ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಲಕ್ಷ ತೆಂಗಿನಕಾಯಿ, 1.65 ಲಕ್ಷ ಕೆ.ಜಿ.ಅಕ್ಕಿ

ವಿಶ್ವೇಶತೀರ್ಥ ಶ್ರೀಗಳ ಪಂಚಮ ಪರ್ಯಾಯಕ್ಕೆ ಹರಿದುಬಂದ ಹೊರೆಕಾಣಿಕೆ
Last Updated 16 ಜನವರಿ 2016, 5:32 IST
ಅಕ್ಷರ ಗಾತ್ರ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಐದನೇ ಪರ್ಯಾಯಕ್ಕೆ 5 ಲಕ್ಷ ತೆಂಗಿನ ಕಾಯಿ ಸೇರಿದಂತೆ ಅಪಾರ ಪ್ರಮಾಣದ ಹೊರೆ ಕಾಣಿಕೆ ಸಂಗ್ರಹವಾಗಿದೆ.

1.65 ಲಕ್ಷ ಕೆ.ಜಿ ಅಕ್ಕಿ, 12 ಸಾವಿರ ಕೆ.ಜಿ. ಬೆಲ್ಲ, 5,500 ಕೆ.ಜಿ ಸಕ್ಕರೆ, ಒಂದೂವರೆ ಲೋಡ್‌ ಸೌತೆಕಾಯಿ, ಎರಡೂವರೆ ಲೋಡ್‌ ಕುಂಬಳ ಕಾಯಿ, ಒಂದು ಲೋಡ್‌ ಸುವರ್ಣ ಗೆಡ್ಡೆ ಹಾಗೂ ಮರಸರ ಗೆಡ್ಡೆ, 150 ಟಿನ್‌ ಅಡುಗೆ ಎಣ್ಣೆ, 10 ಕ್ವಿಂಟಲ್‌ ತೊಗರಿ ಬೇಳೆ, ಸುಮಾರು ಐದು ಲೋಡ್‌ ಬಾಳೆ ಎಲೆ, ಐದು ಲೋಡ್‌ ಪ್ಲೇಟ್‌ಗಳು, ಮೂರು ಲೋಡ್‌ ಹಿಂಡಿ ಹೊರೆ ಕಾಣಿಕೆ ರೂಪದಲ್ಲಿ ಬಂದಿದೆ. ಹಿಂಡಿಯನ್ನು ನೀಲಾವರ ಗೋಶಾಲೆಗೆ ಕಳುಹಿಸಲಾಗುತ್ತಿದೆ.

16ರ ವರೆಗೆ ಹೊರೆ ಕಾಣಿಕೆ ಸಂಗ್ರಹಿಸಲು ಅವಕಾಶ ಇದೆ. ಗುಜರಾತಿ ದೈವಜ್ಞ ಸಂಘ, ರಾಜಸ್ತಾನಿ ಸಮಾಜ ಬಾಂಧವರು, ಮಟ್ಟು ಗ್ರಾಮ, ಕಿನ್ನಿಮೂಲ್ಕಿ, ಕನ್ನರ್ಪಾಡಿ ಹಾಗೂ ಮಂಗಳೂರು ಜಿಲ್ಲೆಯವರೂ ನೀಡುವ ಹೊರೆ ಕಾಣಿಕೆಯನ್ನು ಲೆಕ್ಕ ಹಾಕಿದರೆ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ. 17ರಂದು ರಾತ್ರಿ ನಡೆಯುವ ಮಹಾ ಅನ್ನ ಸಂತರ್ಪಣೆಗೆ ಹೊರೆ ಕಾಣಿಕೆಯನ್ನು ಬಳಸಲಾಗುತ್ತದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಹೊರೆ ಕಾಣಿಗೆ ಉಗ್ರಾಣವನ್ನು ಸುಂದರವಾಗಿ ಅಲಂಕರಿಸುವ ಕಾರಣ ಸ್ಥಳೀಯರು ಹಾಗೂ ಪ್ರವಾಸಿಗರು ಸೇರಿ ಸುಮಾರು 10 ಸಾವಿರ ಜನ ಪ್ರತಿ ದಿನ ಇಲ್ಲಿಗೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ. ಉಡುಪಿ ತಾಲ್ಲೂಕು ಯುವ ಬ್ರಾಹ್ಮಣ ಸಂಘದವರು ಹೊರೆ ಕಾಣಿಕೆಯ ದಾಖಲೀಕರಣ ಮಾಡುತ್ತಿದ್ದಾರೆ.

‘ಹೊರೆ ಕಾಣಿಕೆಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಲಾಗುತ್ತಿದೆ. ಹೊರೆ ಕಾಣಿಕೆ ನೀಡಿದವರಿಗೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತಿದೆ. ಕೆಲವು ತರಕಾರಿ, ಹಣ್ಣುಗಳು ಕೆಡುವುದರಿಂದ ಅವುಗಳನ್ನು ಶ್ರೀಕೃಷ್ಣ ಮಠಕ್ಕೆ ನೀಡಲಾಗುತ್ತಿದೆ. ಒಟ್ಟಾರೆ ಭಕ್ತರು ನೀಡಿದ ಹೊರೆ ಕಾಣಿಕೆಯನ್ನು ಸಂಪೂರ್ಣವಾಗಿ ಬಳಸಲು ಕ್ರಮ ವಹಿಸಲಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪಿ.ಕೆ. ಪುರುಷೋತ್ತಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊರೆ ಕಾಣಿಕೆ ಬಂದು ತಲುಪಿದ ನಂತರ ಲೆಕ್ಕ ಬರೆದುಕೊಳ್ಳಲಾಗುತ್ತದೆ. ಆ ನಂತರ ಎಲ್ಲವನ್ನೂ ಪ್ರತ್ಯೇಕವಾಗಿ ವಿಂಗಡಿಸಿ ಜೋಡಿಸಿಡಲಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯ 30 ಮಂದಿ ಸ್ವಯಂ ಸೇವಕರು ಯಾವುದೇ ಸಂಭಾವನೆ ಇಲ್ಲದೆ ಪ್ರತಿ ದಿನ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಯೋಜನೆ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ.

ಈ ಬಾರಿ ಮುಸ್ಲಿಮರು ಹಾಗೂ ಕ್ರೈಸ್ತರು ಸಹ ಹೆಚ್ಚಿನ ಪ್ರಮಾಣದಲ್ಲಿ ಹೊರೆ ಕಾಣಿಕೆ ನೀಡಿದ್ದಾರೆ. ಆದ್ದರಿಂದ ಈ ಬಾರಿಯ ಪರ್ಯಾಯ ಸೌಹಾರ್ದ ಪರ್ಯಾಯವಾಗಿ ಮಾರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT