ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಸ್ಥಾನ ತಂದುಕೊಟ್ಟ ಶೇ 1 ಮತ

Last Updated 26 ಆಗಸ್ಟ್ 2015, 19:58 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚುವರಿಯಾಗಿ ಪಡೆದ ಶೇ 1.05 ಮತಗಳೇ ಬಿಜೆಪಿಯನ್ನು ವಿಜಯದ ಗೆರೆ ದಾಟುವಂತೆ ಮಾಡಿವೆ!

ಚಲಾವಣೆಯಾದ ಮತಗಳಲ್ಲಿ ಬಿಜೆಪಿ ಶೇ 40.35ರಷ್ಟು ಬಾಚಿಕೊಂಡರೆ, ಕಾಂಗ್ರೆಸ್‌ ಶೇ 39.30ರಷ್ಟು ಮತ ಪಡೆದಿದೆ. ಎರಡೂ ಪಕ್ಷಗಳ ನಡುವಿನ ಮತಗಳಿಕೆ ವ್ಯತ್ಯಾಸ ಶೇ 1.05ರಷ್ಟು ಮಾತ್ರ! ಅಂದರೆ ಶೇ 1.05ರಷ್ಟು ಹೆಚ್ಚುವರಿ ಮತಗಳು ಬಿಜೆಪಿಗೆ ಭರ್ಜರಿ ಫಸಲನ್ನೇ ತಂದುಕೊಟ್ಟಿವೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಒಟ್ಟಾರೆ 18 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆ ವಾರ್ಡ್‌ಗಳಲ್ಲಿ ಚಲಾವಣೆಯಾದ ಮತಗಳಲ್ಲಿ ಶೇ 16.20ರಷ್ಟು ಎಸ್‌ಡಿಪಿಐ ಬುಟ್ಟಿಗೆ ಬಿದ್ದಿವೆ. ಸಾಂಪ್ರದಾಯಿಕವಾಗಿ ಹಿಡಿತ ಹೊಂದಿದ್ದ ಸ್ಥಳಗಳಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ಮಾಡಲು ಎಸ್‌ಡಿಪಿಐ ಪಡೆದ ಮತಗಳೇ ನೇರ ಕಾರಣವಾಗಿವೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪಕ್ಷದ ಪ್ರಚಾರದ ಹೊಣೆ ಹೊತ್ತಿದ್ದರು. ಫಲಿತಾಂಶ ಅವರಿಗೆ ಉಂಟಾದ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್‌ ಸೋತರೂ ಸ್ಥಾನ ಹೆಚ್ಚಿಸಿಕೊಳ್ಳಲು ಯಶಸ್ವಿಯಾಗಿದೆ.

‘ಮತಗಳಿಕೆ ಅಂತರ ತುಂಬಾ ಕಡಿಮೆ ಇದೆ ಎನ್ನುವ ಸಮಾಧಾನ ಹೊಂದುವಂತಿಲ್ಲ. ಏಕೆಂದರೆ, ಅಂತಿಮವಾಗಿ ಪಕ್ಷಕ್ಕೆ ಅಧಿಕಾರ ಹಿಡಿಯಲು ಆಗಿಲ್ಲ. ಸಂಖ್ಯಾ ಆಟದಲ್ಲಿ ನಾವು ಹಿಂದೆ ಬಿದ್ದಿದ್ದೇವೆ’ ಎನ್ನುತ್ತಾರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌. ‘ಎಷ್ಟೇ ಚಿಕ್ಕ ಅಂತರವಾದರೂ ಗೆಲುವು ಗೆಲುವೇ. ಫಲಿತಾಂಶ ನಮಗೆ ಕಳವಳ ಉಂಟುಮಾಡಿದೆ’ ಎಂದು ಅವರು ಹೇಳುತ್ತಾರೆ.

2010ರ ಚುನಾವಣೆಗೆ ಹೋಲಿಸಿದರೆ ನಗರದಲ್ಲಿ ಈಗ ಕಾಂಗ್ರೆಸ್‌ ಪ್ರಭಾವ ವೃದ್ಧಿಸಿದೆ.

ಆಗಿನ ಪ್ರಮಾಣಕ್ಕೆ ಹೋಲಿಸಿದರೆ ಪ್ರಸಕ್ತ ಚುನಾವಣೆಯಲ್ಲಿ ಆ ಪಕ್ಷ ಶೇ 4.26ರಷ್ಟು ಅಧಿಕ ಮತ ಪಡೆದಿದೆ. ಬಿಜೆಪಿಗೆ ಶೇ 1.56ರಷ್ಟು ಹೆಚ್ಚುವರಿ ಮತಗಳನ್ನಷ್ಟೇ ಪಡೆಯಲು ಸಾಧ್ಯವಾಗಿದೆ.

ಜೆಡಿಎಸ್‌ ಪಕ್ಷ ಕಳೆದ ಸಲ ಗಳಿಸಿದ ಸ್ಥಾನಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾದರೂ ಮತ ಸೆಳೆಯುವ ಬಲ ಕ್ಷೀಣಿಸಿದೆ. 2010ರಲ್ಲಿ ಶೇ 15ರಷ್ಟು ಮತ ಪಡೆದಿದ್ದ ಆ ಪಕ್ಷ ಈ ಸಲ ಶೇ 13.68ರಷ್ಟು ಮತ ಪಡೆಯುವಲ್ಲಿ ಮಾತ್ರ ಯಶ ಕಂಡಿದೆ. ಆಗ ಶೇ 11.15ರಷ್ಟು ಮತ ಗಳಿಸಿದ್ದ ಇತರರು ಈಗ  6.67ರಷ್ಟು ಪಡೆದಿದ್ದು, ಸಾಮರ್ಥ್ಯ ಕುಂದಿದೆ.


ಬಿಜೆಪಿಯಲ್ಲಿ ಸ್ತ್ರೀಶಕ್ತಿ!
ಬಿಜೆಪಿಯಿಂದ ಆಯ್ಕೆಯಾದ ನೂರು ಸದಸ್ಯರಲ್ಲಿ 61 ಜನ ಮಹಿಳೆಯರೇ ಇದ್ದಾರೆ. ಹೀಗಾಗಿ ಆಡಳಿತ ಪಕ್ಷದಲ್ಲಿ ಪುರುಷರಿಗಿಂತ ಮಹಿಳೆಯರ ಧ್ವನಿಯೇ ಹೆಚ್ಚಾಗಿ ಮೊಳಗಲಿದೆ. ಆಡಳಿತದ ಪಾಳೆಯದಲ್ಲಿ ಕೂರುವ ಪುರುಷರ ಸಂಖ್ಯೆ ಕೇವಲ 39. ಜೆಡಿಎಸ್‌ನಲ್ಲೂ ಪುರುಷರಿಗಿಂತ ಮಹಿಳಾ ಪ್ರತಿನಿಧಿಗಳೇ ಹೆಚ್ಚಾಗಿದ್ದಾರೆ ಆ ಪಕ್ಷದ 14 ಸದಸ್ಯರಲ್ಲಿ ಎಂಟು ಜನ ಮಹಿಳೆಯರಾಗಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಪುರುಷರ ಸಂಖ್ಯೆ ಹೆಚ್ಚಿದೆ. ಆ ಪಕ್ಷದ 76 ಸದಸ್ಯರಲ್ಲಿ 29 ಮಂದಿ ಮಾತ್ರ ಮಹಿಳೆಯರಿದ್ದಾರೆ.

ಫ್ಲೆಕ್ಸ್‌ ತೆರವಿಗೆ ಆದೇಶ
ಮತದಾರರಿಗೆ ಕೃತಜ್ಞತೆ ಅರ್ಪಿಸಲು ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಫ್ಲೆಕ್ಸ್‌–ಬ್ಯಾನರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಅವರು ಎಲ್ಲ ವಲಯಗಳ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT