ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2013 ನನ್ನ ಇಷ್ಟದ ಪುಸ್ತಕ

Last Updated 28 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಲ್ಮಾನ್‌ ಖಾನನ ಡಿಫಿಕಲ್ಟೀಸು
ಲೇ: ಎಂ.ಎಸ್‌. ಶ್ರೀರಾಮ್
ಪ್ರ: ಅಂಕಿತ ಪುಸ್ತಕ, ಬೆಂಗಳೂರು

ವಿಶ್ವರೂಪದ ವಿಭಿನ್ನ ವಿನ್ಯಾಸ

‘ಸಲ್ಮಾನ್ ಖಾನನ ಡಿಫಿಕಲ್ಟೀಸು’ ಎಂ.ಎಸ್. ಶ್ರೀರಾಮರ ನಾಲ್ಕನೇ ಕಥಾ ಸಂಕಲನ. ವಿನ್ಯಾಸ, ವಿಸ್ತಾರ ಎರಡೂ ದೃಷ್ಟಿಗಳಿಂದ ಕನ್ನಡ ಕಥಾಸಾಹಿತ್ಯಕ್ಕೆ ಹೊಸ ಸಾಧ್ಯತೆ ತೋರುವ ಕಥೆಗಳಿವು. ನಿದರ್ಶನಕ್ಕೆ ಮೊದಲ ಕಥೆಯನ್ನೇ ನೋಡಬಹುದು.

ಹೈದರಾಬಾದಿನಲ್ಲಿ ಬೆಳಗಿನ ವಾಕಿಂಗ್‌ ಹೊತ್ತಿಗೆ ‘ಕ್ರೌರ್ಯದ ವಿಶ್ವರೂಪದರ್ಶನ’ ಕಂಡು ಕನಲಿದ ಮೈಸೂರು ಭಾಸ್ಕರರಾಯರ ಮುಗ್ಧ ತಲ್ಲಣದಲ್ಲಷ್ಟೇ ಈ ಕಥೆ ನಿಲ್ಲದೆ– ಸ್ವತಃ, ತಾನೇ ಆ ಕ್ರೌರ್ಯದ ಮಗ್ಗುಲುಗಳಿಗೆ ಬೆಳಕು ಚೆಲ್ಲುತ್ತಾ ಹೋಗುತ್ತದೆ.

‘ವ್ಯಕ್ತಿ’ ಒಬ್ಬನನ್ನು ಪ್ರಜ್ಞೆ ತಪ್ಪುವಂತೆ ಥಳಿಸಿ ಕಾರಿನಿಂದ ಎಸೆದವರು ಕ್ರೂರಿಗಳೋ ಬಾಲರಾಜು ಎಂಬ ಆ ಉಗ್ರಗಾಮಿ ‘ವ್ಯಕ್ತಿ’ ಕ್ರೂರಿಯೇ? ಎಲ್ಲವನ್ನೂ ಸುದ್ದಿ ಮಾಡುವ ಮಾಧ್ಯಮಗಳ ಹುಸಿಕಾಳಜಿಯ ಜೊತೆಯಲ್ಲೇ ಘಟನೆಯ ಸತ್ಯವನ್ನೇ ತನ್ನ ಲಾಭಕ್ಕೆ ತಕ್ಕಂತೆ ಬದಲಿಸಿಕೊಳ್ಳುವ ರಾಜಕೀಯದ ಚದುರಂಗದಾಟವೂ ಸೇರಿ ವರ್ತಮಾನದ ಅಸಂಬದ್ಧತೆಯ ಒಂದು ಲೋಕ ನಿರ್ಮಾಣವಾಗುತ್ತದೆ.

ಸಾವಿರಾರು ಜನರನ್ನು ಕೊಂದ ವ್ಯಕ್ತಿಯನ್ನು ತಾನು ರಚಿಸಿವ ಇ.ಎಂ.ಆರ್‌.ಐ. ತಂತ್ರವ್ಯವಸ್ಥೆ ಉಳಿಸಿತೆನ್ನುವ ಸಂಗತಿಯ ವಿಪರ್ಯಾಸವು ಸತ್ಯಂ ರಾಮಲಿಂಗರಾಜುವನ್ನು ಕಾಡಿವೆ. ಅವನೂ ಇನ್ನೊಂದು ಬಗೆಯ ಅಪರಾಧಕ್ಕಾಗಿ ಜೈಲು ಸೇರಿದವನು! ಈ ಕಥೆಯ ಮುಂದುವರಿಕೆ ಎಂಬಂತೆಯೂ ತೋರುವ ‘ಅಸ್ತಿತ್ವ’ – ಇರುವಿಕೆ, ಇಲ್ಲವಾಗುವಿಕೆ, ಇಲ್ಲವಾಗಿರಬಹುದಾದರೂ ಇರುವರೆಂದು ಊಹಿಸುತ್ತ ಬಾಳುವುದು, ಸ್ವತಃ ಅಸ್ತಿತ್ವದ ಎಲ್ಲ ಗುರುತುಗಳನ್ನು ಕಳೆದುಕೊಳ್ಳಬಯಸುವುದು, – ಇವುಗಳ ಸುತ್ತ ತನ್ನ ಆವರಣ ಕಟ್ಟಿಕೊಂಡಿದೆ.

ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಸದಾಶಯದಿಂದ ಹೊರಟ ಯೋಜನೆಗಳೂ ಸಮಸ್ಯಾತ್ಮಕ ತಿರುವುಗಳನ್ನು ಪಡೆದುಕೊಳ್ಳುವುದು, ಹೈದರಾಬಾದಿನ ರೇಖಾರಾಣಿ ಎಂಬ ಹೈಸ್ಕೂಲು ಹುಡುಗಿಯ ಬಡಬಾಳಿನ ಗೋಳುಗಳಿಗೆ ಸಲ್ಮಾನಖಾನನೇ ಮೂಲ ಕಾರಣವೆಂದು ಅವಳಿಗೆ ತುಂಬ ಖಚಿತವಾಗಿಯೇ ಅನ್ನಿಸುವುದು, ದಂಪತಿಯ ಪುಟ್ಟರಂಪವೊಂದು ದಿಕ್ಕು ದೆಸೆಯಿಲ್ಲದಂತೆ ಬೆಳೆಯುತ್ತಾ ಹೋಗುವುದು ಎಲ್ಲ ಬಗೆಯಲ್ಲೂ ಸಂಗತವಾಗಿದ್ದು ಅಬದ್ಧವೆಂಬಂತೆ ಕಾಣುವ ಒಂದು ಪತ್ರ ನಿರೂಪಣೆ... ಇವು ಇನ್ನುಳಿದ ಕಥೆಗಳ ಜಗತ್ತು.

ಅಪೂರ್ಣರೂ, ಒಂದರ್ಥದಲ್ಲಿ ವಿವೇಕಿಗಳೂ, ಇನ್ನೊಂದು ಬಗೆಯಲ್ಲಿ ನೋಡಿದಾಗ ಸರ್ವಾರ್ಥದಲ್ಲಿ ಆಗಂತಕರೂ ಎಂಬಂತೆ ಕಾಣುವ ಈ ಎಲ್ಲ ಕಥೆಗಳ ಪಾತ್ರಗಳು ಜೊತೆಗೊಳ್ಳುವ ಪರಿ ಮತ್ತು ಇವರೆಲ್ಲ ಬದುಕುತ್ತಿರುವ ನಮ್ಮೀ ಸದ್ಯದ ಬದುಕು ಈ ಎಲ್ಲದರ ಕುರಿತು ಈ ಕಥೆಗಾರ ಚಿಂತೆಗೆ, ಚಿಂತನೆಗೆ ಹಚ್ಚುತ್ತಾರೆ. ವರ್ತಮಾನದ ವಿಲಕ್ಷಣಗಳನ್ನು ನಿರುದ್ದಿಶ್ಯವೆಂಬಂತೆ ಜೋಡಿಸುತ್ತಲೇ ಒಂದು ತಾತ್ವಿಕ ನೆಲೆಯನ್ನು ಕಟ್ಟುವ ಯತ್ನ ಈ ಕಥೆಗಳ ಹೆಚ್ಚಿನ ಸಾಧನೆ ಎನ್ನಿಸುತ್ತದೆ.
–ಚಿಂತಾಮಣಿ ಕೊಡ್ಲೆಕೆರೆ

***

ಮಕ್ಕಳಿಗಾಗಿ ಪಂಪ

ಲೇ: ಎಚ್.ಎಸ್. ವೆಂಕಟೇಶಮೂರ್ತಿ
ಪ್ರ: ಅಭಿನವ, ಬೆಂಗಳೂರು

ಪಂಪನ ನವೀಕರಣ


೨೦೧೩ರಲ್ಲಿ ಸಿ.ಎನ್. ರಾಮಚಂದ್ರನ್ ಅವರ ಆತ್ಮಕಥನ ‘ನೆನಪುಗಳ ಬೆನ್ನುಹತ್ತಿ’, ರಜನಿ ನರಹಳ್ಳಿ ಅವರ  ಕಾದಂಬರಿ ‘ಆತ್ಮವೃತ್ತಾಂತ’, ಕೆ.ವಿ. ಅಕ್ಷರ ಅವರ ನಾಟಕ ‘ಭಾರತಯಾತ್ರೆ’, ಎಚ್.ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನ ‘ಶಂಖದೊಳಗಿನ ಮೌನ’ ಮುಂತಾಗಿ ಹಲವು ಉತ್ತಮ ಕೃತಿಗಳು ಪ್ರಕಟವಾಗಿವೆ.

ಆದರೆ ಈ ವರ್ಷದ ಕನ್ನಡ ಪುಸ್ತಕಗಳ ನನ್ನ ಓದಿನಲ್ಲಿ ನನ್ನ ಗಮನವನ್ನು ವಿಶೇಷವಾಗಿ ಸೆಳೆದ ಪುಸ್ತಕವೆಂದರೆ ಎಚ್.ಎಸ್. ವೆಂಕಟೇಶಮೂರ್ತಿ ಅವರ ‘ಮಕ್ಕಳಿಗಾಗಿ ಪಂಪ’. ಇದು ಪಂಪನ ಕಾವ್ಯಗಳನ್ನು, ಅವುಗಳಲ್ಲಿ ನಿರೂಪಿತವಾದ ಕತೆಯನ್ನು ಗದ್ಯದಲ್ಲಿ ಸಂಗ್ರಹವಾಗಿ ಮಕ್ಕಳಿಗೆ ಮರುನಿರೂಪಿಸುವಂಥ ಪುಸ್ತಕವಲ್ಲ.

ಬದಲಾಗಿ ಪಂಪನ ಮೂಲಪದ್ಯಗಳ ಜಾಡನ್ನೇ ಹಿಡಿದು ಅವುಗಳನ್ನು ಸರಳವಾದ ಇಂದಿನ ಕನ್ನಡದಲ್ಲಿ ಅದೇ ಧಾಟಿಯಲ್ಲಿ, ಅದೇ ಲಯದಲ್ಲಿ, ಅದೇ ಮಾತಿನ ವರಸೆಯಲ್ಲಿ, ಅದೇ ಪ್ರತಿಮಾ ಸಂಯೋಜನೆಯಲ್ಲಿ ಪದ್ಯಗಳಲ್ಲೇ ಪುನರ್ ನಿರೂಪಿಸುವ ಮಹತ್ವಾಕಾಂಕ್ಷೀ ಕೃತಿ.

ಮೂಲ ಪದ್ಯಕ್ಕೂ ವೆಂಕಟೇಶಮೂರ್ತಿ ಅವರ ಪದ್ಯಕ್ಕೂ ಇರುವ ಒಂದೇ ವ್ಯತ್ಯಾಸವೆಂದರೆ ಪಂಪನ ಕಾಲದ, ಇಂದಿನ ಕನ್ನಡದಲ್ಲಿ ಬಳಕೆಯಾಗದ, ಮೊದಲ ಓದಿನ ಆಸ್ವಾದಕ್ಕೇ ಕ್ಲಿಷ್ಟವೆನ್ನಿಸುವ ಪದಗಳ ಬದಲು ಅಷ್ಟೇ ಸುಂದರವಾದ, ಅರ್ಥಪೂರ್ಣವಾದ ಇಂದಿನ ಕನ್ನಡದ ಪದಗಳನ್ನು ಬಳಕೆ ಮಾಡಿಕೊಂಡಿರುವುದು. ಈ ಬಳಕೆಯೂ ಕನಿಷ್ಠ ಪ್ರಮಾಣದಲ್ಲಿ ಆಗಿರುವುದರಿಂದ ವೆಂಕಟೇಶ ಮೂರ್ತಿಯವರ ಪದ್ಯಗಳನ್ನು ಓದುತ್ತಿದ್ದರೆ ಪಂಪನ ಪದ್ಯಗಳನ್ನೇ ಓದಿದ ಅನುಭವವಾಗುತ್ತದೆ.

ಪಂಪ ಈ ಕಾಲದಲ್ಲಿ ಬರೆದಿದ್ದರೆ ಹೀಗೇ ಬರೆಯುತ್ತಿದ್ದನೇನೋ ಅನ್ನಿಸುವಷ್ಟು ವೆಂಕಟೇಶಮೂರ್ತಿಯವರ ಪದ್ಯಗಳು ಪಂಪಮಯವಾಗಿದ್ದು ಮೂಲಕವಿ ಮತ್ತು ಇಂದಿನ ಹೊಸಕಾಲದ, ಪೀಳಿಗೆಯ ಯುವ ಓದುಗರ ನಡುವೆ ಇರಬಹುದಾದ ಭಾಷಿಕ ತೊಡಕುಗಳನ್ನು ಮಾತ್ರ ನಿವಾರಿಸಿವೆ. ‘ಆದಿ ಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ ಎರಡೂ ಕಾವ್ಯಗಳ ಆಯ್ದ ಭಾಗಗಳು ಪ್ರಸ್ತುತ ಪುಸ್ತಕದಲ್ಲಿ ಸೇರ್ಪಡೆಯಾಗಿದ್ದು ಮಕ್ಕಳಿಗೆ ಮಾತ್ರವಲ್ಲ, ಪಂಪನನ್ನು ಮೊದಲ ಬಾರಿಗೆ ಓದುವ ಯಾವುದೇ ಬಗೆಯ ಓದುಗರಿಗೆ ಅರ್ಥಪೂರ್ಣವಾದ ಪ್ರವೇಶವನ್ನು ಒದಗಿಸುತ್ತವೆ.

ಈ ಪುಸ್ತಕದ ಸಾಂಸ್ಕೃತಿಕ ಮಹತ್ವ ಮತ್ತು ಸಮಕಾಲೀನ ಪ್ರಸ್ತುತತೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಈ ಪದ್ಯಗಳ ಚೆಲುವು, ಅವುಗಳಲ್ಲಿ ಮೂಡಿಬರುವ ಪಾತ್ರಚಿತ್ರಣ, ಕಥಾನಿರೂಪಣೆ, ಜೀವನದರ್ಶನಗಳು ಕನ್ನಡದ ಅತಿಮುಖ್ಯ ಕವಿಯೊಬ್ಬನ ಸಿದ್ಧಿ-ಸಾಧನೆಗಳ ಪ್ರತಿಫಲನವೂ ಹೌದು. ಬೇಕೆನಿಸಿದಾಗ, ಬೇಕೆನಿಸಿದ ಪುಟವನ್ನು ತೆಗೆದು ಮನಸ್ಸನ್ನು ಪ್ರಫುಲ್ಲಗೊಳಿಸಿಕೊಳ್ಳಬಹುದಾದ ಅಪರೂಪದ ಪುಸ್ತಕ ಇದು.
–ಟಿ.ಪಿ. ಅಶೋಕ

***

ಕರ್ನಾಟಕ ಯಕ್ಷಗಾನ ಕವಿಚರಿತ್ರೆ

ಲೇ: ಡಾ. ಕಬ್ಬಿನಾಲೆ ವಸಂತ  ಭಾರದ್ವಾಜ---
ಪ್ರ: ಯಕ್ಷಗಾನ ಕೇಂದ್ರ, ಎಂ.ಜಿ.ಎಂ ಕಾಲೇಜು, ಉಡುಪಿ-– 576102

ಯಕ್ಷಗಾನ ಕವಿ, ಪ್ರಸಂಗಗಳ ದಾಖಲೆ

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ‘ಯಕ್ಷಗಾನ ಕವಿ ಚರಿತ್ರೆ’ ಒಂದು ಮಹತ್ವಾಕಾಂಕ್ಷೆಯ ಪುಸ್ತಕ. ಕುಂಬಳೆಯಿಂದ ಬೀದರ್‌ವರೆಗಿನ ಸುಮಾರು ೧೨೦೦ ಯಕ್ಷಗಾನ ಕವಿಗಳು ಇಲ್ಲಿ ಉಲ್ಲೇಖಗೊಂಡಿದ್ದಾರೆ. ಇವರಲ್ಲಿ ೩೦೦ ಮಂದಿ ಅಜ್ಞಾತ ಕವಿಗಳು. ಈ ಕವಿಗಳು ರಚಿಸಿದ ಪ್ರಸಂಗಗಳ ಸಂಖ್ಯೆ ಸುಮಾರು ೪೬೦೦. ‘ಪ್ರತಿಯೊಂದು ಪ್ರಸಂಗದಲ್ಲಿ ೨೫೦ ಪದ್ಯಗಳಿವೆ ಎಂದು ಭಾವಿಸಿದರೂ, ಪದ್ಯಗಳ ಒಟ್ಟು ಸಂಖ್ಯೆ ಹತ್ತು ಲಕ್ಷ ದಾಟುತ್ತದೆ’.

ಪಡುವಲಪಾಯ, ದೊಡ್ಡಾಟ, ಸಣ್ಣಾಟ, ಪಾರಿಜಾತ- ಈ  ಪ್ರಕಾರಗಳ ಕವಿಗಳನ್ನೂ ಇಲ್ಲಿ ಯಕ್ಷಗಾನ ಕವಿಗಳೆಂದೇ ಪರಿಗಣಿಸಲಾಗಿದೆ. ಲೇಖಕರು ಕೆಲವು ಮುಖ್ಯ ಪ್ರಸಂಗಗಳ ಒಂದೆರಡು ಪದ್ಯಗಳನ್ನೂ ಉದಾಹರಣೆಗಾಗಿ ನೀಡಿದ್ದಾರೆ. ಕ್ರಿ.ಶ. ೧೩೦೦–50ರ ಸುಮಾರಿಗೆ ಅಜ್ಞಾತ ಕವಿಯೊಬ್ಬ ಬರೆದ ‘ಆದಿ ಪರ್ವ’ವನ್ನು ಯಕ್ಷಗಾನದ ಪ್ರಾಚೀನ ಕೃತಿ ಎಂದು ಕಬ್ಬಿನಾಲೆಯವರು ಒಪ್ಪಿಕೊಂಡಿದ್ದಾರೆ. ಈ ಕುರಿತು ಡಾ. ಪ್ರಭಾಕರ ಜೋಶಿಯವರ ಭಿನ್ನಾಭಿಪ್ರಾಯವನ್ನು ಇಲ್ಲಿ ಅವರು ದಾಖಲಿಸಬೇಕಿತ್ತು. ಹಿಂದೂ, ಜೈನ, ಮುಸ್ಲಿಂ- ಹೀಗೆ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಕವಿಗಳು ಇಲ್ಲಿದ್ದಾರೆ. ಕಿಬ್ಬಚ್ಚಲ ಮಂಜಮ್ಮ, ಗಣಪಕ್ಕ ಸಣ್ಣಬಡ್ತಿ, ಮಹಾಲಕ್ಷ್ಮಿ ನಾಗಪ್ಪ ಜೋಯಿಸ ಇಂಥ ಕವಯಿತ್ರಿಯರೂ ಕಾಣಿಸುತ್ತಾರೆ.

ಹೊಸ್ತೋಟ ಮಂಜುನಾಥ ಭಾಗವತರು ಅತ್ಯಂತ ಹೆಚ್ಚಿನ ಪ್ರಸಂಗಗಳನ್ನು (೨೧೫) ರಚಿಸಿದ ಕವಿ. ಅನಂತರಾಮ ಬಂಗಾಡಿಯವರು ನೂರಕ್ಕಿಂತ ಹೆಚ್ಚು ತುಳು ಪ್ರಸಂಗಗಳನ್ನು ಬರೆದಿದ್ದಾರೆ. ಸದಾಶಿವ ಭಟ್ ಒಂಬತ್ತು ಭಾಷೆಗಳಲ್ಲಿ ಪ್ರಸಂಗಗಳನ್ನು ಬರೆದಿರುವ ಕವಿ. ಯಕ್ಷಗಾನ ಕವಿಗಳು ಪುರಾಣಲೋಕದ ಗಡಿದಾಟಿ, ‘ಇಸ್ಪೀಟಾಟ’  ‘ಭಗವಾನ್ ಯೇಸು ಕ್ರಿಸ್ತ’, ‘ಸತ್ಯ ವಿಜಯ’, ‘ನಸ್ಸೇರ್ ವಿಜಯ’ ಅಫಜಲಖಾನ್ ವಧೆ’ ಇಂಥ ವಸ್ತುಗಳನ್ನು ಆಯ್ಕೆ ಮಾಡಿದ್ದಾರೆ. ಮುದ್ದಣನ ಹಾಗೆ ಕನ್ನಡ ಲೇಖಕರಾದ ಪಂಜೆ, ಮುಳಿಯ, ಪುತಿನ ಕೂಡ ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ.

ಪ್ರಸಂಗಗಳು ಪ್ರಕಟಿತವೇ, ಅಪ್ರಕಟಿತವೇ ಎಂದು ತಿಳಿಸದಿರುವುದು, ಪ್ರಕಟಣೆಯ ಮಾಹಿತಿ ನೀಡದಿರುವುದು ಈ  ಗ್ರಂಥದ ಒಂದು ದೊಡ್ಡ ಕೊರತೆ. ನನ್ನ ಗುರುಗಳಾಗಿದ್ದ ಸೀತಾನದಿ ಗಣಪಯ್ಯ ಶೆಟ್ಟರು ‘ನಾವು ಯಕ್ಷಗಾನ ಪ್ರಸಂಗ ಬರೆದವರು ಕವಿಗಳಲ್ಲವೇ’ ಎಂದು ಪ್ರಶ್ನಿಸುತ್ತಿದ್ದರು. ಯಕ್ಷಗಾನ ‘ಕವಿಗಳ ಸಂದಣಿಗೆ ಬಲವಂದು’ ಅವರಿಗೆ ಸಾಹಿತ್ಯ ಚರಿತ್ರೆಯಲ್ಲಿ ಮನ್ನಣೆ ನೀಡಿರುವ ಡಾ. ಕಬ್ಬಿನಾಲೆಯವರು ಅಭಿನಂದನಾರ್ಹರು.
–-ಮುರಳೀಧರ ಉಪಾಧ್ಯ ಹಿರಿಯಡಕ

***

ನುಡಿಯೊಳಗಾಗಿ
ಲೇ: ಓ.ಎಲ್. ನಾಗಭೂಷಣಸ್ವಾಮಿ,
ಪ್ರ: ಅಭಿನವ, ಬೆಂಗಳೂರು

ಮಾತೆಂಬುದು ಜ್ಯೋತಿರ್ಲಿಂಗ
-ಮಾತಿನ ಮೀಮಾಂಸೆ

ಬಂಡಿಗಾಲಿ ಮತ್ತು ಭಾಷೆ - ಇವೆರಡನ್ನು ಮನುಷ್ಯ ಕಂಡುಕೊಂಡ ಕಾರಣಕ್ಕೆ ಅವನು ಈಗಿರುವಂತೆ ಇದ್ದಾನೆ. ಮತ್ಯಾವುದನ್ನಾದರೂ ಕಂಡುಕೊಂಡಿದ್ದರೆ ಮತ್ಯಾವುದೋ ರೀತಿ ಇರುತ್ತಿದ್ದನೇನೋ. ಬಂಡಿಗಾಲಿ ಅದೆಷ್ಟೋ ಸುತ್ತು ಸುತ್ತಿದೆ. ಭಾಷೆಯ ವಿಷಯಕ್ಕೆ ಈಗ ಹತ್ತಿರ ಹತ್ತಿರ ಒಂದು ಸುತ್ತು ಬಂದಿದ್ದೇವೆಂದು ಕಾಣುತ್ತದೆ.

ಯಾಕೆಂದರೆ ಭಾಷೆಯ ಮೊದಲ ಅಕ್ಷರಗಳಾದ ಹೂಂ... ಮತ್ತು ಉಹೂಂ... ಗಳನ್ನಷ್ಟೇ ಬಳಸಿ ಮಾತನಾಡುವ ಬೈನರಿ ಭಾಷೆಗೆ ಈಗ ಮತ್ತೆ ಬಂದಿದ್ದೇವೆ. ಈಗ ಬೈನರಿಯಲ್ಲಿ ಹೊಸದಾಗಿ ಮಾತನಾಡಲು ಶುರುಮಾಡಿದ್ದೇವೆ. ಭಾಷೆಯನ್ನು ನಾವು ಕಲಿಯುವುದು ಮತ್ತು ನಾವು ಭಾಷೆಗೆ ಕಲಿಸುವುದು ಎರಡೂ ನಡೆದೇ ಇದೆ. ‘ಏನಾಗುತ್ತಿದೆ?’ ಎಂದು ಡಾಕ್ಟರು ಕೇಳಿದರೆ, ‘ಒಂಥರಾ ಆಗುತ್ತಿದೆ’ ಅಂತಾ ಬಹಳ ಸಾರಿ ಅನ್ನುತ್ತೇವೆ. ಹಾಗೆಂದರೆ ಏನು ಹೇಳಿದಂತಾಗುತ್ತದೆ? ಮಾತಿನ ಬಗ್ಗೆ ಮಾತನಾಡಲು ಹೊರಟರೆ ಹೀಗೇ ಎಲ್ಲವೂ ಅನಿರ್ದಿಷ್ಟವಾಗಿ ನಡೆಯುತ್ತದೆ. ಅದರ ಗುಣವೇ ಹಾಗೆ, ಪದವನರ್ಪಿಸಬಹುದೇ ಹೊರತು ಪದಾರ್ಥವನ್ನಲ್ಲ.

ಕನ್ನಡದ ಪ್ರಮುಖ ಚಿಂತಕರಲ್ಲೊಬ್ಬರಾದ ಓ.ಎಲ್. ನಾಗಭೂಷಣಸ್ವಾಮಿಯವರ ಪುಸ್ತಕ ‘ನುಡಿಯೊಳಗಾಗಿ’ ಒಂದು ವರುಷ ಅವರು ‘ಪ್ರಜಾವಾಣಿ’ಯ ‘ಸಾಪ್ತಾಹಿಕ ಪುರವಣಿ’ಯಲ್ಲಿ ಮಾತಿನ ಬಗೆಗೆ ಬರೆದ ಲೇಖನಗಳ ಸಂಗ್ರಹ. ಭಾಷೆಯೆಂದರೇನೆಂಬುದನ್ನು ಈವರೆಗೆ ಸರಿಯಾಗಿ ವಿವರಿಸಿಕೊಳ್ಳಲು ಸಾಧ್ಯವಾಗದಿರುವುದೇ ಅದರ ಸಂಕೀರ್ಣತೆಗೆ ಸಾಕ್ಷಿ.

ಭಾಷೆ ಏತಕ್ಕೆ ಬೇಕು? ಎಂಬ ಪ್ರಶ್ನೆಗೆ, ಏನನ್ನಾದರೂ ಹೇಳುವುದಕ್ಕೆ ಎಂದು ತಟಕ್ಕನೆ ಉತ್ತರ ಕೊಡಬಹುದಾರೂ, ಏನನ್ನಾದರೂ ಹೇಳದೆ ಮುಚ್ಚಿಡಲಿಕ್ಕೆ ಎಂದು ಕೂಡ ಹೇಳಬಹುದು. ಮಾತಿನ ಮೀಮಾಂಸೆಯನ್ನು ಕುರಿತಾದ ಪುಸ್ತಕಗಳು ಕನ್ನಡದಲ್ಲಿ ಕೈಬೆರಳೆಣಿಕೆಯಷ್ಟಿವೆ. ಹಾಗಾಗಿ ಈ ಪುಸ್ತಕ ಕನ್ನಡದ ಚಿಂತನೆಗೆ ಒಂದು ಅಮೂಲ್ಯವಾದ ಸೇರ್ಪಡೆ. ಪದ ಪದಾರ್ಥವಾಗುವ ಪ್ರಕ್ರಿಯೆಯ ಅನೇಕ ಮಗ್ಗುಲುಗಳನ್ನು ಈ ಪುಸ್ತಕ ತೆರೆದಿಡುತ್ತದೆ. ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಇಂತಹ ಪ್ರಯತ್ನಗಳು ಹೇಗೆ ನಡೆಯುತ್ತಿವೆಯೋ ಗೊತ್ತಿಲ್ಲ. ಕನ್ನಡದಲ್ಲಿ ಓ.ಎಲ್. ನಾಗಭೂಷಣಸ್ವಾಮಿ, ಕೆ.ವಿ. ನಾರಾಯಣ, ಡಿ.ಎನ್. ಶಂಕರಭಟ್ಟರು ಮತ್ತು ಇನ್ನೂ ಅನೇಕರು ಮಾತನ್ನು ಬಹು ಅಕ್ಕರಾಸ್ಥೆಯಿಂದ ಮುಟ್ಟಿ ಮಾತನಾಡಿಸುತ್ತಾರೆ.

ಭಾಷೆಯೆಂಬುದು ಪ್ರಾಣಘಾತುಕ, ಒಂದೂರ ಭಾಷೆಯೊಂದೂರಲಿಲ್ಲ, ಉಲುಹಿನ ವೃಕ್ಷದ ನೆಳಲಿನಡಿಯಲ್ಲಿದ್ದು ಗಲಭೆಯನೊಲ್ಲೆಯೆಂಬ ಪರಿಯೆಂತಯ್ಯಾ? ಮಾತಿಂಗೆ ಸೂತಕವುಂಟೆ? -ಇಂತಹ ಮಾತುಗಳನ್ನು ಮಾತಿನ ಬಗೆಗೆ ಅನುಭಾವಿಗಳು ಆಡಿದ್ದಾರೆ.

ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಲಾಗದು ಎಂದು ಅಲ್ಲಮ ನುಡಿದರೆ, ಶಬ್ದಕ್ಕೆ ಅರ್ಥದ ಜೊತೆ ಇರುವ ಸಂಬಂಧವು ನಿತ್ಯವಾದುದು ಎಂದು ಜೈಮಿನಿ ಹೇಳುತ್ತಾರೆ. ಇಂಗಿತವಿಷ್ಟೆ: ಮಾತಿನ ಜಾಡು ಹಿಡಿದು ಹೊರಟರೆ ಮನುಕುಲದ ಜ್ಞಾನದ ಚರಿತ್ರೆಯನ್ನೂ ಕಂಡಂತಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಭಾಷಾವಿಜ್ಞಾನಿಗಳು ಜ್ಞಾನದ ಹೊಸ ವಿಸ್ತರಣೆಗಳನ್ನು ಯಶಸ್ವಿಯಾಗಿ ನೀಡುತ್ತಿದ್ದಾರೆ ಎನ್ನುವುದು ಬಹಳ ಮುಖ್ಯವಾದ ಸಂಗತಿ. ಭಾಷೆ ತಾನು ಮಾಡುವ ಉದ್ಯೋಗದ ಜೊತೆಜೊತೆಗೆ ಲೋಕ ರಚನೆಯ ಕ್ರಮವನ್ನೂ ಅನಾವರಣ ಮಾಡುತ್ತದೆ. ಹಾಗಾಗಿ ಜ್ಞಾನ ಮೀಮಾಂಸೆಯಲ್ಲಿ ಭಾಷಾ ವಿಜ್ಞಾನಕ್ಕೆ ಮಹತ್ವದ ಸ್ಥಾನವಿದೆ.

ಈ ಕೃತಿಯ ಹರಹು ಮಾತಿನಷ್ಟೇ ವಿಶಾಲವಾದುದು. ಭರ್ತೃಹರಿ, ನಾಗಾರ್ಜುನ, ಕುಮಾರಿಲರಿಂದ ಹಿಡಿದು ಓಎಲ್ಎನ್ ಅವರ ಮೊಮ್ಮಗ ಸಮರ್ಥ ಭಾಷೆಯನ್ನು ಎದುರಾಗುವ ಕ್ರಮದವರೆಗೆ ಇದು ಹರಡಿಕೊಂಡಿದೆ. ಮಾತಿನ ಬಗೆಗಿನ ಕುತೂಹಲ ನಮಗೆ ಹುಟ್ಟಿನಿಂದಲೂ ಅಥವಾ ಅದಕ್ಕಿಂತ ತುಸು ಮೊದಲಿನಿಂದಲೂ ಇರುವಂತದ್ದು.  ನಾಗಭೂಷಣಸ್ವಾಮಿ ಪುಸ್ತಕದುದ್ದಕ್ಕೂ ಓದುಗರೊಡನೆ ಪ್ರೀತಿಯಿಂದ ಮಾತನಾಡುತ್ತಾರೆ. ಹಾಗಾಗಿ ಓದುವ ಪ್ರೀತಿಗೆ ಕೂಡ ಇದನ್ನು ಓದಬಹುದು, ಮಾತಾಡಬಹುದು.
– ಎಸ್. ನಟರಾಜ ಬೂದಾಳು

***

ಮಾಯಾಕೋಲಾಹಲ

ಲೇ: ಮೌನೇಶ ಬಡಿಗೇರ
ಪ್ರ: ಛಂದ ಪುಸ್ತಕ, ಬೆಂಗಳೂರು

ಪುಟ್ಟಪಾತ್ರಗಳ ಕನ್ನಡಿಯಲ್ಲಿ ಇಂದಿನ ‘ಮಾಯಾಲೋಕ’

ಇದು ಕನ್ನಡ ಕಥನ ಸಾಹಿತ್ಯದ ಹುಲುಸು ಬೆಳಸಿನ ಕಾಲ. ಬಗೆಬಗೆಯ ಅನುಭವಲೋಕಗಳೂ ಹಲವು ರೀತಿಯ ಸನ್ನಿವೇಶ ವೈಚಿತ್ರ್ಯಗಳೂ ಹೊಸ ಬಗೆಯ ಕಥನಕ್ರಮಗಳೂ ರೂಪುಗೊಳ್ಳುತ್ತಿರುವ ಈ ಕಾಲದ ಕಥೆಗಳಲ್ಲಿ ನನಗೆ ಕಾಣಿಸುವ ಒಂದು ಬಹುದೊಡ್ಡ ಕೊರತೆ - ಸ್ವಾರಸ್ಯಕ್ಕೆ ಸಮನಾದ ಸತ್ತ್ವವೂ ರೋಚಕತೆಯಿರುವಷ್ಟು ರಸವೂ ಇಲ್ಲದಿರುವುದು.

‘ಮಾಯಾಕೋಲಾಹಲ’ವೆಂಬ ತಮ್ಮ ಮೊದಲ ಸಂಕಲನದಲ್ಲೇ ಮೌನೇಶ ಬಡಿಗೇರ ಈ ಮಿತಿಯನ್ನು ಮೀರುವ ಯತ್ನ ಮಾಡಿದ್ದಾರೆ ಎಂಬುದು ನನಗೆ ಅವರ ಕಥೆಗಳ ಮುಖ್ಯ ಆಕರ್ಷಣೆ. ನಗರಕ್ಕೆ ಬಂದು ನೆಲೆ ನಿಂತ ಕೆಳಮಧ್ಯಮವರ್ಗದ ಕುಟುಂಬಗಳ ತಾಪತ್ರಯಗಳ ಕಥೆ ಈ ಸಂಕಲನದಲ್ಲಿ ಸ್ಥಾಯಿಯಾಗಿದೆ; ಆದರೆ ಆ ಪಾತ್ರಗಳ ಮನೋವ್ಯಾಪಾರಗಳು ಇಂಥ ಕಾಲದೇಶಪ್ರಜ್ಞೆಯ ಹಂಗಿನಾಚೆಗೂ ಹಾಯುವುದರಿಂದ, ಇಲ್ಲಿಯ ಪಾತ್ರಗಳು ತಮ್ಮ ಬದುಕಿನ ಮಿತಿಗಳ ಆಚೆಗೂ ತಮ್ಮನ್ನು ಕಾಣುವ ಹೊಸ ಕ್ರಿಯಾಶಕ್ತಿಯೊಂದನ್ನು ಪಡೆದುಕೊಳ್ಳುತ್ತವೆ.

ಆದ್ದರಿಂದಲೇ ಮದುವೆಯ ಆಲ್ಬಮಿನಲ್ಲಿ ಅನಾಮಿಕನೊಬ್ಬನನ್ನು ಕಂಡು ದುಗುಡಗೊಳ್ಳುವ ಇಲ್ಲಿಯ ಕಥೆಯೊಂದರ ನಾಯಕ ಆ ಹುಡುಕಾಟದ ಮೂಲಕವೇ ಆತ್ಮಚರಿತವನ್ನರಿಯಲೂ ಯತ್ನಿಸುತ್ತಾನೆ; ಟೀವಿಯ ನಿತ್ಯನಾರಕಿ ಲೋಕದೊಳಗಿದ್ದೂ ಅದನ್ನೊಂದು ವಿಶಾಲ ಲೋಕರೂಪಕವಾಗಿ ನೋಡುವ ಧೀಮಂತಿಕೆಯೂ ಇಲ್ಲಿಯ ಪಾತ್ರಗಳಿಗೆ ಒದಗುತ್ತದೆ.

ಪಾತ್ರವೊಂದನ್ನು ಧರಿಸುವ ನಟ ಸಣ್ಣವನಾಗಿದ್ದ ಮಾತ್ರಕ್ಕೆ ಆತ–ಆಕೆ ಧರಿಸಿದ ಪಾತ್ರವೂ ಸಣ್ಣದಾಗಬೇಕಿಲ್ಲ ಎಂದು, ಅಭಿನಯಚಿಂತಕ ಸ್ಟಾನಿಸ್ಲಾವ್‌ಸ್ಕಿ ಹೇಳಿದ್ದಾನಲ್ಲ– ಅದಕ್ಕೊಂದು ವಿಲಕ್ಷಣ ಪುರಾವೆ ಈ ಕತೆಗಳಲ್ಲಿದೆ ಅನ್ನಿಸಿರುವುದರಿಂದ ಪುಟ್ಟ ಪಾತ್ರಗಳ ಕನ್ನಡಿಯಲ್ಲಿ ಇವತ್ತಿನ ಲೋಕದ ಮಾಯಾಕೋಲಾಹಲಗಳನ್ನು ಹಿಡಿಯಲೆಣಿಸುವ ಈ ಕಥನಗಳ ಬಗ್ಗೆ ನಾನು ಕುತೂಹಲಿ.
–ಅಕ್ಷರ ಕೆ.ವಿ.
 

ಕೇಳು ಜನಮೇಜಯ
(ಸಂಗೀತದ ಕೇಳ್ಕೆಯನ್ನು ಕುರಿತ ಸಂಚಿಕೆ)
ಸಂ: ಶೈಲಜ ಮತ್ತು ಟಿ.ಎಸ್. ವೇಣುಗೋಪಾಲ್
ಪ್ರ: ರಾಗ ಮಾಲ, ಮೈಸೂರು

ನಾದದ ನವನೀತ

ಪುಸ್ತಕಗಳ ಮೇಲು-ಕೀಳು ಪಟ್ಟಿ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ. ಆದರೆ ಅಂತರಂಗದಲ್ಲಿ ಆಯ್ಕೆಗಳು ಇದ್ದೇ ಇರುತ್ತವೆ. ನಾನು ಪರಿಚಯಿಸುತ್ತಿರುವ ಪುಸ್ತಕವು, ನಮ್ಮೆಲ್ಲರ ಗಮನಕ್ಕೆ ಬರದೆ ಉಳಿಯಬಹುದಾದ ಅಪರೂಪದ ಪ್ರಯತ್ನ. ಸಾಹಿತ್ಯಕೇಂದ್ರಿತವಾದ (ಯಾಕೆ?) ಕನ್ನಡ ಸಂಸ್ಕೃತಿಚಿಂತನೆಯಲ್ಲಿ ಸಂಗೀತ, ಚಿತ್ರ, ಶಿಲ್ಪ ಮುಂತಾದ ಕಲೆಗಳನ್ನು ಕುರಿತ ಬರಹಗಳು ಕಡಿಮೆ. ಬಂದರೂ ಅವು ಕಲಾವಿದರ ವ್ಯಕ್ತಿತ್ವದ ಸುತ್ತ ಗಿರಕಿ ಹೊಡೆಯುತ್ತವೆಯೇ ವಿನಾ ಕಲೆಯ ಬಗ್ಗೆ ಇರುವುದಿಲ್ಲ. ಕಳೆದ ವರ್ಷ ಬಂದ ರವಿಕುಮಾರ್ ಕಾಶಿ ಅವರ ‘ಅನುಕ್ತ’(ಚಿತ್ರ ಕಲೆ) ಮತ್ತು ಸಂಗೀತವನ್ನು ಕುರಿತ ಈ ಕೃತಿ ನನ್ನ ಮಾತಿಗೆ ಅಪವಾದಗಳು.

ಇದು ಹಿಂದೂಸ್ತಾನೀ ಸಂಗೀತ ಮತ್ತು ಕರ್ನಾಟಕ ಸಂಗೀತವನ್ನು ಕೇಳುವ ಅನುಭವದ ಸ್ವರೂಪ ಮತ್ತು ಅವುಗಳ ಸರಿಯಾದ ಆಸ್ವಾದನೆಗೆ ಅಗತ್ಯವಾದ ತಯಾರಿಗಳನ್ನು ಕುರಿತ ಬರವಣಿಗೆಗಳ ಸಂಕಲನ. ಇದರಲ್ಲಿ ರಾಜೀವ ತಾರಾನಾಥ, ಎ.ಎನ್. ಮೂರ್ತಿ ರಾವ್ ಮುಂತಾದವರ ಸ್ವತಂತ್ರ ಲೇಖನಗಳಿವೆ. ಹಾಗೆಯೇ ಭಾರತೀಯ ಸಂಗೀತದ ಎರಡೂ ನೆಲೆಗಳನ್ನು ಕುರಿತಂತೆ ಹಲವು ಮೂಲಗಳಿಂದ ಸಂಗ್ರಹಿಸಿ ಸಿದ್ಧಪಡಿಸಿದ ಲೇಖನಗಳಿವೆ.

ಪ್ರಸಿದ್ಧ ಸಂಗೀತಕಾರರೂ ಚಿಂತಕರೂ ಆದ ಅರಿಯಕ್ಕುಡಿ, ಜಿ.ಎನ್. ಬಾಲಸುಬ್ರಹ್ಮಣ್ಯಂ, ಟಿ.ಎಂ. ಕೃಷ್ಣ ಮುಂತಾದವರ ಬರಹಗಳ ಸಂಗ್ರಹಾನುವಾದಗಳು ಕೂಡ ಇಲ್ಲಿವೆ. ಮುಖ್ಯವಾದ ಮಾತೆಂದರೆ ಸಂಗೀತಗಾರ, ವಾದ್ಯಗಳನ್ನು ನುಡಿಸುವವನು, ವಿದ್ವಾಂಸ ಮುಂತಾದ ಬೇರೆ ಬೇರೆ ನೆಲೆಗಳಿಂದ ಕೇಳುವ ಪ್ರಕ್ರಿಯೆಯನ್ನು ಪರಿಶೀಲಿಸಲಾಗಿದೆ. ಸಂಗೀತಕ್ಕೆ ಸಂಬಂಧಿಸಿದ ಹಲವು ಪರಿಕಲ್ಪನೆಗಳನ್ನು ಪರಿಚಯ ಮಾಡಿಕೊಡುವ ಹಾಗೆಯೇ, ಕಾಲದಿಂದ ಕಾಲಕ್ಕೆ ಮೂಡಿಬಂದಿರುವ ತಾತ್ವಿಕ ವಾಗ್ವಾದಗಳನ್ನು ಕೂಡ ಮಂಡಿಸಲಾಗಿದೆ.

‘ಸಂಗೀತದಲ್ಲಿ ಏನನ್ನು ಕೇಳಬೇಕು?’, ‘ಹಿಂದೂಸ್ತಾನೀ ಸಂಗೀತದ ಆಸ್ವಾದನೆ’, ‘ಶಾಸ್ತ್ರೀಯ ಸಂಗೀತ ಕಛೇರಿ ಪದ್ಧತಿ’, ‘ಕಲಾ ಸಂಗೀತ ಎಂದರೇನು?’, ‘ಅರಿವುಳ್ಳ ಕೇಳ್ಮೆ’ ಮುಂತಾದ ತಲೆಬರಹಗಳೇ ಈ ಪುಸ್ತಕದ ವಿಶಿಷ್ಟತೆಯನ್ನು ಹೇಳಬಲ್ಲವು. ಇಲ್ಲಿರುವ ಅಪರೂಪದ ವರ್ಣಚಿತ್ರಗಳು ಮತ್ತು ಭಾವಚಿತ್ರಗಳು ಇದರ ಸೊಬಗನ್ನು ಇಮ್ಮಡಿಸಿವೆ. ಈ ಪುಸ್ತಕವನ್ನು ವಿಮರ್ಶೆಗೆ ಒಳಪಡಿಸುವ ಸಾಮರ್ಥ್ಯ ನನಗೆ ಇಲ್ಲ. ಈ ಕಿರುಬರಹದಲ್ಲಿ ಅದಕ್ಕೆ ಅವಕಾಶವೂ ಇಲ್ಲ. ಆದರೆ, ಸಂಗೀತದಲ್ಲಿ ಆಸಕ್ತಿ ಇರುವವರು, ಅಂತಹುದನ್ನು ಬೆಳೆಸಿಕೊಳ್ಳಲು ಇಷ್ಟಪಡುವವರು, ಈಗಾಗಲೇ ಪರಿಣಿತರಾದವರು ಎಲ್ಲರೂ ಇದನ್ನು ಓದಬೇಕು.
  –ಎಚ್‌.ಎಸ್. ರಾಘವೇಂದ್ರರಾವ್‌

ಟೂರಿಂಗ್ ಟಾಕೀಸ್

ಲೇ: ಜಯಂತ ಕಾಯ್ಕಿಣಿ
ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ

ಅಚಾನಕ್ಕಾಗಿ ನೋಡಿದ ಒಳ್ಳೆಯ ಪಿಚ್ಚರ್

ಕಲೆಗಳಲ್ಲಿ ಸಿನಿಮಾ ದಿವ್ಯನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರೆ ಸಿನಿಮಾ ನೋಡುವುದಿಲ್ಲ ಎಂದಲ್ಲ. ಅದನ್ನು ಮನರಂಜನೆಯಾಗಿ ಮಾತ್ರ ನೋಡುವ, ಅದರ ಚರಿತ್ರೆಯ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದಿರುವ, ಅದರ ಬಗ್ಗೆ ಅಷ್ಟಾಗಿ ಬರೆಯದಿರುವ ಮನೋಭಾವ ಕನ್ನಡದಲ್ಲಿಯಂತೂ ಇದೆ ಎಂದು ಧಾರಾಳವಾಗಿ ಹೇಳಬಹುದು. ಸಿನಿಮಾ ಇರೋದು ನೋಡೋದಿಕ್ಕೆ, ಬರೆಯೋದಿಕ್ಕೆ ಅಲ್ಲ ಎನ್ನುವುದು ಬರೀ ಉಡಾಫೆಯಾಗಿಯೇ ಕೇಳಿಸಬಹುದು.  

ಇಪ್ಪತ್ತನೆಯ ಶತಮಾನದ, ಅದರಲ್ಲೂ ಉತ್ತರಾರ್ಧದಲ್ಲಿ, ಹುಟ್ಟಿ ಬೆಳೆದ ಯಾರೊಬ್ಬರೂ ತಮ್ಮ ಜೀವನಚರಿತ್ರೆಯನ್ನು ಬರೆಯುವುದೇ ಆದಲ್ಲಿ ಸಿನಿಮಾ ತಮ್ಮನ್ನು ರೂಪಿಸಿದ ಬಗ್ಗೆ, ಬೆಳೆಸಿದ ಬಗ್ಗೆ, ಪಾಲಿಸಿ ಪೋಷಿಸಿದ ಬಗ್ಗೆ ಬರೆಯದೇ ಹೋದಲ್ಲಿ ಆತ್ಮವಂಚನೆಯೇ ಆದೀತು. ಇಪ್ಪತ್ತನೆಯ ಶತಮಾನದ ಚರಿತ್ರೆ ಸಿನಿಮಾದ ಚರಿತ್ರೆಯೂ ಹೌದು ಎಂದರೆ ಉತ್ಪ್ರೇಕ್ಷೆಯೆನ್ನಿಸಬಹುದು.

ಶತಮಾನದ ಭೀಕರ ದುರಂತಗಳಿಂದ ಯಾವತ್ತೂ ತಬ್ಬಲಿಯೇ ಆಗಿ ಹೋದ ಮನುಷ್ಯಕುಲವನ್ನು ಕಾಡುವ ಒಂಟಿತನದಿಂದ ಸ್ವಲ್ಪಮಟ್ಟಿಗಾದರೂ ಕಾಪಾಡಿದ್ದು ಸಿನಿಮಾ ಎನ್ನುವುದು ಸತ್ಯಕ್ಕೆ ದೂರವಾದ ಮಾತಂತೂ ಅಲ್ಲ. ಶತಮಾನದ ಕಲೆ ಎಂಬ ಮರ್ಯಾದೆ ಸಿನಿಮಾಟೋಗ್ರಫಿಗೆ ಸಲ್ಲುವುದು ಆಶ್ಚರ್ಯವೂ ಅಲ್ಲ. ದ್ರಾಬೆ ಚಿತ್ರಗಳನ್ನೇ ಮಾನದಂಡವಾಗಿ ಇಟ್ಟುಕೊಂಡು ಸಿನಿಮಾ ಎಂಬ ಕಲೆಯನ್ನೇ ಎತ್ತಿ ಬಿಸಾಕುವುದು ಮಹಾ ಅಪ್ರಾಮಾಣಿಕತೆ ಎನ್ನುವುದಂತೂ ನಿಜ.

ಜಯಂತ ಕಾಯ್ಕಿಣಿಯವರ ‘ಟೂರಿಂಗ್ ಟಾಕೀಸ್’ ನನಗೆ ಆಪ್ತವೆನ್ನಿಸಿದ್ದು ಅಂತಹ ಅಪರೂಪದ ಪ್ರಾಮಾಣಿಕತೆಯ ಕಾರಣಕ್ಕೆಯೇ. ಪ್ರಖ್ಯಾತ ಫ್ರೆಂಚ್ ನಿರ್ದೇಶಕ ಗೊಡಾರ್ಡ್‌, ‘ಸಿನಿಮಾದಂತ ಮನಮೋಹಕ ಮೋಸ ಮತ್ತೊಂದಿಲ್ಲ’ ಎಂದರೂ ಸಹ ಆತ ಹೊಮ್ಮಿಸಿದ ಅರ್ಥ ಅದೊಂದು ಮಾಯಾಲೋಕ ಅಂತನ್ನುವುದೇ. ಆ ಮಾಯಾಲೋಕಕ್ಕೂ ಇಪ್ಪತ್ತನೆಯ ಶತಮಾನದ ಬದುಕಿಗೂ ಅವಿನಾಭಾವ ಸಂಬಂಧವಿದೆ. ಮುನ್ನುಡಿಯಲ್ಲಿ ಕಾಯ್ಕಿಣಿಯವರು ‘ನೆರಳು ಬೆಳಕಿನ ಈ ಮಿಶ್ರಮಾಧುರ್ಯಕ್ಕೆ ‘ಕಸ್ತೂರಿ ನಿವಾಸ’ದ ಪಾರಿವಾಳದ ಪಟಪಟ ಸದ್ದಿದೆ... ಚಾಪ್ಲಿನನ ಚಟುವಟಿಕೆ ಜಂಗಮ ಹೃದಯಂಗಮ ಕರುಣೆ ಇದೆ. ‘ಸಿನೆಮಾ’ ಒಂದರ್ಥದಲ್ಲಿ ನನ್ನಂತವರನ್ನು ಬೇಷರತ್ ಪಾಲನೆ ಮಾಡಿದ ‘ಮಾ’ ಕೂಡ ಹೌದು. ಆ ಋಣದಲ್ಲಿಯೇ ಇಲ್ಲಿಯ ಟಿಪ್ಪಣಿಗಳಿವೆ’ ಎಂದು ಬರೆಯುತ್ತಾರೆ.

ಬದುಕಿನತ್ತ ಹೊರಳಿ ನೋಡುವಾಗ ‘ಕಳೆದು ಹೋದವರೆಲ್ಲಾ ಕೊನೆಯ ರೀಲಿಗೂ ಮುನ್ನವೇ ‘ಫೈಟಿಂಗ್’ ಇಲ್ಲದೆ ಸಿಗಲಿ ಎಂದು ಹಾರೈಸುವೆ’ ಎನ್ನುತ್ತಾರೆ, ‘ತೇರೆ ಪಾಸ್ ಕ್ಯಾ ಹೈ?’ ಎಂದು ಕೇಳಿದರೆ... ಮುಡಿಪಿನ ರೂಪದಲ್ಲಿ ನಾನು ಹೇಳಬಹುದಾದದ್ದು ಇಷ್ಟೆ: ‘ಮೇರೆ ಪಾಸ್ ಸಿನಿ‘ಮಾ’ ಹೈ!’ ಎಂದವರು ಹೇಳುವಾಗ ‘ಗಾಂಧಿತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ...’ ಎಂಬ ಹಾಡು ಥಟ್ಟನೆ ನನ್ನ ಬೆಳೆಯುತ್ತಿದ್ದ ಎಳೆಯ ಮನಸ್ಸನ್ನು ಗಾಂಧಿಗೆ, ರಾಷ್ಟ್ರಕ್ಕೆ, ಸಮುದಾಯಕ್ಕೆ ಜೋಡಿಸಿದ ಮತ್ತು ಆ ದಿವ್ಯಗಳಿಗೆಯನ್ನು ಸಾಧ್ಯವಾಗಿಸಿದ ಟೆಂಟಿಗೆ ಕೊಂಡೊಯ್ಯುತ್ತದೆ.

ಕಾಯ್ಕಿಣಿಯವರ ಲವಲವಿಕೆಯ ಧಾಟಿ ಚಂದವಾದ ಪಿಚ್ಚರೊಂದು ನಮ್ಮನ್ನು ಕ್ರಮೇಣ ಅದರಲ್ಲಿ ಮಗ್ನವಾಗಿಸಿಕೊಂಡ ರೀತಿಯನ್ನು ನೆನಪಿಸುತ್ತದೆ. ‘ನಾವು ಪಬ್ಲಿಕ್ ಆಗಿ, ಪಬ್ಲಿಕ್‌ನ ಅವಿಭಾಜ್ಯ ಅಂಗವಾಗಿ ಸಿನಿಮಾವನ್ನು ಆಸ್ವಾದಿಸಿದಾಗಲೇ ಅದು ನಿಜವಾಗಿಯೂ ನಮ್ಮದಾಗುತ್ತದೆ, ನಮ್ಮ ನಿಜವೂ ಆಗುತ್ತದೆ’ ಎಂಬ ಸಾಲುಗಳು ಆ ‘ಪಬ್ಲಿಕ್ ಲೋಕ’ವೆನ್ನುವುದು ಒಂಟಿ ಹೆಣ್ಣೊಬ್ಬಳು ಕೂತು ಸಿನಿಮಾ ನೋಡುವಷ್ಟು ಸ್ತ್ರೀಸ್ನೇಹಿಯಾಗಿದೆಯೆ? ಎಂಬ ಪ್ರಶ್ನೆಯನ್ನು ನನ್ನಲ್ಲಿ ಹುಟ್ಟಿಸುತ್ತವೆ.

ಆದರೆ ‘ಸಿನಿಮಾ ಹಾಡುಗಳಲ್ಲಿ ಒಮ್ಮೆಲೇ ಇಳಿಮುಖವಾಗುತ್ತಿರುವ ಸ್ತ್ರೀ ‘ಸೋಲೋ’ಗಳ ಸಂಖ್ಯೆ ಪರೋಕ್ಷವಾಗಿ ಚಿತ್ರವಾಸ್ತವದಲ್ಲಿನ ಮಹಿಳೆಯ ಸ್ಥಾನಮಾನದ ಸ್ಥಿತ್ಯಂತರದ ಆತಂಕಕಾರಿ ದಿಕ್ಸೂಚಿಯೂ ಆಗಿದೆ’ ಎನ್ನುವಾಗ ಅವರ ಎಂದಿನ ಸೂಕ್ಷ್ಮಜ್ಞತೆ ಸಮಾಧಾನ ನೀಡುತ್ತದೆ. ಸಂಶೋಧನಾಸಕ್ತಿಗೆ ಸಾಕಷ್ಟು ಒದಗದಿದ್ದರೂ ಸಹ, ಸಿನಿಮಾದ ಬಗ್ಗೆ ಕನ್ನಡದಲ್ಲಿ ಬಂದ ಈ ಆಪ್ತ ಪುಸ್ತಕ ಒಂದೊಳ್ಳೆಯ ಸಿನಿಮಾ ನೋಡಿದ ಹುರುಪನ್ನು ನೀಡಿದ್ದಕ್ಕೆ ನಾನಂತೂ ಋಣಿ.
–ಸುಕನ್ಯಾ ಕನಾರಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT