ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಶತಮಾನವಾದರೂ ಉಳಿಯುವ ‘ವಂಶವೃಕ್ಷ’...

Last Updated 1 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಎಸ್.ಎಲ್. ಭೈರಪ್ಪ ಅವರ ‘ವಂಶವೃಕ್ಷ’ ಕಾದಂಬರಿ ಪ್ರಕಟವಾಗಿ 50 ವರ್ಷಗಳಾಯಿತು. ಈ ಕೃತಿಯ ಚಿನ್ನದ ಹಬ್ಬದ ಸಂದರ್ಭದಲ್ಲಿ ಭೈರಪ್ಪನವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಹಾಗೂ ಕಾದಂಬರಿಯ ಮಹತ್ವವನ್ನು ಕುರಿತು ಲೇಖಕ ಪ್ರಧಾನ ಗುರುದತ್ತ ಅವರು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

ವತ್ತು ವರ್ಷಗಳಾದರೂ ‘ವಂಶವೃಕ್ಷ’ ಕಾದಂಬರಿಯ ತಾಜಾತನ ಏನು?
ಯಾವುದೇ ಸಾಹಿತ್ಯ ಕೃತಿ ಬದುಕಬೇಕಾದರೆ ಅದರ ವಸ್ತು ಮುಂದಿನ ತಲೆಮಾರಿಗೂ ಸಮಸ್ಯೆಯಾಗಿರಬೇಕು. ಅಂಥ ವಸ್ತು ‘ವಂಶವೃಕ್ಷ’ ಕಾದಂಬರಿಯಲ್ಲಿದೆ. ಅಂಥ ವಸ್ತು ಇಲ್ಲದೆ ಹೋದರೆ ಕಾದಂಬರಿ, ನಾಟಕ, ಕಥೆ... ಹೀಗೆ ಯಾವುದೇ ಸಾಹಿತ್ಯಕೃತಿ ಬದುಕುವುದಿಲ್ಲ.

ಇನ್ನೊಂದು ಅಂಶ; ಕಲೆಗಾರಿಕೆ ಇರಬೇಕು. ಬರವಣಿಗೆಯಲ್ಲಿ ರಸ ಇರಬೇಕು. ಕೇವಲ ಸ್ಟೇಟ್‌ಮೆಂಟ್‌ ಇದ್ದರೆ, ಶುಷ್ಕವಾಗಿದ್ದರೆ ಯಾರೂ ಓದುವುದಿಲ್ಲ. ಈ ಅಂಶಗಳನ್ನು ‘ವಂಶವೃಕ್ಷ’ ದಾಟಿದೆ. ವಂಶ ಎನ್ನುವ ಕಲ್ಪನೆ ನಮ್ಮ ಬೇರು, ನಾವು ಯಾರಿಗೆ ಹುಟ್ಟಿದ್ದು? ಯಾವ ಕ್ಷೇತ್ರದಲ್ಲಿ ಹುಟ್ಟಿದ್ದು? ಕ್ಷೇತ್ರ ಅಂದರೆ ಹೆಣ್ಣು, ಬೇರು ಅಂದರೆ ಬೀಜ. ಈ ಕುರಿತು ಎಲ್ಲರಿಗೂ ಆತ್ಮಗೌರವ ಇದ್ದೇ ಇರುತ್ತದೆ. ಇದು ಎಲ್ಲ ಸಮಾಜದ, ಎಲ್ಲ ದೇಶಗಳಲ್ಲಿದೆ. ಈ ವಸ್ತುವನ್ನು ‘ವಂಶವೃಕ್ಷ’ ಒಳಗೊಂಡಿರುವುದರಿಂದ ಇಂದಿಗೂ ಅದು ಓದುಗರ ಮನಸ್ಸನ್ನು ಆಕ್ರಮಿಸಿಕೊಂಡಿದೆ. ಅದೇ ರೀತಿ ಅನುವಾದದಲ್ಲಿ ಕೂಡಾ. ಸಂಸ್ಕೃತ, ಉರ್ದು, ಮರಾಠಿ, ಹಿಂದಿ, ಪಂಜಾಬಿ, ಗುಜರಾತಿ, ತಮಿಳು, ತೆಲುಗು, ಇಂಗ್ಲಿಷ್‌... ಹೀಗೆ ಬಹುತೇಕ ಭಾಷೆಗಳಿಗೆ ಅನುವಾದವಾಗಿದೆ. ಆಯಾ ಭಾಷೆಗಳ ಓದುಗರು ಕಾದಂಬರಿಯನ್ನು ಒಪ್ಪಿಕೊಂಡಿದ್ದಾರೆ.

ಯಾಕೆಂದರೆ ಅವರ ಸಮಸ್ಯೆಯೂ ಹೌದು. ಯುರೋಪಿನಲ್ಲೂ ಒಪ್ಪಿಕೊಂಡಿದ್ದಾರೆ. ಗಂಡು–ಹೆಣ್ಣಿನ ಸಂಬಂಧ ಎಷ್ಟು ಅಳ್ಳಕ (ತೆಳು)ವಾಗಿದೆ, ಮಕ್ಕಳು ಯಾರಿಗೆ ಸೇರಿದ್ದು... ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ಪಶ್ಚಿಮ ದೇಶದವರನ್ನು ಕಾದಂಬರಿ ಹಿಡಿದಿಟ್ಟಿದೆ. ಕಾದಂಬರಿಗೆ 50 ವರ್ಷವಾದರೂ ಅದರ ಮಹತ್ವ ಒಂದೇ ರೀತಿಯಾಗಿರುವಾಗ ಇನ್ನು 50 ವರ್ಷವಾದರೂ, ಶತಮಾನವಾದರೂ ಉಳಿಯುತ್ತದೆ ಎಂಬ ನಂಬಿಕೆ ನನಗಿದೆ.

* ‘ವಂಶವೃಕ್ಷ’ದ ನಂತರ ಕಾದಂಬರಿಯನ್ನೇ ನೆಚ್ಚಿಕೊಂಡಿರಿ?
ಹೌದು. ನಾನು ಬರೆದಿರುವ ಕಾದಂಬರಿಗಳಲ್ಲಿ ‘ವಂಶವೃಕ್ಷ’ ಮೂರನೆಯದು. ಆದರೆ, ಮೊಟ್ಟಮೊದಲ ಮಹತ್ವದ ಕಾದಂಬರಿ. ‘ಧರ್ಮಶ್ರೀ’ ಹಾಗೂ ‘ದೂರ ಸರಿದರು’ ಕಾದಂಬರಿಗಳು ಮೊದಲಿನ ಎರಡು. ಆದರೆ, ಮೊದಲೆರಡು ಕಾದಂಬರಿಗಳು ಮಹತ್ವವಲ್ಲ. ನನ್ನನ್ನು ಸಂಪೂರ್ಣವಾಗಿ ಸೃಜನಶೀಲ ಸಾಹಿತ್ಯದ ಕಡೆಗೆ ಎಳೆದುಕೊಂಡ ಕಾದಂಬರಿ ‘ವಂಶವೃಕ್ಷ’. ಈ ಕಾದಂಬರಿಯನ್ನು ಬರೆದ ನಂತರ ನಾನೇ ಓದಿದ ಮೇಲೆ, ನನ್ನ ಕ್ಷೇತ್ರ ಕಾದಂಬರಿಯೇ ಹೊರತು ಬೇರೆ ಅಲ್ಲ ಎಂದು ಖಚಿತವಾಯಿತು. ಹೀಗಾಗಿ, ನನ್ನ ಎಲ್ಲ ಕಾಲವನ್ನು ಕಾದಂಬರಿ ರಚನೆಗೆ ವಿನಿಯೋಗಿಸಿದೆ. ಈಗಾಗಲೇ ‘ವಂಶವೃಕ್ಷ’ ಕಾದಂಬರಿ 18 ಬಾರಿ ಮುದ್ರಣ ಕಂಡಿದೆ. ಇದನ್ನು ಮೊದಲ ಬಾರಿ ಪ್ರಕಟಿಸಿದ್ದು ಗೋವಿಂದರಾಯರು. ಅವರು ತಮ್ಮ ‘ಸಾಹಿತ್ಯ ಭಂಡಾರ’ದ ಮೂಲಕ ಪ್ರಕಟಿಸಿದರು.

* ಸಿನಿಮಾ, ನಾಟಕವಾಗಿ ‘ವಂಶವೃಕ್ಷ’?
1971ರಲ್ಲಿ ಬಿ.ವಿ. ಕಾರಂತ ಹಾಗೂ ಗಿರೀಶ ಕಾರ್ನಾಡ ಸೇರಿ ಅದೇ ಹೆಸರಿನಲ್ಲಿ ಸಿನಿಮಾ ನಿರ್ದೇಶಿಸಿದರು. ತರಗೆಲೆ ವೆಂಕಟರಾವ್‌ ಹಾಗೂ ಎಲ್‌.ವಿ. ಶಾರದಾ ಅವರು ಸಿನಿಮಾದ ಪ್ರಮುಖ ಪಾತ್ರಗಳನ್ನು ಪೋಷಿಸಿದರು. ನಂತರ ಕಾದಂಬರಿಯು ಹಿಂದಿಗೆ ನಾಟಕವಾಗಿ ಅನುವಾದಗೊಂಡಿತು. ಮುಂಬೈನಲ್ಲಿ ನೆಲೆಸಿದ್ದ ದಕ್ಷಿಣ ಕನ್ನಡದ ವಾಸು ಬಿ. ಪುತ್ರನ್ ಅವರು ಹಿಂದಿಗೆ ಕಾದಂಬರಿಯಾಗಿ ಅನುವಾದಿಸಿದ್ದರು. ಇದನ್ನು ಓದಿದ ಕೊಲ್ಕತ್ತದಲ್ಲಿರುವ ಪ್ರತಿಭಾ ಅಗರವಾಲ್‌ ಅವರು ಹಿಂದಿಯಲ್ಲಿ ನಾಟಕವಾಗಿ ಬರೆದರು. ಆಮೇಲೆ ಅದು ಕೊಲ್ಕತ್ತ, ಬನಾರಸ್, ಲಖನೌ ಮೊದಲಾದ ಕಡೆ ಪ್ರದರ್ಶನಗೊಂಡಿತು. ಇದು ಎಂಬತ್ತರ ದಶಕ.

ಹಿಂದಿಯಲ್ಲಿ ನಾಟಕವಾಗಿದ್ದನ್ನು ಕೇಳಿದ ಮೈಸೂರಿನ ರಂಗಕರ್ಮಿ ಸಿಂಧುವಳ್ಳಿ ಅನಂತಮೂರ್ತಿಯವರು ಪ್ರಭಾವಿತರಾದರು. ನಾವೇಕೆ ಕನ್ನಡದಲ್ಲಿ ನಾಟಕ ಮಾಡಬಾರದೆಂದು ನಿರ್ಧರಿಸಿದರು. ಹಿಂದಿ ನಾಟಕವನ್ನು ಕನ್ನಡಕ್ಕೆ ಬೆಂಗಳೂರಿನಲ್ಲಿ ಆಯುರ್ವೇದ ವೈದ್ಯೆಯಾಗಿರುವ ಡಾ. ಶಾರದಾ ವೆಂಕಟಸುಬ್ಬಯ್ಯ ಅನುವಾದಿಸಿದರು. ಮೈಸೂರಿನ ಸುರುಚಿ ರಂಗಮನೆಯವರು ‘ವಂಶವೃಕ್ಷ’ ಹೆಸರಿನಲ್ಲೇ ನಾಟಕ ಆಡಿದರು.

ಮೊದಲಿಗೆ ಸಿಂಧುವಳ್ಳಿ ಅನಂತಮೂರ್ತಿ ನಿರ್ದೇಶಿಸಿದರು. ಅವರ ನಂತರ ಅವರ ಶಿಷ್ಯ ರಾಮನಾಥ್‌ ನಿರ್ದೇಶಿಸಿದರು. ಈಗಲೂ ಅದು ಹಳ್ಳಿಗಳಲ್ಲೂ ಪ್ರದರ್ಶನಗೊಳ್ಳುತ್ತಿದೆ. ಕೊಡಗಿನಲ್ಲೂ ಮೆಚ್ಚುಗೆ ಪಡೆದಿದೆ. ಇದನ್ನು ಎಲ್ಲ ಕಡೆ ಪ್ರಯೋಗಿಸಬೇಕೆಂದು ಬೆಂಗಳೂರಿನಲ್ಲಿರುವ ‘ಎಸ್‌.ಎಲ್‌. ಭೈರಪ್ಪ ಕಾದಂಬರಿಪ್ರಿಯರ ಕೂಟ’ ಯೋಜಿಸುತ್ತಿದೆ. ಇದಲ್ಲದೆ 3–4 ವರ್ಷಗಳ ಹಿಂದೆ ಮುಂಬೈ ಆಕಾಶವಾಣಿ ಮೂಲಕ ಮರಾಠಿಯಲ್ಲಿ 12 ಕಂತುಗಳಲ್ಲಿ ನಾಟಕವಾಗಿ ಪ್ರಸಾರಗೊಂಡಿದೆ. ಮರಾಠಿಯ ದೊಡ್ಡ ನಟ ಶ್ರೀರಾಮ ಲಾಗು ಅವರು ಶ್ರೋತ್ರಿ ಪಾತ್ರವನ್ನು ಪೋಷಿಸಿದ್ದಾರೆ.

* ‘ವಂಶವೃಕ್ಷ’ ಮೀರಿಸುವ ಕಾದಂಬರಿಗಳು ಬಂದಿವೆಯೇ?
‘ಗೃಹಭಂಗ’, ‘ಪರ್ವ’, ‘ದಾಟು’, ‘ಸಾಕ್ಷಿ’, ‘ಸಾರ್ಥ’, ‘ತಂತು’, ‘ಆವರಣ’– ಇವೆಲ್ಲ ‘ವಂಶವೃಕ್ಷ’ ಮೀರಿಸುವ ಕಾದಂಬರಿಗಳು. ಇದುವರೆಗೆ 23 ಕಾದಂಬರಿಗಳಾಗಿವೆ. ಆದರೆ, ‘ವಂಶವೃಕ್ಷ’ ಕಾದಂಬರಿ ಮಹತ್ವವಾದುದು ಎಂದು ತೃಪ್ತನಾಗಿ ನಿಲ್ಲಲಿಲ್ಲ. ಅದರ ಧ್ಯಾನದಲ್ಲೇ ಕುಳಿತರೆ ಮುಂದಿನ ಕೃತಿ ಬರೆಯಲಾಗದು. ಅದರಿಂದ ಬಿಡಿಸಿಕೊಂಡು ಬೇರೆ ಬೇರೆ ಕಾದಂಬರಿಗಳನ್ನು ಬರೆದೆ.

ವಂಶವೃಕ್ಷ: ಒಂದು ಪ್ರತಿಕ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT