ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳ ವೆಬ್‌ಸೈಟ್‌ನಲ್ಲಿ ಹಳಸಲು ಮಾಹಿತಿ!

ಯೂನಿಕೋಡ್‌ಗೆ ಬದಲಾಗದ ಶಿಷ್ಟತೆ
Last Updated 29 ಜೂನ್ 2014, 20:27 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಶಿಷ್ಟತೆ ಇನ್ನು ಮುಂದೆ ಯೂನಿಕೋಡ್‌ ಆಗಿರು­ತ್ತದೆ ಎಂದು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿ ವರ್ಷ ಸಂದಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಎಲ್ಲ ಅಕಾಡೆಮಿ ಮತ್ತು ಪ್ರಾಧಿಕಾರಗಳ ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಯೂನಿಕೋಡ್‌ ಶಿಷ್ಟತೆಗೆ ಬದಲಾಗಿಲ್ಲ. ಕೆಲವು ಅಕಾಡೆಮಿಗಳ ವೆಬ್‌ಸೈಟ್‌ನಲ್ಲಿ ಲಭ್ಯವಿ­ರುವ ಮಾಹಿತಿ ಪ್ರಕಾರ ಜಗದೀಶ ಶೆಟ್ಟರ್‌ ಅವರೇ ರಾಜ್ಯದ ಇಂದಿನ ಮುಖ್ಯಮಂತ್ರಿ! ನಾಡಿನ ಅಕಾಡೆಮಿ­ಮತ್ತು ಪ್ರಾಧಿಕಾರಗಳ ವೆಬ್‌­ಸೈಟ್‌ ಕುರಿತು ‘ಪ್ರಜಾ­ವಾಣಿ’ ನಡೆಸಿದ ಕಿರು ಸಮೀಕ್ಷೆಯ ವಿವರ ಇಲ್ಲಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ: ಇದರ ವೆಬ್‌­ಸೈಟ್‌­ನಲ್ಲಿರುವ ಮಾಹಿತಿ ಪ್ರಕಾರ ಅಕಾಡೆಮಿ ಅಧ್ಯಕ್ಷರು ಪ್ರೊ.ಎಂ.ಎಚ್‌. ಕೃಷ್ಣಯ್ಯ. ಆದರೆ, ಕೃಷ್ಣಯ್ಯ ಅವರ ಅಧಿಕಾರಾವಧಿ ಪೂರ್ಣ­ಗೊಂಡಿದ್ದು 2011ರ ನವೆಂಬರ್‌ 26ರಂದು. ಇದೇ ಫೆಬ್ರುವರಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಸಾಹಿತ್ಯ ಅಕಾಡೆಮಿ ವೆಬ್‌ಸೈಟ್‌ನಲ್ಲಿರುವ ಯಾವುದೇ ಮಾಹಿತಿ ಯೂನಿಕೋಡ್‌ ಶಿಷ್ಟತೆ­ಯಲ್ಲಿ ಇಲ್ಲ. ಹಾಗಾಗಿ ಗೂಗಲ್‌ ಅಥವಾ ಇನ್ಯಾವುದೇ ಇಂಟರ್‌ನೆಟ್‌ ಶೋಧಕ ಬಳಸಿ ಇಲ್ಲಿರುವ ಮಾಹಿತಿ ಪಡೆಯಲು ಆಗದು. ಕನ್ನಡದ ಸಾಹಿತಿಗಳ ವಿಳಾಸ, ಅವರ ದೂರವಾಣಿ ಸಂಖ್ಯೆಗಳನ್ನು ಈ ವೆಬ್‌­ಸೈಟ್‌ನಲ್ಲಿ ನೀಡಲಾಗಿದೆ. ಆದರೆ ಈ ಮಾಹಿತಿ ಪಿಡಿಎಫ್‌ನಲ್ಲಿರುವ ಕಾರಣ, ಗೂಗಲ್‌ ಮೂಲಕ ಹುಡುಕುವುದು ಅಸಾಧ್ಯ.

ಕರ್ನಾಟಕ ಜಾನಪದ ಅಕಾಡೆಮಿ: ವೆಬ್‌ಸೈಟ್‌­ನಲ್ಲಿರುವ ಮಾಹಿತಿ ಪ್ರಕಾರ ಜಗದೀಶ ಶೆಟ್ಟರ್‌ ಅವರು ರಾಜ್ಯದ ಇಂದಿನ ಮುಖ್ಯಮಂತ್ರಿ, ಗೋವಿಂದ ಕಾರಜೋಳ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ, ಬಾನಂದೂರು ಕೆಂಪಯ್ಯ ಅವರು ಅಕಾಡೆಮಿಯ ಅಧ್ಯಕ್ಷರು! (ಈಗಿನ ಅಧ್ಯಕ್ಷರು ಪಿಚ್ಚಳ್ಳಿ ಶ್ರೀನಿವಾಸ್) ಇಲ್ಲಿರುವ ಯಾವುದೇ ಮಾಹಿತಿ ಯೂನಿ­ಕೋಡ್‌ ಶಿಷ್ಟತೆಯಲ್ಲಿರದ ಕಾರಣ, ಗೂಗಲ್‌ ಮೂಲಕ ಯಾವುದನ್ನೂ ಹುಡುಕ­ಲಾಗದು.

ಕರ್ನಾಟಕ ಲಲಿತಕಲಾ ಅಕಾಡೆಮಿ: ವೆಬ್‌ಸೈಟ್‌­ನಲ್ಲಿರುವ ‘ಪರಿಚಯ’ ಪುಟದ ಮಾಹಿತಿ ಯೂನಿ ಕೋಡ್‌ ಶಿಷ್ಟತೆಯಲ್ಲಿದೆ. ಇನ್ನುಳಿದವು ಈ ಶಿಷ್ಟತೆ ಅನುಸರಿಸಿಲ್ಲ. ಅಕಾಡೆಮಿಯ ಚಟುವಟಿಕೆ­ಗಳು, ಅಧ್ಯಕ್ಷರ ಮಾತುಗಳನ್ನೆಲ್ಲ ಆಯಾ ಪುಟಕ್ಕೇ ಹೋಗಿ ಹುಡುಕಬೇಕು.ಲಲಿತಕಲಾ ಅಕಾಡೆಮಿ ವೆಬ್‌ಸೈಟ್‌ ಕೂಡ ಹೊಸ ಮಾಹಿತಿಗಳನ್ನು ತುಂಬಿಕೊಂಡಿಲ್ಲ. ಶೆಟ್ಟರ್‌ ಈಗಲೂ ಮುಖ್ಯಮಂತ್ರಿಯಾಗಿದ್ದಾರೆ, ಚಿ.ಸು. ಕೃಷ್ಣಸೆಟ್ಟಿ ಅಕಾಡೆಮಿಯ ಈಗಿನ ಅಧ್ಯಕ್ಷರು ಎಂದು ಹೇಳಲಾಗಿದೆ.

ಕರ್ನಾಟಕ ನಾಟಕ ಅಕಾಡೆಮಿ: ವೆಬ್‌ಸೈಟ್‌ನ ಪ್ರಮುಖ­ವಾದ ಕೆಲವು ಪುಟಗಳು (ಉದಾ­ಹರಣೆಗೆ: ಅಕಾಡೆಮಿಯ ಕಾರ್ಯಕ್ರಮಗಳು, ಕನ್ನಡ ರಂಗಭೂಮಿ ಕುರಿತ ಪುಟಗಳು) ಇನ್ನೂ ನಿರ್ಮಾಣದ ಹಂತದಲ್ಲಿವೆ. ಅಕಾಡೆಮಿಯ ಬೈಲಾ ಪುಟ ಯೂನಿ­ಕೋಡ್‌ನಲ್ಲಿ ಇಲ್ಲ. ಆದರೆ ಇತರ ಮಾಹಿತಿಯನ್ನು ಯೂನಿಕೋಡ್‌ ಶಿಷ್ಟತೆ­ಯಲ್ಲಿ ನೀಡಲಾಗಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ: ಅಕಾಡೆಮಿಯ ಯಾವುದೇ ಮಾಹಿತಿ ಯೂನಿಕೋಡ್‌ ಶಿಷ್ಟತೆ­ಯಲ್ಲಿಲ್ಲ. ಅಲ್ಲದೆ, ಇಲ್ಲಿರುವ ಮಾಹಿತಿ ಕೂಡ ಸರಿಯಿಲ್ಲ. ವೈಜಯಂತಿ ಕಾಶಿ ಅವರೇ ಇಂದಿಗೂ ಅಧ್ಯಕ್ಷರು (ಗಂಗಮ್ಮ ಕೇಶವಮೂರ್ತಿ ಈಗಿನ ಅಧ್ಯಕ್ಷರು), ಶೆಟ್ಟರ್‌ ಅವರು ಮುಖ್ಯಮಂತ್ರಿ ಎಂದು ವೆಬ್‌ಸೈಟ್‌ ಹೇಳುತ್ತಿದೆ.

ಕನ್ನಡ ಪುಸ್ತಕ ಪ್ರಾಧಿಕಾರ: ಪ್ರಾಧಿಕಾರದ ವೆಬ್‌ಸೈಟ್‌ನ ಪ್ರಮುಖ ಪುಟಗಳೆಲ್ಲ ಯೂನಿಕೋಡ್‌ ಶಿಷ್ಟತೆಯಲ್ಲಿವೆ. ಆದರೆ ಪ್ರಾಧಿಕಾರದ ಪ್ರಕಟಣೆಗಳ ಮಾಹಿತಿ ಇರುವ ಪುಟ ಮಾತ್ರ ಯೂನಿ­ಕೋಡ್‌ನಲ್ಲಿಲ್ಲ. ಹಾಗಾಗಿ ಪುಸ್ತಕ ಪ್ರೇಮಿಗಳು ಈ ಪುಟದ ಮಾಹಿತಿಯನ್ನು ಗೂಗಲ್‌ ಸಹಾಯ ಬಳಸಿ ಹೆಕ್ಕಿಕೊಳ್ಳಲು ಸಾಧ್ಯವಿಲ್ಲ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: ವೆಬ್‌ಸೈಟ್‌ನಲ್ಲಿ ಇಂಗ್ಲಿಷ್‌, ಕನ್ನಡ ಮತ್ತು ಕೊಂಕಣಿ­ಯಲ್ಲಿ ಮಾಹಿತಿ ನೀಡಲಾಗಿದೆ. ಕನ್ನಡ ವಿಭಾಗ­ದಲ್ಲಿರುವ ಕೊಂಡಿಗಳು ಯೂನಿಕೋಡ್‌­ನಲ್ಲಿವೆ. ವಿವಿಧ ಪುಟಗಳ ಮಾಹಿತಿಯಲ್ಲಿ ಕೆಲವು ಯೂನಿ­ಕೋಡ್‌ನಲ್ಲಿ, ಇನ್ನುಳಿದವು ಬೇರೆ ಶಿಷ್ಟತೆಯಲ್ಲಿ ಇವೆ. ಕೊಂಕಣಿ ವಿಭಾಗದಲ್ಲಿ ಮಾಹಿತಿ ಪರಿಪೂರ್ಣ­ವಾಗಿಲ್ಲ. ಪ್ರಕಟಣೆಗಳನ್ನು ಚಿತ್ರಗಳ  ಮಾದರಿಯಲ್ಲಿ ನೀಡಿರುವ ಕಾರಣ, ಅವುಗಳನ್ನು ಆ ಪುಟಕ್ಕೇ ಹೋಗಿ ಹುಡುಕಬೇಕಿರುವುದು ಅನಿವಾರ್ಯವಾಗಿದೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್‌ಗಳೆರಡರಲ್ಲೂ ಓದಿಕೊಳ್ಳಬಹುದು. ಕನ್ನಡದಲ್ಲಿರುವ ಮಾಹಿತಿಯನ್ನು ಯೂನಿಕೋಡ್‌ ಶಿಷ್ಟತೆಯಲ್ಲೇ ನೀಡಲಾಗಿದೆ. ಅಲ್ಲದೆ, ಅಕಾಡೆಮಿಯ ವಿವಿಧ ಪ್ರಕಟಣೆಗಳನ್ನೂ ಇದೇ ಶಿಷ್ಟತೆಯಲ್ಲಿ ನೀಡಿರುವ ಕಾರಣ, ಗೂಗಲ್‌ ಮೂಲಕ ಹುಡುಕಲು ಸಾಧ್ಯ.

ಆದರೆ ಈ ಅಕಾಡೆಮಿಯಲ್ಲಿರುವ ಮಾಹಿತಿ ಪರಿಪೂರ್ಣವಾಗಿಲ್ಲ. ರಹೀಂ ಉಚ್ಚಿಲ ಅವರೇ ಇನ್ನೂ ಅಧ್ಯಕ್ಷರಾಗಿದ್ದಾರೆ ಎಂದು ಇದರಲ್ಲಿ ಹೇಳಲಾಗಿದೆ. ಇನ್ನುಳಿದಂತೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗಳ ವೆಬ್‌ಸೈಟ್‌ ಹುಡುಕಿಕೊಡಲು ಗೂಗಲ್‌ಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT