ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ಕ್ಕೆ ಮಂಗಳನ ಕಕ್ಷೆಗೆ ನೌಕೆ?

300 ದಿನಗಳಲ್ಲಿ ಶೇ 98ರಷ್ಟು ಪೂರೈಸಿದ ಮಂಗಳಯಾನ’
Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಮೊತ್ತಮೊದಲ ಅಂತರ ಗ್ರಹ ಕಾರ್ಯಕ್ರಮ ‘ಮಂಗಳಯಾನ’ (ಮಾರ್ಸ್ ಆರ್ಬಿಟರ್ ಮಿಷನ್)  ನಿಗದಿತ ಯೋಜನೆಯಂತೆ ಸಾಗು­ತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್‌ 24ರಂದು ನೌಕೆ ಮಂಗಳನ ಕಕ್ಷೆಗೆ ಸೇರಲಿದೆ.

ನಗರದ ಪೀಣ್ಯದಲ್ಲಿರುವ ಇಸ್ಟ್ರಾಕ್‌ ಕೇಂದ್ರದಲ್ಲಿ ಸೋಮವಾರ ಸುದ್ದಿಗಾರ­ರೊಂದಿಗೆ ಮಾತನಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವೈಜ್ಞಾನಿಕ ಸಲಹೆಗಾರ ವಿ. ಕೋಟೇಶ್ವರ ರಾವ್‌ ಈ ವಿಷಯ ತಿಳಿಸಿದರು.

‘ಮಂಗಳ ಕಕ್ಷೆಗೆ ನೌಕೆಯನ್ನು ಸೇರಿ­ಸುವ ಪೂರ್ವಭಾವಿ ಪ್ರಕ್ರಿಯೆ ಇದೇ 22ರಂದು ನಡೆಯಲಿದೆ. ನೌಕೆಯ ಪ್ರಧಾನ ಯಂತ್ರವನ್ನು (ಸ್ಲೀಪಿಂಗ್ ಸ್ಟೇಜ್‌) ಈವರೆಗೆ ಹೆಚ್ಚು ಬಳಸಿ­ಕೊಂಡಿರ­ಲಿಲ್ಲ. ಅದನ್ನು ಪುನಶ್ಚೇತನಗೊಳಿಸುವ ಪ್ರಕ್ರಿಯೆ ಅಂದು ನಡೆಯಲಿದೆ. ಒಂದು ವೇಳೆ ಇದು ವಿಫಲವಾದರೆ ಆರು ಹಂತಗಳ ಎರಡನೇ ಯೋಜನೆಯನ್ನು ಚಾಲೂ ಮಾಡಲಾಗುವುದು’ ಎಂದು ಅವರು ವಿವರ ನೀಡಿದರು.

‘ನೌಕೆ ಈಗ ಭೂಮಿಯಿಂದ 21.5 ಕೋಟಿ ಕಿ.ಮೀ. ದೂರ ಕ್ರಮಿಸಿದೆ.   ಇಸ್ರೊ ಕೇಂದ್ರದಿಂದ ನೌಕೆಗೆ ಸಂಕೇತ ತಲುಪಲು 12 ನಿಮಿಷ ಹಿಡಿಯುತ್ತದೆ. ಇದೇ 24ಕ್ಕೆ 22.4 ಕೋಟಿ ಕಿ.ಮೀ. ದೂರ ತಲುಪಲಿದೆ. ಸದ್ಯ ನೌಕೆಯ ವೇಗ  ಸೆಕೆಂಡ್‌ಗೆ 5.2 ಕಿ.ಮೀ. ಅಂದು ಈ ವೇಗವನ್ನು 4.1 ಕಿ.ಮೀ.ಗೆ ತಗ್ಗಿಸಿ ಮಂಗಳನ ಕಕ್ಷೆಗೆ ಸೇರಿಸಲಾಗುವುದು. ಈ ಕಾರ್ಯಾಚರಣೆಗೆ ಇಸ್ರೊ ಬ್ಯಾಲಾಳು ಕೇಂದ್ರ, ಅಮೆರಿಕದ ಗೋಲ್ಡ್ ಸ್ಟೋನ್‌, ಸ್ಪೇನ್‌ನ ಮ್ಯಾಡ್ರಿಡ್‌, ಆಸ್ಟ್ರೇಲಿಯದ ಕ್ಯಾನ್‌ಬೆರಾ ಕೇಂದ್ರಗಳ ಮೂಲಕ ಅಗತ್ಯ ನೆರವು ನೀಡ­ಲಾಗುವುದು’ ಎಂದರು.

ಯಾನದ ಹಾದಿ: ‘ಮಂಗಳನ ಭೌತಿಕ ಚಹರೆ ಮತ್ತು ಅಲ್ಲಿನ ವಾತಾವರ­ಣವನ್ನು ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೊ 450 ಕೋಟಿ ವೆಚ್ಚದಲ್ಲಿ ಮಂಗಳ­ಯಾನ ಯೋಜನೆ ಕೈಗೆತ್ತಿ­ಕೊಂಡಿದೆ. ಕಳೆದ ವರ್ಷ ನವೆಂಬರ್‌ 5ರಂದು  ಮಂಗಳನತ್ತ ಹೊರಟ ಈ ನೌಕೆ ಒಟ್ಟು 300 ದಿನಗಳ ಬಾಹ್ಯಾಂತರಿಕ್ಷದ ಯಾತ್ರೆ ಕೈಗೊಂಡು ಮಂಗಳನ ಕಕ್ಷೆ ತಲುಪಲಿದೆ. ಈಗಾಗಲೇ ನೌಕೆಯು ಶೇ 98ರಷ್ಟು ದೂರ ಕ್ರಮಿಸಿದೆ’ ಎಂದು ಅವರು ವಿವರಿಸಿದರು.

‘2013ರ ನವೆಂಬರ್‌ನಲ್ಲಿ ನೌಕೆಯನ್ನು ಸೂಕ್ತ ಕಕ್ಷೆಗೆ ಏರಿಸಲು ಆರು ಹಂತದ ಪೂರಕ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು. ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯವನ್ನು (ಟಿಸಿಎಂ–1) ಡಿಸೆಂಬರ್‌ 1ರಂದು ನಡೆಸಲಾಗಿತ್ತು. ‘ಟಿಸಿಎಂ–2’ ಕಾರ್ಯ ಜೂನ್‌ 11ರಂದು ನಡೆದಿತ್ತು. ಅಗತ್ಯ ಬೀಳದ ಕಾರಣ ಆಗಸ್‌್ಟನಲ್ಲಿ ನಡೆಸ­ಬೇಕಿದ್ದ 3ನೇ ಹಂತದ ಕಾರ್ಯವನ್ನು ಕೈಬಿಡಲಾಗಿತ್ತು. ನಾಲ್ಕನೇ ಹಂತದ ಕಾರ್ಯ ಇದೇ 22ರಂದು ನಡೆಯಲಿದೆ. ಅಲ್ಲದೆ ನೌಕೆಯ ಕಾರ್ಯ ಕ್ಷಮತೆ ಪರಿಶೀಲನೆ, ನಿರ್ದೇಶನ ನೀಡಿಕೆ ಭಾನು­ವಾರ ಆರಂಭಗೊಂಡಿದ್ದು, ಮಂಗಳ­ವಾರದ ವರೆಗೆ ಮುಂದುವರಿಯಲಿದೆ’ ಎಂದು  ತಿಳಿಸಿದರು.

‘ಯಾವುದೇ ತೊಂದರೆ ಇಲ್ಲದಂತೆ ಗಗನನೌಕೆಯನ್ನು ಕಕ್ಷೆಗೆ ಸೇರಿಸುವುದು ಅತ್ಯಂತ ದೊಡ್ಡ ಸವಾಲು. ಒಂದೊಮ್ಮೆ ಇದರಲ್ಲಿ ಯಶಸ್ವಿಯಾದರೆ, ರಾಷ್ಟ್ರದ ಮುಂದಿನ ಹಲವು ದೂರಾಂತರಿಕ್ಷ ಯೋಜ­ನೆ­ಗಳಿಗೆ ಇದು ಚಿಮ್ಮು ಹಲಗೆ­ಯಾಗಲಿದೆ.  ಅಲ್ಲದೆ ತಂತ್ರಜ್ಞಾನ ಅಭಿ­ವೃದ್ಧಿಪಡಿಸಲು ಈ ನೌಕೆ ಆಧಾರ­ಸ್ತಂಭ ಆಗಲಿದೆ’ ಎಂದು  ವಿಶ್ಲೇಷಿಸಿ­ದರು.

‘ಇಸ್ರೊ ನೌಕೆ ಮಂಗಳನ ಗುರುತ್ವಾಕರ್ಷಣೆ ವಲಯ ಸೇರುವ ವೇಳೆಗೆ ಅಮೆರಿಕದ ನೌಕೆ ‘ಮ್ಯಾಮೆನ್‌’ ಸಹ ಗುರುತ್ವಾಕರ್ಷಣೆಗೆ ಒಳಗಾಗಲಿದೆ. ಈ ಬಗ್ಗೆ ನಾಸಾದ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿ ಸಮಯ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಆ ನೌಕೆಯಿಂದ ನಮಗೇನೂ ಸಮಸ್ಯೆ ಆಗುವುದಿಲ್ಲ’ ಎಂದರು.

ಒಂದು ವೇಳೆ ಮಂಗಳನೌಕೆ 24­ರಂದು ಯಶಸ್ವಿಯಾಗಿ ಕೆಂಪು ಗ್ರಹದ ಕಕ್ಷೆಗೆ ತಲುಪಿದರೆ ಮೊದಲ ಯತ್ನ­ದಲ್ಲೇ ಯಶಸ್ಸು ಗಳಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಲಿದೆ. ಮಂಗಳ­ನಲ್ಲಿಗೆ ನೌಕೆ ಕಳುಹಿಸಿದ ಏಷ್ಯಾದ ಮೊದಲ ರಾಷ್ಟ್ರ ಎನಿಸಿಕೊಳ್ಳಲಿದೆ. ಅಲ್ಲದೆ ಮಂಗಳಗ್ರಹಕ್ಕೆ ಯಶಸ್ವಿಯಾಗಿ ನೌಕೆ­ಗಳನ್ನು ಕಳುಹಿಸಿದ ಅಮೆರಿಕ, ರಷ್ಯಾ ಮತ್ತು ಐರೋಪ್ಯ ಒಕ್ಕೂಟದ ಸಾಲಿಗೆ ಸೇರಲಿದೆ ಎಂದು ಕೋಟೇಶ್ವರ ರಾವ್‌ ಹೇಳಿದರು. 


ಇದುವರೆಗೆ ವಿವಿಧ ರಾಷ್ಟ್ರಗಳ ಮಂಗಳಯಾನ­ಗಳಲ್ಲಿ ಅರ್ಧಕ್ಕೂ ಹೆಚ್ಚು  ಯೋಜನೆ­ಗಳು ವಿಫಲ­ಗೊಂಡಿ­ದ್ದವು. ಈ ಯೋಜನೆಗಳೆಲ್ಲ ಉಡಾವಣೆ ಹಂತ, ಭೂ ಕಕ್ಷೆಯಿಂದ ಮಂಗಳ ಕಕ್ಷೆಗೆ ಸೇರುವ ಹಾದಿಯಲ್ಲಿ ವಿಫಲ­ಗೊಂಡಿವೆ. ಆದರೆ, ಇಸ್ರೊ ಮಂಗಳ ನೌಕೆ ಈ ಹಂತಗಳನ್ನೆಲ್ಲ ದಾಟಿ ಹೋಗಿದೆ. ಹೀಗಾಗಿ ವಿಫಲವಾ­ಗುವ ಸಾಧ್ಯತೆ ಕಡಿಮೆ ಎಂದರು.

ಈ ಯಾನದ ಮುಖ್ಯ ನಾಡಿಯೇ ದಕ್ಷ ಸಂವಹನ ಸಾಮರ್ಥ್ಯ. ಅಂದರೆ, 22.4  ಕೋಟಿ ಕಿ.ಮೀ ದೂರದಲ್ಲಿ ಸಾಗು­ತ್ತಿರುವ ನೌಕೆಗೆ ಇಲ್ಲಿನ ಸಂಕೇತ­ಗಳು ಯಶಸ್ವಿಯಾಗಿ ರವಾನೆಯಾ­ಗ­ಬೇಕು. ಅಲ್ಲಿಂದಲೂ ಸಂಕೇತಗಳು ಭೂಮಿಗೆ ಯಾವುದೇ ಅಡೆತಡೆ ಇಲ್ಲದೆ ಬರಬೇಕು. ಸಂಕೇತಗಳ ಏಕಮುಖದ ಪ್ರಯಾಣಕ್ಕೇ ತಗಲುವ ಅವಧಿ 12 ನಿಮಿಷ. ಹೀಗಾಗಿ, ಅಲ್ಲಿ ನೌಕೆಯ ವ್ಯವಸ್ಥೆಯಲ್ಲಿ ಏನೇ ತೊಂದರೆ­ಯಾದರೂ ಇಲ್ಲಿ ಗೊತ್ತಾಗುವುದಕ್ಕೂ ಅಷ್ಟೇ ಸಮಯ ಹಿಡಿಯುತ್ತದೆ.

ಅದನ್ನು ಸರಿಪಡಿಸಲು, ಇಲ್ಲಿಂದ ತಕ್ಷಣವೇ ಏನೇ ನಿರ್ದೇಶನ ನೀಡಿದರೂ ಅದು ತಲುಪಲು ಮತ್ತೆ ಅಷ್ಟೇ ಸಮಯ ಬೇಕು. ಹೀಗಾಗಿ ಅಲ್ಲಿ ಏನೇ ತೊಂದರೆಯಾದರೂ ತಕ್ಷಣವೇ  ಸ್ವಯಂಚಾಲಿತವಾಗಿ ‘ಸೇಫ್ ಮೋಡ್‌’ಗೆ ಹೋಗುವ ತಂತ್ರಜ್ಞಾನ ಅಳವಡಿಸಲಾಗಿದೆ. ಜತೆಗೆ, ಭೂಮಿಯ ಮೇಲಿನ ಸಂಪರ್ಕ ಜಾಲವನ್ನೂ ಬಲಪಡಿಸಲಾಗಿದೆ ಎಂದು ಇಸ್ರೊ ವಿಜ್ಞಾನಿಯೊಬ್ಬರು ಹೇಳಿದರು.

ಇಸ್ರೊ ನಡೆ...
*ಯೋಜನಾ ವೆಚ್ಚ ₨450 ಕೋಟಿ
* 300 ದಿನಗಳ ಸಂಚಾರ
* 2013ರ ನವೆಂಬರ್‌ 5ಕ್ಕೆ ಉಡಾವಣೆ

* ನ.7,8,9,11,12,16:  ನೌಕೆಯನ್ನು ಕಕ್ಷೆಗೆ ಏರಿಸಲು ಆರು ಹಂತದ ಪೂರಕ ಪ್ರಕ್ರಿಯೆ
* ಡಿಸೆಂಬರ್‌ 4: ಸೂರ್ಯನ ಪ್ರಭಾವಲಯಕ್ಕೆ ನೌಕೆ
* ಡಿಸೆಂಬರ್‌ 11: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–1)
* ಫೆ.2: 100 ದಿನದ ಯಶಸ್ವಿ ಪಯಣ
* ಏಪ್ರಿಲ್‌9: ಅರ್ಧ ಹಾದಿ ಕ್ರಮಿಸಿದ ನೌಕೆ
* ಜೂನ್‌ 12: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–2)
* ಜುಲೈ 4: ಶೇ 75ರಷ್ಟು ದೂರ ಕ್ರಮಿಸಿದ ನೌಕೆ
* ಆಗಸ್ಟ್‌ 28: ಶೇ 98ರಷ್ಟು ಯಾನ ಪೂರ್ಣ
* ಸೆಪ್ಟೆಂಬರ್‌ 22: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–2)
* ಸೆಪ್ಟೆಂಬರ್‌ 24: ಮಂಗಳನ ಕಕ್ಷೆಗೆ ನೌಕೆ ಪ್ರವೇಶ

ಮಧ್ಯಾಹ್ನದ ಹೊತ್ತಿಗೆ ಮಂಗಳ ಚಿತ್ರ
ಇದೇ 24ರಂದು ಇಸ್ರೊಗೆ ವಿಶೇಷ ದಿನ. ಅಂದು ಮಂಗಳ ನೌಕೆ ಅಂಗಾರಕನ ಕಕ್ಷೆಯನ್ನು ಪ್ರವೇಶಿಸಲಿದೆ. ಅದಕ್ಕಾಗಿ  ವಿವಿಧ ಹಂತದ ಕಾರ್ಯಾಚರಣೆ ಇದೇ 24ರ ಬೆಳಿಗ್ಗೆ 7.30ರಿಂದ ಸುಮಾರು 24 ನಿಮಿಷಗಳ ಕಾಲ ನಡೆಯಲಿದೆ. ಮಧ್ಯಾಹ್ನ 12ರ ಬಳಿಕ ನೌಕೆಯಲ್ಲಿರುವ ವರ್ಣ ಕ್ಯಾಮೆರಾದ ನೆರವಿನಿಂದ ಮಂಗಳನ ಛಾಯಾಚಿತ್ರ ತೆಗೆಯಲಾಗುತ್ತದೆ. ಮೊದಲ ದಿನದ ಛಾಯಾಚಿತ್ರದ ಗುಣಮಟ್ಟ ಚೆನ್ನಾಗಿರುತ್ತದೆ ಎಂದು ಹೇಳುವುದು ಕಷ್ಟ.
ವಿ.ಕೋಟೇಶ್ವರ ರಾವ್‌, ವೈಜ್ಞಾನಿಕ ಸಲಹೆಗಾರ, ಇಸ್ರೊ

ಜತೆಗಿದೆ ಸಾಧನ ಸಲಕರಣೆ
‘ಮಂಗಳನ ಅನ್ವೇಷಣೆಗಾಗಿ ನೌಕೆಯು ಒಟ್ಟು ೧೫ ಕೆ.ಜಿ ತೂಕದ 5 ಸಾಧನಗ­ಳನ್ನು ಕೊಂಡೊಯ್ದಿದೆ. ಇದರಲ್ಲಿ ‘ಲೈಮನ್ ಆಲ್ಫಾ ಫೋಟೋ­ಮೀಟರ್’­(ಎಲ್‌ಎಪಿ)  ಅನಿಲಗಳ ಆವಿ ಬಗ್ಗೆ ಬೆಳಕು ಚೆಲ್ಲಲಿದೆ. ಮಾರ್ಸ್ ಮಿಥೇನ್ ಸಂವೇದ­ಕವು (ಎಂಎಸ್‌ಎಂ) ಜೀವಕಣಗಳು ಎಂದಾದರೊಮ್ಮೆ ಅಲ್ಲಿ ಇದ್ದವೇ ಅಥವಾ ಈಗಲೂ ಇವೆಯೇ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನ ಮಾಡಲಿದೆ’ ಎಂದರು.

‘ಆರು ತಿಂಗಳು ಕಾರ್ಯ’
‘ಒಟ್ಟಾರೆ ಅಂಗಾರಕನ ವಾತಾವರಣ, ಮೇಲ್ಮೈ ಲಕ್ಷಣ, ಗ್ರಹದ ವಿಕಾಸ, ಜೀವಕಣಗಳ ಸಂಭಾವ್ಯ ಅಸ್ತಿತ್ವ ಮತ್ತಿತರ ಪ್ರಶ್ನೆಗಳಿಗೆ ಉತ್ತರ ದೊರೆಯುವ ನಿರೀಕ್ಷೆ ಇದೆ. ಮಂಗಳನ ಕಕ್ಷೆ ಸೇರಿದ ನಂತರ ನೌಕೆಯು ೬ ತಿಂಗಳ ಕಾಲ ಕಾರ್ಯ ನಿರ್ವಹಿಸಲಿದೆ’ ಎಂದು ಕೋಟೇಶ್ವರ ರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT