ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಮುಖದ ಓದು ಅರ್ಥವತ್ತಾಗಿ ನಡೆಯಲಿ

Last Updated 27 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ದಿವಂಗತ ಯು.ಆರ್. ಅನಂತಮೂರ್ತಿ­ಯವರು 1957–1958ರಲ್ಲಿ ಶಿವಮೊ­ಗ್ಗದ ಇಂಟರ್‌ಮೀಡಿಯೇಟ್‌ ಕಾಲೇಜಿನಲ್ಲಿ ನನಗೆ ಇಂಗ್ಲಿಷ್‌ ಅಧ್ಯಾಪಕರಾಗಿದ್ದರು. ಅವರು ‘ಶಿವಾಜಿ’, ‘ನೆಕ್‌್ಸ್ಟ ಸಂಡೆ’, ‘ದಿ ಟೆಂಪೆಸ್‌್ಟ’ ಇಂಗ್ಲಿಷ್‌ ಪಾಠ ಬೋಧಿಸುತ್ತಿದ್ದರು. ಅವರು  ಬೋಧಿಸುವ ಶೈಲಿ ಹೇಗಿತ್ತೆಂದರೆ ಶಬ್ದಾರ್ಥಗಳು ಅವರ ಧ್ವನಿಯಲ್ಲೇ ಮೂಡಿಬರುತ್ತಿದ್ದುವು. ಶಿವಾಜಿಯೇ ನನ್ನ ಕಣ್ಣು ಮುಂದೆ ಬರುತ್ತಿದ್ದ. ಏರಿಯಲ್‌ ಶನಿ ಮತ್ತು ಕ್ಯಾಲಿಬಾನ್‌ ಬಿರು­ಗಾಳಿಗೆ ಸಿಕ್ಕಿ, ಸಮುದ್ರದಂಡೆಯಲ್ಲಿ  ಒಂದೇ ಚೀಲದಲ್ಲಿ ಇಬ್ಬರೂ ಹೊಕ್ಕು ರಾತ್ರಿ ಕಳೆಯುವ ಚಿತ್ರಣ ನನ್ನನ್ನು ಬೆರಗುಗೊಳಿಸಿತ್ತು.

ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ಅನಂತ­ಮೂರ್ತಿಯವರ ಇಂಗ್ಲಿಷ್‌ ಪಾಠ ಬೋಧನೆ ಅಷ್ಟೊಂದು ಪ್ರಚೋದನಕಾರಿಯಾಗಿ ಮನಸ್ಸಿ­ನಲ್ಲಿ ಉಳಿಯುತ್ತಿತ್ತು. ನನ್ನಂತೆ ಹೀಗೆ ಅನೇಕ ಶಿಷ್ಯರು ಅವರ ಪ್ರಭಾವಕ್ಕೆ ಒಳಗಾದವರಿದ್ದಾರೆ.
–ಟಿ.ಎಲ್‌. ಸುಬ್ರಹ್ಮಣ್ಯ ಅಡಿಗ, ಅರಳಿಸುರಳಿ, ತೀರ್ಥಹಳ್ಳಿ

ಪ್ರಖರ ಚಿಂತಕ

ಅನಂತಮೂರ್ತಿ ನನ್ನನ್ನು ಬಹುವಾಗಿ ಕಾಡಿದ ಸಾಹಿತಿ. ನಾನು ಮೂಲತಃ ಹಿಂದೂಪರವಾದ ಬರಹಗಳನ್ನು ಓದುವವನು, ಇಷ್ಟಪಡುವವನು. ಆದರೂ ಮೂರ್ತಿಯವರ ಕಾದಂಬರಿ ಗಳನ್ನು, ಲೇಖನಗಳನ್ನು ಓದಿ ಇದೂ ಸಹ ಸತ್ಯವಲ್ಲವೇ? ಎಂದೆನಿಸದೇ ಇರಲಿಲ್ಲ. ‘ಸಂಸ್ಕಾರ, ‘ಅವಸ್ಥೆ’, ‘ಭಾರತೀ­ಪುರ’, ‘ಭವ’, ಕಾದಂಬರಿಗಳನ್ನು ಓದಿ ಮೂರ್ತಿ­ಯವರ ಅಗಾಧ ಪ್ರತಿಭೆಗೆ ಮೌನವಾಗಿ ಬೆರಗಾದವನು. ಅವರು ಮಂಡಿಸುವ ವಿಷಯ–ವಸ್ತುಗಳ ಪರಿಯನ್ನು ಕಂಡು ನಾನು ನಂಬಿರುವು­ದರಲ್ಲಿ ಲೋಪವಿದೆಯಾ? ಎಂಬಂತಹ ಚಿಂತನೆಗೆ ಹಚ್ಚಿದವರು ಅವರು. ಆದರೆ ಅವರ ಬಗ್ಗೆ ಇದ್ದ ಅಸಹನೆ ಎಂದರೆ ಅವರು ಕೊನೆಯವರೆಗೂ ಹಿಂದೂ­ಧರ್ಮದ, ನಾಯಕರ ವಿರುದ್ಧವಾಗಿ ಮಾತ­ನಾಡಿದ್ದು ಮತ್ತು ಇತರೆ ಧರ್ಮಗಳನ್ನು ಮತ್ತು ವಿದ್ಯಮಾನಗಳನ್ನು ಅಷ್ಟಾಗಿ ವಿಮರ್ಶಿ­ಸುವ ಗೋಜಿಗೆ ಹೋಗದಿದ್ದುದು. ಇದರಿಂದ ಅವರು ನನಗೆ ಬಹುಶಃ ಪರಿಪೂರ್ಣ ವ್ಯಕ್ತಿಯಾಗಿ ಕಾಣದಾದರು. ಆದರೂ ಬುದ್ಧಿ–ಮನಸ್ಸು­ಗಳನ್ನು ಚಿಂತನೆಗೊಳಪಡಿಸುತ್ತಿದ್ದ, ಜಾಗೃತ ಗೊಳಿ­ಸು­ತ್ತಿದ್ದ, ಕಹಿಸತ್ಯಗಳನ್ನು ನಿರ್ಭಯವಾಗಿ ಹೇಳಿ ಸಮಾ­ಜದ ಸ್ವಾಸ್ಥ್ಯವನ್ನು ಸಮತೋಲನ­ದಲ್ಲಿ­ಡು­ತ್ತಿದ್ದ ಪ್ರಖರ ಚಿಂತಕರೊಬ್ಬರ ಸಾವು ಬಹುದೊಡ್ಡ ಅಗಲಿಕೆ ಎಂಬುದಂತೂ ಕಟುಸತ್ಯ.
–ರಾಘವೇಂದ್ರರಾವ್‌ ದೇಸಾಯಿ,ಕುರುಗೋಡು, ಬಳ್ಳಾರಿ ಜಿಲ್ಲೆ

ಅಪವಾದ ಮಾದರಿಯಾಗದಿರಲಿ!
ಅನಂತಮೂರ್ತಿಯವರು ವಿವಿಧ ಕಾಲಘಟ್ಟ­ಗ­ಳಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಕುರಿತು ತೆಗೆ­ದುಕೊಂಡ ಹಲವು ನಿಲುವುಗಳ ಬಗ್ಗೆ ನಮ್ಮಂತ­ಹ­ವರ ತಂಟೆ ತಕರಾರುಗಳು ಏನೇ ಇದ್ದರೂ ಅವರ ಸಾಹಿತ್ಯಕ ಕೊಡುಗೆ ಗೌರವಾರ್ಹವಾದುದು. ಹಾಗೆಯೇ ವರ್ಣರಂಜಿತ ವ್ಯಕ್ತಿತ್ವದ ಅನಂತ­ಮೂರ್ತಿ­ಯವರ ವೈಚಾರಿಕ ಪ್ರಜ್ಞೆ ಪ್ರಖರ­ವಾದುದು. ಮುಖ್ಯಮಂತ್ರಿಯವರು ಪ್ರಸ್ತಾಪಿಸಿ­ದಂತೆ ಅನಂತಮೂರ್ತಿಯವರು  ವಿಚಾರವಾದಿ, ಮೌಢ್ಯ ವಿರೋಧಿ ಹಾಗೂ ಜಾತಿವ್ಯವಸ್ಥೆ ಧಿಕ್ಕರಿಸಿದ ಸಮಾಜವಾದಿ ಹಿನ್ನೆಲೆಯ ಸಾಹಿತಿ. ಇಂತಹ ವಿಶಿಷ್ಟ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಮಾಧ್ವ ಬ್ರಾಹ್ಮಣ ಪದ್ಧತಿಗನುಗುಣವಾಗಿ ನೆರ­ವೇರಿಸಿದ್ದು ದುರಂತ! ದೃಶ್ಯ ಮಾಧ್ಯಮಗಳಲ್ಲಿ ನೇರ ಪ್ರಸಾರಗೊಂಡ ಈ ವೈದಿಕಶಾಹಿ ಆಚರ­ಣೆ­ಯಲ್ಲಿ ಸರ್ಕಾರವೇ ಅಧಿಕೃತವಾಗಿ ಪಾಲ್ಗೊಳ್ಳುವ ಮೂಲಕ ಜನತೆಗೆ ನೀಡಿದ ಸಂದೇಶವೇನು?

ಅಪೌಷ್ಟಿಕತೆಯಿಂದ ನರಳುತ್ತಿರುವ ಈ ನೆಲದಲ್ಲಿ ಅಂತಿಮ ವಿಧಿಗಾಗಿ ಕೆ.ಜಿ. ಗಟ್ಟಲೆ ತುಪ್ಪ ಇತ್ಯಾದಿ ಆಹಾರ ಪದಾರ್ಥ ಬೆಂಕಿಗೆ ಸುರಿದಿದ್ದು, ಯಾವ ಧರ್ಮದ ಆಚರಣೆಗಳ ವಿರುದ್ಧ  ಅನಂತ­ಮೂರ್ತಿ ದನಿ ಎತ್ತಿದ್ದರೋ ಅದರ ಪರಿಧಿಯಲ್ಲೇ ಅವರನ್ನು ಬಂಧಿಸಿದ್ದು ದುರಂತವೇ ಸರಿ. ಇಂತಹ ವಿಷಯದಲ್ಲಿ ಅನಂತಮೂರ್ತಿಯಂತಹವರನ್ನು ಕೇವಲ ಅವರ ಕುಟುಂಬಕ್ಕೆ ಸೇರಿದ ಖಾಸಗಿ ವ್ಯಕ್ತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ.

ಈ ಬಗ್ಗೆ ಚರ್ಚೆ ಪರಾಕಾಷ್ಠೆ ಮುಟ್ಟಿದೆ. ಈಗ­ಲಾದರೂ ಅಂತ್ಯ ಸಂಸ್ಕಾರ ಕುರಿತ ಅಂತಿಮ ನಿರ್ಧಾ­ರವನ್ನು ಸ್ವತಃ ಅನಂತಮೂರ್ತಿಯವರೇ ತೆಗೆದುಕೊಂಡಿದ್ದರೇ, ಕುಟುಂಬದವರು ತೆಗೆದು­ಕೊಂಡರೇ ಅಥವಾ ಇದು ಸರ್ಕಾರದ ತೀರ್ಮಾ­ನವೇ ಎಂಬುದು ಸ್ಪಷ್ಟವಾಗಬೇಕಿದೆ. ಇಲ್ಲದಿದ್ದರೆ ಸಂದರ್ಭವನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳುವ ಅಪಾಯ­ವಿದೆ.   

ಸಂಬಂಧಿಕರ, ಹಿತೈಷಿಗಳ ಇಂತಹ ವಿಪರ್ಯಾ­ಸದ ನಡೆಗೆ ತುತ್ತಾದವರಲ್ಲಿ ಅನಂತಮೂರ್ತಿ­ಯವರು ಮೊದಲಿಗರೇನಲ್ಲ. ಪಿ.ಲಂಕೇಶ್‌ ಅಂತ್ಯ ಸಂಸ್ಕಾರದ ವೇಳೆ ಅವರ ಕುಟುಂಬದ ಹಿತೈಷಿ­ಗಳು ಲಿಂಗಾಯತ ಸ್ವಾಮಿಯೊಬ್ಬರನ್ನು ಕರೆ­ತಂದು ಸಾಂಪ್ರದಾಯಿಕ ಕ್ರಿಯೆ ನಡೆಸುತ್ತಿದ್ದಾಗ ಲಂಕೇಶ್‌ ಮಗಳು ಗೌರಿ, ‘ಅಪ್ಪನಿಗೆ ಇವೆಲ್ಲ ಇಷ್ಟವಾಗುತ್ತಿರಲಿಲ್ಲ’ ಎಂದು ಪ್ರತಿಭಟಿಸಿದ್ದನ್ನು ನಾನೇ ಕಂಡಿದ್ದೇನೆ. ಪ್ರೊ.ಎಂ.ಡಿ.­ನಂಜುಂಡ­ಸ್ವಾಮಿ­ಯವರು ಆರೋಗ್ಯ ಹದಗೆಟ್ಟು ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಕೊರಳಿಗೆ ತಾಯತ ಕಟ್ಟಿದ್ದ ವಿಪರ್ಯಾಸವೂ ನಮ್ಮ ಮುಂದಿದೆ. ಹಾಗೆಯೇ ಜಿ.ಎಸ್.ಶಿವರುದ್ರಪ್ಪ ಹಾಗೂ ಕುವೆಂಪು ಅವರ ಕುಟುಂಬದವರ ನಿರ್ಧಾರದ ಮಾದರಿಯೂ ಕಣ್ಣೆದುರಿಗಿದೆ.

ಇತ್ತೀಚಿನ ದಿನಗಳಲ್ಲಿ ಗಣ್ಯ ವ್ಯಕ್ತಿಗಳ ಅಂತ್ಯ­ಸಂಸ್ಕಾರ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ವೈದಿಕಶಾಹಿ ಸಂಸ್ಕಾರ ಪದ್ಧತಿಯ ವಿಜೃಂಭಣೆ ಸಾಮಾನ್ಯವಾಗಿಬಿಟ್ಟಿದೆ. ಶ್ರೀಕಂಠದತ್ತ ಒಡೆ­ಯರ್, ನಟ ವಿಷ್ಣುವರ್ಧನ್  ಅವರ ಅಂತ್ಯ­ಸಂಸ್ಕಾರಗಳೂ ಇದಕ್ಕೆ ನಿದರ್ಶನ. ಅಪವಾದಗಳೇ ವಿಜೃಂಭಣೆಗಳಿಗೆ, ಅನುಕರಣೆಗೆ ಮಾದರಿ­ಯಾ­ಗುವ ದುರಂತವಿದು. ಈ ಬಗ್ಗೆ ವಿಚಾರವಂತರು ಗಮನಹರಿಸಿ ತಮ್ಮ ನಂಬಿಕೆಗಳು ಹಾಗೂ ಅಂತಿಮ ಸಂಸ್ಕಾರ ಪದ್ಧತಿ ಕುರಿತಂತೆ ಖಚಿತ ನಿಲುವನ್ನು ಮೊದಲೇ ನಿರ್ಧರಿಸಿ ತಿಳಿಸಿರುವುದು ಉಚಿತವೆನಿಸುತ್ತದೆ.
-ಚಂದ್ರಕಾಂತ ವಡ್ಡು, ಮೈಸೂರು

ನಮ್ಮೊಳಗಿನ ಒಂದು ಮೂರ್ತಿ

‘ಅನಂತಮುಖದ ಅನಂತಮೂರ್ತಿ’ ಎಂದು ಒಂದಾ­ನೊಂದು ಕಾಲಕ್ಕೆ ತೀವ್ರವಾಗಿದ್ದ ಬಂಡಾಯ ಸಾಹಿತ್ಯ ಚಳವಳಿಯ ಲೇಖಕರು ಅನಂತ­ಮೂರ್ತಿಯವರನ್ನು ಗೇಲಿ ಮಾಡುತ್ತಿ­ದ್ದರು. ಆದರೆ ಭಾರತೀಯ ಮನೋಧರ್ಮದ ಒಂದು ಮೂಲಭೂತ ಲಕ್ಷಣ ಎಂದರೆ ಅಂತಿ­ಮ­ವಾಗಿ ಎಲ್ಲಾ ವೈರುಧ್ಯಗಳನ್ನೂ ಅದು ಹೊಟ್ಟೆಗೆ ಹಾಕಿಕೊಂಡು ಬಿಡುತ್ತದೆ. ಜೀವಂತವಾಗಿದ್ದಾಗ ನಿರಂತರ ವಿವಾದ ಮತ್ತು ಮಾಧ್ಯಮ ಪ್ರಚಾ­ರಗಳ ಜೊತೆಯೇ ಎದ್ದು ಕಾಣುತ್ತಿದ್ದ ಮೇಷ್ಟ್ರು ಈಗ ಕೀರ್ತಿಶೇಷರಾಗಿ ಆ ಎಲ್ಲಾ ವಿರೋಧಾ ಭಾಸಗಳಿಂದ ಪಾರಾದಂತೆ ಕಾಣುತ್ತಾರೆ.

ಎಪ್ಪತ್ತರ ದಶಕದಲ್ಲಿ ಅನಂತಮೂರ್ತಿಯವರ ‘ಪ್ರಜ್ಞೆ ಮತ್ತು ಪರಿಸರ’ದ ಉಜ್ವಲ ಆಧುನಿಕ ವೈಚಾರಿಕತೆ ಮತ್ತು ಅದನ್ನು ಹೇಳಲು ಅವರು ಕಟ್ಟಿಕೊಟ್ಟ  ಅಷ್ಟೇ ಆಧುನಿಕತೆಯುಳ್ಳ ಪರಿಭಾಷೆ­ಯಿಂದ ಎಲ್ಲಾ ಯುವಜನರ ಹಾಗೆ  ನಾನೂ ಗಾಢವಾಗಿ  ಪ್ರಭಾವಿತಳಾದವಳು. ಇವತ್ತಿಗೂ ಕನ್ನಡ ಸಾಹಿತ್ಯಕ್ಕೆ ನವ್ಯರೆಲ್ಲರೂ ಕೊಟ್ಟ ಅತ್ಯಂತ ಅಮೂಲ್ಯ ಕೊಡುಗೆ ಎಂದರೆ ಸೃಜನಶೀಲ ಆಂತರಿಕವಾದ ವಿಮರ್ಶನ ಸಾಕ್ಷಿ ಪ್ರಜ್ಞೆ ಎಂದೇ ನನ್ನ ಬಲವಾದ ನಂಬಿಕೆ.

ಅನಂತಮೂರ್ತಿಯವರ ಸಣ್ಣಕತೆಗಳಿಗೆ ಮತ್ತು ಅನಂತರ ಬಹುಬಗೆಯ ವಿವಾದ ಮತ್ತು ಕೀರ್ತಿ ಎರಡಕ್ಕೂ ಒಳಗಾದ ಅವರ ಕಾದಂಬರಿ­ಗಳು, ಅವರಷ್ಟೇ ಅಥವಾ ಅವರಿಗಿಂತಲೂ ಹೆಚ್ಚು ಉನ್ನತ ಬೌದ್ಧಿಕತೆಯಿದ್ದ ಶಾಂತಿನಾಥ ದೇಸಾಯಿ, ಪಿ.ಲಂಕೇಶ್‌ರಂತಹವರು ಬರೆದಂಥ ವಿಮರ್ಶೆ­ಗಳು, ಹಾಗೆಯೇ ಪ್ರತಿಚಿಂತನೆಯನ್ನು ಹುಟ್ಟು­ಹಾಕುತ್ತಿದ್ದ ಚಂದ್ರಶೇಖರ ಪಾಟೀಲರು ಮತ್ತು ಸೂಕ್ಷ್ಮ, ಗಂಭೀರ ಒಳನೋಟಗಳ ಎ.ಕೆ. ರಾಮಾ­ನುಜನ್  ಒದಗಿಸಿದ ಆಲೋಚನಾ ಮಾದರಿಗಳ  ಮೂಲಕವೇ ನಾವು  ಅದೆಷ್ಟೋ ಹೊಸ  ಉಮೇ­ದಿನ ಬರಹಗಾರರು ಒಳ್ಳೆಯ ಕೃತಿಯು ಉತ್ತಮ ಕೃತಿಯೂ ಆಗಬಹುದಾದ ಬಗೆಯನ್ನು ಬಗೆ­ಯಲು ಕಲಿತೆವು. ಹೀಗೆ ನಮ್ಮನ್ನು ಆಂತರಿಕವಾಗಿ ಮುನ್ನಡೆಸಿದವರಲ್ಲಿ ಅನಂತ ಮೂರ್ತಿಯವ­ರದು ಅವಿಸ್ಮರಣೀಯ ಪಾತ್ರ.

ನಾಡು–ನುಡಿಯ ಬಗ್ಗೆ, ಒಟ್ಟಾರೆ ಬದುಕಿನ ಮತ್ತು ಸಂಸ್ಕೃತಿಗಳ ಬಗ್ಗೆ, ರಾಜಕೀಯ ಆಗು­ಹೋಗು­ಗಳ ಬಗ್ಗೆ ಸದಾ ಜೀವಂತ ಸಮಕಾ­ಲೀನ­ತೆಯಲ್ಲಿ ಬದುಕಿದವರು ಅವರು. ಅಸಾಧ್ಯವಾದ ಜೀವನಪ್ರೀತಿಯಲ್ಲಿ  ಮೀಯುತ್ತಿದ್ದ ಜೀವ ಅವರದು.

ಈಗ ಒಟ್ಟಾರೆಯಾಗಿ  ನೋಡಿದಲ್ಲಿ ಅವರ ಕಥನ ಸಾಹಿತ್ಯದ ನೈಜನಾಯಕ ಎನ್ನುವ ಒಬ್ಬ­ನನ್ನು ಭಾವಿಸಬಹುದಾದರೆ (ಅದೇ ಸರಿ. ಏಕೆಂದರೆ ಅವರಲ್ಲಿ ನಿಜವಾದ ಅರ್ಥದ ಒಬ್ಬಳೂ ನಾಯಕಿ ಇಲ್ಲ.)  ಅವನು ಅನೇಕ ಪ್ರಗತಿಪರ ವಿಚಾರಗಳನ್ನು ತಲೆತುಂಬ ತುಂಬಿಕೊಂಡವನು, ಬದುಕಿನಲ್ಲಿ ಕ್ರಾಂತಿ ತರಲು ಕ್ರಿಯೆ­ಯಲ್ಲೂ ತೊಡ­ಗುವವನು. ಅವನ ತಾತ್ವಿಕ ನಂಬಿಕೆಗೂ ವೈಚಾ­ರಿಕತೆಗೂ ಆಘಾತ ಕೊಡುವಷ್ಟು ಬಲಿಷ್ಠ­ವಾಗಿ ವಾಸ್ತವವು  ಮೇಲೆರಗಿದಾಗ ಗೊಂದಲ, ತಾಕಲಾಟಗಳಲ್ಲಿ ಸಂದಿಗ್ಧತೆಗಳಲ್ಲಿ ತೊಳಲಾ­ಡುವ ಮತ್ತು ತನ್ನ ಈ ಮಿತಿಯ ಪ್ರಾಮಾಣಿಕ ಅರಿ­ವನ್ನೂ ಉಳ್ಳವನು. ಈ ವ್ಯಕ್ತಿತ್ವದ ಅನೇಕ ಲಕ್ಷಣಗಳನ್ನು ಅನಂತಮೂರ್ತಿ ತಮ್ಮದೇ ಜೀವನದ ಉದ್ದಕ್ಕೂ  ತೋರಿರುತ್ತಾರೆ. ಅದು ಅವರ ಜೀವನದ ಅರ್ಥಶೋಧನೆಯ ಹಲವು ವಿಧಾನಗಳಲ್ಲಿ ಮುಖ್ಯವಾದ ಒಂದು ವಿಧಾನವೂ ಆಗಿದ್ದಿತು. ಅವರು ಧರ್ಮ, ಧಾರ್ಮಿಕ ವಿಧಿ, ಬ್ರಾಹ್ಮಣ್ಯಗಳತ್ತ ತಮ್ಮ ಕೊನೆ­ಗಾಲದಲ್ಲಿ ಹೊರಳಿ­ದ್ದನ್ನಾಗಲೀ ಕಮಲಾದಾಸ್ ಅಂಥ ದಿಟ್ಟಲೇಖಕಿ ಕೊನೆಗಾಲಕ್ಕೆ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದನ್ನಾಗಲೀ ಸರಳೀಕರಿಸಿ ಅರ್ಥೈಸಲು ಬರುವುದಿಲ್ಲ.

ಕ್ರಾಂತಿಕಾರಕತೆ ಮತ್ತು ಜನಕ್ಕೆ ಮಾದರಿ­ಯಾಗ­ಬಲ್ಲ ಮಹಾನ್ ಬರಹಗಾರರೆಂದು ನೋಡು­ವು­ದಾದರೆ ಅನಂತಮೂರ್ತಿಯವರಂತೆ ಬಹು ಬಗೆಯ ಪದವಿ, ಪ್ರಶಸ್ತಿ, ಪುರಸ್ಕಾರ, ಅಧಿ­ಕಾ­ರ­ಪೀಠಗಳಿಗೆ ಏರಿರದ ಲಂಕೇಶರ ಸೃಜನಶೀಲ ಸಾಹಿತ್ಯಕ್ಕೆ ಹೀಗೆ ಸಾರಾಂಶ ಹೇಳುವುದೇ ಅಸಾಧ್ಯ. ಏಕೆಂದರೆ ಅತಿಯಾದ ಆತ್ಮರತಿ­ಯಿ­ದ್ದರೂ ತನ್ನನ್ನು ಕಂಡು ತಾನೇ ತಮಾಷೆ ಮಾಡಿ­ಕೊಳ್ಳಬಲ್ಲ ವಿಮ­ರ್ಶಕನ ಎಚ್ಚರ ಕೊನೆಯ­ವ­ರೆಗೂ ಅವರಲ್ಲಿತ್ತು ಎನ್ನುವುದನ್ನು ಲಂಕೇಶ್‌ ಅವರ ಕಥೆಗಳ ನಿತ್ಯ­ಜೀವಂತಿಕೆ ನಮಗೆ ಹೇಳ­ಬಲ್ಲದು. ಮಿಗಿಲಾಗಿ ಅವರು ಕೀರ್ತಿ, ಸ್ಥಾನ, ಪ್ರತಿ­ಷ್ಠೆ­ಗಳ ಬೆನ್ನುಹತ್ತಿ­ದವ­ರಲ್ಲ; ಅವುಗಳಿಗಾಗಿ ಸರ್ಕಾ­ರಗಳನ್ನು ಓಲೈಸಲಿಲ್ಲ. ಎಂದೇ ಅವರು ಎಂದಿಗೂ ವಿಶಿಷ್ಟರಾಗಿಯೇ ಉಳಿ­ದರು.

ಅದೇನೇ ಇದ್ದರೂ ಸದಾ ಜನರ ಕಣ್ಣೆದುರು ಹೊಳೆಯುತ್ತಲೇ ಇರು­ವ­ವರಾಗಿದ್ದ ಮೇಷ್ಟ್ರು ಅವರ ಅಂತರಾಳದ ಇಚ್ಛೆಯಂತೆಯೇ ಉಜ್ವಲ­ವಾದ ದೃಶ್ಯ ವೈಭವ­ದೊಂದಿಗೆ ಇಹದಿಂದ ನಿರ್ಗ­ಮಿಸಿದ್ದಾರೆ. ಖಂಡಿ­ತ­ವಾಗಿ ‘ಅನಂತ­ಮೂರ್ತಿ­ನಾಮ ಶರ್ಮಣಃ ಆತ್ಮ’­ವು ಸಂತೃಪ್ತಿ ಹೊಂದಿ­ರುತ್ತದೆ. ಒಂದೇ ಒಂದು ವ್ಯತ್ಯಾಸ ಎನ್ನುವು­ದಾ­ದರೆ ಅವರ ಅನಂತ ಮುಖದ ನಿಜವಾದ ಓದುವಿಕೆ ಹಾಗೂ ಚರ್ಚೆಗಳು ಇನ್ನು ಮುಂದೆ ಅರ್ಥವ­ತ್ತಾಗಿ ನಡೆಯಬೇಕಾಗಿದೆ.
–ಬಿ.ಎನ್. ಸುಮಿತ್ರಾ ಬಾಯಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT