ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35.6 ಮಿ.ಮೀ ಮಳೆ: 40 ಮರಗಳು ಧರೆಗೆ

Last Updated 25 ಏಪ್ರಿಲ್ 2015, 20:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಳೆದೆರಡು ದಿನ ಆರ್ಭಟಿಸಿ ಜನಜೀವನ ಅಸ್ತವ್ಯಸ್ತಗೊಳಿಸಿದ್ದ ಮಳೆ ಶನಿವಾರವೂ ಬಿಡುವು ತೆಗೆದುಕೊಳ್ಳಲಿಲ್ಲ. ಶನಿವಾರ ಸಂಜೆ ಗುಡುಗು, ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯಿತು.

ಧಾರಾಕಾರ ಮಳೆ ಸುರಿದು ರಸ್ತೆಗಳು  ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ತೊಂದರೆ ಅನುಭವಿಸಬೇಕಾಯಿತು.
ಮೋರಿ ನೀರು ರಸ್ತೆ ಮೇಲೆ ಹರಿದಿದ್ದರಿಂದ ಬನ್ನೇರುಘಟ್ಟ ಮುಖ್ಯರಸ್ತೆ  ಸಮೀಪ ಸಂಪೂರ್ಣ ಜಲಾವೃತ್ತವಾಗಿತ್ತು.

ಧರೆಗುರುಳಿದ ಮರಗಳು: ಅಲಿ ಅಸ್ಗರ್‌ ರಸ್ತೆ,  ಕಬ್ಬನ್‌ ಉದ್ಯಾನದ ಪ್ರೆಸ್‌ಕ್ಲಬ್‌, ಕ್ವೀನ್ಸ್‌ ರಸ್ತೆ, ಕಬ್ಬನ್‌ ರಸ್ತೆ, ಹಾಸ್‌ಮಾಟ್‌ ಆಸ್ಪತ್ರೆ, ಇಂದಿರಾನಗರ, ಜಯನಗರ ಐದನೇ ಹಂತ, ಹಲಸೂರು, ಎಚ್‌ಎಸ್‌ಆರ್ ಲೇಔಟ್‌, ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರ, ಕೋರಮಂಗಲ 7ನೇ ಹಂತ, ಸಂಪಿಗೆ ರಸ್ತೆ, ಸೀತಾ ವೃತ್ತ, ಮೇಯೊಹಾಲ್‌, ವಿದ್ಯಾಪೀಠ ವೃತ್ತ, ಮೈಕೊಲೇಟ್‌ನಲ್ಲಿ, ಕತ್ತರಿಗುಪ್ಪೆ, ಶಾಂತಿನಗರದ ಬರ್ಲಿ ಸ್ಟ್ರೀಟ್, ಇಟ್ಟಮಡು ಸೇರಿದಂತೆ ನಗರದ ವಿವಿಧೆಡೆ  40ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. 

ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಮರಗಳನ್ನು ತೆರವುಗೊಳಿಸಿದರು. ತಗ್ಗುಪ್ರದೇಶದ ಮನೆಗಳಿಗೆ ನುಗ್ಗಿದ ನೀರು: ಮಳೆಯಿಂದ ಮೋರಿಗಳು ತುಂಬಿ ಹರಿದಿದ್ದರಿಂದ ಹಲವಾರು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದೆ.

ಇಂದಿರಾನಗರದ 18ನೇ ಮುಖ್ಯ ರಸ್ತೆಯಲ್ಲಿ 150,  ಮಾರತ್‌ಹಳ್ಳಿಯ ಬಾಲಾಜಿ ಲೇಔಟ್‌ನ 15 ನೇ ಅಡ್ಡರಸ್ತೆ ಯಲ್ಲಿ  10, ಜರ್ನಲಿಸ್ಟ್‌ ಕಾಲೊನಿಯಲ್ಲಿ 50, ದೊಮ್ಮಲೂರು ಸಮೀಪದ ಅಮರಜ್ಯೋತಿನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಮನೆಯೊಳಗೆ ನುಗ್ಗಿದ್ದ ನೀರನ್ನು ಜನರು ಹೊರಹಾಕಲು ಹರ ಸಾಹಸ ಪಡೆಬೇಕಾಯಿತು.

‘ನಗರದ ಒಳಭಾಗದಲ್ಲಿ ಸಂಜೆ 5 ಗಂಟೆಯಿಂದ 8.30ರವರೆಗೆ 35.6 ಮಿ.ಮೀ ಮತ್ತು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 33.6 ಮಿ.ಮೀ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT