ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಮೂರ್ತಿ ಪತ್ರಗಳು

Last Updated 13 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಧಾರವಾಡದ ಮನೋಹರ ಗ್ರಂಥಮಾಲೆಯ ಜಿ.ಬಿ. ಅವರೊಂದಿಗಿನ ಯು.ಆರ್. ಅನಂತಮೂರ್ತಿ ಅವರ ಸಂಬಂಧ ಅವರು ಇಂಗ್ಲೆಂಡಿಗೆ ಹೋಗುವುದಕ್ಕಿಂತ ಮೊದಲಿನದು. ಅವರು ಮೈಸೂರಿನಲ್ಲಿದ್ದಾಗಲೇ (‘ನಡೆದು ಬಂದ ದಾರಿ’ ಸಂಪುಟಗಳು 1960ರಲ್ಲಿ ಬಿಡುಗಡೆಯಾದ ಸಂದರ್ಭ) ಜಿ.ಬಿ. ಜೋಶಿ, ಕುರ್ತಕೋಟಿ ಮತ್ತು ನಾನು ಸೇರಿಕೊಂಡು ಅವರನ್ನು ಮೈಸೂರಿನಲ್ಲಿ ಭೇಟಿಯಾಗಿದ್ದೆವು. ನಂತರ ಅವರು 1962ರಲ್ಲಿ ದಿಲ್ಲಿಗೆ ಕಾಮನ್‌ವೆಲ್‌್ತ ಸ್ಕಾಲರಶಿಪ್‌ಗೆ ಸಂದರ್ಶನ ಕೊಟ್ಟು ಬಂದಾಗಿನಿಂದ ಅವರು ಜಿ.ಬಿ./ರಾಮ (ರಮಾಕಾಂತ ಜೋಶಿ) ಅವರ ಪತ್ರ ವ್ಯವಹಾರ ಪ್ರಾರಂಭವಾಗಿ 1971ರವರೆಗೆ ಅವ್ಯಾಹತವಾಗಿ ನಡೆದಿತ್ತು.

ಈ ಸಂದರ್ಭದಲ್ಲಿ ಅವರು ಇಂಗ್ಲೆಂಡಿಗೆ ಪಿಎಚ್‌.ಡಿ. ಮಾಡಲು ಹೋಗಿದ್ದರು. ಅದಕ್ಕೂ ಮೊದಲೇ ಅವರ ‘ಪ್ರಶ್ನೆ’ ಕತೆಗಳ ಸಂಕಲನವನ್ನು ಮನೋಹರ ಗ್ರಂಥಮಾಲೆಯಿಂದ ಹೊರತರಲು ನಿಶ್ಚಯಿಸಿ, ಕಾರ್ಯ ನಡೆದಿತ್ತು. ಮುದ್ರಣದ ಹೊತ್ತಿನಲ್ಲಿ ಕರಡು ತಿದ್ದುವ ಕಾರ್ಯದಲ್ಲಿ ತಪ್ಪುಗಳು ಜಾಸ್ತಿ ಉಳಿದದ್ದರಿಂದ ಅವರು ಬಹಳ ಬೇಸರ ಮಾಡಿಕೊಂಡಿದ್ದರು. ನಂತರ ಪುಸ್ತಕ ಪ್ರಕಟವಾಗಿ ಅವರ ಕೈಗೆ ತಲುಪಿದ ನಂತರ ಅವರು ಬಹಳ ಸಂತೋಷಪಟ್ಟರು.

ಅದಾದ ನಂತರ, ಅವರಿಗೆ ಮತ್ತೊಂದು ಕತೆಯನ್ನು ಬರೆದುಕೊಡಲು ಬೆನ್ನು ಹತ್ತಿದ್ದೆ. ಗ್ರಂಥಮಾಲೆಯಿಂದ ‘ಹೊಸ ಕ್ಷಿತಿಜ’ ಎಂಬ ನವ್ಯ ಕಥಾಸಂಕಲನವನ್ನು ತರಲು ಉದ್ದೇಶಿಸಿ, ಎಲ್ಲರಿಗೂ ಹೊಸ ಕತೆಗಳಿಗಾಗಿ ಬೆನ್ನು ಬಿದ್ದಿದ್ದೆವು. 12 ಆಗಸ್‌್ಟ 1964ರಿಂದ 21 ಆಗಸ್‌್ಟ 1964ರವರೆಗೆ ಬಿಟ್ಟೂಬಿಡದೆ ಕೂತು ಬರೆದ ‘ಕ್ಲಿಪ್‌ ಜಾಯಿಂಟ್‌’ ಕತೆಯನ್ನು ಅನಂತಮೂರ್ತಿ ಅವರು ಕಳಿಸಿಕೊಟ್ಟರು.

ಇಲ್ಲಿರುವ ಪತ್ರಗಳಲ್ಲಿ ಅನಂತಮೂರ್ತಿ ಅವರು ಗ್ರಂಥಮಾಲೆಯ ಜೊತೆ ಹೊಂದಿದ್ದ ಸಂಬಂಧದ ಸೂಚನೆ ಇರುವುದರ ಜೊತೆಗೆ, ಬಹುಮುಖ್ಯವಾಗಿ ‘ಸಂಸ್ಕಾರ’ ಕಾದಂಬರಿ ರೂಪುಗೊಂಡ ಸಂದರ್ಭದ ಉಲ್ಲೇಖಗಳೂ ಇವೆ. ಲೇಖಕನಾಗಿ ಅನಂತಮೂರ್ತಿ ಅವರ ಬದ್ಧತೆ ಹಾಗೂ ವ್ಯಕ್ತಿಯಾಗಿ ಕುಟುಂಬದ ಬಗೆಗಿನ ಅವರ ಬದ್ಧತೆಯನ್ನು ಈ ಪತ್ರಗಳು ಸೂಚಿಸುವಂತಿವೆ.

****

ಪ್ರಿಯ ರಾಮಣ್ಣ,
ನಿಮ್ಮ ಕಾಗದ ಮತ್ತು ಪುಸ್ತಕಗಳು ಬಂದವು. ಕಾಗದ, ಮುದ್ರಣ, ಮುಖ ಚಿತ್ರ ಎಲ್ಲ ಒಪ್ಪಿಗೆಯಾಯಿತು.
ಅಯ್ಯೋ– ಅದನ್ನು ಮರೆತುಬಿಡಿ. ನಾನು ಏನನ್ನೂ ನೆನಪಿನಲ್ಲಿಟ್ಟುಕೊಳ್ಳುವವನಲ್ಲ. ಒಂದಷ್ಟು ಅಚ್ಚಿನ ತಪ್ಪಾದರೆ ಆಕಾಶವೇ ಕಳಚಿಬಿದ್ದಂತೆ ಎಂದು ತಿಳಿಯುವವನಲ್ಲ ನಾನು. ಮೊದಲು ಬೇಜಾರಾಯಿತು, ಸ್ವಲ್ಪ ಸಿಟ್ಟಾಯಿತು, ಈಗ ಮರೆತುಹೋಯಿತು. ನಿಮ್ಮ ತಂದೆಯನ್ನು ಕಂಡರೆ ನನಗೆ ಪ್ರೀತಿ, ಗೌರವ ಇದೆ.

‘ಮೂಕ ಬಲಿ’ಯಂತಹ ನಾಟಕ ಬರೆದ ವ್ಯಕ್ತಿ ದೊಡ್ಡವನೆಂದು ನನಗೆ ಗೊತ್ತು. ಆದರೂ ಕೆಲವು ವಿಷಯದ ಬಗ್ಗೆ ಗೇಲಿ ಮಾಡಿದರೆ ನನಗೆ ಥಟ್ಟನೆ ಸಿಟ್ಟು ಬರುತ್ತದೆ. ಮತ್ತೆ ಮರೆತು ಹೋಗುತ್ತದೆ.

ಹೋಗಲಿ ಬಿಡಿ, ತಂದೆ ಬಂದರೇನು? ಆಗ ನೀವು ಇಲ್ಲಿಂದ ಹೊರಟವರು ಬಹಳ ದಿನ ಮನೆಗೆ ಹೋಗಲಿಲ್ಲೆಂದು ಅವರು ಗಾಬರಿಯಾಗಿದ್ದರು. ಎಲ್ಲೆಲ್ಲಿ ಸಂಚರಿಸುತ್ತ ಕಾಲಕಳೆದಿರಿ? ಓಡಾಟವೆಂದರೆ ನಿಮಗೆ, ನಿಮ್ಮ ತಂದೆಗೆ ಬಹಳ ಇಷ್ಟವೆಂದು ಕಾಣುತ್ತಿದೆ.
ನನಗೊಂದು, ಅಡಿಗರಿಗೊಂದು ಕ್ಯಾಲಿಕೋ ಪ್ರತಿ ಮತ್ತು ಇನ್ನಷ್ಟು ಕಾಪಿಗಳು ಬೇಕು. ಲೇಖಕರಿಗೆ ಎಷ್ಟು ಪ್ರತಿ ಸಾಮಾನ್ಯವಾಗಿ ಕೊಡುತ್ತೀರಿ? (ದುಡ್ಡು ಯಾವಾಗ ಕೊಡುತ್ತೀರಿ? ಬೇಕಾಗಿತ್ತು). ಇತ್ಯಾದಿ ಬರೆದು ತಿಳಿಸಿ. ಎಲ್ಲೆಲ್ಲಿಗೆ ರೆವ್ಯೂಗೆ ಹೋಗತ್ತೆ?– ಎಂದು ತಿಳಿಸಿರಿ.
ಮಗ ಹೆಂಡತಿ ಚೆನ್ನಾಗಿದ್ದಾರೆ. ನಿಮ್ಮಲ್ಲೆಲ್ಲ ಹೇಗಿದೆ? ತಂದೆಯವರಿಗೆ ನಮಸ್ಕಾರ ಹೇಳಿ.
ಪ್ರೀತಿಯಿಂದ
ಅನಂತಮೂರ್ತಿ
****
ಯು.ಆರ್‌. ಅನಂತಮೂರ್ತಿ
32, Bournbrook Rd,Birmingham 29

ಪ್ರಿಯ ಜೋಶಿ, ರಾಮಣ್ಣ,
ಅಂತೂ ಕತೆಯನ್ನು ಮುಗಿಸಿದ್ದೇನೆ. ರಾಮಣ್ಣನ ಕುಪಿತ ಪತ್ರ ಇನ್ನಷ್ಟು ತ್ವರೆಯಿಂದ ಬರೆಸಿತು. ಇಬ್ಬರಿಗೂ thanks. ಅಬ್ಬಾ– ಭೇತಾಳನಂತೆ ನೀವು ಬೆನ್ನು ಹತ್ತಿರಿ.

ನನ್ನ ಸರ್ವಶಕ್ತಿಯನ್ನೂ ಕೂಡಿಸಿ ಈ ಕತೆ ಬರೆದಿದ್ದೇನೆ. ಬಹುಶಃ ಈ ಶೈಲಿಯಲ್ಲಿ ಮುಂದೆ ಬರೆಯುತ್ತೇನೊ ಇಲ್ಲವೊ! ಇಷ್ಟರತನಕ ನಾನು ಬರೆದ ಎಲ್ಲ ಕತೆಗಳಿಗಿಂತ ಇದಕ್ಕೆ ಹೆಚ್ಚು ಶ್ರಮಪಟ್ಟೆ. ಕತೆಯ ಅನುಭವ ಎಷ್ಟು ನನ್ನ ತೆಕ್ಕೆಗೆ ಸಿಕ್ಕಿದೆಯೊ, ಎಷ್ಟನ್ನು ನಾನು ಗ್ರಹಿಸಿದ್ದೇನೊ ಈಗ ತಿಳಿಯದು. ತುಂಬ ಕಪ್ಪಾದ ದುಃಖಕರವಾದ ಥೀಮಿನ ಬಗ್ಗೆ ಬರೆಯಲು ಹೆದರಿಕೆಯಾಗುತ್ತದೆ; ಅಧಿಕಾರವಿದೆಯೆ ಎನ್ನುವ ಪ್ರಶ್ನೆ ಏಳುತ್ತದೆ. ಅದಕ್ಕಾಗಿ ನಾನು ಬರೆಯುವುದೆಂದರೆ ಹಿಂದೇಟು ಹಾಕುತ್ತೇನೆ. ಅನುಭವ, ಅನುಭವದ ಬಗ್ಗೆ ವಿಚಾರ, ವಿಚಾರವನ್ನೂ ಅನುಭವವನ್ನೂ ಒಟ್ಟಾಗಿ ಹಿಡಿಯುವ ಅಂತರ್ಗತ ಪ್ರತಿಮೆ–ವಿಚಾರವಾಗಲಿ ಅನುಭವವಾಗಲಿ ಪೂರ್ವಸಿದ್ಧವಾಗದಂತೆ ಹುಡುಕುವ ತಡಕುವ ಶೈಲಿ, ಬರೆಯುವಾಗ ಬರಹಗಾರನ ನಿಶ್ಚಯ ಪ್ರತಿಕ್ರಿಯೆಗಳನ್ನು ಮೀರಿ ನಿಲ್ಲುವಂತಹ ಅನುಭವದ ಅರಿಯದ ಆಳಗಳು– ಇದು ನನ್ನ ಆದರ್ಶ. ಆದ್ದರಿಂದ ನಾನು ಸದಾ ಅತೃಪ್ತ. ಸುಬ್ಬಣ್ಣ ಕಕ್ಕ, ಸ್ಟೂಅರ್ಟ್, ಅಮ್ಮ, ಮಾಧು, ತಂಗಿಯರು– ಎಲ್ಲರೂ ಇಲ್ಲಿ ಕತೆಯ ಹೊರಗೆ ಧುಮುಕಿ ಬೇರೆ ಬೇರೆ ದಿಕ್ಕಿನಲ್ಲಿ ಕೈಮಾಡಿ ನಿಂತರೆ, ಎಳೆದು ಒಯ್ದು ಓದುಗನ ಮನಸ್ಸಿನಲ್ಲೊಂದು ಶಕ್ತಿಯ ವಲಯವನ್ನು ಸೃಷ್ಟಿಸಿದರೆ ನಾನು ಕೃತಾರ್ಥ. ನನ್ನ ಅನುಭವದ ಮಿತಿ, ನನ್ನ ಕಲ್ಪನಾಶಕ್ತಿಯ ಅತಿ– ಎರಡರ ನಡುವಿನ ಸಂಘರ್ಷದಲ್ಲಿ ಅಥವಾ ಅನ್ಯೋನ್ಯತೆಯಲ್ಲಿ ಕಾವ್ಯದ ಪ್ರಾಮಾಣಿಕತೆಯಿದೆಯೆಂದು ನಾನು ತಿಳಿದಿರುವುದರಿಂದ, ಈ ಅವಕಾಶಗಳ ಸಾಧ್ಯಾಸಾಧ್ಯತೆಯನ್ನು ಹುಡುಕುವುದು ಸೃಷ್ಟಿಯ ಸೂಕ್ಷ್ಮ ಎಂದು ನನ್ನ ನಂಬಿಕೆ.

ರಾಜೀವ, ಕೀರ್ತಿ, ನೀವು ಕತೆಯ ಬಗ್ಗೆ ಏನೆನ್ನುತ್ತೀರೆಂದು ಅತ್ಯಂತ ಕುತೂಹಲಿಯಾಗಿದ್ದೇನೆ.
ಪ್ರೀತಿಯಿಂದ
ಅನಂತಮೂರ್ತಿ

****
May 4, 1965
ಬರ್ಮಿಂಗಂ
ಪ್ರಿಯ ಜೋಶಿ,

ನಿಮ್ಮ ದಿನಾಂಕ 28ರ ಪತ್ರ ತಲ್ಪಿತು. ನಾನು ಲಂಡನ್ನಿನ ನಂತರ ಬರೆದ ಕಾಗದ ತಲ್ಪಿರಬೇಕು. ನಿಮ್ಮ ಕಾಗದದಿಂದ ನನಗೆ ಆದ ಅತ್ಯಂತ ಸಂತೋಷಕ್ಕೆ ಕಾರಣ ಮುಖ್ಯವಾಗಿ ಎರಡು: ರಾಮಣ್ಣ ಓದುತ್ತಿರುವುದು ಮತ್ತು ನೀವು ನನ್ನ ಪುಸ್ತಕವನ್ನು ತರುತ್ತಿರುವುದು, ನನ್ನ ತೀರ್ಥರೂಪರಿಗೆ ನೀವು ಹಣ ಕಳುಹಿಸಿದ್ದನ್ನು ತಿಳಿದು ತುಂಬ ಸಮಾಧಾನವಾಯಿತು. ನನಗೆ ಹೀಗೆ ಕಷ್ಟವಿಲ್ಲದಿದ್ದರೆ ನಿಮ್ಮನ್ನು ದುಡ್ಡಿನ ಬಗ್ಗೆ ಪೀಡಿಸುತ್ತಿರಲಿಲ್ಲ. ಹಿರಿಯರಾದ ನಿಮಗೆ ಇದನ್ನು ನಾನು ವಿವರಿಸಿ ಹೇಳಬೇಕಾಗಿಲ್ಲ. ನಿಮ್ಮಿಂದ ನಾನು ಪಡೆದ ಪುಸ್ತಕಗಳ ಬಗ್ಗೆ ನಿಮಗೆಷ್ಟು ನಾನು ಹಣ ಕೊಡಬೇಕು, ಬಂದಮೇಲೆ ಅದನ್ನು ತೀರಿಸುವೆ. ನನ್ನ ಲೆಖ್ಖವೆಂದು ಅದನ್ನು ಬರೆದಿಟ್ಟುಕೊಂಡಿರಿ. ಈಗ ಮುಖ್ಯವಾಗಿ ನನ್ನ ಪರವಾಗಿ ನೀವು ರಾಜೀವನಿಗೆ ಕಾಗದ ಬರೆಯುವಂತೆ ಹೇಳಬೇಕು. ಹಿಂದೊಂದು ಕಾಗದ ಅವನಿಗೆ ನಿಮ್ಮ ವಿಳಾಸಕ್ಕೆ ಬರೆದಿದ್ದೆ. ಈಗ ಅವನ ಮನೆಯವರಿಗೆ ಆರೋಗ್ಯವಿಲ್ಲೆಂದು ತಿಳಿದು ನನಗೆ ನನ್ನ ಹೆಂಡತಿಗೆ ತುಂಬ ಕಳಕಳಿಯಾಗಿದೆ. ಆದ್ದರಿಂದ ರಾಜೀವನಿಗೆ ಒಂದು ಕಾಗದ ಬರೆಯುವಂತೆ ನನ್ನ ಪರವಾಗಿ ತಿಳಿಸಿ. ಅವರ ಮಗ ಹೇಗಿದ್ದಾನೆ? ಎಲ್ಲಿದ್ದಾನೆ? ರಾಜೀವನ ಚಿಕ್ಕಪ್ಪ ನನಗೆ ಗೊತ್ತು. ಸ್ವಲ್ಪದರ ಪರಿಚಯದಲ್ಲೆ ನನಗವರು ಆಪ್ತರಾಗಿಬಿಟ್ಟರು– ರಾಜೀವನ ಕಾರಣವಾಗಿ ಮತ್ತು ಅವರ ತಂದೆಯ ಸ್ಮೃತಿಗಾಗಿ. ರಾಜೀವಗೂ ಅವರಿಗೂ ಗಾಢವಾದ ಬಾಂಧವ್ಯವಿತ್ತು. ರಾಜೀವನನ್ನು ಕರ್ಣಾಟಕಕ್ಕೆ ಒಟ್ಟಿನಲ್ಲಿ ಜೀವನಕ್ಕೆ ಬಂಧಿಸಿದ್ದ ಶಕ್ತಿಗಳಲ್ಲಿ ಅವರೂ ಒಬ್ಬರು. ಈಗವರು ತೀರಿಕೊಂಡದ್ದರಿಂದ ರಾಜೀವನಿಗೆ ತುಂಬ ದೊಡ್ಡ ಪೆಟ್ಟು ಬಿದ್ದಂತಾಗಿರಬೇಕು.

ಈಗ ನನ್ನ ಕತೆಯ ವಿಷಯ: ನಿಮಗೆ ನಾನು ಬರೆದಿದ್ದಂತೆ ಸುಮಾರು ಅರವತ್ತು ಪುಟಗಳಷ್ಟು ಹೆಚ್ಚು ಬರೆದು ಅಡಿಗರಿಗೆ 29ನೇ ಏಪ್ರಿಲ್‌ ಕಳಿಸಿದ್ದೇನೆ. ಅತ್ಯವಶ್ಯವಾಗಿ ಕತೆ ಬೆಳೆಯಿತು. ಇದರಿಂದ ಕತೆಯ ಒಟ್ಟರ್ಥ ಬೆಳೆಯಿತೆಂದು ಗೆಳೆಯ ರಾಮಚಂದ್ರಶರ್ಮ ಅಭಿಪ್ರಾಯಪಟ್ಟಿದ್ದಾರೆ. ನನ್ನ ಮತವೂ ಹಾಗೆ ಇದೆ. ಈ ಭಾಗವೂ ನಿಜವಾದ ಸ್ಫೂರ್ತಿಯಲ್ಲಿ ಬಂದುಬಿಟ್ಟಿತು. ಈ ಭಾಗದಲ್ಲಿ ಬರುವ ‘ಪುಟ್ಟ’ ಎನ್ನುವ ಪಾತ್ರ ಮತ್ತು ಜಾತ್ರೆ ಬರೆಬರೆಯುತ್ತ ‘ಹೊಳೆದು’ ಬಿಟ್ಟ ವಿಷಯ. ನನಗೆ ತಿಳಿಯದೊಂದು ಲೋಕದ ಜೊತೆ ವ್ಯವಹರಿಸುತ್ತಿರುವ ವಿನೀತಭಾವ, ಹುಮ್ಮಸ್ಸು ಬರೆಯುತ್ತಿರುವಾಗ ಬಂದುಬಿಟ್ಟತು. ಇಷ್ಟೆಲ್ಲ ಆಗಿ ಕಥೆ ‘ಟಸ್ಸೆ’ಂದು ಬಿಟ್ಟಿರಬಹುದು. ಆದ್ದರಿಂದ ಗೆಳೆಯರ ಅಭಿಪ್ರಾಯ ತಿಳಿಯುವ ಕುತೂಹಲ. ಈಗಿರುವ ಪ್ರಕಾರ ಅಚ್ಚಿನಲ್ಲಿ 150 ಪುಟಗಳಾಗಬಹುದೆಂದು ನನ್ನ ಮತ– ಉಡುಪಿ ಮುದ್ರಣಾಲಯದ ಟೈಪಿನ ದೃಷ್ಟಿಯಿಂದ.

ಈಗ ನಾನು ಬರೆದ ಭಾಗದ ದೃಷ್ಟಿಯಿಂದ ಟೈಟೆಲಿನ ಪ್ರಶ್ನೆ ಇನ್ನಷ್ಟು ಬಿಗಿಯಾಗಿಬಿಟ್ಟಿದೆ. ಕೆಲವು ಸೂಚನೆಗಳು: 1. ಸಂಸ್ಕಾರ ಮತ್ತು ನಿಶ್ಚಯ, 2. ಸಂಸ್ಕಾರ, 3. ನಿಶ್ಚಯ, 4. ಮಾರಿ, 5. ಬ್ರಾಹ್ಮಣ, 6. ನಾರಣಪ್ಪನ ಶವ. ಯೋಚಿಸಿ ನಿಮ್ಮ ಸೂಚನೆಗಳನ್ನು ತಿಳಿಸಿ.
ಕತೆಯ ಮೊದಲಿಗೆ ಕಾರ್ಲ್‌ ಮಾರ್ಕ್ಸ್‌ ನಿಂದ ಒಂದು ಮಾತು ಜಾನ್‌ ಪಾಲ್‌ ಸಾರ್ತ್‌ನಿಂದ ಇನ್ನೊಂದು ಮಾತನ್ನು ಉದ್ಧರಿಸುವ ಯೋಚನೆಯಿದೆ. ಅದಕ್ಕೆ ಮುಂಚೆ ಕೀರ್ತಿ, ರಾಜೀವನ ಜೊತೆ ಮಾತನಾಡಬೇಕು. ಕೂಡಲೇ ಉತ್ತರ ಬರೆಯಿರಿ.
ಪ್ರೀತಿಯಿಂದ
ಅನಂತು

*****
ಹೊಸ ವಿಳಾಸ
No. 8, Bournbrook Rd, B’ham 29

ಪ್ರಿಯ ರಾಮಣ್ಣ, ಪ್ರಿಯ ಜೋಶಿ,
ನಿಮ್ಮಬ್ಬರ ಕಾಗದಗಳೂ ತಲ್ಪಿವೆ. ಪುಸ್ತಕಗಳೂ ಸಹ, ಕೀರ್ತಿ ನನ್ನ ಕತೆಯ ಬಗ್ಗೆ ಬರೆದ ಮಾತುಗಳನ್ನೋದಿ ನನಗೆ ತುಂಬ ಹರ್ಷವಾಯಿತೆಂದು ಹೇಳುವುದು ಅನವಶ್ಯಕ. ಖಂಡಿತಾ ಅದನ್ನು ನಿಮಗೆ ಕಳುಹಿಸುವಾಗ ನಾನು ಅದು ಅಷ್ಟು ಒಳ್ಳೆಯ ಕತೆಯೆಂದು ತಿಳಿದೇ ಇರಲಿಲ್ಲ; ನಾವು ಬರೆದದ್ದರ ಬಗ್ಗೆ ನಮಗೆ ತುಂಬ ಸಂಶಯವಿರುವುದು ಸಹಜ ತಾನೆ? ಕೀರ್ತಿ ಬರೆದದ್ದು ಓದಿ ನನ್ನ ಬರವಣಿಗೆಯ ಬಗೆಗೆ ನಾನು ಇನ್ನಷ್ಟು ವಿನೀತನಾಗಬೇಕೆಂದು ಎನ್ನಿಸಿತು. ಖಾಸನೀಸರ ಕತೆ ಅತ್ಯುತ್ತಮವಾಗಿದೆ. ಒಟ್ಟಿನಲ್ಲಿ ಕೀರ್ತಿಯ ನಿಲುವು ಒಪ್ಪಿಗೆಯಾಯಿತು.

ಎಲಿಯಟ್ಟಿನ ಬಗ್ಗೆ ಮಿಣಜಿಗಿಯವರು ಮಾಡಿರುವ ವಿಮರ್ಶೆ ತೂಕದ ಬರವಣಿಗೆ, ಅಲ್ಲಿ ಇಲ್ಲಿ ನನ್ನ ಭಿನ್ನಾಭಿಪ್ರಾಯಗಳಿವೆ; ಅವುಗಳನ್ನು ಓದುತ್ತೋದುತ್ತ ಗುರುತು ಹಾಕಿದ್ದೇನೆ. ಥೀಸಿಸ್‌ನಿಂದ ನನ್ನ ಜೀವನ ಮುರುಟಿಕೊಂಡುಬಿಟ್ಟು ಏನನ್ನೂ ಸಾವಧಾನದಿಂದ ಮಾಡಲಾರದವನಾಗಿದ್ದೇನೆ. ಸೋಮಾರಿಯಾದ ನನ್ನನ್ನು ಯೂನಿವರ್ಸಿಟಿ ಗುಲಾಮನಂತೆ ದುಡಿಸುತ್ತಿದೆ. ಈ ವಾರವಂತೂ ಇಲ್ಲಿ ನಮಗೆ ಪುರಸತ್ತೇ ಇಲ್ಲ. ಅಮೆರಿಕಾದಿಂದ ಲಯನಲ್‌ ಟ್ರಲಿಂಗ್‌, ಕ್ಲಿಯಾಂತ್‌ ಬ್ರೂಕ್‌್ಸ, ಡಿಮೋಟ್ ಇತ್ಯಾದಿ ಜನರು ಬಂದು ಸೆಮಿನಾರ್‌ಗಳನ್ನು ನಡೆಸಿದರು, ಸದ್ಯಕ್ಕೆ ಇಲ್ಲಿ ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಬರ್ಮಿಂಗಂ ತುಂಬ ಮುಂದಿರುವ ಯೂನಿವರ್ಸಿಟಿ. ನಮ್ಮ ಡಿಪಾರ್ಟ್‌ಮೆಂಟ್‌ ಅದರಲ್ಲೂ ಬ್ರಾಡ್‌ಬರಿ ಮತ್ತು ಹಾಗರ್ಟ್ ನನ್ನ ಬಗ್ಗೆ ತೋರಿಸುತ್ತಿರುವ ಪ್ರೀತಿ ಅಭಿಮಾನ ನನಗೆ ಒಟ್ಟು ಜೀವನಕ್ಕೆ ಮಹತ್ವದ ವಿಷಯವಾಗಿದೆ.

ನಿಮಗೊಂದು ಸುದ್ದಿ: ರಾಮಣ್ಣ ಗೆದ್ದ. ವಾರದ ಹಿಂದೊಂದು ದಿನ ಬೆಳಿಗ್ಗೆ ನಿದ್ದೆಯಿಂದ ಕಣ್ಣು ಬಿಟ್ಟೊಡನೆ ಅಕಸ್ಮಾತ್‌ ಎಂಬಂತೆ ‘ಹೊಳೆದು ಬಿಟ್ಟಿತು’; ಎದ್ದವನೇ ಬರೆಯತೊಡಗಿದೆ– ಥೀಸಿಸನ್ನು ಬದಿಗಿಟ್ಟು. ಹಗಲು ರಾತ್ರೆ ಬರೆದೆ ಬರೆದೆ. ಎರಡು ಸರ್ತಿ ಬರೆದೆ. ಒಟ್ಟಿನಲ್ಲಿ ಸುಮಾರು ನೂರು ಪುಟಗಳಾಗುವ– ಕಾದಂಬರಿಯೊ, ನೀಳ್ಗತೆಯೊ– ಅಂತೂ ಒಂದು ಕೃತಿ. ಇದು ನಾನು ಈ ತನಕ ಬರೆದದ್ದರಲ್ಲಿ ನನ್ನ ಪಾಲಿಗೆ ಅತ್ಯುತ್ತಮವಾದದ್ದು. ತನ್ನ ದೃಷ್ಟಿಯಿಂದ ಅದರ ಬೆಲೆ ನನಗೆ ಗೊತ್ತಿಲ್ಲ. ನನ್ನ ಮಾತ್ರಕ್ಕೆ ಅನ್ನುವುದಾದರೆ ಇಷ್ಟು ಸಂಪೂರ್ಣವಾಗಿ ಸ್ಪೂರ್ತವಾಗಿ ನಾನು ಬರೆದದ್ದೇ ಇಲ್ಲ. ‘ಸಂಸ್ಕಾರ’ ಎಂದು ಅದನ್ನು ಕರೆದಿದ್ದೇನೆ. ಸಿಂಬಲಿಸಂ ಮತ್ತು ಕತೆಯ ಕಟ್ಟಡದಲ್ಲಿ ನನ್ನ ಪ್ರಯೋಗಗಳೆಲ್ಲ, ಅಲ್ಲದೆ ನನ್ನ ತಾತ್ವಿಕ ವಿಚಾರದ ಸರ್ವ ಸ್ವರೂಪವೆಲ್ಲ ಒಟ್ಟಿಗೆ ಕೂಡಿಬಿಟ್ಟಿತು ಇದರಲ್ಲಿ. ಅದನ್ನು ನಿನ್ನೆ ಅಡಿಗರಿಗೆ ಕಳಿಸಿದೆ.

ಈಗೊಂದು– ಆಪ್ತರಾದ ನಿಮಗೆ– ವಿಚಾರ ಹೇಳಬೇಕು: ನನ್ನ ತಂದೆಯವರಿಗೆ ನನ್ನ ರಜದ ಸಂಬಳದ ಹಣವನ್ನು ತಲ್ಪಿಸಲೆಂದು ನಾನು ಜವಾಬ್ದಾರಿ ವಹಿಸಿದ್ದ ಮಿತ್ರರೊಬ್ಬರು ಅದನ್ನು ಮಾಡದೇ ಹೋಗಿದ್ದಾರೆ. ಪರಿಣಾಮ, ನಮ್ಮ ಮನೆಯಲ್ಲಿ ತುಂಬ ಕಷ್ಟದ ಸ್ಥಿತಿ. ಮೊದಲೇ ತಾಯಿ ತಂದೆಯರನ್ನು ನೋಯಿಸಿ ಬಿಟ್ಟಿದ್ದರಿಂದ ನನಗಿದರಿಂದ ಇನ್ನಷ್ಟು ಬೇಸರವಾಗಿದೆ. ಅರ್ಧ ನಾನು ಈ ಕತೆಯನ್ನು ಇಷ್ಟು ಉಸುರುಕಟ್ಟಿ ಬರೆಯಲೂ ಅದೇ ಕಾರಣ. ಅಡಿಗರಿಗೆ ಹೀಗೆ ಬರೆದಿದ್ದೇನೆ; ಇದನ್ನು ಪ್ರಕಟಿಸಲು ಪ್ರಯತ್ನಿಸಿ, ನಮ್ಮ ಮನೆಯವರಿಗೆ ಆದಷ್ಟು ಹಣ ಕೊಡಿಸಿ. ಅಲ್ಲದೆ ಜೋಶಿಯವರ ಕಾಗದದಿಂದ ನನಗೆ ಕೂಡಲೆ ನಿಮಗೊಂದು ಕೃತಿ ಬೇಕೊ ಬೇಡವೊ ಎಂದು ಅನುಮಾನವಾಯಿತು. ಅಲ್ಲದೆ ಇದು ಬರಿ ನೂರು ಪುಟಗಳಷ್ಟು ಮಾತ್ರ ಆಗುವುದರಿಂದ ಅದರ size ನಿಮಗೆ ಸರಿಬರುತ್ತದೊ ಇಲ್ಲವೊ ಎಂಬ ಸಂದೇಹ. ಇಷ್ಟಿದ್ದೂ ನೀವು ಇದನ್ನು ಪ್ರಕಟಿಸಲು ಇಚ್ಛಿಸಿದರೆ ದಯಮಾಡಿ ಅಡಿಗರ ಜೊತೆ ವ್ಯವಹರಿಸಿ. ನನ್ನ ಸಂದಿಗ್ಧಗಳ ಬಗ್ಗೆ ಅವರಿಗೆಲ್ಲ ತಿಳಿದಿರುವುದರಿಂದ ಅವರಿಗೆ ಅದರ ಜವಾಬ್ದಾರಿ ಬಿಟ್ಟಿದ್ದೇನೆ. ನೀವು ಅದನ್ನು ಪ್ರಕಟಿಸಿದರೆ ನನಗೆ ಸಂತೋಷವೆಂದು ಹೇಳುವುದು ಅನವಶ್ಯಕ ತಾನೆ? ಎಲ್ಲ ಆದಷ್ಟು ಬೇಗ ಆಗಬೇಕು– ಅಷ್ಟೆ.

ವ್ಯವಹಾರದ ಮಾತು ಹಾಗಿರಲಿ, ನೀವು ಪ್ರಕಟಿಸಿ– ಬಿಡಿ– ಅಂತೂ ಜೋಶಿ, ರಾಮಣ್ಣ, ಕೀರ್ತಿ, ರಾಜೀವ ಅದನ್ನು ಓದಿ ಕೂಡಲೇ ಬರೆಯುವ ತನಕ ನನ್ನ ಮನಸ್ಸು ಹಂಬಲಿಸುತ್ತಿರುತ್ತದೆ. ಇದನ್ನು ನಾನು ತುಂಬ ಪ್ರೀತಿಸಿರುವುದರಿಂದ ನೀವು ಅದನ್ನು ಅತ್ಯಂತ ನಿರ್ದಾಕ್ಷಿಣ್ಯವಾಗಿ ವಿಮರ್ಶಿಸಬೇಕು. ಪರವಾಯಿಲ್ಲ – ಅಡ್ಡಿಯಿಲ್ಲ ಎಂದಷ್ಟೇ ಅನ್ನಿಸಿದರೆ ನಾನು ಮುಗ್ಗರಿಸಿದೆ ಎಂದು ಅರ್ಥ. ಆದ್ದರಿಂದ ಅನ್ನಿಸಿದ್ದನ್ನ, ಅನ್ನಿಸಿದ ಹಾಗೆ ನೀವು ಹೇಳಿಬಿಡಬೇಕು.
ತುಗಲಖನನ್ನು ಇನ್ನೂ ಓದಿಲ್ಲ, ಅವರಸರದಲ್ಲಿ ಓದಲು ಇಷ್ಟವಿಲ್ಲ. ಕೂಡಲೆ ಉತ್ತರಿಸಿ.
ಪ್ರೀತಿಯಿಂದ
ಅನಂತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT