆಂಟ್ರಲ್‌ ಕಾಲೇ­ಜಿನ ಸೆನೆಟ್‌ ಸಭಾಂಗಣ­ದಲ್ಲಿ ಬುಧವಾರ ಆಯೋ­ಜಿಸಿದ್ದ ‘ಸಾಮಾಜಿಕ ನ್ಯಾಯ–ಸಮಾನ ಶಾಲಾ ಶಿಕ್ಷಣ ನೀತಿ’ ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕೇವಲ ಒಬ್ಬ ಕುಲಪತಿ ಕಾರಣ­ದಿಂದ, ನಾಲ್ಕು ಸಾವಿರ ವಿದ್ಯಾರ್ಥಿಗಳಿದ್ದ ತುಮಕೂರು ವಿಶ್ವವಿದ್ಯಾ­ಲಯದ ಕಾಲೇ­ಜಿ­ನಲ್ಲಿ ಕೇವಲ 650 ವಿದ್ಯಾರ್ಥಿ­ಗಳು ಮಾತ್ರ ಇರುವಂತಾಯಿತು. ಇಲ್ಲಿಂದ ಆಚೆ ಬಂದವರು ದಲಿತ ಮತ್ತು ಹಿಂದು­ಳಿದ ವರ್ಗದ ವಿದ್ಯಾರ್ಥಿಗಳು’ ಎಂದರು.

‘ಇಂತಹ ದ್ರೋಹ ಶಿಕ್ಷಣ ಕ್ಷೇತ್ರದಲ್ಲಿ ಜಾತಿವಾದಿ ಮನಸ್ಸುಗಳಿಂದ ನಡೆ­ಯುತ್ತಿದ್ದು, ಈಗ ಜಾಗತೀಕರ­
ಣವೂ ಸೇರಿಕೊಂಡಿದೆ. ಇದರಿಂದ, ವಿದ್ಯಾರ್ಥಿ ಸಮುದಾಯ ಸಂಘಟಿತವಾಗಿ ಖಾಸಗಿ ವಲಯ­­ದಲ್ಲಿಯೂ ಮೀಸಲಾತಿ ತರಲು ಹೋರಾಟ ಮಾಡದ ಹೊರತು ತಮ್ಮ ಪಾಲಿನ ಅವಕಾಶವನ್ನು ಉಳಿಸಿ­ಕೊ­ಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಪ್ರೌಢಶಾಲಾ ಮಕ್ಕಳ ಗ್ರಂಥಾಲಯ­ಗಳಿಗೆ ಮನುವಿನ ವಿಚಾರಧಾರೆಯುಳ್ಳ ಪುಸ್ತಕವನ್ನು ಸರ್ಕಾರ ಬಿಡುಗಡೆ ಮಾಡಿದೆ. ಗ್ರಂಥಾಲಯಗಳು ಮಕ್ಕಳ ಬೆಳ­ವಣಿಗೆಗೆ ಪ್ರಮುಖ ಪಾತ್ರ ವಹಿ­ಸುತ್ತವೆ. ನಮ್ಮ ಇಂದಿನ ಮಕ್ಕಳು ಮನು­ವಿನ ವಿಚಾರಧಾರೆಯ ಗ್ರಂಥಗ­ಳನ್ನು ಓದಿದರೆ, ಅವರ ಮನಸ್ಸಿನಲ್ಲಿ ಏನು ಪರಿಣಾಮವಾಗುತ್ತದೆ ಎಂದು ಸರ್ಕಾರ ಯೋಚನೆ ಮಾಡಬೇಕಾಗಿದೆ. ಗ್ರಂಥಾ­ಲಯಗಳನ್ನು ಕಸದ ಬುಟ್ಟಿಗಳ­ನ್ನಾಗಿ ಪರಿವರ್ತಿಸಲಾಗುತ್ತಿದೆ’ ಎಂದರು.

‘ಹಿಂದಿನ ಸರ್ಕಾರ ನೇಮಿಸಿದ್ದ ಆಯ್ಕೆ ಸಮಿತಿಯನ್ನು ಕೂಡಲೇ ರದ್ದು ಮಾಡ­ಬೇಕಿತ್ತು.  ಈಗಲಾದರೂ ಸರ್ಕಾರ ಬೋಗಸ್‌ ಪ್ರಕಾಶನ ಸಂಸ್ಥೆಗಳು ಮತ್ತು ಅವುಗಳ ಅನೇಕ ಟಿಸಿಲೊಡೆದ ಪ್ರಕಾಶನ ಸಂಸ್ಥೆಗಳನ್ನು ಶೋಧಿಸುವುದಕ್ಕೆ ಸರಿಯಾದ ಆಯ್ಕೆ ಸಮಿತಿ ರಚನೆ ಮಾಡಬೇಕು ಅಥವಾ ಪುಸ್ತಕಗಳನ್ನು ಖರೀದಿಸುವ ಕ್ರಮವನ್ನಾದರೂ ಬದಲಿಸಬೇಕು’ ಎಂದು ಹೇಳಿದರು.

ಶಿಕ್ಷಣ ತಜ್ಞ ಪಿ.ವಿ.ನಿರಂಜನಾರಾಧ್ಯ ಮಾತನಾಡಿ, ‘ರಾಜ್ಯದಲ್ಲಿ ಸಮಾನ ಶಿಕ್ಷಣವನ್ನು ಜಾರಿಗೆ ತರಲು ಸರ್ಕಾರ ಸಂಕಲ್ಪ ಮಾಡಬೇಕು. ಸಮಾನ ಶಿಕ್ಷಣ ನೀತಿ ಜಾರಿಗೆ ಬಾರದೆ, ಸಮಾನತೆ ಸಾಧ್ಯವಿಲ್ಲ. ಜ್ಯೋತಿ ಬಾ ಫುಲೆ ಅವರ ಜನ್ಮದಿನಾಚರಣೆಯನ್ನು ‘ಸಮಾನ ಶಾಲಾ ಶಿಕ್ಷಣ ದಿನ’ವನ್ನಾಗಿ ಘೋಷಿಸ­ಬೇಕು’ ಎಂದು ಒತ್ತಾಯಿಸಿದರು.

‘ನೇಮಕ ತಡೆಗೆ ಹುನ್ನಾರ’
‘ಕೆಪಿಎಸ್‌ಸಿ ನೇಮಕಾತಿಯಲ್ಲಿ ಮೊದಲ ಬಾರಿಗೆ ಸೋಲಿಗರ ಹೆಣ್ಣು­ ಮಗಳು, ಅಕ್ಷರ ವಂಚಿತ ಸಮು­ದಾಯಗಳ ಅನೇಕ ಅಭ್ಯರ್ಥಿ­ಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದವರು ಸೇರಿದ್ದಾರೆ. ಹೋರಾ­ಟದ ಹೆಸರಿನಲ್ಲಿ ಇವರ ನೇಮಕ­ವಾಗದಂತೆ ತಡೆಯುವ ಹುನ್ನಾರ ನಡೆಯುತ್ತಿದೆ’ ಎಂದು ಕಾರ್ಯ­ಕ್ರಮದಲ್ಲಿ ಎಸ್‌.ಜಿ.ಸಿದ್ಧರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT