ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಲ್ಲಿ 116 ರೈತರು ಆತ್ಮಹತ್ಯೆ

Last Updated 26 ಏಪ್ರಿಲ್ 2016, 12:58 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಮಳೆ ಕೊರತೆ, ಬರ ಪರಿಸ್ಥಿತಿಯಿಂದ ಬೆಳೆ ಕೈಕೊಟ್ಟ ಕಾರಣಕ್ಕೆ ಪ್ರಸಕ್ತ ವರ್ಷ ಆರಂಭದ ಮೂರು ತಿಂಗಳಲ್ಲಿ 116 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳಾಗಿದ್ದು, ಪಂಜಾಬ್ ಹಾಗೂ ತೆಲಂಗಾಣ ನಂತರದ ಸ್ಥಾನದಲ್ಲಿವೆ. ಬರದಿಂದ 22.33 ಲಕ್ಷ ಹೆಕ್ಟೇರ್ ಹಿಂಗಾರು ಬೆಳೆಗೆ ಹಾನಿಯಾಗಿದೆ ಎಂದು ವರದಿ ಮಾಡಿದ್ದ ಕರ್ನಾಟಕ ಸರ್ಕಾರ, ₹ 1,417 ಕೋಟಿ ನೆರವು ಕೇಳಿದೆ ಎಂದು ಸಂಸತ್‌ನಲ್ಲಿ ತಿಳಿಸಲಾಯಿತು.

ಬರದಿಂದ ಬೆಳೆ ಬಾರದ ಕಾರಣಕ್ಕೆ 2015ರಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 1,841 ಪ್ರಕರಣಗಳಾಗಿವೆ ಎಂದು ಮಂಗಳವಾರ ಲೋಕಸಭೆಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಮೋಹನಭಾಯ್ ಕುಂದರಿಯಾ ಅವರು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಪ್ರಸಕ್ತ ವರ್ಷ ಫೆ. 29ರವರೆಗೆ 57 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಂಜಾಬ್‌ನಲ್ಲಿ 56 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾರ್ಚ್ 11ರವರೆಗೆ ದೂರು ದಾಖಲಾಗಿರುವ ಕುರಿತು ವರದಿಯಾಗಿದೆ. ತೆಲಂಗಾಣದಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಸಂಸತ್‌ಗೆ ತಿಳಿಸಿದರು.

ಒಟ್ಟಾರೆ ಕೃಷಿ ಕಾರ್ಮಿಕರು ಸೇರಿದಂತೆ 116 ರೈತರು ಮೂರು ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ದಾಖಲೆಗಳನ್ನು ತೋರಿಸಿದರು.
ಬರದ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ರಕ್ಷಣೆಗೆ ಮುಂದಾಗಿದ್ದು, 2015–16ನೇ ಸಾಲಿನ ಮುಂಗಾರಿಗೆ ಬರ ಪರಿಸ್ಥಿತಿ ಎದುರಿಸಿರುವ 10 ರಾಜ್ಯಗಳಿಗೆ ‌ಕೇಂದ್ರ ಸರ್ಕಾರ ₹12,773 ಕೋಟಿ ಪರಿಹಾರ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಕರ್ನಾಟಕ, ಛತ್ತೀಸಘಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಜಾರ್ಖಂಡ ಹಾಗೂ ರಾಜಸ್ತಾನ ರಾಜ್ಯಗಳು ಬರ ಪರಿಸ್ಥಿತಿ ಎದುರಿಸಿದ್ದು, ಪರಿಹಾರ ಒದಗಿಸಲಾಗಿದೆ.

ಹರಿಯಾಣ ಹಾಗೂ ರಾಜಸ್ತಾನಗಳಲ್ಲಿ 15.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋದಿ ಸೇರಿದಂತೆ ಬೇಸಗೆ ಬೆಳೆ ಪ್ರತಿಕೂಲ ಹವಾಮಾನ ವೈಪರೀತ್ಯದಿಂದಾಗಿ ಹಾನಿಗೊಳಗಾಗಿದೆ ಎಂದು ಸಚಿವರು ಪ್ರತ್ಯೇಕವಾಗಿ ಪ್ರತಿಕ್ರಿಯೆ ನೀಡಿದರು.   

ಬರದ ಪರಿಣಾಮ ರಾಜ್ಯದಲ್ಲಿ 22.33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆಗೆ ಹಾನಿಯಾಗಿದೆ ಎಂದು ವರದಿ ಮಾಡಿದ್ದ ಕರ್ನಾಟಕ ಸರ್ಕಾರ, ₹ 1,417 ಕೋಟಿ ನೆರವು ನೀಡುವಂತೆ ಕೇಂದ್ರ ಮನವಿ ಮಾಡಿತ್ತು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT