ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`10 ಸಾವಿರ ಪುಟ; 12 ಸಂಪುಟಗಳಲ್ಲಿ ಪ್ರಕಟಣೆ'

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಹಂಪನಾ
Last Updated 24 ಜನವರಿ 2013, 10:30 IST
ಅಕ್ಷರ ಗಾತ್ರ

ಮೈಸೂರು: `ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯ 10 ಸಾವಿರ ಪುಟಗಳಷ್ಟಿದೆ. ಅದನ್ನು 12 ಸಂಪುಟಗಳಲ್ಲಿ ಪ್ರಕಟಿಸಿ ಕನ್ನಡಿಗರಿಗೆ ಅರ್ಪಿಸಲಾ ಗುವುದು' ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ ಘೋಷಿಸಿದರು.

ನಗರದ ವಾಣಿವಿಲಾಸಪುರಂನ ಕುವೆಂಪು ಅವರ `ಉದಯರವಿ' ಮನೆ ಮುಂಭಾಗದಲ್ಲಿ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಬುಧವಾರ ಏರ್ಪಡಿ ಸಿದ್ದ `ಕುವೆಂಪು ಸಾಹಿತ್ಯ ಪ್ರಸರಣ; ಹೊಸ ಯೋಜನೆಗಳ ಉದ್ಘಾಟನೆ' ಕಾರ್ಯಕ್ರಮದಲ್ಲಿ ಮಾತನಾಡಿದರು.

`12 ಸಂಪುಟಗಳಿಗೆ ರೂ. 6,300 ಮುಖ ಬೆಲೆ ನಿಗದಿಪಡಿಸಲಾಗಿದೆ. ಮುಂಗಡ ಪಾವತಿಸುವವರಿಗೆ ರೂ. 3500 ರಿಯಾಯಿತಿ ನೀಡಲಾಗಿದೆ. ರಾಮಾಯಣ ದರ್ಶನಂ ಮಹಾಕಾವ್ಯ ಗಮಕದ ಮೂಲಕ ಸಾಮಾನ್ಯ ಜನರಿಗೂ ತಲುಪಿದೆ. ಹೀಗಾಗಿ ವಿದ್ವಾಂಸರು ಮತ್ತು ಗಮಕಿಗಳಿಂದ ರಾಮಾಯಣ ದರ್ಶನಂನ ಗಮಕ-ವ್ಯಾಖ್ಯಾನ ಒಳಗೊಂಡ 40 ಗಂಟೆಗಳ ಡಿ.ವಿ.ಡಿ ಹೊರತರಲು ನಿರ್ಧರಿಸಲಾಗಿದೆ. ಇದರ ಉಸ್ತುವಾರಿಯನ್ನು ಕರ್ನಾಟಕ ಗಮಕ ಪರಿಷತ್ ಅಧ್ಯಕ್ಷ ಎಂ.ಆರ್.ಸತ್ಯನಾರಾಯಣ ಅವರಿಗೆ ವಹಿಸಲಾಗಿದೆ' ಎಂದು ಹೇಳಿದರು.

ಕುವೆಂಪು ಪ್ರಶಸ್ತಿ: `ಕುವೆಂಪು ಹುಟ್ಟಿನಿಂದ ಅಂತ್ಯದವರೆಗೆ ಅವರು ಕಳೆದ ರಸ ನಿಮಿಷಗಳ ಭಾವಚಿತ್ರಗಳನ್ನು ಒಳಗೊಂಡ ಚಿತ್ರ ಸಂಪುಟ ರಚಿಸಲು ತೀರ್ಮಾನಿಸಲಾಗಿದೆ. ಕುವೆಂಪು ಹೆಸರಿನಲ್ಲಿ ರೂ. 5 ಲಕ್ಷ ಮೊತ್ತದ ರಾಷ್ಟ್ರಕವಿ ಕುವೆಂಪು ಪ್ರಶಸ್ತಿಯನ್ನು ಸ್ಥಾಪಿಸಲಾಗುತ್ತಿದ್ದು, ಭಾರತದ ಶ್ರೇಷ್ಠ ಲೇಖಕ ರೊಬ್ಬರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುವುದು. ಈ ಎಲ್ಲ ಯೋಜನೆಗಳಿಗಾಗಿ ರಾಜ್ಯ ಸರ್ಕಾರಕ್ಕೆ ರೂ. 5 ಕೋಟಿ ಅನುದಾನ ಕೇಳಲಾಗಿದ್ದು, ಮೊದಲ ಹಂತದಲ್ಲಿ ರೂ. 2 ಕೋಟಿ ಬಿಡುಗಡೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಪ್ಪಿಗೆ ಸೂಚಿಸಿದೆ' ಎಂದರು.

`ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಹೆಗ್ಗಡತಿ ಕೃತಿಗಳಿಗೆ ಸಾಹಿತ್ಯಾಸಕ್ತರಿಂದ ಉತ್ತಮ ಬೇಡಿಕೆ ಇದೆ. ಆದರೆ, ಈಗಿರುವ ಬೆಲೆಯಲ್ಲಿ ಖರೀದಿ ಸಲು ಸಾಹಿತ್ಯ ಪ್ರೇಮಿಗಳು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಅವುಗಳನ್ನು ಜನಪ್ರಿಯ ಅಂಕಣ ಮಾಲೆಯಡಿ, ಮರು ಮುದ್ರಣ ಮಾಡಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಬೇಕು' ಎಂದು ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಅವರಲ್ಲಿ ಮನವಿ ಮಾಡಿದರು.

`ಕುಪ್ಪಳಿಯಲ್ಲಿರುವ ಕುವೆಂಪು ಅವರ ಕವಿಶೈಲ ಮನೆಗೆ ನಿತ್ಯ 150 ರಿಂದ 200 ಜನ ಪ್ರವಾಸಿಗರು, ಸಾಹಿತ್ಯಾಸಕ್ತರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಕುವೆಂಪು ಅವರನ್ನು ಬೇರೆ ರಾಜ್ಯಗಳಿಗೂ ಪರಿಚಯಿ ಸುವ ಉದ್ದೇಶದಿಂದ ಹೊರ ರಾಜ್ಯಗಳಲ್ಲಿ ಕುವೆಂಪು ವಿಚಾರ ಸಂಕಿರಣ, ಸಾಹಿತ್ಯಗೋಷ್ಠಿಗಳನ್ನು ಆಯೋಜಿ ಸಲಾಗುತ್ತಿದೆ. ರಾಜಸ್ಥಾನಿ ಹಾಗೂ ಗುಜರಾತಿ ಭಾಷೆಗೆ ಕುವೆಂಪು-ವ್ಯಕ್ತಿ-ವ್ಯಕ್ತಿತ್ವ ಕೃತಿಯನ್ನು ಭಾಷಾಂತರಿಸಲಾಗಿದೆ' ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯ ಮಂತ್ರಿ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜ್, ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ, ಪ್ರೊ.ಸಿ.ನಾಗಣ್ಣ, ಪ್ರತಿಷ್ಠಾನದ ಖಜಾಂಚಿ ಮನುದೇವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT