ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ನಿರಾಕರಿಸಿದ ಪೊಲೀಸರು

ಮೈಸೂರು: ಭಗವದ್ಗೀತೆ, ರಾಮಾಯಣ ಕುರಿತು ಮುಕ್ತ ಸಂವಾದ
Last Updated 27 ಜೂನ್ 2015, 20:13 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ದಲಿತ ವೆಲ್‌ಫೇರ್ ಟ್ರಸ್ಟ್ ವತಿಯಿಂದ ‘ಭಗವದ್ಗೀತೆ ಮತ್ತು ರಾಮಾಯಣ’ದ ಕುರಿತು ಭಾನುವಾರ (ಜೂನ್‌ 28) ನಗರದಲ್ಲಿ ಹಮ್ಮಿಕೊಂಡಿದ್ದ ಮುಕ್ತ ಸಂವಾದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಕಾರ್ಯಕ್ರಮಕ್ಕೆ ಅನುಮತಿ ಕೋರಿ ಟ್ರಸ್ಟ್ ನೀಡಿದ್ದ ಅರ್ಜಿಯನ್ನು ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಅವರು ತಿರಸ್ಕರಿಸಿದ್ದಾರೆ. ಹೀಗಾಗಿ, ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಎಂಎಂಸಿಆರ್‌ಐ) ಸಂವಾದಕ್ಕೆ ಸಭಾಂಗಣ ನೀಡಲು ಸಾಧ್ಯವಿಲ್ಲ ಎಂದು ಶನಿವಾರ ಸಂಜೆ ಆಯೋಜಕರಿಗೆ ತಿಳಿಸಿದೆ.

ಇಲ್ಲಿನ ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಅಮೃತೋತ್ಸವ ಭವನದಲ್ಲಿ ಜೂನ್ 28ರಂದು ಬೆಳಿಗ್ಗೆ 11ಕ್ಕೆ ಸಂವಾದ ಆಯೋಜಿಸಲಾಗಿತ್ತು. ರಾಮಾಯಣ ಹಾಗೂ ಭಗವದ್ಗೀತೆಯ ಕುರಿತು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಐವರ ತಂಡ ಹಾಗೂ ಪ್ರೊ.ಕೆ.ಎಸ್‌. ಭಗವಾನ್‌ ನೇತೃತ್ವದ ಆರು ಸದಸ್ಯರ ತಂಡದ ನಡುವೆ ಸಂವಾದಕ್ಕೆ ಸಿದ್ಧತೆ ನಡೆದಿತ್ತು. ಆದರೆ, ಸಭಾಂಗಣ ನೀಡಲು ಜಿಲ್ಲಾಡಳಿತ ಅಥವಾ ನಗರ ಪೊಲೀಸರಿಂದ ಅನುಮತಿ ತರುವುದು ಕಡ್ಡಾಯ ಎಂದು ಎಂಎಂಸಿಆರ್‌ಐ ಆಡಳಿತ ಮಂಡಳಿ ಆಯೋಜಕರಿಗೆ ಸೂಚಿಸಿತ್ತು.

ಈ ಸಂವಾದ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆ ಇದೆ. ಜನರ ಧಾರ್ಮಿಕ ಭಾವನೆಗಳನ್ನು ಕೆರಳುತ್ತವೆ. ಹೀಗಾಗಿ, ಸಂವಾದಕ್ಕೆ ಅವಕಾಶ ನೀಡಬಾರದು ಎಂದು ಮೈಸೂರು ರಕ್ಷಣಾ ವೇದಿಕೆ ಸೇರಿದಂತೆ ಅನೇಕರು ನಗರ ಪೊಲೀಸರಿಗೆ ಮನವಿ ಮಾಡಿದ್ದರು.
ಪಿತೂರಿ–ಆರೋಪ: ಭಗವದ್ಗೀತೆ ಮುಕ್ತ ಸಂವಾದ ನಡೆಯದಂತೆ ಪಟ್ಟಭದ್ರ ಹಿತಾಸಕ್ತಿಗಳು ಪಿತೂರಿ ನಡೆಸಿವೆ ಎಂದು ಸಾಹಿತಿ ಪ್ರೊ.ಕೆ.ಎಸ್. ಭಗವಾನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ನಡೆಸಲು ನಗರ ಪೊಲೀಸ್ ಅನುಮತಿ ನೀಡದಿರುವುದು ಅಚ್ಚರಿ ತಂದಿದೆ. ಕಾರ್ಯಕ್ರಮದಲ್ಲಿ ಗಲಾಟೆ ಆಗಲು ಹೇಗೆ ಸಾಧ್ಯ. ಗಲಾಟೆಯಾದರೆ ಅದು ಯಾರಿಂದ ಆಗಬಹುದು. ಆಯುಧಗಳುಳ್ಳ ದೇವರುಗಳನ್ನು ನಾವು ಪ್ರಶ್ನಿಸಿದೆವು. ನಮ್ಮ ಬಳಿ ಆಯುಧ ಇಲ್ಲ. ನಾವು ಖಾಲಿ ಕೈನವರು. ಗಲಾಟೆಯನ್ನು ಪಟ್ಟಭದ್ರ ಹಿತಾಸಕ್ತಿಯುಳ್ಳವರೇ ಮಾಡಬೇಕಷ್ಟೇ ಎಂದರು.

ಯಾರನ್ನೂ ಗೆಲ್ಲಲಾಗದು: ಶ್ರೀಕೃಷ್ಣ ಒಬ್ಬ ದೇವರು, ಭಗವದ್ಗೀತೆ ಶ್ರೇಷ್ಠ ಗ್ರಂಥ ಎಂಬುದರ ಮೇಲೆ ಅಪಾರ ನಂಬಿಕೆ ಇರುವ ಗುಂಪು ನಮ್ಮದು. ಮಹಾಭಾರತ ನಡೆದಿದೆ ಎಂಬುದು ನಮ್ಮ ತಿಳಿವಳಿಕೆ. ಈ ವಿಚಾರದಲ್ಲಿ ಭಿನ್ನಾಭಿಪ್ರಾಯ, ಸಂದೇಹಗಳಿದ್ದರೆ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಆದರೆ, ಮಹಾಭಾರತ ನಡೆದೇ ಇಲ್ಲ ಎಂಬ ವ್ಯತಿರಿಕ್ತ ಅಭಿಪ್ರಾಯ ಹೊಂದಿದವರೊಂದಿಗೆ ಸಂವಾದ ಮಾಡುವುದು ಅನಗತ್ಯ. ಇದರಿಂದ ಯಾರ ಹೃದಯವನ್ನು ಗೆಲ್ಲಲು, ಬೌದ್ಧಿಕವಾಗಿ ಯಾರನ್ನೂ ಸೋಲಿಸಲು ಸಾಧ್ಯವಿಲ್ಲ. ಪೇಜಾವರ ಶ್ರೀ ಕೋರಿಕೆಯ ಮೇರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದೆ ಎಂದು ವಿಧಾನಪರಿಷತ್‌ ಸದಸ್ಯ ಗೋ. ಮಧುಸೂದನ ಪ್ರತಿಕ್ರಿಯೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ನಗರದಲ್ಲಿರುತ್ತಾರೆ. ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಸಂವಾದ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಿಸಲಾಗಿದೆ.
ಡಾ.ಎಚ್‌.ಟಿ. ಶೇಖರ್‌,
ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT