ಬಾಗ್ದಾದ್ (ಎಎಫ್‌ಪಿ): ಸರ್ಕಾರಕ್ಕೆ ನಿಷ್ಠರಾಗಿದ್ದ 70 ಸುನ್ನಿ ಬುಡಕಟ್ಟು ಸದಸ್ಯರನ್ನು ಇಸ್ಲಾಮಿಕ್ ಸ್ಟೇಟ್ (ಐ.ಎಸ್.) ಉಗ್ರರು ಇರಾಕ್‌ನ ಪಶ್ಚಿಮ ಭಾಗದಲ್ಲಿ ಕಳೆದ ವಾರ ಹತ್ಯೆ ಮಾಡಿರುವ ಸಂಗತಿ ಬುಡಕಟ್ಟು ನಾಯಕರ ಹಾಗೂ ವಿಶ್ವಸಂಸ್ಥೆಯ ಹೇಳಿಕೆಯಿಂದ ಗುರುವಾರ ಬಹಿರಂಗಗೊಂಡಿದೆ.
ಲಂಕಾಗೆ ನೆರವು
ಕೊಲಂಬೊ (ಐಎಎನ್‌ಎಸ್): ಶ್ರೀಲಂಕಾದ ಯುದ್ಧಪೀಡಿತ ಪ್ರದೇಶದಲ್ಲಿ ಹುದಗಿಸಿಟ್ಟಿರುವ ನೆಲಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯಕ್ಕೆ ಸುಮಾರು ಸಾವಿರ ಕೋಟಿ ಹೆಚ್ಚುವರಿ ಸಹಾಯಧನ ನೀಡುವುದಾಗಿ ಅಮೆರಿಕ ಗುರುವಾರ ಘೋಷಿಸಿದೆ.
ಪ್ರಧಾನಿ ಆಯ್ಕೆ
ಅಡಿಸ್ ಅಬಾಬಾ (ಐಎಎನ್‌ಎಸ್): ಹೇಲ್‌ಮರಿಯಮ್ ಡೆಸಾಲೆನೆ (50) ಇಥಿಯೋಪಿಯಾ ಪ್ರಧಾನಿಯಾಗಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
ಒಬಾಮ ಕ್ಷಮೆ
ವಾಷಿಂಗ್ಟನ್ (ಪಿಟಿಐ): ಆಫ್ಘಾನಿಸ್ತಾನದ ಕುಂಡುಜ್‌ನಲ್ಲಿ ಆಸ್ಪತ್ರೆಯೊಂದರ ಮೇಲೆ ನಡೆದ ಅಮೆರಿಕದ ವಾಯುದಾಳಿಗೆ ಅಧ್ಯಕ್ಷ ಬರಾಕ್ ಒಬಾಮ ಅವರು ಮೆಡಿಕಲ್ ಚಾರಿಟಿ ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ (ಎಂಎಸ್ಎಫ್) ಅಧ್ಯಕ್ಷರ ಕ್ಷಮೆ ಕೋರಿದ್ದಾರೆ.
ನ್ಯಾಟೊ ಆರೋಪ
ವಾಷಿಂಗ್ಟನ್ (ಐಎಎನ್ಎಸ್): ಐ.ಎಸ್., ಅಲ್ ಕೈದಾ ಅಥವಾ ಈ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಸಿರಿಯಾದಲ್ಲಿ ರಷ್ಯಾ ವೈಮಾನಿಕ ದಾಳಿ ನಡೆಸಿಲ್ಲ ಎಂದು ಅಮೆರಿಕ ನೇತೃತ್ವದ ನ್ಯಾಟೊ ಪಡೆ ಆರೋಪಿಸಿದೆ.
ವಿಮಾನ ನಾಪತ್ತೆ
ಕಠ್ಮಂಡು (ಪಿಟಿಐ): ನೇಪಾಳದ ಅಲ್ಟ್ರಾ–ಲೈಟ್ ಕಂಪೆನಿ ವಿಮಾನ ಗುರುವಾರ ಕಾಣೆಯಾಗಿದ್ದು, ‘ಪೋಖ್ರಾ ವಿಮಾನ ನಿಲ್ದಾಣದಿಂದ ಬೆಳಿಗ್ಗೆ ಹೊರಟಿದ್ದ ವಿಮಾನದಲ್ಲಿ ಪೈಲಟ್ ರಷ್ಯಾ ಪ್ರಜೆ ವೆಲೇರಿ ಪುಟಿನ್ (50) ಹಾಗೂ ಪ್ರಯಾಣಿಕ ದಕ್ಷಿಣ ಆಫ್ರಿಕಾ ಪ್ರಜೆ ಎಲಿಜಬೆತ್ ವೆಲ್ (40) ಇದ್ದರು.