ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲ ಮಾಯಾಬಜಾರಿನಲ್ಲಿ...

Last Updated 9 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಜಗತ್ತನ್ನೇ ಅಂಗೈಯಲ್ಲಿ ತಂದಿಕ್ಕುವ ಅಂತರ್ಜಾಲ ಎಂಬ ಮಾಯೆ ಇಂದಿನ ಆಧುನಿಕ ಜೀವನಕ್ರಮದ ಒಂದು ಭಾಗವೇ ಆಗಿಹೋಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಂತೂ ಸಾರ್ವಜನಿಕ –ಖಾಸಗಿ ಎಂಬ ಗೆರೆಯನ್ನೂ ಮೀರಿ ಅಂತರ್ಜಾಲ ಹಲವು ರೂಪುರೇಖೆಗಳಲ್ಲಿ ಬದುಕನ್ನು ವ್ಯಾಪಿಸಿಕೊಂಡಿದೆ.

ಜಗತ್ತಿನ ಇನ್ನೊಂದು ತುದಿಯಲ್ಲಿರುವವರನ್ನು ತುದಿಬೆರಳಿನ ಅಂತರದಲ್ಲಿ ನಿಲುಕಿಸಬಲ್ಲದು ಎನ್ನುವುದು ಅಂತರ್ಜಾಲದ ಸಂವಹನ ಶಕ್ತಿಗೆ ಉದಾಹರಣೆ. ಆದರೆ ಪಕ್ಕದಲ್ಲಿ ಕೂತವರನ್ನು ಮಾನಸಿಕವಾಗಿ ದೂರ ಸರಿಸಬಲ್ಲ ವಿಘಟಕ ಸಾಧ್ಯತೆಯೂ ಅದಕ್ಕಿದೆ. ಬಿಎಂಎಸ್‌ ಕಾಲೇಜಿನಲ್ಲಿ ಎಂಟೆಕ್‌ ಮಾಡುತ್ತಿರುವ ಶ್ರುತಿ ಎಂ.ಕೆ. ಅವರು ಅಂತರ್ಜಾಲವನ್ನು ಹೆಚ್ಚು ನೆಚ್ಚಿಕೊಳ್ಳುವುದು ಪಠ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ.

‘ನಾನೇನೂ ಇಂಟರ್‌ನೆಟ್‌ ಅಡಿಕ್ಟ್‌ ಅಲ್ಲ’ ಎನ್ನುವ ಶ್ರುತಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿದ್ದಾರೆ. ‘ಮೊದಲೆಲ್ಲ ಸಂದರ್ಶನಕ್ಕೆ ನಾವೇ ಖುದ್ದಾಗಿ ಹಾಜರಾಗಬೇಕಿತ್ತು. ಈಗೀಗ ಆನ್‌ಲೈನ್‌ ಸಂದರ್ಶನಗಳು ಜಾಸ್ತಿಯಾಗುತ್ತಿವೆ. ವಿಡಿಯೊ ಚಾಟ್‌ ಮೂಲಕವೇ ಸಂದರ್ಶನ ನಡೆಸಬಹುದು. ಇದರಿಂದ ಬಹಳ ಉಪಯೋಗವಾಗಿದೆ’ ಎನ್ನುವುದು ಅವರ ಅಭಿಪ್ರಾಯ. ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶರತ್‌ ಬಿ.ವಿ. ತಮ್ಮ ಕಚೇರಿ ಕೆಲಸಗಳಿಗೆ ಅಂತರ್ಜಾಲವನ್ನು ಹೆಚ್ಚು ಅಲಂಬಿಸಿದ್ದಾರೆ. ಯಾವುದೇ ವಿಷಯ ತಿಳಿದುಕೊಳ್ಳಲು ಅವರು ಪುಸ್ತಕವನ್ನು ಆಶ್ರಯಿಸುವುದೇ ಇಲ್ಲ.

‘ನನಗೆ ಅಗತ್ಯವಿರುವ ಮಾಹಿತಿಯನ್ನು ಅಂತರ್ಜಾಲದಿಂದ ಪಡೆಯುವುದೇ ಹೆಚ್ಚು. ಪುಸ್ತಕ ನೋಡಬೇಕು ಅನ್ನಿಸಿದರೂ ಪಿಡಿಎಫ್‌ ಫೈಲ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತೇನೆ. ಇದನ್ನು ಬಿಟ್ಟರೆ ನಾನು ಇಂಟರ್‌ನೆಟ್‌ ಶಾಪಿಂಗ್‌ ಮೇಲೆ ಹೆಚ್ಚು ಅವಲಂಬಿತವಾಗಿದ್ದೇನೆ. ಆನ್‌ಲೈನ್‌ ಶಾಪಿಂಗ್‌ನಿಂದ ಬೆಂಗಳೂರಿನಂತಹ ನಗರದಲ್ಲಿ ಆಗುವ ಮುಖ್ಯ ಲಾಭವೆಂದರೆ ಸಮಯದ ಉಳಿತಾಯ. ಟ್ರಾಫಿಕ್‌ ಒತ್ತಡದಲ್ಲಿ ಅಂಗಡಿಗಳಿಗೆ ಹೋಗಿ ಶಾಪಿಂಗ್‌ ಮಾಡುವುದು ಪ್ರಯಾಸವೇ ಸರಿ. ಆದರೆ ಅಂತರ್ಜಾಲದಲ್ಲಿ ಕೂತಲ್ಲಿಯೇ ಆರಾಮವಾಗಿ ಖರೀದಿ ಮಾಡಬಹುದು. ವೈವಿಧ್ಯವೂ ಜಾಸ್ತಿಯಿರುತ್ತದೆ’ ಎಂದು ಅಂತರ್ಜಾಲದ ಉಪಯುಕ್ತತೆಯನ್ನು ಪಟ್ಟಿ ಮಾಡುವ ಶರತ್‌, ವಾಟ್ಸ್‌ ಆ್ಯಪ್‌ನಲ್ಲಿ ಉಚಿತ ಮೆಸೇಜ್‌ನಿಂದ ಆಗುವ ಉಪಯೋಗವನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ.

ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಯೋಗೀಶ್‌ ಎಂ. ಶೆಟ್ಟಿ ಪ್ರವಾಸ ಪ್ರೇಮಿ. ಹೀಗೆ ಪ್ರವಾಸಕ್ಕೆ ಹೊರಡುವ ಮನಸ್ಸಾದಾಗಲೆಲ್ಲ ಅವರು ಅವಲಂಬಿಸುವುದು ಗೂಗಲ್‌ ಹುಡುಕಾಟದ ಕಿಂಡಿಯನ್ನು. ‘ಯಾವುದಾದರೂ ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು, ಅಲ್ಲಿಗೆ ಹೋಗುವ ದಾರಿ ತಿಳಿದುಕೊಳ್ಳಲು ನಾನು ಗೂಗಲ್‌ ಮ್ಯಾಪ್‌ ಮೊರೆಹೋಗುತ್ತೇನೆ. ಅಲ್ಲದೇ ಬೆಂಗಳೂರಿನಲ್ಲಿಯೇ ಗೊತ್ತಿಲ್ಲದ ವಿಳಾಸವನ್ನು ಹುಡುಕಲೂ ಅಂತರ್ಜಾಲವೇ ಅಂತಿಮ ದಾರಿ’ ಎನ್ನುವ ಯೋಗೀಶ್‌ ಅವರ ಪಾಲಿಗೆ ಅಂತರ್ಜಾಲ ನೆಚ್ಚಿನ ಶಾಪಿಂಗ್ ಸೆಂಟರ್‌ ಕೂಡ ಹೌದು.

‘ಷೋರೂಂಗೆ ಹೋದರೆ ನಿರ್ದಿಷ್ಟ ಉತ್ಪನ್ನವನ್ನು ಮಾತ್ರ ನೋಡಬಹುದು. ಉದಾಹರಣೆಗೆ ಟಿ.ವಿ ಷೋರೂಂಗೆ ಹೋದರೆ ಟಿ.ವಿ.ಗಳನ್ನು ಮಾತ್ರ ನೋಡಬಹುದು. ಆದರೆ ಅಂತರ್ಜಾಲದಲ್ಲಿ ಹಾಗಲ್ಲ. ಒಂದು ಕ್ಲಿಕ್‌ ಮಾಡುವುದರ ಮೂಲಕ ಎಲ್ಲ ವಸ್ತುಗಳನ್ನೂ ನೋಡಬಹುದು. ಮಳಿಗೆಗಳಿಗೆ ಹೋಲಿಸಿದರೆ ಅಂತರ್ಜಾಲದಲ್ಲಿ ಬೆಲೆಯೂ ಕಡಿಮೆ. ಉತ್ಪನ್ನ ನಿಮಗೆ ಇಷ್ಟವಾಗಿಲ್ಲದಿದ್ದರೆ ಮರಳಿಸಬಹುದು. ಹೀಗೆ ಮರಳಿಸುವ ಅವಕಾಶ ಕೆಲವು ಮಳಿಗೆಗಳಲ್ಲಿ ಇದೆ. ಆದರೆ ಅದಕ್ಕೆ ಪ್ರತಿಯಾಗಿ ಹಣವನ್ನು ನೀಡುವುದಿಲ್ಲ. ಬೇರೆ ವಸ್ತುವನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಬಟ್ಟೆಯನ್ನು ಮರಳಿಸಿದರೆ ಮತ್ತೊಂದು ಬಟ್ಟೆಯನ್ನೇ ಕೊಂಡುಕೊಳ್ಳಬೇಕು. ಆದರೆ ಅಂತರ್ಜಾಲದಲ್ಲಿ ಹಾಗಲ್ಲ. ಬಟ್ಟೆಯನ್ನು ಮರಳಿಸಿ ಅದೇ ಬೆಲೆಯ ಶೂ ಕೊಂಡುಕೊಳ್ಳುವ ಅವಕಾಶವಿರುತ್ತದೆ’ ಎಂದು ಅಂತರ್ಜಾಲ ವ್ಯಾಪಾರದ ಅವಕಾಶಗಳನ್ನು ವಿವರಿಸುವ ಯೋಗೀಶ್, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರೂ ಅದರಲ್ಲಿ ವೇಳೆ ಕಳೆಯುವುದು ಕಡಿಮೆ.

‘ಅಂತರ್ಜಾಲದ ಆಗಮನದಿಂದ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬಹುದು’ ಎನ್ನುವ ಇವರು, ‘ಟಿ.ವಿ ಕಂಡುಹಿಡಿದವರು ಯಾರು ಎಂಬುದನ್ನು ತಿಳಿಯುವ ಕುತೂಹಲವಾದರೆ ಅಂತರ್ಜಾಲದಲ್ಲಿ ಒಂದೇ ನಿಮಿಷದಲ್ಲಿ ಆ ಮಾಹಿತಿ ಪಡೆದುಕೊಳ್ಳಬಹುದು. ಪುಸ್ತಕದಲ್ಲಿ ಹುಡುಕುತ್ತ ಕುಳಿತರೆ ದಿನಗಟ್ಟಲೆ ಬೇಕಾಗುತ್ತದೆ. ಆದರೆ ಪುಸ್ತಕದಲ್ಲಿ ಹುಡುಕುವಾಗ ನಿಮಗೆ ಬೇರೆ ಬೇರೆ ವಿಷಯಗಳೂ ತಿಳಿಯುತ್ತವೆ. ಈ ಅವಕಾಶ ಅಂತರ್ಜಾಲದ ಬಳಕೆಯಿಂದ ತಪ್ಪಿಹೋಗುತ್ತಿದೆ’ ಎಂದು ಇಂಟರ್ನೆಟ್‌ನ ಎರಡೂ ಮುಖಗಳನ್ನು ಅನಾವರಣಗೊಳಿಸುತ್ತಾರೆ.
‘ಇಂದಿನ ಅವಸರದ ಬದುಕಿಗೆ ಇಂಟರ್ನೆಟ್‌ ತುರ್ತು ಹಾಗೂ ಹಲವು ಕಾರಣಗಳಿಗೆ ಅನಿವಾರ್ಯವೂ ಹೌದು’ ಎನ್ನುವುದು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿ ಕೆಲಸ ಮಾಡುತ್ತಿರುವ ಶರತ್‌ ಚಕ್ರವರ್ತಿ ಅಭಿಪ್ರಾಯ.

ಅಂತರ್ಜಾಲದಿಂದ ಬೆರಳತುದಿಯಲ್ಲಿ ಜಗತ್ತೇ ಸಿಗುತ್ತದೆನ್ನುವುದು ಸತ್ಯವಾದರೂ, ಅದರ ಮೇಲೆ ನಾವೆಷ್ಟು ಅವಲಂಬಿತರಾಗಿದ್ದೇವೆನ್ನುವುದು ತುಸು ಯೋಚಿಸಬೇಕಾದ ವಿಷಯ. ಇಂಟರ್ನೆಟ್‌ ಇಂದು ಅಸಾಧ್ಯಗಳನ್ನು ಸಾಧ್ಯವಾಗಿಸಿದೆ. ಹಲವು ಸಾಧ್ಯತೆಗಳನ್ನು ಇನ್ನೂ ಸುಲಭವಾಗಿಸಿದೆ’ ಎನ್ನುವ ಶರತ್‌, ಮೊದಮೊದಲು ಕೆಲವು ಮಾಹಿತಿ ಹಾಗೂ ಮಿಂಚಂಚೆಗಾಗಿ ಮಾತ್ರ ನೆಟ್ ಬಳಸುತ್ತಿದ್ದರು.

‘ಇಂದು ನಾನು, ಸಾಮಾಜಿಕ ತಾಣಗಳಿಗಾಗಿಯೇ ಹೆಚ್ಚು ಅಂತರ್ಜಾಲ ಅವಲಂಬಿಸಿರುವೆ. ಇಂಟರ್ನೆಟ್‌ ತನ್ನಲ್ಲಿರುವ ಅಪಾರ ಮಾಹಿತಿ ಕಣಜದ ಜೊತೆಗೆ, ಕೊಳ್ಳುವ ಮತ್ತು ಮಾರುವ ಮಾರುಕಟ್ಟೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ’ ಎನ್ನುತ್ತಾರೆ. ‘ನನ್ನೆಲ್ಲಾ ಬರಹದ ಶೇಖರಣೆಯನ್ನೂ ನೆಟ್‌ನಲ್ಲಿಯೇ ಮಾಡುತ್ತೇನೆ. ಸಿನಿಮಾಗಳನ್ನು ನೋಡುತ್ತೇನಾದರೂ, ಅದರ ಪ್ರಮಾಣ ಕಡಿಮೆ ಎನ್ನಬಹುದು’ ಎಂದು ಅಂತರ್ಜಾಲದ ಸಾಧ್ಯತೆಗಳನ್ನು ವಿವರಿಸುತ್ತಾರೆ ಶರತ್. 

ಸ್ನೇಹ ಸಂಬಂಧಗಳ ದೊರಕಿಸಿದ ಅಂತರ್ಜಾಲ
ಇಂಟರ್ನೆಟ್‌ ಒಂದು ಅದ್ಭುತ ಪ್ರಪಂಚ. ಅಲ್ಲಿ ನಾವು ಹುಡುಕಿದ್ದು ಸಿಕ್ಕುವುದಿಲ್ಲ ಎಂಬ ಮಾತೇ ಇಲ್ಲ. ಏನನ್ನು ಹುಡುಕುತ್ತಿದ್ದೇವೆ, ಯಾಕೆ ಹುಡುಕುತ್ತಿದ್ದೇವೆ ಎಂಬ ಖಚಿತತೆ ಇರಬೇಕು ಅಷ್ಟೆ. ನಾನು ಅಂತರ್ಜಾಲ ಉಪಯೋಗಿಸಲು ಶುರುಮಾಡಿ 9–10 ವರ್ಷಗಳಾದವು. ‘ಫೇಸ್‌ಬುಕ್‌’ನಿಂದ ನಾನು ಅನೇಕ ಸ್ನೇಹ ಸಂಬಂಧಗಳನ್ನು ಪಡೆದುಕೊಂಡಿದ್ದೇನೆ. ಗೂಗಲ್‌ನಿಂದ ಬ್ಲಾಗ್‌ ಮಾಡಿಕೊಂಡು ನನ್ನ ಅನೇಕ ಬರಹಗಳನ್ನು ಪ್ರಕಟಿಸಲು ಸಾಧ್ಯವಾಗಿದೆ. ಅಲ್ಲದೇ ನನ್ನ ಇಷ್ಟದ ಲೇಖಕರ ಕತೆ, ಕವಿತೆ, ಬರಹಗಳನ್ನು ಓದಲೂ ಸಾಧ್ಯವಾಗಿದೆ.

ಅಂತರ್ಜಾಲದಿಂದ ಕೆಟ್ಟ ಅನುಭವ ಆಗಿಲ್ಲ ಅಂತಲ್ಲ. ಆದರೆ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.
ನಾನು, ನನ್ನ ಪತಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಆನ್‌ಲೈನ್‌ ಶಾಪಿಂಗ್‌ನಿಂದ ತುಂಬ ಸಹಾಯವಾಗಿದೆ. ನಾನು ಹೆಚ್ಚಾಗಿ ಪುಸ್ತಕಗಳನ್ನೇ ಕೊಳ್ಳುತ್ತೇನೆ. ಅಂತರ್ಜಾಲದಲ್ಲಿ ಸಾಸಿವೆಯಿಂದ ಅಮೂಲ್ಯ ಆಭರಣಗಳವರೆಗೆ ಎಲ್ಲವೂ ಲಭ್ಯ. ಹೀಗೆ ಆನ್‌ಲೈನ್‌ನಲ್ಲಿ ಖರೀದಿ ಮಾಡುವವರು ‘ಕ್ಯಾಷ್‌ ಆನ್‌ ಡೆಲಿವರಿ’ ಆಯ್ಕೆ ಮಾಡಿಕೊಳ್ಳುವುದು ಒಳಿತು ಎನ್ನುವುದು ನನ್ನ ಅನುಭವ. ಇದರಿಂದ ಹಣ ಕಳೆದುಕೊಳ್ಳುವ ಅಪಾಯವಿರುವುದಿಲ್ಲ.
ಒಟ್ಟಾರೆ ಉಪಯೋಗಿಸಿಕೊಳ್ಳುವ ತಿಳಿವಳಿಕೆ ಇದ್ದರೆ ಅಂತರ್ಜಾಲದಿಂದ ಒಳ್ಳೆಯದೇ ಆಗುತ್ತದೆ.
–ಶಮ್ಮಿ ಸಂಜೀವ್‌, ಕವಯಿತ್ರಿ

ಜನಸಾಮಾನ್ಯರಿಗೊಂದು ಪ್ರಧಾನಿಗೊಂದು
ದೇಶದಲ್ಲಿ ಅಂತರ್ಜಾಲ ಸಂಪರ್ಕದ ಸರಾಸರಿ ವೇಗ ೨ ಎಂಬಿಪಿಎಸ್‌ (ಮೆಗಾಬೈಟ್ಸ್‌ ಪರ್‌ ಸೆಕೆಂಡ್‌) ವರೆಗೆ ಇದೆ. ಆದರೆ, ದೇಶದ ಪ್ರಧಾನಿ ಕಚೇರಿಯಲ್ಲಿ ಇದು ೩೪ ಎಂಬಿಪಿಎಸ್‌ ತನಕ ಇದೆ. ಪ್ರಧಾನಿ ಕಚೇರಿಯಲ್ಲಿ ೩೪ ಎಂಬಿಪಿಎಸ್‌ವರೆಗೆ ಇಂಟರ್ನೆಟ್‌ ಸಂಪರ್ಕದ ವೇಗ ಕಲ್ಪಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಜನಸಾಮಾನ್ಯರಿಗೆ ಅದರ ಅರ್ಧದಷ್ಟು ವೇಗದ ಅಂತರ್ಜಾಲ ಸೌಕರ್ಯ ಇಲ್ಲ ಎನ್ನುವುದು ವಿಷಾದನೀಯ.

ದೇಶದ ಕೆಲವು ಭಾಗಗಳಲ್ಲಿ ಅಂತರ್ಜಾಲದ ವೇಗ ೧೦ ಎಂಬಿಪಿಎಸ್‌ವರೆಗೆ ಬರುತ್ತದೆ. ಆದರೆ, ಆ ಬಳಕೆದಾರರ ಸಂಖ್ಯೆ ಕೇವಲ ಶೇ ೧.೨ರಷ್ಟು ಮಾತ್ರ. ಅಂದರೆ ಒಟ್ಟು ಅಂತರ್ಜಾಲ ಬಳಕೆದಾರರಲ್ಲಿ ಶೇ ೧೦ರಷ್ಟು ಜನರಿಗೂ ವೇಗದ ಇಂಟರ್ನೆಟ್‌ ಬಳಸಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಅತಿ ವೇಗದ ಇಂಟರ್‌ನೆಟ್‌ ಸೌಕರ್ಯ ಬಳಸುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತ ೧೧೫ನೇ ಸ್ಥಾನದಲ್ಲಿರುವುದು ಇತ್ತೀಚಿಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಸಲ್ಲಿಸಿದ ಅರ್ಜಿಯಿಂದ ಇದು ಬಹಿರಂಗಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಡಿಜಿಟಲ್‌ ಇಂಡಿಯಾ ಯೋಜನೆ ಘೋಷಿಸಿದ್ದಾರೆ. ೨೦೧೯ರವರೆಗೆ ಎಲ್ಲ ಗ್ರಾಮಗಳಿಗೆ ಅತಿ ವೇಗದ ಇಂಟರ್ನೆಟ್‌ ಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಇದರಿಂದಾಗಿ ಬರುವ ದಿನಗಳಲ್ಲಾದರೂ ಈ ಸಮಸ್ಯೆ ಅಂತ್ಯ ಕಾಣಲಿದೆಯೇ ಎಂಬ ಜಿಜ್ಞಾಸೆ ಅಂತರ್ಜಾಲ ಬಳಕೆದಾರರಲ್ಲಿ ಇದೆ. ಇದಕ್ಕೆ ಸಮಯವೇ ಉತ್ತರ ನೀಡಲಿದೆ.
ಮಾಹಿತಿ: ಶಶಿಕಾಂತ ಎಸ್. ಶೆಂಬೆಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT