ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1967ರ ಸಾಹಿತ್ಯ ಸಮ್ಮೇಳನದ ಸವಿನೆನಪು

ಬೆಳಗೊಳದಲ್ಲಿ ನಡೆದ 46ನೇ ನುಡಿಹಬ್ಬ: ಅಧ್ಯಕ್ಷರಾಗಿದ್ದ ಆ.ನೇ. ಉಪಾಧ್ಯ, 1,500 ಪ್ರತಿನಿಧಿಗಳು ಭಾಗಿ
Last Updated 29 ಜನವರಿ 2015, 6:17 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳದಲ್ಲಿ ಈಗ ನಡೆಯುತ್ತಿರುವುದು ಎರಡನೇ ಸಮ್ಮೇಳನದ ಸಿದ್ಧತೆ.
1967ನೇ ಇಸವಿ ಮೇ 26ರಿಂದ 28ರವರೆಗೆ ಇಲ್ಲಿ 46ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಂಚಭಾಷಾ ಪ್ರವೀಣ ಆದಿನಾಥ ನೇಮಿನಾಥ ಉಪಾಧ್ಯ ಆಯ್ಕೆಯಾಗಿದ್ದರು. ಅಂದು ಸಾಹಿತಿಗಳು ಸೇರಿದಂತೆ ನಾಡಿನಾದ್ಯಂತ ವಿವಿಧ ಭಾಗಗಳಿಂದ ಬಂದಿದ್ದ ಪ್ರತಿನಿಧಿಗಳ ಸಂಖ್ಯೆ 1,500.

1967ರಲ್ಲಿ ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಮಹಾ ಮಸ್ತಕಾಭಿಷೇಕವೂ ನಡೆದಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಸಮ್ಮೇಳನ ನಡೆದಿದ್ದು ವಿಶೇಷವಾಗಿತ್ತು.

ಶ್ರವಣಬೆಳಗೊಳದ ಭಂಡಾರ ಬಸದಿ ಹಿಂಭಾಗದಲ್ಲಿರುವ ರತ್ನತ್ರಯ ಮಂಟಪ ವಿಶಾಲ ವೇದಿಕೆಯಲ್ಲಿ ಸಮ್ಮೇಳನ ಜರುಗಿತ್ತು. ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳಿಗೆ ಶ್ರವಣಬೆಳಗೊಳದಲ್ಲಿ ಊಟ, ವಸತಿ ಸೌಕರ್ಯ ಕಲ್ಪಿಸಲಾಗಿತ್ತು. ಪಟ್ಟಣದ ಅನೇಕ ಮನೆಗಳಲ್ಲಿ ಆತಿಥ್ಯ ನೀಡಲಾಗಿತ್ತು. ಸ್ಥಳೀಯ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು ಎಂದು ಕಸಾಪ ತಾಲ್ಲೂಕು ಘಟಕದ  ನಿಕಟಪೂರ್ವ ಅಧ್ಯಕ್ಷ ಎಸ್‌.ಎನ್‌. ಅಶೋಕ ಕುಮಾರ್, ನವೋದಯ ವಿದ್ಯಾ ಸಂಘದ ಪದಾಧಿಕಾರಿ ಡಾ.ಸಿ.ಎಸ್‌. ಶೇಷಶಯನ ‘ಪ್ರಜಾವಾಣಿ’ಗೆ ತಿಳಿಸಿದರು.

46ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಆ.ನೇ. ಉಪಾಧ್ಯ ಮಾತನಾಡಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಇತರ ಭಾಷೆಗಳಿಂದ ಕನ್ನಡಕ್ಕೂ, ಕನ್ನಡದಿಂದ ಇತರ ಭಾಷೆಗಳಿಗೂ ಸಾಹಿತ್ಯ ಕೃತಿಗಳ ಅನುವಾದ ಕಾರ್ಯ ನಡೆಯಬೇಕು. ರಾಷ್ಟ್ರ ಧರ್ಮದ ಪೋಷಣೆಗೆ ಸಾಹಿತಿ ತನ್ನ ಕರ್ತವ್ಯ ಸಲ್ಲಿಸಬೇಕು. ಯೋಜನಾಬದ್ಧವಾದ ಕಾರ್ಯ ಕನ್ನಡ ನಾಡಿನಲ್ಲಿ ನಡೆಯಬೇಕು. ಇದಕ್ಕೆ ಸರ್ಕಾರ ವಿಶ್ವವಿದ್ಯಾಲಯಗಳು, ಸಂಸ್ಥೆಗಳು ದುಡಿಯಲು ಅಣಿಯಾಗಬೇಕು’ ಎಂದು ಹೇಳಿದ್ದರು.

ಅಂದಿನ ಕಾನೂನು ಸಚಿವ ಎಸ್‌.ಆರ್‌. ಕಂಠಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ. ವೆಂಕಟಸುಬ್ಬಯ್ಯ, ಸ್ವಾಗತ ಸಮಿತಿ ಅಧ್ಯಕ್ಷ ಮದಭಿನವ ಚಾರುಕೀರ್ತಿ ಮಹಾಸ್ವಾಮೀಜಿ, ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಪುತಿನ, ಜಿ.ಎಸ್‌. ಶಿವರುದ್ರಪ್ಪ, ಎಸ್‌.ವಿ. ಪರಮೇಶ್ವರ ಭಟ್ಟ, ಚನ್ನವೀರ ಕಣವಿ, ಕೆ.ಎಸ್‌. ನಿಸಾರ್‌ಅಹಮದ್‌, ಚಂದ್ರಶೇಖರ ಕಂಬಾರ, ಪಿ.ಎಸ್‌. ಶಿವಲಿಂಗಯ್ಯ, ಶ್ರೀಕೃಷ್ಣ ಆಲನಹಳ್ಳಿ ಸೇರಿದಂತೆ ಹಲವು ಸಾಹಿತಿಗಳು ಭಾಗವಹಿಸಿದ್ದರು.

ಸ್ವಾಗತ ಸಮಿತಿಯ ಕಾರ್ಯದರ್ಶಿ ಟಿ. ತೋಂಟದಾರ್ಯ, ಭಾರತ ಸರ್ಕಾರದ ಪ್ರಚಾರಶಾಖೆ ಅಧಿಕಾರಿ ಎನ್.ಎಸ್‌. ವೆಂಕೋಬರಾವ್, ಶ್ರವಣಬೆಳಗೊಳದ ಪುರಸಭೆಯ ಆಡಳಿತಾಧಿಕಾರಿ ಎ.ಎಸ್‌. ಚಿಪ್ರೆ , ತಾಲ್ಲೂಕು ಕಸಾಪ ಅಧ್ಯಕ್ಷ ಸಿ.ಆರ್‌. ಶ್ರೀನಿವಾಸ ಪಾಲ್ಗೊಂಡಿದ್ದರು.

ಬಹುಮುಖ ಪ್ರತಿಭೆಯ ಉಪಾಧ್ಯ
ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿ ನಡೆದ 46ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆ.ನೇ. ಉಪಾಧ್ಯ ಅವರು, 1906 ಫೆ. 6ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದಲ್ಲಿ ಜನಿಸಿದವರು. ಸಂಸ್ಕೃತ, ಅರ್ಧಮಾಗದಿ ಭಾಷೆಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದರು.

ವಿದ್ಯಾಭ್ಯಾಸದ ನಂತರ ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಂ ಕಾಲೇಜಿನಲ್ಲಿ ಅವರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಮುಂಬೈ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್‌ ಪದವಿ ಪಡೆದರು. 1941ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಪ್ರಾಕೃತ, ಪಾಲಿ, ಬೌದ್ಧ, ಜೈನಧರ್ಮದ ವಿಭಾಗದ ಅಧ್ಯಕ್ಷತೆ ವಹಿಸಿದ್ದರು. 1966ರಲ್ಲಿ ಆಲಿಘರ್‌ನಲ್ಲಿ ನಡೆದ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದ ಅವರು ಮೈಸೂರು ವಿಶ್ವವಿದ್ಯಾಲಯದ ಪ್ರಾಕೃತ ಮತ್ತು ಜೈನವಿಭಾದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದರು.

ಆಸ್ಟ್ರೇಲಿಯಾ ದೇಶದಲ್ಲಿ ಜರುಗಿದ  ಅಂತರರಾಷ್ಟ್ರಿಯ ಪ್ರಾಚ್ಯವಿದ್ಯಾ ಪರಿಷತ್ತಿಗೆ ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಬೆಲ್ಜಿಯಂ ದೇಶದಲ್ಲಿ ಜರುಗಿದ ಜಾಗತಿಕ ಧರ್ಮ ಮತ್ತು ಶಾಂತಿಸಮ್ಮೇಳನಕ್ಕೆ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಇವರು 12 ಕೃತಿಗಳನ್ನು ರಚಿಸಿದ್ದರು. 1975 ಅ. 8ರಂದು ಕೊಲ್ಲಾಪುರದಲ್ಲಿ ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT