ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಎಕರೆಯಲಿ ಹತ್ತಾರು ಕೃಷಿ

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪರಂಪರೆಯ ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯುತ್ತಿರುವ ಯುವ ಸಮುದಾಯ ವ್ಯಾಪಕ ಬರ, ಅಂತರ್ಜಲ ಕುಸಿತ, ಮಾರುಕಟ್ಟೆ ಅಲಭ್ಯವೆಂದು, ಕೃಷಿಯಿಂದ ಲಾಭವಿಲ್ಲವೆಂದು ವಿಮುಖರಾಗಿ ನಗರದ ಕಡೆ ಮುಖಮಾಡುತ್ತಿದ್ದಾರೆ.

ಕೃಷಿ ಜೀವನ ಕಷ್ಟಕರವೆಂಬುದು ಬಹುತೇಕರ ಅಭಿಪ್ರಾಯವಾದರೂ ಕೆಲವರಿಗೆ ಬೇಸಾಯದ ಒಲವು ಇರುತ್ತದೆ. ಎಷ್ಟೇ ಪ್ರಮಾಣದಲ್ಲಿ ಭೂಮಿ ಇದ್ದರೂ ಒಂದು ಅಥವಾ ಎರಡು ಬೆಳೆಗಳಿಗೆ ಸೀಮಿತವಾದವರೇ ಹೆಚ್ಚಿದ್ದಾರೆ. ಅದರಲ್ಲೂ ನಾಲ್ಕಾರು ಎಕರೆಗೆ ಸಾವಯುವ ಕೃಷಿ ಮಾಡುವುದೇ ದುಸ್ತರ. ಸಾವಯವ ಕೃಷಿ ಸಾಧ್ಯವೇ ಇಲ್ಲ ಎನ್ನುವ ‘ತಜ್ಞರು’ ಇನ್ನೊಂದೆಡೆ.

ಇಂತಹ ಸಂದರ್ಭದಲ್ಲಿ ಹದಿನಾರು ಎಕರೆಗೆ ಸಾವಯುವ ಪದ್ಧತಿಯೊಂದಿಗೆ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಲಾಭ ಗಳಿಸಿದ್ದಾರೆ ರಾಜ್ಯ ಪ್ರಶಸ್ತಿ ಪುರಸ್ಕೃತ ದೇವನಹಳ್ಳಿ ತಾಲ್ಲೂಕಿನ ಭೈರದೇನಹಳ್ಳಿಯ ಜಯರಾಮಪ್ಪ.

ಹದಿನಾರು ಎಕರೆ ಭೂಮಿಯಲ್ಲಿ ಹಿಪ್ಪುನೇರಳೆ, ಕೊತ್ತಂಬರಿ, ಹುರುಳಿಕಾಯಿ (ಬೀನ್ಸ್), ಪಶುಮೇವು, ಕೋಳಿ, ಜೇನು ಸಾಕಾಣಿಕೆ, ಮೀನು ಮತ್ತು ಹಂದಿ ಸಾಕಾಣಿಕೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಸಮಗ್ರ ಕೃಷಿಯಲ್ಲಿ ತೊಡಗಿ ತೇಗ, ಹೆಬ್ಬೇವು, ಬಿದಿರುಗಳನ್ನು ಹೇಗೆ ಬೆಳೆಸಬಹುದು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿದ್ದಾರೆ ಜಯರಾಮಪ್ಪ.

ಇವರು ಹಿಪ್ಪುನೇರಳೆ 3 ಎಕರೆ, ಪಶು ಮೇವು 3 ಎಕರೆ, ಹುರುಳಿಕಾಯಿ 1 ಎಕರೆ, ಹೊಲದ ಬದುಗಳಲ್ಲಿ 100 ತೇಗದ ಮರ ಮತ್ತು 500 ಹೆಬ್ಬೇವು ಸಸಿ, 200 ನುಗ್ಗೆಗಿಡ, 4 ಎಕರೆಯಲ್ಲಿ ದ್ರಾಕ್ಷಿ, 2 ಎಕರೆಯಲ್ಲಿ ಬಾಳೆ, ತೆಂಗು ಸಾವಯವ ಕೃಷಿಯನ್ನು ಸಂಪೂರ್ಣ ಸಾವಯವ ವಿಧಾನದಲ್ಲಿ ಮಾಡುತ್ತಿದ್ದಾರೆ.

ಪಶು ಪಕ್ಷಿಗಳ ಸಾಮ್ರಾಜ್ಯ
ಇವರು 40 ಹಸುಗಳನ್ನು ಸಾಕಿದ್ದು, ನಿತ್ಯ 150 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. 100 ಗಿರಿರಾಜ ಕೋಳಿಗಳಿವೆ. ಆರು ಹಂದಿಗಳಿವೆ. ಎರಡು ಎಕರೆಯಲ್ಲಿ ಧನಿಯಾ ಬೆಳೆ ನಳನಳಿಸುತ್ತಿದೆ, ಬೆಳೆಗಳಿಗೆ ಹನಿನೀರಾವರಿ ಅಳವಡಿಸಲಾಗಿದ್ದು ಜೀವಾಮೃತವನ್ನು ಕೊಳವೆ ಬಾವಿಯಿಂದ ಮೇಲೆ ಬರುವ ನೀರಿನ ಪೈಪ್‌ಗೆ ಸಂಪರ್ಕ ಕಲ್ಪಿಸಿ ನೇರವಾಗಿ ಬೆಳೆಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಹಾಲಿನ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಒಣಮೇವು ಮತ್ತು ಹಸಿ ಮೇವಿನೊಂದಿಗೆ ದ್ವಿಕಾಲದಲ್ಲಿ ಹಿಂಡಿ, ಬೂಸ ಪಶು ಆಹಾರದ ಜೊತೆಗೆ ತಾವೇ ಖುಷ್ಕಿ ಭೂಮಿಯಲ್ಲಿ ಬೆಳೆದ ರಾಗಿ, ಜೋಳ, ಅಲಸಂದೆ, ತೊಗರಿ, ವಿವಿಧ ಧಾನ್ಯಗಳನ್ನು ಕ್ರೋಢೀಕರಿಸಿ ಫ್ಲೋರ್‌ಮಿಲ್‌ನಲ್ಲಿ ಹಿಟ್ಟಾಗಿಸಿ ಪಶುಪಾಲನೆಯ ಶೆಡ್‌ ಬಳಿಯೇ ಪಶುಆಹಾರ ಕೊಠಡಿಯಲ್ಲಿರುವ ದಾಸ್ತಾನು ಕೊಠಡಿಯಲ್ಲಿ ಭದ್ರವಾಗಿರಿಸಿದ್ದಾರೆ. ಹಂದಿ, ಕೋಳಿ ಪಶುಗಳಿಗೆ ಪೌಷ್ಠಿಕತೆಗನುಗುಣವಾಗಿ ಪ್ರತ್ಯೇಕಿಸಿ ನೀಡಲಾಗುತ್ತಿದೆ.

ಎರೆಹುಳು ಗೊಬ್ಬರ
ಪಶುಪಾಲನೆ ಶೆಡ್‌ ಹೊರಭಾಗದಲ್ಲಿ ಪಶುಗಳ ಸೆಗಣಿ ಮತ್ತು ಹಂದಿಗಳ ತ್ಯಾಜ್ಯ, ಮರಗಳ ತರಗೆಲೆ ತೆಂಗಿನ ಗರಿಗಳನ್ನು ಒಂದೆಡೆ ಹಾಕಿ ಎರೆ ಹುಳು ಗೊಬ್ಬರವಾಗಿಸಲು ಹತ್ತು ತೊಟ್ಟಿಗಳು ನಿರ್ಮಿಸಲಾಗಿದೆ ಜೊತೆಗೆ ಕರೆಯಗೂಡು ಮಣ್ಣನ್ನು ತೊಟ್ಟಿಯ ಮೇಲ್ಭಾಗದಲ್ಲಿ ಮೂರು ತಿಂಗಳಿಗೊಮ್ಮೆ ಹಾಕಲಾಗುತ್ತದೆ ಎನ್ನುತ್ತಾರೆ ರೈತ ಜಯರಾಮಪ್ಪ.

ತುಂಬು ಕುಟುಂಬ ಆದ್ದರಿಂದ ಅಗತ್ಯ ಬಿದ್ದಾಗ ಮಾತ್ರ ಒಂದೆರಡು ಕೃಷಿ ಕಾರ್ಮಿಕರಿಗೆ ಕೆಲಸ ನೀಡುತ್ತಾರಷ್ಟೆ. ಇದರಿಂದ ಆರ್ಥಿಕ ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಜೊತೆಗೆ  ಗೊಬ್ಬರ ಚಿಂತೆಯೂ ಇರುವುದಿಲ್ಲ.

‘ಐದು ವರ್ಷಗಳ ಹಿಂದೆ ಬೇಸಾಯ ಪದ್ಧತಿ ಸಾಕೆನಿಸಿತ್ತು. ಯಾವುದೇ ಬೆಳೆ ಪರಿಣಾಮಕಾರಿಯಾಗಿ ಉತ್ಪಾದನೆಯಾಗುತ್ತಿರಲಿಲ್ಲ. ಬೇರೆ ಕಡೆ ಸಾವಯವ ಕೃಷಿಯ ಬಗ್ಗೆ ಮಾಹಿತಿ ಪಡೆದು ಒಮ್ಮೆಲೇ 16 ಎಕರೆಗೂ ಅಳವಡಿಸಿಕೊಂಡು ಸಮಗ್ರ ಕೃಷಿಯತ್ತ ತೊಡಗಿಸಿಕೊಂಡೆ. ಆರಂಭದಲ್ಲಿ ಕೆಲವರು ಏನೆನೋ ಹೇಳಿದರೂ ಕಿವಿಗೊಡಲಿಲ್ಲ. ಬೇಸಾಯ ಮುಂದುವರಿಸಿದೆ. ಸಾವಯವದಲ್ಲಿ ನಷ್ಟವೆಂಬುದಿಲ್ಲ. ತಿಂಗಳಿಗೊಮ್ಮೆ ರೇಷ್ಮೆಗೂಡು ಉತ್ಪಾದನೆ, 15 ದಿನಗಳಿಗೊಮ್ಮೆ ಕೊತ್ತಂಬರಿ, ನಿತ್ಯಹಾಲು ಪೂರೈಕೆ, ಕೋಳಿ ಮಾರಾಟ, 6 ತಿಂಗಳಿಗೊಮ್ಮೆ ಹಂದಿ ಮಾರಾಟ, ವಾರ್ಷಿಕ ದ್ರಾಕ್ಷಿ ಮತ್ತು ಬಾಳೆ ಕೊಯ್ಲು ಹೀಗೆ ಲಾಭದ ಕಡೆಗೆ ಕೃಷಿ ಹೊರಳಿದೆ. ಸಾವಯವದಲ್ಲಿ ಬೆಳೆಯುವ ಬೆಳೆಗಳನ್ನು ಖರೀದಿಸಲು ಮಾರಾಟಗಾರರು ಸ್ಥಳಕ್ಕೇ ಆಗಮಿಸುತ್ತಾರೆ. ಈಗ ಇಡೀ ಕುಟುಂಬ ಸಾವಯವದಲ್ಲಿ ತಲ್ಲೀನವಾಗಿದೆ. ಸಾವಯುವ ಖುಷಿ ನೀಡಿದೆ’ ಎನ್ನುತ್ತಾರೆ ಜಯರಾಮಪ್ಪ.

ಪ್ರಶಸ್ತಿಗಳ ಸರಮಾಲೆ
2010ರಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಶೀಲ ರೈತ ಪ್ರಶಸ್ತಿ,
2012–13ನೇ ಸಾಲಿನಲ್ಲಿ ರಾಜ್ಯ ಮಟ್ಟದ ಸಾವಯವ ಕೃಷಿ ಪಂಡಿತ ಪ್ರಶಸ್ತಿ, 2013–14ನೇ ಸಾಲಿನ ಸುವರ್ಣ ಮಹೋತ್ಸವ ವರ್ಷದ ಸಾವಯವ ಸಮಗ್ರ ಕೃಷಿ ಪಂಡಿತ ಪ್ರಶಸ್ತಿಗಳನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ. ಮಾಹಿತಿಗೆ 97409 63352.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT