ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಮೂರ್ತಿ ಯಾರು ಎಂದ ರಾಜ್ಯಪಾಲ

Last Updated 30 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅನಂತಮೂರ್ತಿ ಯಾರು? ಅವರು ಏನೂ ಅಲ್ಲ. ಅವರ ಜೊತೆಗೆ ವಾದ ಮಾಡುವ ಅವಶ್ಯಕತೆ ನನಗಿಲ್ಲ. ಅವರೊಬ್ಬ ರೋಗಿ’ ಎಂದು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್ ಖಾರವಾಗಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿ­ಗಾ­ರರು ದಾವಣಗೆರೆ ವಿಶ್ವವಿದ್ಯಾ­ಲಯದ ಕುಲಪತಿ ನೇಮಕಾತಿ ಪ್ರಕ್ರಿಯೆ ಕುರಿತು ಡಾ.ಯು.­ಆರ್.­ಅನಂತಮೂರ್ತಿ ಅವರು ಅಸಮಾಧಾನ ಹೊಂದಿರುವ ಬಗ್ಗೆ ಪ್ರಶ್ನಿಸಿದಾಗ, ರಾಜ್ಯಪಾಲರು ಕೆಂಡಾಮಂಡಲರಾದರು. ಅನಂತಮೂರ್ತಿ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

‘ಅನಂತಮೂರ್ತಿ ಒಬ್ಬ ಹಿರಿಯ ಸಾಹಿತಿ ಮತ್ತು ವಿಶ್ರಾಂತ ಕುಲಪತಿ. ಅವರ ಆರೋಗ್ಯ ಸರಿಯಿಲ್ಲ ಎಂಬ ಅನುಕಂಪದಿಂದ ಅವರ ಮನೆಗೆ ಭೇಟಿ ನೀಡಿದ್ದೆ ಅಷ್ಟೆ. ರಾಜ್ಯಪಾಲರ ಪರಮಾ­ಧಿಕಾರವನ್ನು ಅನಂತಮೂರ್ತಿ ಪ್ರಶ್ನಿಸು­ತ್ತಿದ್ದಾರೆ. ಡಯಾಲಿಸಿಸ್‌ಗೆ ಒಳಗಾ­ಗುತ್ತಿರುವ ವ್ಯಕ್ತಿಯೊಂದಿಗೆ ನಾನು ವಾದ ಮಾಡಬೇಕೇ?’ ಎಂದು ಕಟುವಾಗಿ ಪ್ರಶ್ನಿಸಿದರು.

‘ಕಳೆದ 27 ವರ್ಷಗಳಿಂದ ಸಾರ್ವ­ಜನಿಕ  ಸೇವೆಯಲ್ಲಿದ್ದೇನೆ. ಯಾರಿಗೋ ಹೆದರಿ ಕೆಲಸ ಮಾಡಲು ನಾನು ಚಿಕ್ಕ ಮಗುವಲ್ಲ. ನನ್ನ ಅಧಿಕಾರದ ವ್ಯಾಪ್ತಿಯಲ್ಲೇ ದಾವಣಗೆರೆ ವಿಶ್ವವಿದ್ಯಾ­ಲಯಕ್ಕೆ ಕುಲಪತಿಯ ನೇಮಕ ಮಾಡಿದ್ದೇನೆ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

‘ರಾಜ್ಯ ಸರ್ಕಾರ ಬರೆದುಕೊಟ್ಟಿರುವ  ಭಾಷಣವನ್ನು ಸದನದಲ್ಲಿ ಓದಿದ್ದೇ­ನೆಯೇ ಹೊರತು ಅವು ಯಾವವೂ ನನ್ನ ಮಾತುಗಳಲ್ಲ’ ಎಂದು ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ತಾವು ಮಾಡಿದ ಭಾಷಣ ಕುರಿತು ಪ್ರತಿಕ್ರಿಯಿಸಿದರು.

ಪತ್ರಕರ್ತರಿಗೂ ಪಾಠ: ‘ನಿಮ್ಮ ವಿದ್ಯಾ­ರ್ಹತೆ ಏನು? ನನ್ನನ್ನು ಪ್ರಶ್ನಿಸುವ ಮುನ್ನ ಚೆನ್ನಾಗಿ ತರಬೇತಿ ಪಡೆದುಕೊಂಡು ಬನ್ನಿ. ವಿವಾದಗಳನ್ನು ಸೃಷ್ಟಿಸುತ್ತಿರು­ವವರು ನೀವೇ’ ಎಂದು ಪತ್ರಕರ್ತರ ಮೇಲೂ ಹರಿಹಾಯ್ದರು.

ಹಿನ್ನೆಲೆ: ದಾವಣಗೆರೆ ವಿ.ವಿ ಕುಲಪತಿ ಹುದ್ದೆಗೆ ಅರ್ಹರನ್ನು ಶಿಫಾರಸು  ಮಾಡುವ ಶೋಧನಾ ಸಮಿತಿಗೆ ಅನಂತ­ಮೂರ್ತಿ ಅಧ್ಯಕ್ಷರಾಗಿದ್ದರು. ಸಮಿತಿ ಮೂವರ ಹೆಸರನ್ನು  ಸೂಚಿಸಿತ್ತು. ಇವರಲ್ಲಿ ಒಬ್ಬರನ್ನು ಅನಂತಮೂರ್ತಿ ನಿರ್ದಿಷ್ಟವಾಗಿ ಹೆಸರಿಸಿ, ಅವರನ್ನೇ ಕುಲಪತಿ ಮಾಡಲು ಸಲಹೆ ಮಾಡಿದ್ದರು.

ಆದರೆ ಅದನ್ನು ಪರಿಗಣಿಸದ ರಾಜ್ಯಪಾಲರು ಸಮಿತಿ ಕಳುಹಿಸಿದ ಶಿಫಾರಸು ಪಟ್ಟಿಯಲ್ಲಿದ್ದ ಇನ್ನೊಬ್ಬ­ರನ್ನು  ಕುಲಪತಿಯಾಗಿ ನೇಮಕ ಮಾಡಿ­ದ್ದರು.

ಇದರಿಂದಾಗಿ ಅನಂತಮೂರ್ತಿ ಅವರು ರಾಜ್ಯ­ಪಾಲರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.  ಬಸವ­ಕಲ್ಯಾಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮ­ದಲ್ಲಿ ಅನಂತಮೂರ್ತಿ ಅವರು ‘ರಾಜಕಾರ­ಣಿಗಳು ರಾಜ್ಯಪಾಲರಾದರೆ ಹೆಚ್ಚು ಭ್ರಷ್ಟರಾಗುತ್ತಾರೆ’ ಎಂದು ರಾಜ್ಯಪಾಲರನ್ನು ಪರೋಕ್ಷವಾಗಿ ಟೀಕಿಸಿದ್ದರು.

ಜಗಳವಾಡುವ ಹಕ್ಕು ನನಗಿದೆ
ಭಾರದ್ವಾಜ್‌ ರಾಜ್ಯಪಾಲರು, ಗೌರವಾನ್ವಿತರು. ನಾನು ಕೇವಲ ಅನಂತಮೂರ್ತಿ. ಆದರೆ ಕೇವಲನಾದ ವ್ಯಕ್ತಿಗೂ ಈ ಪ್ರಜಾ­ಪ್ರಭುತ್ವದಲ್ಲಿ ಅಧಿಕಾರವಿದೆ. ದಾವಣಗೆರೆ ವಿಶ್ವವಿದ್ಯಾಲ­ಯಕ್ಕೆ ಸೂಕ್ತ ಕುಲಪತಿ ಹುಡುಕುವ ಶೋಧನಾ ಸಮಿತಿಗೆ ಸೇರಿ ನಾನು ತಪ್ಪು ಮಾಡಿದೆ.

ಮೂವರು ಪ್ರತಿಭಾವಂತರು ನನ್ನ ಆಯ್ಕೆಯಲ್ಲಿದ್ದರು. ಅವರೆಲ್ಲರೂ ಸ್ವಪ್ರಯತ್ನದಿಂದ ಜೀವನದಲ್ಲಿ ಮೇಲೆ ಬಂದವರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಡಾ.ಎಲ್‌. ಗೋಮತಿದೇವಿ ರಾಜ್ಯ­ಪಾಲರ ಕಣ್ಣಿಗೆ ಕಾಣಲಿಲ್ಲ. ಭಾರದ್ವಾಜ್‌ ಅವರು ಕಾಂಗ್ರೆಸ್ಸಿಗರು. ಅಂಬೇಡ್ಕರ್‌ ವಾದವನ್ನು ಒಪ್ಪಿಕೊಂಡವರು. ಹಾಗಾಗಿ ಅವರ ಜೊತೆ ತಾತ್ವಿಕವಾಗಿ ಜಗಳವಾಡುವ ಹಕ್ಕು ನನಗಿದೆ.
ಡಾ.ಯು.ಆರ್‌. ಅನಂತಮೂರ್ತಿ

ರಾಜ್ಯಪಾಲರು ಪ್ರಶ್ನಾತೀತರಲ್ಲ
ಅನಂತಮೂರ್ತಿ ಅವರು ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಪರ  ಇರುವ ಸಾಹಿತಿ. ಅವರ ಬಗ್ಗೆ ರಾಜ್ಯಪಾಲರು ಉದ್ಧಟತ­ನದಿಂದ ಮಾತನಾಡಿದ್ದು ತಪ್ಪು. ಪ್ರಜಾ­ಪ್ರಭು­ತ್ವದಲ್ಲಿ ಯಾರೂ  ಪ್ರಶ್ನಾತೀತ­ರಲ್ಲ. ರಾಷ್ಟ್ರಪತಿ, ರಾಜ್ಯಪಾಲ ಸೇರಿದಂತೆ ಯಾರೇ ತಪ್ಪು ಮಾಡಿದರೂ ಅದು ತಪ್ಪೇ.

ಬಿಜೆಪಿ ಸರ್ಕಾರವಿದ್ದಾಗ ತಮ್ಮ ಪರಮಾಧಿಕಾರ ಬಳಸಿ, ಕೆಲವು ವಿ.ವಿಗಳಿಗೆ ಉತ್ತಮ ಕುಲಪತಿಗಳನ್ನು ನೇಮಕ ಮಾಡಿರುವ ರಾಜ್ಯಪಾಲರು, ಇನ್ನು ಕೆಲವು ವಿ.ವಿ.ಗಳಿಗೆ ಅಪಾತ್ರರನ್ನೂ ಕುಲಪತಿಗಳನ್ನಾಗಿ ಮಾಡಿದ್ದಾರೆ.
ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ಹಗರಣಗಳಿಗೆ ಕಾರಣರಾದ ಅಲ್ಲಿನ ಕುಲಪತಿ ಪ್ರೊ.ಎಸ್‌.ಸಿ. ಶರ್ಮಾ ಅವರನ್ನು ರಕ್ಷಿಸಿದ್ದಾರೆ. ಈ ಪ್ರಕರಣವೂ ಸೇರಿದಂತೆ ಹಲವಾರು ವಿಷಯಗಳಲ್ಲಿ ತಾವು ಜಾತಿವಾದಿ ಎಂದು ರಾಜ್ಯಪಾಲರು ಸಾಬೀತುಪಡಿಸಿದ್ದಾರೆ.
ಕಾಳೇಗೌಡ ನಾಗವಾರ, ಸಾಹಿತಿ, ಮೈಸೂರು

ನಿರ್ಧಾರ ಪ್ರಶ್ನಿಸುವಂತಿಲ್ಲ
ಶೋಧನಾ ಸಮಿತಿ ನೀಡಿದ ಪಟ್ಟಿಯಲ್ಲಿದ್ದ ಒಬ್ಬರ­ನ್ನು ರಾಜ್ಯ­ಪಾಲರು ಕುಲಪತಿ ಸ್ಥಾನಕ್ಕೆ ಆಯ್ಕೆ ಮಾಡಿ­ದ್ದಾರೆ. ವಿ.ವಿ. ಕುಲಾ­ಧಿ­ಪತಿ­ಯೂ ಆಗಿರುವ ಅವರ ಈ ಕ್ರಮ ಸರಿ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಕರ್ನಾ­ಟಕ ವಿ.ವಿ.ಯಲ್ಲಿ ಕೆಲ ದಶಕಗಳ ಹಿಂದೆ ಇಂತಹ ಘಟನೆ ನಡೆದಿತ್ತು. ಡಾ.ಆರ್‌.ಸಿ.­ಹಿರೇಮಠ ಅವರು ಮತ್ತೊಮ್ಮೆ ಕುಲಪತಿ ಆಗ­ಬೇಕೆ­ನ್ನುವ ಹಂಬಲದಿಂದ ಎಸ್‌.­ಎಸ್‌.­ಒಡೆ­ಯರ್‌ ಅವರ ಹೆಸರು ಪಟ್ಟಿಯಲ್ಲಿ ಬಾರ­ದಂತೆ ತಡೆ­ದಿ­ದ್ದರು. ಆದರೆ, ರಾಜ್ಯಪಾಲರು ಆ ಪಟ್ಟಿ­ಯನ್ನು ತಿರಸ್ಕರಿಸಿ ಮತ್ತೊಂದು ಪಟ್ಟಿ ನೀಡು­ವಂತೆ ಕೇಳಿ­ದ್ದರು. ಆ ಪಟ್ಟಿಯಲ್ಲಿ ಒಡೆ­ಯರ್‌ ಹೆಸರು ಸೇರ್ಪಡೆಯಾಗಿತ್ತು. ರಾಜ್ಯ­ಪಾ­ಲರು ಒಡೆ­ಯರ್‌ ಹೆಸರನ್ನೇ ಅಂತಿಮ­ಗೊಳಿ­ಸಿದ್ದರು. ಅನಂತಮೂರ್ತಿ ನೇತೃ­ತ್ವದ ಶೋಧನಾ ಸಮಿತಿಯು ನೀಡಿದ ಪಟ್ಟಿ­ಯ­ಲ್ಲಿದ್ದ ಡಾ. ಕಲಿ­ವಾಳ ಅವ­ರನ್ನು ಆಯ್ಕೆ ಮಾಡಿದ ಕ್ರಮ ಸರಿಯಾಗಿಯೇ ಇದೆ. ಕುಲಪತಿ­ಗಳಾಗುವವರ ಅರ್ಹತೆ, ಪದವಿ ನೋಡಿಯೇ ರಾಜ್ಯಪಾಲರು ಆಯ್ಕೆ ಮಾಡಿರುತ್ತಾರೆ.
ಡಾ.ಎಂ.ಎಂ.ಕಲಬುರ್ಗಿ, ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿ

ಹಗುರ ಮಾತು ಬೇಡ
ಅನಂತಮೂರ್ತಿಯವರು ಈ ಹಿಂದೆ ಕುಲಪತಿ ಆಗಿದ್ದವರು. ಅವರು ಬರಹಗಾರರು, ಹೋರಾಟಗಾರರೂ ಹೌದು. ಅವರಿಗೆ ಕುಲಪತಿಗಳನ್ನು ನೇಮಿಸುವ ವಿಧಾನವೂ ಗೊತ್ತಿದೆ. ಆದ್ದರಿಂದ ರಾಜ್ಯಪಾಲರು ಕುಲಪತಿ ನೇಮಕದ ವಿಧಾನವನ್ನು ಮೀರಬಾರದು. ಆಯ್ಕೆ ಸಮಿತಿಯು ಶಿಫಾರಸು ಮಾಡಿದ ಆಯ್ಕೆ ಸಂಖ್ಯೆ 1ನ್ನು ಆರಿಸಬೇಕು. ರಾಜ್ಯಪಾಲರೂ ಕೂಡಾ ನಿಯಮ ಪಾಲಿಸಬೇಕು. ಅನಂತಮೂರ್ತಿಯವರ ದೈಹಿಕ ಆರೋಗ್ಯ ಸರಿಯಿಲ್ಲದಿರಬಹುದು. ಆದರೆ, ಮಾನಸಿಕವಾಗಿ ಅವರು ಸದೃಢವಾಗಿದ್ದಾರೆ. ನಾಡುನುಡಿಯ ಬಗ್ಗೆ ಅವರಿಗೆ ಪ್ರೀತಿ ಕಾಳಜಿಯಿದೆ. ಆದ್ದರಿಂದ ಅನಂತಮೂರ್ತಿಯವರ ಬಗ್ಗೆ ಈ ಹಗುರ ಮಾತು ಬೇಡ.
ಅಲ್ಲಮಪ್ರಭು ಬೆಟ್ಟದೂರು, ಹಿರಿಯ ಸಾಹಿತಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT