ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜ ಅಜ್ಜಿ ನೆನಪು

Last Updated 29 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮಾಸದ ಅಜ್ಜಿಯ ಪ್ರೀತಿ
ಸುಮಾರು ಐದು ದಶಕಗಳ ಹಿಂದಿನ ಪ್ರಸಂಗ. ನಾನಾಗ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಆಗೆಲ್ಲಾ ಈಗಿನಂತೆ ಹೆಚ್ಚು ಶಾಲೆಗಳಾಗಲೀ, ವಾಹನ ಸೌಕರ್ಯವಾಗಲೀ, ದೂರವಾಣಿ ಸಂಪರ್ಕವಾಗಲೀ ಇರಲಿಲ್ಲ. ನಟರಾಜ ಸರ್ವೀಸೇ ಬಹುತೇಕರ ಪಾಲಿಗಿದ್ದದ್ದು. ಅದರಂತೆ ನಮ್ಮ ಶಾಲೆಗೂ ಮನೆಗೂ ಸುಮಾರು ಎರಡು ಕಿಲೋಮೀಟರ್‌ ನಡೆದೇ ಹೋಗುತ್ತಿದ್ದೆವು. ಬೆಳಿಗ್ಗೆ ಶಾಲೆಗೆ ಹೊರಡುವಾಗಲೇ ಮಧ್ಯಾಹ್ನದ ಬುತ್ತಿಯನ್ನು ತೆಗೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು.

ಒಂದು ದಿನ ಬೆಳಗಿನ ತಿಂಡಿಯಾದ ನಂತರ ಶಾಲೆಗೆ ಹೊರಡುವವರೆಗೂ ಹೊರಗೆ ಆಟವಾಡುತ್ತಿದ್ದೆ. ನಂತರ ಅವಸರದಿಂದ ಚೀಲಕ್ಕೆ ಪುಸ್ತಕಗಳನ್ನು ಸೇರಿಸಿದೆ. ಊಟದ ಡಬ್ಬಿಗಾಗಿ ಅಡುಗೆ ಮನೆಗೆ ನುಗ್ಗಿದೆ. ಅಮ್ಮ, ‘ಆಹಾ! ಈಗ ಬಂದೆಯಾ, ಗಂಡುಬೀರಿಯಂತೆ ಮೂರು ಹೊತ್ತು ಬೀದಿಯಲ್ಲೇ ಇರುತ್ತೀಯಾ, ಸ್ವಲ್ಪ ನನಗೆ ಚಿಕ್ಕಪುಟ್ಟ ಸಹಾಯ ಮಾಡಬಾರದೇ’ ಎಂದು ಮುಖಕ್ಕೆ ಮಂಗಳಾರತಿ ಮಾಡಿದರು.

‘ಇವತ್ತು ಸ್ವಲ್ಪ ಏಳುವುದು ತಡವಾಯ್ತು. ಅನ್ನ, ಸಾರು ಆರಲಿಕ್ಕೆ ಇಟ್ಟಿದ್ದೇನೆ. ತಣ್ಣಗಾಗಿರಬಹುದು. ಅಲ್ಲೇ ಮೊಸರಿನ ಪಾತ್ರೆಯಿದೆ. ಕಲೆಸಿ ಡಬ್ಬಿಗೆ ಹಾಕಿಕೋ’ ಎಂದರು. ಅಷ್ಟರಲ್ಲಿ ನನ್ನ ಗೆಳತಿಯರು ಹೊತ್ತಾಯಿತೆಂದು ಅವಸರ ಮಾಡಿದರು. ಅಮ್ಮ ಬೈದು ಕೆಲಸ ಹೇಳಿದರೆಂದು ಸಿಟ್ಟಿನಿಂದ ಡಬ್ಬಿಯನ್ನು ತುಂಬಿಕೊಳ್ಳದೆ ಪುಸ್ತಕದ ಚೀಲವನ್ನಷ್ಟೇ ಹೆಗಲಿಗೇರಿಸಿ ಶಾಲೆಗೆ ಹೊರಟುಹೋದೆ. 

ಮಧ್ಯಾಹ್ನದ ಊಟದ ವೇಳೆಯಲ್ಲಿ ಗೆಳತಿಯರೆಲ್ಲಾ ತಮ್ಮ ಡಬ್ಬಿಗಳೊಡನೆ ಹೊರನಡೆದರು. ನನಗೆ ಹೊಟ್ಟೆ ತಾಳಹಾಕುತ್ತಿತ್ತು. ಏಕಾದರೂ ಸಿಟ್ಟು ಮಾಡಿಕೊಂಡೇನೋ ಎಂದು ಪಶ್ವಾತ್ತಾಪವಾಗತೊಡಗಿತು. ಸಾಯಂಕಾಲದವರೆಗೆ ಖಾಲಿ ಹೊಟ್ಟೆಯಲ್ಲೇ ಇದ್ದು ಅಷ್ಟು ದೂರ ನಡೆಯಬೇಕಲ್ಲಾ ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಯಾರೋ ನನ್ನ ಭುಜ ಮುಟ್ಟಿದರು. ಅಚ್ಚರಿಯಿಂದ ನೋಡಿದೆ. ನಮ್ಮ ಅಜ್ಜಿ! ‘ಇವರು ಹೇಗೆ ಬಂದರು?’ ಉತ್ತರ ಅಜ್ಜಿಯಿಂದಲೇ ಬಂತು.

‘ನಾನು ಆಗಲೇ ಬಂದೆ. ಟೀಚರಮ್ಮನನ್ನು ಕೇಳಿದರೆ ಅವರು ನಿನ್ನನ್ನು ಬೈಯಬಹುದೆಂದು ಆ ಮರದ ಕೆಳಗೆ ಕಾಯುತ್ತಿದ್ದೆ. ನಿನ್ನನ್ನು ನೋಡಿ ಇಲ್ಲಿಗೆ ಬಂದೆ’ ಎಂದರು. ತೊಂಬತ್ತರ ಆಸುಪಾಸಿನ ನಮ್ಮಜ್ಜಿ ಬಾಗಿದ ಶರೀರ ಹೊತ್ತು ಊಟದ ಡಬ್ಬಿ ಹಿಡಿದು ಎರಡು ಕಿಲೋಮೀಟರ್‌ ನಡೆದು ನನಗೋಸ್ಕರ ಬಂದಿದ್ದರು. ನನ್ನ ವರ್ತನೆಯ ಬಗ್ಗೆ ನನಗೇ ನಾಚಿಕೆಯಾಗಿ ಅಳು ಬಂತು. ಅಜ್ಜಿಯನ್ನು ತಬ್ಬಿ ಅತ್ತುಬಿಟ್ಟೆ.

ಅಜ್ಜಿ ನನ್ನನ್ನು ಸಂತೈಸಿ ‘ಅಮ್ಮ ಹೇಳಿದ್ದರಲ್ಲಿ ಏನು ತಪ್ಪಿದೆ. ಅವಳೇನು ಅಡುಗೆ ಮಾಡು ಎಂದಳೇ? ಡಬ್ಬಿಗೆ ಹಾಕಿಕೋ ಅಂದಿದ್ದಕ್ಕೆ ಸಿಟ್ಟು ಮಾಡೋದೇ? ನನಗಂತೂ ನೀನು ಉಪವಾಸ ಇರೋದು ಕಂಡು ಗಂಟಲಲ್ಲಿ ತುತ್ತೇ ಇಳೀಲಿಲ್ಲ’ ಎಂದು ನನ್ನ ಕೈಹಿಡಿದು ಮರದ ಕೆಳಕ್ಕೆ ಕರೆದುಕೊಂಡು ಹೋದರು. ಇಬ್ಬರೂ ಊಟ ಮಾಡಿದೆವು. ಅಂದು ಅಜ್ಜಿ ತೋರಿದ ಪ್ರೀತಿ, ಜೊತೆಗೆ ಅವರು ನನ್ನನ್ನು ತಿದ್ದಿದ ರೀತಿ ಚಿರಸ್ಮರಣೀಯ.
ಬಿ.ಆರ್‌. ನಾಗರತ್ನ, ಮೈಸೂರು

ಅಜ್ಜಿಯ ಪ್ರೀತಿ ಕೆನೆಪದರ
ನನ್ನಜ್ಜಿ ಅಷ್ಟೇನು ನಯ ನಾಜೂಕಿನಿಂದ ಮಾತನಾಡು ವುದಿಲ್ಲ. ಆದರೆ ಆಕೆ ಆಡುವ ಪ್ರತಿ ಮಾತಿನಲ್ಲೂ ಕಕ್ಕುಲಾತಿ ಇರುತ್ತದೆ. ನನ್ನಜ್ಜಿಗೆ ಅಲಾರಮ್ ಇಡಲು ಬರುವುದಿಲ್ಲ. ಆದರೆ ಪ್ರತಿದಿನ ಸೂರ್ಯ ಹುಟ್ಟುವ ಮೊದಲೇ ಅವಳು ಅಂಗಳ ಗುಡಿಸಿರುತ್ತಾಳೆ. ನನ್ನಜ್ಜಿಗೆ ಮಾರ್ಕ್ಸುಗಳೆಲ್ಲ ಅರ್ಥವಾಗುವುದಿಲ್ಲ, ಆದರೆ ನನ್ನ ಪರೀಕ್ಷೆಯ ದಿನ ದೇವರಿಗೆ ಎರಡು ಹೂ ಹೆಚ್ಚಿಗೆ ಏರಿಸುತ್ತಾಳೆ, ಒಂದೈದು ನಿಮಿಷ ಹೆಚ್ಚು ಪ್ರಾರ್ಥಿಸುತ್ತಾಳೆ.  ನನ್ನಜ್ಜಿ ಯಾವ ಆರ್ಟ್ ಕ್ಲಾಸಿಗೂ ಹೋಗಲಿಲ್ಲ ಆದರೆ ಅವಳು ಹೊಲಿದ ಕೌದಿಗಳೆಲ್ಲ ಮಾಸ್ಟರ್ ಪೀಸ್‌ಗಳೆ.

  ನನ್ನಜ್ಜಿ ಒಂದು ಪುಸ್ತಕವೂ ಓದಲಿಲ್ಲ ಆದರೆ ಅವಳು ಹೇಳಿ ಕೊಡುವ ಜೀವನ ಪಾಠಗಳು ಯಾವ ಪುಸ್ತಕದಲ್ಲೂ ಸಿಗುವುದಿಲ್ಲ. ನನ್ನಜ್ಜಿಗೆ ಕ್ಯಾಲೆಂಡರ್ ಅರ್ಥವಾಗುದಿಲ್ಲ ಆದರೆ ಇಷ್ಟು ವರ್ಷಗಳಲ್ಲಿ ಅವಳೆಂದೂ ನನ್ನ ಹುಟ್ಟು ಹಬ್ಬ ಮರೆತಿಲ್ಲ.  ಅಮ್ಮನ ಪ್ರೀತಿ ಹಾಲಾದರೆ ಅಜ್ಜಿಯ ಪ್ರೀತಿ ಕೆನೆಪದರ. ಅಮ್ಮ ಬೆಳಿಗ್ಗೆ ಮುತ್ತಿಕ್ಕಿ ಎಬ್ಬಿಸುವ ಎಳೆಬಿಸಿಲು, ಅಜ್ಜಿ ರಾತ್ರಿ ಮೈನೇವರಿಸಿ ಮಲಗಿಸುವ ಬೆಳದಿಂಗಳು.ಅಮ್ಮ ಬಾಗಿದ ಮರ, ಅಜ್ಜಿ ಕೈಗೇ ಎಟಕುವ ಬಳ್ಳಿ.
-ಅನಿಲ್ ಎಂ ಚಟ್ನಳ್ಳಿ, ದಾವಣಗೆರೆ.

ಅಜ್ಜಿಯ ‘ಬಂಡಾಯ’
ಅಮ್ಮನದು ಏನೂ ನಡೀತಿರಲಿಲ್ಲ. ಅಂದು ಯಾಕೋ ನಮ್ಮಜ್ಜಿ ಬಹಳ ನಿಷ್ಠುರವಾಗಿ ಮಾತಾಡಿದ್ರು. ಯಾವಾಗಲೂ ಸಹನೆಯಿಂದ ಉತ್ತರಿಸುತ್ತಿದ್ದವರು ಅಂದು ‘ಯಾವ ಕಾರಣಕ್ಕೂ ಟಿಸಿಹೆಚ್‌ ಮಾಡೋದ್ನ ಬಿಟ್ಟುಬರುವಾಂಗಿಲ್ಲ. ಸಿದ್ಧಗಂಗಾ ಮಠದಾಗ್‌ ಓದೋ ಪುಣ್ಯ ಮತ್ತ ಸಿಗ್‌ತ್ತದೇನು? ಕಲಿತು ನಾಲ್ಕು ಮಕ್ಕಳಿಗೆ ಕಲಿಸ್ರಿ. ಓದ್ದಿದ್ರಾ ನಮ್ಮಾಂಗ್‌ ಮನ್ಯಾಗ್‌ ಮುಸ್ರಿ ತಿಕ್ಕೋಂಡ್‌ ಇರ್‌ಬೇಕಾಗ್‌ತ್ತೈತಿ. ಏನೂ ದೂಸ್ರಾ ಮಾತಾಡ್ದಾಂಗ ಕಾಲೇಜ್‌ಗೆ ನಡಿ’ ಎಂದೇಬಿಟ್ಟರು.

1999–2000ರಲ್ಲಿ ನನಗೆ ಟಿಸಿಹೆಚ್‌ ಸಿದ್ಧಗಂಗಾ ಮಠದ ಎಸ್‌ಬಿಟಿಟಿಐನಲ್ಲಿ ಸಿಕ್ಕಾಗ, ಅಜ್ಜಿನೇ ಮನೆಯವರನ್ನೆಲ್ಲಾ ಒಪ್ಪಿಸಿ ಓದಲು ಕಳಿಸಿದ್ರು. ನನಗೆ ಅಜ್ಜಿನೇ ಸರ್ವಸ್ವ. ಅಜ್ಜಿನ ಬಿಟ್‌ ಇರೋಕ್ಕಾಗದೆ, ಓದು ನಿಲ್ಲಿಸಿ ಮನೆಗೆ ಮರಳುವ ತೀರ್ಮಾನ ಮಾಡಿ, ಅಜ್ಜಿಗೆ ವಿಷಯ ತಿಳಿಸಿದೆ.

ನಮ್ಮಜ್ಜಿ ‘ಓದೇ ಮನೀಗೆ ಬರಬೇಕು’ ಅಂತ ನಿಷ್ಠುರವಾಗಿ ಹೇಳಿದ್ರು. ಬೇರೇ ದಾರಿ ಕಾಣದೇ ಓದಲು ವಾಪಾಸದೆ. ಕಾಲೇಜಿನಲ್ಲಿ ಒಳ್ಳೆ ವಿದ್ಯಾರ್ಥಿನಿಯೂ ಆಗಿದ್ದೆ. ಅಲ್ಲಿನ ವಾತಾವರಣ ನನ್ನಲ್ಲಿನ ಅಂತರಂಗವನ್ನೇ ಬದಲಿಸಿತು. ನನ್ನ ಕಲಿಕೆ ನಮ್ಮಜ್ಜಿಗೆ ಬಲು ಖುಷಿ ತಂದಿತ್ತು. ‘ದುಡಿದು ತಿನ್‌ ಬೇಕವ್ವ. ಕುಂತು ತಿನ್ನಬಾರದವ್ವ. ನಾಲ್ಕು ಜನರಿಗೆ ಒಳ್ಳೇದ್‌ ಮಾಡಬೇಕು’ ಅಂತ ನಮ್ಮಜ್ಜಿ ಯಾವಾಗಲೂ ಹೇಳ್ತಿದ್ರು.

ಅದರಂತೆ ವಿದ್ಯೆ, ಕಾಯಕದ ಮಹತ್ವ ಅರಿತಿದ್ದ ಅಜ್ಜಿಯ ಮಾತಿನಂತೆ ಓದಿ ಕೆಲಸಕ್ಕೋಗುವಷ್ಟರಲ್ಲಿ ಅಜ್ಜಿ ದೈವಾಧೀನರಾದರು. ನಮ್ಮ ವ್ಯಾಪಾರಸ್ಥ ವಂಶದಿಂದ ನಾನೇ ಮೊದಲು ಸರ್ಕಾರಿ ಕೆಲಸ ಸೇರಿದ್ದು ಅನ್ನೋದರಲ್ಲಿ ಅಜ್ಜಿಯ ಪಾತ್ರವೇ ಹೆಚ್ಚು. ದೆಹಲಿ ಪ್ರವಾಸಕ್ಕೂ ನಮ್ಮಜ್ಜಿ ನನ್ನ ಕಳಿಸಿದ್ರು ಅಂದುಕೊಳ್ಳುವಾಗ ಅಜ್ಜಿ ತುಂಬಾ ಗ್ರೇಟ್‌ ಅನಿಸುತ್ತೆ.

ಅಕ್ಷರ ಗುರ್ತಿಸಲೂ ಬರದ ಅಜ್ಜಿ ಸಂಜೆ ದೀಪ ಹಚ್ಚಿ, ಓದಿಸ್ತಿದ್ದ ಸಿಂಡ್ರೆಲಾ ಪಾಠ, ಧರಣಿ ಮಂಡಲ ಮಧ್ಯದೊಳಗೆ ಪದ್ಯಕ್ಕೆ ಭಾವಾರ್ಥ ಹೇಳುತ್ತಿದ್ದ ಪರಿ ಯಾವ ಕಲಿತ ಗುರುವಿಗೂ ಕಡಿಮೆ ಇರುತ್ತಿರಲಿಲ್ಲ. ಯಾವಾಗಲೂ ಮುದ್ದು ಮಾಡೋ ಅಜ್ಜಿ, ನಿಷ್ಠುರಳಾದಾಗ ನನ್ನ ಬದುಕಿನ ದಿಕ್ಕು ಬದಲಾಯಿತು.

ಈಗ ನಾನು ಶಿಕ್ಷಕಿಯಾಗಿ ಹಲವು ಬಡ, ಹಿಂದುಳಿದ ಮಕ್ಕಳಿಗೆ ಕಲಿಸುವಾಗ ಅಜ್ಜಿಯ ಹಟ ಸಾರ್ಥಕವಾಯಿತು ಎನ್ನಿಸುತ್ತದೆ. ಹೆಣ್ಣು–ಗಂಡು ಇಬ್ಬರೂ ದುಡಿದೇ ತಿನ್ನಬೇಕು ಎಂಬ ಬಸವಣ್ಣನವರ ಆರ್ಥಿಕ ನೀತಿ ಅಜ್ಜಿಯಿಂದ ನನಗೆ ಮನವರಿಕೆಯಾಯಿತು ಎನ್ನುವ ಸಾರ್ಥಕತೆ ನನಗುಂಟಾಯಿತು.
ಕಂದಿಕೆರೆ ಜ್ಯೋತಿ. ಬಿ.ಪಿ., ಚಿಕ್ಕನಾಯಕನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT