ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸ್ತ’ಕ್ಷೇಪಕ್ಕೆ ಆಕ್ರೋಶ

ಕಾಂಗ್ರೆಸ್‌ಗೆ ಜಯಂತಿ ರಾಜೀನಾಮೆ: ರಾಹುಲ್‌ ವಿರುದ್ಧ ಟೀಕೆ
Last Updated 30 ಜನವರಿ 2015, 20:28 IST
ಅಕ್ಷರ ಗಾತ್ರ

ಚೆನ್ನೈ / ನವದೆಹಲಿ (ಪಿಟಿಐ): ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಪರಿಸರ ಸಚಿವೆಯಾಗಿದ್ದ ಜಯಂತಿ ನಟರಾಜನ್, ಶುಕ್ರವಾರ ಕಾಂಗ್ರೆಸ್‌ ಪಕ್ಷಕ್ಕೆ ರಾಜೀ­ನಾಮೆ ನೀಡಿದ್ದು,  ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡು­ತ್ತಿದ್ದರು ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಚೆನ್ನೈನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ­ಯಲ್ಲಿ ಪಕ್ಷ ಬಿಡುವ ನಿರ್ಧಾರ ಪ್ರಕಟಿಸಿದ ಅವರು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿ­ದರು. ತಮ್ಮ ರಾಜೀನಾಮೆಗೆ ಕಾರಣವಾದ ಅಂಶಗಳ ಕುರಿತು ಸೋನಿಯಾ ಅವರಿಗೆ ಪತ್ರ ಸಹ ಅವರು ಬರೆದಿದ್ದಾರೆ.

ಕಾಂಗ್ರೆಸ್‌ ಸ್ಪಷ್ಟನೆ: ರಾಹುಲ್‌, ಸೋನಿಯಾ ವಿರುದ್ಧ ಜಯಂತಿ ಅವರು ಮಾಡಿರುವ ಆರೋಪ-­ಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್‌, ಅವರ ವಿರುದ್ಧ ಭ್ರಷ್ಟಾಚಾರ ಆರೋಪ­ಗಳು ಕೇಳಿ ಬಂದಿದ್ದರಿಂದಲೇ ಸಚಿವ ಸ್ಥಾನ­ದಿಂದ ಕೈಬಿಡಲಾಯಿತು ಎಂದು ಸ್ಪಷ್ಟಪಡಿಸಿದೆ.
ಜಯಂತಿ ಅವರು ಅನುಮತಿ ನೀಡಿದ್ದ ಯೋಜನೆ­ಗಳ ಕುರಿತು ಎನ್‌ಡಿಎ ಸರ್ಕಾರ ತನಿಖೆ ನಡೆಸುವ ಸೂಚನೆ ದೊರಕಿದ್ದರಿಂದಾಗಿ ಅವರು ಕಾಂಗ್ರೆಸ್‌ ನಾಯ­ಕರ ವಿರುದ್ಧ ಆರೋಪ ಹೊರಿಸಿ­ದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಶುದ್ಧೀಕರಣ: ಜಯಂತಿ ರಾಜೀನಾಮೆಗೆ ಪ್ರತಿಕ್ರಿಯಿಸಿ­ರುವ ತಮಿಳುನಾಡು ಕಾಂಗ್ರೆಸ್‌ ಘಟಕ,  ಇದರಿಂದಾಗಿ ಕಾಂಗ್ರೆಸ್‌ ಶುದ್ಧೀಕರಣ­ಗೊಳ್ಳುತ್ತದೆ ಎಂದು ವ್ಯಂಗ್ಯವಾಡಿದೆ.

ನಾನು ತಪ್ಪು ಮಾಡಿಲ್ಲ. ನಾನು ಅಪ­ರಾಧಿ ಎನ್ನು­ವುದು ಸಾಬೀತಾ­ದಲ್ಲಿ ನೇಣಿ­ಗೇರು­ವು­ದಕ್ಕೆ ಅಥವಾ ಜೈಲಿಗೆ ಹೋಗು­ವು­ದಕ್ಕೂ ಸಿದ್ಧ.
–ಜಯಂತಿ ನಟರಾಜನ್‌

ಜಯಂತಿ ಪಕ್ಷಕ್ಕಾಗಿ ಏನೂ ಮಾಡಿಲ್ಲ. ಅವರ ರಾಜೀನಾಮೆಯಿಂದ ಪಕ್ಷದ ಭವಿಷ್ಯ ಉಜ್ವಲ­ವಾಗ­ಲಿದೆ. ಮತ್ತೊಬ್ಬ ನಾಯಕ ತಮ್ಮ ಉತ್ತರಾ­ಧಿಕಾರಿಯ ಜತೆ ಪಕ್ಷ ತ್ಯಜಿಸಿದಲ್ಲಿ ಪಕ್ಷ ಮತ್ತಷ್ಟು ಉನ್ನತಿ ಸಾಧಿಸಲಿದೆ (ಪಿ. ಚಿದಂಬರಂ ಹಾಗೂ ಅವರ ಪುತ್ರ  ಕಾರ್ತಿ ಚಿದಂಬರಂ ಉಲ್ಲೇಖಿಸಿ)
– ಇ.ವಿ.ಕೆ. ಎಸ್‌. ಇಳಂಗೋವನ್‌, ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷ

ಜಯಂತಿ ಆರೋಪ ಏನು?:  ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಜಯಂತಿ ನಟರಾಜನ್‌, ‘ವಿವಿಧ ಯೋಜನೆಗಳಿಗೆ ಪರಿಸರ ಅನು­ಮತಿಗೆ ಸಂಬಂಧಿಸಿ ನಾನು ರಾಹುಲ್‌ ಆಣತಿಯನ್ನು ಪಾಲಿಸಿದ್ದೆ. ಆದರೆ ಕೇಂದ್ರ ನಾಯಕತ್ವವು ನನ್ನ ಹೆಸರಿಗೆ ಕಳಂಕ ತಂದಿದೆ. ನನ್ನನ್ನು ಅವಮಾನಿಸಿದ್ದಲ್ಲದೇ ಮೂಲೆಗುಂಪು ಮಾಡಲಾಗಿದೆ’ ಎಂದು  ಆರೋಪಿಸಿದ್ದಾರೆ.

‘ಯುಪಿಎ ಅವಧಿಯಲ್ಲಿ ಕೆಲವೊಂದು ಯೋಜನೆ­ಗ­ಳಿಗೆ ಪರಿಸರ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿ ನಾನು ತನಿಖೆ  ಎದುರಿಸಲು ಸಿದ್ಧ. ಇಂಥ ಕಹಿ ಅನು­ಭವ ಇಟ್ಟುಕೊಂಡು  ಸದ್ಯ­ಕ್ಕಂತೂ ಬೇರೆ ಪಕ್ಷ ಸೇರುವ ಯೋಚನೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಪರಿಸರ ವಿಷಯಗಳಿಗೆ ಸಂಬಂಧಿಸಿ ನಾನು ಪಕ್ಷದ ನಿರ್ದೇಶನ ಹಾಗೂ ನಿಯಮ ಪಾಲಿಸಿದ್ದೇನೆ. ಯಾವುದೇ ತಪ್ಪು ಮಾಡಿಲ್ಲ.  ಕಾಂಗ್ರೆಸ್‌ನಲ್ಲಿ ಉಸಿರು­ಗಟ್ಟಿಸುವ ವಾತಾವರಣ ಇದೆ. ಇಂಥ ಕಡೆ ನನಗೆ ಮುಂದುವರಿಯಲು ಸಾಧ್ಯವೇ ಇಲ್ಲ’ ಎಂದು ತರಾ­ತುರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸೋನಿಯಾಸೂಚನೆ ಮೇರೆಗೆ ನಾನು 2013ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಬಳಿಕ ರಾಹುಲ್‌ ಗಾಂಧಿ  ಕಚೇರಿ ನನ್ನ ಹೆಸರಿಗೆ ಮಸಿ ಬಳಿ­ಯುವುದಕ್ಕೆ ಕಥೆ ಕಟ್ಟಿತು. ಸ್ವಯಂಸೇವಾ ಸಂಸ್ಥೆಗಳು ಕೆಲ­ವೊಂದು ದೊಡ್ಡ ಯೋಜನೆಗಳಲ್ಲಿ ಪರಿಸರ ಅನುಮತಿಗೆ ಸಂಬಂಧಿಸಿ ಆಕ್ಷೇಪ ಎತ್ತಿದ್ದವು. ಇದನ್ನು ಆಧರಿಸಿ ರಾಹುಲ್ ಗಾಂಧಿ ಕಚೇರಿಯಿಂದ ನನಗೆ ನಿರ್ದಿಷ್ಟ ಸೂಚನೆ ಬಂತು. ನಿರ್ಧಾರ ತೆಗೆದು­ಕೊಳ್ಳುವ ಪ್ರಕ್ರಿಯೆಯಲ್ಲಿ ರಾಹುಲ್‌ ಮೂಗುತೂರಿಸಿದ್ದರು’ ಎಂದು ಜಯಂತಿ ದೂರಿದರು.

‘ಹಸ್ತ’ಕ್ಷೇಪಕ್ಕೆ ಆಕ್ರೋಶ
‘ಮಹಿಳೆಯೊಬ್ಬರ ವಿರುದ್ಧ ಅಕ್ರಮ ನಿಗಾ ಪ್ರಕರಣದಲ್ಲಿ ನರೇಂದ್ರ ಮೋದಿ ಅವರನ್ನು ಟೀಕಿಸುವುದಕ್ಕೆ ನನಗೆ ಇಷ್ಟ ಇರ­ಲಿಲ್ಲ. ಆದರೆ ಪಕ್ಷದಲ್ಲಿ ಉನ್ನತ­ಮಟ್ಟ­ದಿಂದ ಒತ್ತಡ ಬಂದ ಕಾರಣ ಮೋದಿ ಅವರನ್ನು ಟೀಕಿಸಬೇಕಾಯಿತು’ ಎಂದರು. ‘ನಾನು ಪಕ್ಷದ ಹೈಕಮಾಂಡ್‌ ಜತೆ ಭಿನ್ನಾಭಿಪ್ರಾಯ ಹೊಂದಿದ್ದೇನೆಯೇ ಹೊರತೂ ತಮಿಳುನಾಡು ಘಟಕದ ಜತೆ ಅಲ್ಲ.  ರಾಜ್ಯ ಘಟಕದ ಟ್ರಸ್ಟಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ’ ಎಂದರು.

ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಅಪಪ್ರ­ಚಾರದ ವರದಿಗಳು ಬಂದಾಗ ಅದನ್ನು ಪಕ್ಷದ ಪ್ರಮುಖರ ಜತೆ ಹೇಳಿಕೊಳ್ಳುವುದಕ್ಕೆ ಅವಕಾಶ ಸಿಗಲಿಲ್ಲ ಎಂದ ಅವರು, ಆ ಸಂದರ್ಭದಲ್ಲಿ ಮೋದಿ ತಮ್ಮ ವಿರುದ್ಧ ಮಾಡಿದ್ದ  ಟೀಕೆ­ಯನ್ನು  (ಜಯಂತಿ ತೆರಿಗೆ) ಅಲ್ಲಗಳೆ­ದರು.
ತಮ್ಮದೇ ಪಕ್ಷದವರು ಕೆಟ್ಟದಾಗಿ ನಡೆಸಿಕೊಂಡ ಸಂದ­ರ್ಭದಲ್ಲಿ ವಿರೋಧ­ಪಕ್ಷದ ವ್ಯಕ್ತಿಯೊಬ್ಬರನ್ನು ದೂರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

‘ಮೋದಿ ಮಾಡಿದ ಆರೋಪದ ಬಗ್ಗೆ ಸಿಬಿಐ ತನಿಖೆ­ಯಾಗಲಿ. ನಾನು ಅದಕ್ಕೆ ಸಿದ್ಧ’ ಎಂದೂ ಸ್ಪಷ್ಟಪಡಿಸಿದರು.
‘ರಾಹುಲ್‌ ಹಾಗೂ ಸೋನಿಯಾ ಗಾಂಧಿ ಬಳಿ ಎಷ್ಟೋ ಬಾರಿ ಮಾತ­ನಾಡಲು ಪ್ರಯತ್ನಿಸಿ ಸೋತೆ.  ಕೊಲೆ­ಗಾರನ ಮಾತನ್ನು  ಕೂಡ ಆಲಿಸುವುದಕ್ಕೆ  ಕೋರ್ಟ್ ಅವಕಾಶ ನೀಡುತ್ತದೆ. ಆದರೆ, ನನಗೆ  ನನ್ನ ನಿಲುವನ್ನು ಹೈಕಮಾಂಡ್‌್ ಮುಂದೆ ಹೇಳಿಕೊಳ್ಳುವ ಅವಕಾಶ ಸಿಗಲಿಲ್ಲ’ ಎಂದರು.

ಮುಖ್ಯಾಂಶಗಳು

* ರಾಜೀನಾಮೆ ಬಗ್ಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ದೀರ್ಘ ಪತ್ರ ಬರೆದು ವಿವರಣೆ
* ಭ್ರಷ್ಟಾಚಾರ ಆರೋಪ­ಗಳು ಕೇಳಿ ಬಂದಿದ್ದರಿಂದಲೇ ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು: ಕಾಂಗ್ರೆಸ್‌ ಸ್ಪಷ್ಟನೆ
* ಅವಕಾಶವಾದಿ ಜಯಂತಿ: ಕಾಂಗ್ರೆಸ್‌
*ಯುಪಿಎ ಸರ್ಕಾರದ ಅವಧಿಯಲ್ಲಿ ಪರಿಸರ ಅನುಮತಿ ನೀಡಲಾದ ಯೋಜನೆಗಳನ್ನು ಎನ್‌ಡಿಎ ಸರ್ಕಾರ ಪರಿಶೀಲಿಸುವ ಸಾಧ್ಯತೆ

‘ಪರಿಸರ ವಿಷಯಕ್ಕೆ ಸಂಬಂಧಿಸಿ ರಾಹುಲ್‌್ ಗಾಂಧಿ ಬಿಗಿಪಟ್ಟು ಹಿಡಿ­ದಿದ್ದರು. ಆದ ಕಾರಣ ಕೆಲವೊಂದು ದೊಡ್ಡ ಯೋಜನೆಗಳಿಗೆ ನಾನು ಅನು­ಮತಿಯನ್ನು ತಡೆ ಹಿಡಿಯ­ಬೇಕಾಯಿತು. ನಾನು ಪಕ್ಷದ ಸೂಚನೆಯನ್ನು ಪಾಲಿ­ಸಿದ್ದೆ ಅಷ್ಟೆ’ ಎಂದು ಜಯಂತಿ ತಮ್ಮನ್ನು ಸಮರ್ಥಿಸಿಕೊಂಡರು.

‘ಹೈಕಮಾಂಡ್‌ ಸೂಚನೆ ಪಾಲಿಸಿದ್ದಕ್ಕೆ ನಾನು ಸಹೋ­ದ್ಯೋಗಿಗಳ ಕೋಪಕ್ಕೂ  ತುತ್ತಾಗ­ಬೇಕಾಯಿತು. ಅನುಮತಿ ನಿರಾ­ಕ­ರಿಸುವ ಮೂಲಕ ಹೂಡಿಕೆಯನ್ನು ತಡೆಹಿಡಿಯ­ಲಾಗಿದೆ ಎಂದು ಅವರೆಲ್ಲ ಆಕ್ಷೇಪಿಸಿದ್ದರು. ಅರಣ್ಯ ಹಕ್ಕುಗ­ಳನ್ನು ರಕ್ಷಿಸುವ ಅಗತ್ಯವಿದೆ ಎಂದು ಕಾಂಗ್ರೆಸ್‌್ ಅಧ್ಯಕ್ಷೆ ಕೂಡ ಅನುಮತಿ ನಿರಾ­ಕರಣೆಯನ್ನು ಸಮರ್ಥಿಸಿ­ಕೊಂಡಿದ್ದರು’ ಎಂದು ಅವರು ಹೇಳಿದರು.

‘ನಮ್ಮ ಕುಟುಂಬದ ನರ ನಾಡಿಯಲ್ಲಿ ಕಾಂಗ್ರೆಸ್‌್  ರಕ್ತ ಹರಿಯುತ್ತಿದೆ.  ನಾನು ಕುಟುಂಬದಲ್ಲಿ ನಾಲ್ಕನೇ ತಲೆಮಾ­ರಿನ ಕಾಂಗ್ರೆಸ್‌್ ಸದಸ್ಯೆ. ಯುವ ಕಾಂಗ್ರೆಸ್‌್ ದಿನಗಳಿಂದಲೂ ನಾನು ಪಕ್ಷದಲ್ಲಿ ಇದ್ದೇನೆ. ಗಾಂಧಿ ಕುಟುಂಬಕ್ಕೆ ಕಡು ನಿಷ್ಠಳು ಎಂದು ಹೇಳಿಕೊಳ್ಳುವುದಕ್ಕೆ ಯಾವ ಹಿಂಜ­ರಿಕೆಯೂ ಇಲ್ಲ. ಆದರೆ ಈಗ ಪಕ್ಷವನ್ನು ಬಿಡುವ ಸನ್ನಿವೇಶ ಬಂದಿದೆ. ನಿಜಕ್ಕೂ ಇದು ನೋವಿನ ದಿನ’ ಎಂದರು.

‘ಕಾಂಗ್ರೆಸ್‌ನಲ್ಲಿ ಮೊದಲಿನ ವಾತಾ­ವರಣ ಈಗ ಇಲ್ಲ’ ಎಂದೂ ಅವರು ನುಡಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌್ ಪಕ್ಷವು ಹೀನಾಯ ಸೋಲು ಕಂಡಾಗಿನಿಂದ  ರಾಹುಲ್‌್ ಗಾಂಧಿ ಅವರ ಕಾರ್ಯವೈಖರಿಯ ಬಗ್ಗೆ ಪಕ್ಷದಲ್ಲಿ ಪ್ರಶ್ನೆಗಳು ಎದ್ದ ಬೆನ್ನಲ್ಲಿಯೇ ಜಯಂತಿ ಈ ಮಾತು ಹೇಳಿರುವುದು ಇನ್ನಷ್ಟು ಮಹತ್ವ ಪಡೆದುಕೊಂಡಿದೆ.

ಪರಿಸರ ಅನುಮತಿ ಪುನರ್‌ಪರಿಶೀಲನೆ?
ಯುಪಿಎ ಅವಧಿಯಲ್ಲಿ ಪರಿಸರ ಅನುಮತಿ ನೀಡ­ಲಾದ ಯೋಜನೆಗಳನ್ನು  ಎನ್‌ಡಿಎ ಸರ್ಕಾರವು  ಪುನರ್‌ ಪರಿಶೀಲಿಸುವ ಸಾಧ್ಯತೆ ಇದೆ.
‘ಯುಪಿಎ ಸರ್ಕಾರವು ತನ್ನ ಸ್ವಹಿ­ತಾಸಕ್ತಿಗಾಗಿ ಇಡೀ ಅರ್ಥವ್ಯವಸ್ಥೆಯನ್ನು ಹಾಳುಮಾಡಿತ್ತು’ ಎಂದು  ಕೇಂದ್ರ ಸಚಿವ ಅರುಣ್‌ ಜೇಟ್ಲಿ  ಹೇಳಿದ್ದಾರೆ.

ಯುಪಿಎ ಅವಧಿಯಲ್ಲಿ ಅಭಿವೃದ್ಧಿ ದರ ಗಣನೀಯ­ವಾಗಿ ಕುಸಿದಿತ್ತು. ಇದಕ್ಕೆ ಆ ಅವಧಿಯಲ್ಲಿ ಯೋಜನೆ­ಗಳಿಗೆ ಅನುಮತಿ ನೀಡಲು ವಿಳಂಬ ಮಾಡಿದ್ದು ಕೂಡ ಪ್ರಮುಖ ಕಾರಣಗಳಲ್ಲಿ ಒಂದು.  ಪರಿಸರ ಅನುಮತಿಯ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ರಾಜಕೀಯ ಮುಖಂಡರ ಇಚ್ಛೆಗೆ ಅನುಸಾರವಾಗಿ  ಮನಬಂದಂತೆ ನಿರ್ಧಾರ ತೆಗೆದು­ಕೊಂಡಿದೆ ಎನ್ನುವುದು ಜಯಂತಿ ಅವರು ಸೋನಿಯಾ ಅವರಿಗೆ ಬರೆದ ಪತ್ರದಿಂದ ಗೊತ್ತಾಗುತ್ತದೆ ಎಂದು ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಹುಲ್‌ ಅವರ ಕಾರಣದಿಂದಾಗಿ ಯುಪಿಎ ಅವಧಿಯಲ್ಲಿ ದೇಶದ ಅರ್ಥವ್ಯವಸ್ಥೆಗೆ ಪೆಟ್ಟು ಬಿದ್ದಿತ್ತು ಎಂದು  ಬಿಜೆಪಿ ವಕ್ತಾರ ಸಂಬಿತ್‌್ ಪತ್ರಾ ಹೇಳಿದ್ದಾರೆ. ಮನಮೋಹನ್‌ ಸಿಂಗ್‌ ಅವರು ಕೂಡ ಜಯಂತಿ ಅವರಂತೆಯೇ ಪತ್ರ ಬರೆದು ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿ ಸೋನಿಯಾ ಗಾಂಧಿ ನೀಡಿದ್ದ ನಿರ್ದೇಶನ­ಗಳನ್ನು ಬಹಿರಂಗಪಡಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ರಾಹುಲ್‌ ಆಶ್ವಾಸನೆ ಕೊಟ್ಟಿದ್ದರು
ಒಡಿಶಾದ ನ್ಯಾಮಗಿರಿ ಬೆಟ್ಟದ­ಲ್ಲಿರುವ  ‘ಡಂಗರಿಯಾ ಗೊಂಡ’ ಬುಡ­ಕಟ್ಟು ಜನರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ವೇದಾಂತ ಕಂಪೆನಿಗೆ ಅಲ್ಲಿ  ಗಣಿಗಾರಿಕೆ  ನಡೆಸಲು ಪರಿಸರ ಅನುಮತಿ ನಿರಾಕರಿಸುವಂತೆ ರಾಹುಲ್‌ ಗಾಂಧಿ ಸೂಚನೆ ನೀಡಿರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ನ ಮಾಜಿ ಸಂಸದ ಪ್ರದೀಪ್‌್ ಮಾಝಿ ಹೇಳಿದ್ದಾರೆ.  ‘ನ್ಯಾಮಗಿರಿ ಬೆಟ್ಟದಲ್ಲಿರುವ ಬುಡಕಟ್ಟು ಜನರು ಈ ಬೆಟ್ಟವನ್ನು ದೈವ ಎಂದು ಪೂಜಿಸುತ್ತಾರೆ. ಆದ ಕಾರಣ ಇಲ್ಲಿನ ಜನರ ಹಿತ ಕಾಯುವುದಾಗಿ ರಾಹುಲ್‌್ ಆಶ್ವಾಸನೆ ಕೊಟ್ಟಿದ್ದರು. ಇದರಲ್ಲಿ ತಪ್ಪೇನೂ ಇಲ್ಲ’ ಎಂದು ಮಾಝಿ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT