ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಕಾಲೇಜುಗಳಲ್ಲಿ ಯುಜಿಸಿ ಅನುದಾನ ದುರ್ಬಳಕೆ

Last Updated 27 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ವಿದ್ಯಾರ್ಥಿನಿಯರ ವಸತಿ ನಿಲಯ, ಆರೋಗ್ಯ ಕೇಂದ್ರಗಳ ನಿರ್ಮಾಣ ಹಾಗೂ ಪರಿಹಾರ ಬೋಧ­ನೆ­ಗೆ ಮಂಜೂರಾದ ಅನುದಾನವನ್ನು ಐದು ಅನುದಾನಿತ ಕಾಲೇಜುಗಳು ದುರ್ಬ­ಳಕೆ ಮಾಡಿರುವುದನ್ನು ವಿಶ್ವ­ವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ರಚಿಸಿದ್ದ ಸತ್ಯಶೋಧನಾ ಸಮಿತಿಯು ದೃಢಪಡಿಸಿದೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧೀನಕ್ಕೆ ಒಳಪಟ್ಟ ನಗರದ ಶರಣ ಬಸವೇಶ್ವರ ವಿಜ್ಞಾನ ಕಾಲೇಜು, ಶರಣ ಬಸವೇಶ್ವರ ಕಲಾ ಕಾಲೇಜು, ಶರಣ ಬಸವೇಶ್ವರ ವಾಣಿಜ್ಯ ಕಾಲೇಜು, ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಮತ್ತು ಬೀದರ್‌ ಜಿಲ್ಲೆಯ ಬಸವ­ಕಲ್ಯಾಣದ ಎಸ್‌ಎಸ್ ಖೂಬಾ ಬಸವೇಶ್ವರ ಕಲಾ ಮತ್ತು ವಿಜ್ಞಾನ ಕಾಲೇಜು, ಯುಜಿಸಿ ಅನುದಾನ ದುರ್ಬ­ಳಕೆಯ ಆರೋಪಕ್ಕೆ ಗುರಿಯಾಗಿವೆ.

‘ಪ್ರಜಾವಾಣಿ’ ಸಹೋದರ ಪತ್ರಿಕೆ ‘ಡೆಕ್ಕನ್‌ ಹೆರಾಲ್ಡ್‌’ನಲ್ಲಿ ಪ್ರಕಟಗೊಂಡ ವರದಿ ಆಧರಿಸಿ ತನಿಖೆಗೆ ಆದೇಶಿಸಿದ್ದ ಆಯೋಗವು,  ಅಮರಾವತಿ ವಿಶ್ವ­ವಿದ್ಯಾ­ಲ­­ಯದ ವಿಶ್ರಾಂತ ಕುಲಪತಿ ಕಮಲ್‌ ಸಿಂಗ್‌ ನೇತೃತ್ವದಲ್ಲಿ 4 ತಜ್ಞರ ಸತ್ಯಶೋಧನಾ ಸಮಿತಿ ರಚಿಸಿತ್ತು.

ಎಸ್‌ಎಸ್ ಖೂಬಾ ಬಸವೇಶ್ವರ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿ.ಎಸ್‌. ಮಾಕಲ್‌ ಹಾಗೂ ಈ ಹಿಂದೆ ನಗರದ ಶರಣ­ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪ­ಕರಾಗಿದ್ದ ಶಿವರಾಜ್‌ ಪಾಟೀಲ್‌ ಕೂಡಾ ಈ ಕುರಿತು ಯುಜಿಸಿಗೆ ದೂರು ನೀಡಿದ್ದರು.

ಅನುದಾನದ ದುರ್ಬಳಕೆ ಬಗ್ಗೆ ಕಾಲೇಜು ಶಿಕ್ಷಣಾಲಯದ ಗುಲ್ಬರ್ಗದ ಜಂಟಿ ನಿರ್ದೇಶಕರು ಈ ಹಿಂದೆಯೇ ತನಿಖೆ ನಡೆಸಿದ್ದರು. ಆ ವರದಿಯಲ್ಲೂ ಹಣ ದುರ್ಬಳಕೆ ಬಗ್ಗೆ ಉಲ್ಲೇಖಿಸಿದ್ದರು.

ಅನುದಾನ: ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ­ಗಳ ವಿಶೇಷ ಅನುದಾನ ಯೋಜನೆ ಅಡಿಯಲ್ಲಿ ಐದೂ ಕಾಲೇಜು­ಗಳಲ್ಲಿ ಪರಿಹಾರ ಬೋಧನೆಗೆ ಒಟ್ಟು ₨23.76 ಲಕ್ಷ ಹಾಗೂ ವಿದ್ಯಾರ್ಥಿನಿ­ಯರ ವಸತಿ ನಿಲಯ ನಿರ್ಮಾಣ­ಕ್ಕಾಗಿ ಗೋದು­ತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿಗೆ ₨63.75 ಲಕ್ಷ, ಬಸವ­ಕಲ್ಯಾಣದ ಕಾಲೇಜಿಗೆ ₨ 46 ಲಕ್ಷ, ಶರಣಬಸವೇಶ್ವರ ವಿಜ್ಞಾನ ಕಾಲೇಜಿಗೆ ₨33.37 ಲಕ್ಷ ಸೇರಿದಂತೆ ಒಟ್ಟು ₨1.67 ಕೋಟಿ ಅನುದಾನ ಮಂಜೂ­ರಾ­ಗಿತ್ತು. ಈ ಅನುದಾನವು ಶರಣಬಸವೇಶ್ವರ ವಿಜ್ಞಾನ ಕಾಲೇಜು ಮತ್ತು  ಶರಣ ಬಸವೇಶ್ವರ ವಾಣಿಜ್ಯ ಕಾಲೇಜಿನಲ್ಲಿ ಆರೋಗ್ಯ ಕೇಂದ್ರದ ನಿರ್ಮಾಣವನ್ನೂ ಒಳಗೊಂಡಿದೆ. 

ಸಮಿತಿ ಭೇಟಿ: ಯುಜಿಸಿ ಸತ್ಯ­ಶೋಧನಾ ಸಮಿತಿಯು ಈಚೆಗೆ ಕಾಲೇಜಿ­ಗೆ ಭೇಟಿ ನೀಡಿದ್ದು, ದೂರು­ದಾ­ರರು, ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಸಂದರ್ಶನ ನಡೆಸಿ, ಹೇಳಿಕೆಗಳನ್ನು ದಾಖ­ಲಿ­ಸಿಕೊಂಡಿದೆ. ಕಾಲೇಜಿನ ವಿವಿಧ ಸಮಿತಿಗಳಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆ­ಯ ಅನುಪಸ್ಥಿತಿಯನ್ನು ಪತ್ತೆ ಹಚ್ಚಿದ ಶೋಧನಾ ಸಮಿತಿಯು, ‘ಯುಜಿಸಿ ನಿಯಮಾವಳಿಯ ಉಲ್ಲಂಘನೆ’ ಎಂದು ದಾಖಲಿಸಿದೆ. 

ಇತರ ಸಂಗತಿಗಳು: ವಿದ್ಯಾರ್ಥಿನಿಯರ ವಸತಿ ನಿಲಯದ ನಿವೇಶನದ ದಾಖಲೆ ಪತ್ರವನ್ನು ನೀಡುವಲ್ಲಿ ಶರಣ­ಬಸವೇಶ್ವರ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ವಿಫಲ­ರಾಗಿ­ದ್ದಾರೆ. ಬದಲಾಗಿ ವಸತಿ ನಿಲಯವನ್ನು ಅದೇ ಕಾಲೇಜಿನ ಆಡಳಿತ ಮಂಡಳಿಯ ಇನ್ನೊಂದು ಎಂಜಿನಿಯರ್ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗಿದೆ.

ಬಸವ ಕಲ್ಯಾಣ ಕಾಲೇಜಿಗೆ ಮಂಜೂ­ರಾ­ಗಿದ್ದ ವಸತಿ ನಿಲಯವನ್ನು ಮತ್ತೊಂದು ಅನುದಾನ ರಹಿತ ಪದವಿ ಪೂರ್ವ ಕಾಲೇಜು ಬಳಸಿಕೊಳ್ಳುತ್ತಿದೆ. ಪರಿಹಾರ ಬೋಧನೆಗೆ ಮಂಜೂರಾದ ₨5.39ಲಕ್ಷ ಅನುದಾನದ ಬಳಕೆಯೇ ಪ್ರಶ್ನಾರ್ಹವಾಗಿದೆ. ನಗರದ ಗೋದು­ತಾಯಿ ದೊಡ್ಡಪ್ಪ ಅಪ್ಪ ಕಾಲೇಜಿಗೆ ಮಂಜೂರಾದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಬೇರೆ ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ­ಯರಿಗೂ ಅವಕಾಶ ನೀಡ­ಲಾಗಿದೆ. ಅಲ್ಲದೇ ಪ್ರತಿ ವಿದ್ಯಾರ್ಥಿನಿ­ಯಿಂದ ಮಾಸಿಕ ₨2,500 ಸಂಗ್ರಹಿಸು­ತ್ತಿರುವುದು ಬೆಳಕಿಗೆ ಬಂದಿದೆ. ಇನ್ನೊಂದೆಡೆ ‘ಆರೋಗ್ಯ ಕೇಂದ್ರ’ಗಳು ವಸತಿ ನಿಲಯದಂತೆ ಕಂಡುಬಂದಿದ್ದು, ವೈದ್ಯಕೀಯ ಉಪಕರಣಗಳ ಕೊರತೆ ಇದೆ ಎಂಬ ಸಂಗತಿಗಳನ್ನು ಸಮಿತಿಯು ತನಿಖೆ ವೇಳೆ ಪತ್ತೆ ಹಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT