ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿ.ವಿಗಳು ಕಲಾವಿದರ ಸೃಷ್ಟಿಸಲಿಲ್ಲ’

Last Updated 1 ಫೆಬ್ರುವರಿ 2015, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ 150ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿವೆ. ಆದರೆ, ಅವು ಈವರೆಗೆ  ಒಬ್ಬ ಕಲಾವಿದನನ್ನು ಕೂಡ ಸೃಷ್ಟಿಸಿಲ್ಲ. ಗುರುಕುಲ ಮಾದ­ರಿಯ ಸಂಗೀತ ಶಾಲೆ ನಡೆಸುವ ಸಂಗೀತ­ಗಾರರು ಉತ್ತಮ, ಸೃಜನಶೀಲ ಕಲಾ­ವಿ­ದರನ್ನು ರೂಪಿಸುವುದ­ರೊಂದಿಗೆ ಸಂಗೀತ ಪರಂಪರೆಯನ್ನು ಸಂರಕ್ಷಿಸಿ­ಕೊಂಡು ಬರು­ತ್ತಿ­ದ್ದಾರೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.|

ಸರಸ್ವತಿ ಸಂಗೀತ ವಿದ್ಯಾಲಯ ಮತ್ತು ಇಸ್ಕಾನ್ ಸಂಯುಕ್ತ ಆಶ್ರಯ­ದಲ್ಲಿ ಭಾನು­ವಾರ ಆಯೋಜಿಸಿದ್ದ ಸಂಗೀತ ವಿದುಷಿ ಲಕ್ಷ್ಮೀ ಗೋವಿಂದ ಭಾವೆ ಜನ್ಮ ಶತಮಾನೋತ್ಸವ ಮತ್ತು ನಾದ ಸೌರಭ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.

‘ಬ್ರಿಟಿಷರ ಶಿಕ್ಷಣ  ಪದ್ಧತಿ ನಮ್ಮ ದೇಶ­ದಲ್ಲಿ ಆರಂಭಗೊಂಡಾಗ ನಾವು ನಮ್ಮ ಪಾರಂಪರಿಕ ಶಿಕ್ಷಣ ಪದ್ಧತಿ­ಯನ್ನೇ ಹೀಯಾಳಿಸಲು ಪ್ರಾರಂಭಿಸಿ­ದೆವು. ಬ್ರಿಟಿಷ­ರದೆಲ್ಲ ಶ್ರೇಷ್ಠ ಎನ್ನುವ ಭಾವನೆ ನಮ್ಮಲ್ಲಿ ಮೊಳೆಯಿತು. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬ್ರಿಟಿಷರ  ವಿಧಾನ­ವನ್ನೇ ಅಳವಡಿಸಿಕೊಂಡು ತರಗತಿ ಆಧಾ­ರಿತ ಕಲಿಕೆ ಆರಂಭಿಸಿದೆವು. ಇದ­ರಿಂದಾಗಿ ನಮ್ಮ ವಿಶ್ವವಿದ್ಯಾಲಯಗಳ ಸಂಗೀತ ವಿಭಾಗ­ಗಳಿಗೆ ಕಲಾವಿದರನ್ನು ಸೃಷ್ಟಿಸಲು ಆಗಲಿಲ್ಲ’ ಎಂದರು.

ಆಕಾಶವಾಣಿ ನಿವೃತ್ತ ನಿರ್ದೇಶಕ ಎನ್.ಎಸ್.ಕೃಷ್ಣಮೂರ್ತಿ ಮಾತ­ನಾಡಿ, ‘ಮೈಸೂರು ಅರಸರು ಹಿಂದೂ­ಸ್ತಾನಿ ಸಂಗೀತ ಕಲಾವಿದರನ್ನು ಸಂಸ್ಥಾ­ನಕ್ಕೆ ಆಹ್ವಾನಿಸಿ ಕರ್ನಾಟಕ ಸಂಗೀತ ಕಲಾವಿದ­ರಿಗೆ ಹಿಂದೂಸ್ತಾನಿ  ಸಂಗೀತ ಪರಿಚ­ಯಿ­ಸುವ ಕೆಲಸ ಮಾಡಿದರು. ಆದ್ದರಿಂದ, ಕರ್ನಾಟಕ ಮತ್ತು ಹಿಂದೂ­ಸ್ತಾನಿ ಸಂಗೀತ ಪರಂಪರೆಗಳು ರಾಜ್ಯ­ದಲ್ಲಿ ಸಹಿಷ್ಣುತೆಯಿಂದ ಬೆಳೆದವು. ಈ ವೈಶಿಷ್ಟ್ಯ­ವನ್ನು ಹೊಂದಿದ ಏಕೈಕ ರಾಜ್ಯ ನಮ್ಮದು’ ಎಂದು ಹೇಳಿದರು.

‘ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್  ಅವರ ಗ್ವಾಲಿಯರ್ ಘರಾ­ಣೆಯ ಗರಡಿಯಲ್ಲಿ ಪಳಗಿದ ಗೋವಿಂದ ವಿಠಲ ಭಾವೆಯವರು ಸರಸ್ವತಿ ಸಂಗೀತ ವಿದ್ಯಾಲಯವನ್ನು 1930ರಲ್ಲಿ ತೆರೆ­ಯುವ ಮೂಲಕ ಸಂಗೀತ ಪರಂಪರೆ­ಯನ್ನು ಬೆಳೆಸುತ್ತ ಬಂದರು. ಅವರ ತರುವಾಯ ಅವರ ಪತ್ನಿ ಲಕ್ಷ್ಮೀ, ಇದೀಗ ಅವರ ಮಗಳು ಶ್ಯಾಮಲಾ ಅವರು ವಿದ್ಯಾಲಯವನ್ನು ಒಂದು ತಪಸ್ಸಿನಂತೆ ಮುಂದುವರಿಸಿಕೊಂಡು ಬರುತ್ತಿದ್ದಾರೆ’ ಎಂದು ತಿಳಿಸಿದರು.

ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ‘ಸಂಗೀತ ಶಾಲೆ­ಯೊಂದನ್ನು 85 ವರ್ಷಗಳ ಕಾಲ ನಿರಂತರ­ವಾಗಿ ನಡೆಸಿಕೊಂಡು ಬರು­ವುದು ಸಾಮಾನ್ಯ ಕೆಲಸವಲ್ಲ. ರಾಜ್ಯ­ದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಪರಂಪರೆಗಳನ್ನು ಒಟ್ಟಾಗಿ ಬೆಳೆ­ಸುತ್ತ ಬಂದ ಭಾವೆ ಕುಟುಂಬದವರ ಸಂಗೀತ ಕೈಂಕರ್ಯ ಶ್ಲಾಘನೀಯ­ವಾದದ್ದು’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ರಾಮಚಂದ್ರ­ಗೌಡ, ಸಿ.ಎಂ.ಆರ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ಟೊಯೊಟೊ ಕಿರ್ಲೋಸ್ಕರ್ ಮೋಟಾರ್ಸ್‌ನ ಗೀತಾಂಜಲಿ, ವಿದ್ಯಾಲ­ಯದ ಕಾರ್ಯಕಾರಿ ನಿರ್ದೇಶಕಿ ವಿದುಷಿ ಶ್ಯಾಮಲಾ ಜಿ.ಭಾವೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಬಿ.­ಬಸವರಾಜು, ಕೆನರಾ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ರವೀಂದ್ರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT