ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದಕ್ಕೆ ನೆಲೆ ಕನ್ನಡಕ್ಕೆ ಬೆಲೆ

ಶಾಸ್ತ್ರೀಯ ಕನ್ನಡ ಆಗಬೇಕಾದ್ದೇನು?
Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗ­ದಲ್ಲಿ ನಾನು ೨೦೦೯ರಿಂದ ೨೦೧೨ರ ಅವಧಿಯಲ್ಲಿ ಅತಿಥಿ ಪ್ರಾಧ್ಯಾ­ಪಕ­ನಾಗಿದ್ದೆ. ೨೦೧೧ರ ಫೆಬ್ರುವರಿ­ಯಲ್ಲಿ ಆ ವಿಶ್ವವಿದ್ಯಾಲಯದ ‘ಆಧುನಿಕ ಭಾರತ ಕೇಂದ್ರ’ದ ಸಹಯೋಗ­ದಲ್ಲಿ ಒಂದು ಅಂತರ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ‘New Perspectives on Gender and Transgression of Gender in South Asia’ ಎನ್ನುವ ಆ ಸಂಕಿರಣದಲ್ಲಿ ನಾನು ‘Transgression of Gender in a Kannada Classical Epic Pampa Bharata’ ಎನ್ನುವ ಪ್ರಬಂಧವನ್ನು ಮಂಡಿಸಿದೆ.

ಪಂಪ ಭಾರತದ ಭೀಷ್ಮ ಮತ್ತು ಅಂಬೆಯ ಪಾತ್ರಗಳನ್ನು ಮುಖಾಮುಖಿಯಾಗಿಸಿ, ಪಂಪನು ಹೇಳುವ ‘ಶೌಚ’ ಹಾಗೂ ‘ಬೀರ’ ಪರಿಕಲ್ಪನೆಗಳನ್ನು ಚರ್ಚಿಸಿದ್ದೆ. ಅಲ್ಲಿ ಭಾಗವಹಿಸಿದ­ವ­ರಲ್ಲಿ ಬಹಳ ಮಂದಿ ಇಂಡಾಲಜಿಯ ವಿದ್ವಾಂಸರಾಗಿದ್ದು ವ್ಯಾಸ­­ಭಾರತ­ವನ್ನು ಅಭ್ಯಾಸ ಮಾಡಿದವರಾಗಿದ್ದರು. ಕೆಲವರು ಹಿಂದಿ, ತಮಿಳು ಮತ್ತು ಇತರ ಕೆಲವು ಭಾರತೀಯ ಭಾಷೆ­ಗಳಲ್ಲಿ ರಾಮಾಯಣ ಓದಿಕೊಂಡವರಾಗಿದ್ದರು. ಹೆಚ್ಚಿನ­ವರು ಭಾರತ­ವನ್ನು ಅನೇಕ ಬಾರಿ ಅಧ್ಯಯನದ ಉದ್ದೇ­ಶಕ್ಕೆ ಸಂದರ್ಶಿಸಿ­ದವ­ರಾಗಿದ್ದರು. ಆದರೆ ಅವರಲ್ಲಿ ಯಾರೊ­ಬ್ಬರೂ ಈವರೆಗೆ ಕನ್ನಡದ ಪಂಪ ಕವಿಯ ಹೆಸರನ್ನು ಕೇಳಿಯೇ ಇರಲಿಲ್ಲ.

‘ಪಂಪ ಭಾರತದ ಇಂಗ್ಲಿಷ್‌ ಅನುವಾದ ಎಲ್ಲಿ ಸಿಗು­ತ್ತದೆ?’ ‘ಅಂತರ್ಜಾಲದ ಯಾವ ಕೊಂಡಿಯಲ್ಲಿ ಪಂಪನ ಕಾವ್ಯ­­ಗಳು ಸಿಗುತ್ತವೆ?’ ಎಂದು ಕೇಳಿದರು. ಆ ಎಲ್ಲ ಪ್ರಶ್ನೆ­ಗಳಿಗೂ ನನ್ನದು ಅವಮಾನ ತುಂಬಿದ ನಾಚಿಕೆಯ ಉತ್ತರ ‘ಇಲ್ಲ’ ಎಂಬುದಾಗಿತ್ತು. ನನ್ನ ಅತಿಥಿ ಪ್ರಾಧ್ಯಾಪಕತನ ೨೦೧೨ರ ಸೆಪ್ಟೆಂಬರ್‌ನಲ್ಲಿ ಕೊನೆ­ಗೊಳ್ಳುವಾಗ ಬೀಳ್ಕೊಡುಗೆ ಸಮಾರಂಭದಲ್ಲಿ ನಾನೊಂದು ‘ಶೈಕ್ಷಣಿಕ ಉಪನ್ಯಾಸ’ ನೀಡಬೇಕಾಗಿತ್ತು. ಸಹೋದ್ಯೋಗಿ­ಗಳೆಲ್ಲ ಪಂಪನ ಕಾವ್ಯಗಳ ಬಗ್ಗೆ ಉಪನ್ಯಾಸ ನೀಡುವಂತೆ ಒತ್ತಾಯಿ­ಸಿ­ದರು.

ಪಂಪ ಅವರ ಗಮನ ಸೆಳೆದಿದ್ದ ಎನ್ನುವ ಸಂತೋಷದಿಂದ ‘Concepts of Laukika and Agamika in Pampa's Epics’ ಬಗ್ಗೆ ಉಪನ್ಯಾಸ ನೀಡಿದೆ. ವಿಷಯಗಳ ಸಮರ್ಥನೆಗಾಗಿ ಪಂಪನ ಎರಡೂ ಕಾವ್ಯಗಳ ಕನ್ನಡ ಪದ್ಯ­ಗಳನ್ನು ನನ್ನ ಮಿತಿಯೊಳಗೆ ಇಂಗ್ಲಿಷ್‌ಗೆ ಅನುವಾದ ಮಾಡಿ­ಕೊಂಡು ವಿವರಿ­ಸಿದೆ. ಉಪನ್ಯಾಸ ನಂತರದ ಪ್ರಶ್ನೋತ್ತರದಲ್ಲಿ ಪಂಪನ ಕಾವ್ಯಗಳ ಅನುವಾದದ ಅಗತ್ಯದ ಬಗ್ಗೆ ಅನೇಕರು ಪ್ರಸ್ತಾಪಿಸಿದರು.

ಇದು ಪಂಪನ ಕಾವ್ಯಗಳ ಸ್ಥಿತಿ ಮಾತ್ರ ಅಲ್ಲ. ನಮ್ಮ ಪ್ರಾಚೀನ ಕನ್ನಡ ಸಾಹಿತ್ಯದ ಒಟ್ಟು ಅವಸ್ಥೆಯೇ ಹೀಗಿದೆ. ಕನ್ನಡದ ಮೊತ್ತ­ಮೊದಲ ಉಪಲಬ್ಧ ಗ್ರಂಥ  ‘ಕವಿರಾಜ­ಮಾರ್ಗ’­ ಜಗತ್ತಿನ ಭಾಷೆಗಳಿಗೆ ಅನುವಾದ ಆಗ­­ಬೇಕಾ­­ಗಿದೆ. ಕನ್ನಡದ ಮೊದಲ ಗದ್ಯ ಗ್ರಂಥ ‘ವಡ್ಡಾ­ರಾಧನೆ’­ಯಿಂದ ತೊಡಗಿ ಚಂಪೂ ಕವಿಗಳಾದ ರನ್ನ, ಜನ್ನ, ನಾಗಚಂದ್ರ, ನಾಗವರ್ಮ ಮುಂತಾದ ಕವಿಗಳ ಪರಂಪರೆ ದೀರ್ಘವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಪ್ರಯತ್ನವಾಗಿ ಕನ್ನಡದ ಹಿರಿಯ ವಿಮರ್ಶಕ ಮತ್ತು ಅನುವಾದಕರಾದ ಪ್ರೊ. ಸಿ.ಎನ್.­ರಾಮಚಂದ್ರನ್ ಮತ್ತು ನಾನು ಸೇರಿ ‘ಶಾಸ್ತ್ರೀಯ ಕನ್ನಡ ಸಾಹಿತ್ಯ -ಇಂಗ್ಲಿಷ್ ಅನುವಾದದಲ್ಲಿ’ ಎಂಬ ಸ್ವಯಂ ಆಸಕ್ತಿಯ ಯೋಜನೆ­ಯನ್ನು ಆರಂಭಿಸಿದ್ದೇವೆ.

ಹಳಗನ್ನಡ ಸಾಹಿತ್ಯಕ್ಕೆ ಸೀಮಿತವಾದ ಈ ಯೋಜನೆಯಲ್ಲಿ ಕನ್ನಡದ ಆರಂಭದ ಶಾಸನಗಳು, ಕನ್ನಡದ ಪ್ರಮುಖ ಚಂಪೂ ಕವಿಗಳ ಮತ್ತು ಕಾವ್ಯಗಳ ಪರಿಚಯ ಇಂಗ್ಲಿಷ್‌ನಲ್ಲಿ ಇರುತ್ತದೆ. ಜೊತೆಗೆ ಈ ಕವಿಗಳ ಕಾವ್ಯಗಳಿಂದ ಆಯ್ದ ಭಾಗದ ಪದ್ಯಗಳ ಇಂಗ್ಲಿಷ್‌ ಅನು­ವಾದ ಇರುತ್ತದೆ. ನಮ್ಮ ಪ್ರಯತ್ನದ ಬಗ್ಗೆ ಕೇಳಿ ತಿಳಿದುಕೊಂಡ ಹಂಪಿ ಕನ್ನಡ ವಿ.ವಿ ಕುಲಪತಿ ಈ ಯೋಜನೆಯನ್ನು ತಮ್ಮ ಭಾಷಾಂತರ ಕೇಂದ್ರದಿಂದ ಪ್ರಕಟಿಸಲು ಒಪ್ಪಿಕೊಂಡಿದ್ದಾರೆ.

ಕನ್ನಡ ವಚನ ಸಾಹಿತ್ಯವನ್ನು ಭಾರತದ ಮತ್ತು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದ ಮಾಡಿದ ಮತ್ತು ಮಾಡಿಸು­ತ್ತಿರುವ ಪ್ರಾಮಾಣಿಕ ಕಾಳಜಿ ಬೆಂಗಳೂರಿನ ‘ಬಸವ ಸಮಿತಿ’­ಯದ್ದು. ಕನಕದಾಸರ ಸಾಹಿತ್ಯ ಕೃತಿಗಳ ಬಹುಭಾಷಾ
ಅನು­ವಾದದ ಮಹತ್ವದ ಕೆಲಸ ನಡೆಯುತ್ತಿದೆ. ಕನ್ನಡದ ಪ್ರಾಚೀನ ಸಾಹಿತ್ಯದಲ್ಲಿ ಜೈನ ಕವಿ ಮತ್ತು ಶಾಸ್ತ್ರ­ಕಾರರ ಪಾಲು ಬಹು ದೊಡ್ಡದು. ಈ ಕವಿಗಳು ಬಳಸಿದ ಪ್ರಾಕೃತ ಭಾಷೆಗಳ ಬಳಕೆ ಗಣನೀಯವಾದುದು. ಇಂದು ಅಂತಹ ಭಾಷೆ­ಗಳನ್ನು ಬಲ್ಲ ವಿದ್ವಾಂಸರ ಕೊರತೆ ಕಾಡುತ್ತಿದೆ.

ಕನ್ನಡ ಶಾಸ್ತ್ರೀಯ ಕೃತಿಗಳ ಅಧ್ಯಯನಕ್ಕೆ ಬೇಕಾದ ಆಕರಗಳನ್ನು ಒದಗಿಸಬಲ್ಲ ತಜ್ಞ­ರನ್ನು ನಿರ್ಮಾಣ ಮಾಡಬೇಕಾದರೆ, ಅಂತಹ ಭಾಷೆ­ಗಳನ್ನು ಹೊಸ ಸಂಶೋಧಕರಿಗೆ ಕಲಿಸುವ ವ್ಯವಸ್ಥೆ ಬೇಕಾ­ಗು­ತ್ತದೆ. ಈಗ ರಾಜ್ಯದ ಯಾವುದೇ ವಿಶ್ವವಿದ್ಯಾಲಯ­ದಲ್ಲೂ ಕನ್ನಡ ಅಧ್ಯ­ಯನಕ್ಕೆ ಪೂರಕವಾದ ಇಂತಹ ವ್ಯವಸ್ಥೆ ಇಲ್ಲ. ಅದು ಅಗತ್ಯ­ವಾಗಿ ಆಗ­ಬೇಕು. ಹಾಗೆಯೇ ಅರೇಬಿಕ್ ಮತ್ತು ಪರ್ಶಿಯನ್ ಭಾಷೆ­ಗಳ ಪ್ರಭಾವ ಮಧ್ಯಯುಗೀನ ಕನ್ನಡದ ಮೇಲೆ ಬಹಳವಾಗಿ ಆಗಿದೆ. ಕನ್ನಡ ಸಂಶೋಧಕರು ಈ ಭಾಷೆ­ಗಳನ್ನು ಕಲಿಯಲು ಅವಕಾಶ ಕಲ್ಪಿಸಿದರೆ ಕನ್ನಡಕ್ಕೆ ಇನ್ನಷ್ಟು ಬಲ ಬರುತ್ತದೆ.

ಭಾಷಾ ವಿಜ್ಞಾನಿಗಳು, ಅಧ್ಯಾಪಕರು, ಕನ್ನಡೇ-­ತರ­ರಿಗೆ ಕನ್ನಡ­ವನ್ನು ಕಲಿಸಿದ ಅನುಭವಿಗಳು... -ಹೀಗೆ ಬೇರೆ ಬೇರೆ ಉದ್ದೇಶ ಮತ್ತು ಕಲಿಯುವ ವರ್ಗಗಳಿಗೆ ಅನುಗುಣವಾಗಿ ರಚಿ­ಸ­ಲಾದ ಸುಮಾರು 50 ಪುಸ್ತಕಗಳಿವೆ. ಆದರೆ ಸಮಸ್ಯೆ ಏನೆಂದರೆ, ಕನ್ನಡ ಭಾಷೆ, ವ್ಯಾಕರಣದ ಎಲ್ಲ ಪರಿ­ಕಲ್ಪನೆ­ಗಳನ್ನೂ,  ಪರಿಭಾಷೆ­ಗಳನ್ನೂ ಕ್ರಮಬದ್ಧವಾಗಿ ಕಲಿಸುವ ಪುಸ್ತಕ ಇಲ್ಲದಿರುವುದು. ಅಂತಹ ಪುಸ್ತಕ  ಕನ್ನಡದಲ್ಲೂ ಬೇಕು, ಇಂಗ್ಲಿಷ್ ಮತ್ತು ಇತರ ಭಾಷೆಗಳಲ್ಲೂ ಬೇಕು. ಈ ವಿಷಯದಲ್ಲಿ ರಾಜ್ಯದಲ್ಲಿ ಈಗ ಇರುವ ಬಹುಶ್ರುತ ತಜ್ಞ­ರಾದ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರಲ್ಲಿ ಕಳೆದ ವರ್ಷ ವಿನಂತಿಸಿದೆ.

ಮೊನ್ನೆ ತಾನೇ ಅವರು ದೂರ­ವಾಣಿಯಲ್ಲಿ ಮಾತಾಡಿ, ‘ಬರೆದು ಮುಗಿಸಿದೇನಪ್ಪ’ ಎನ್ನುವ ಶುಭ ವರ್ತಮಾನವನ್ನು ಕೊಟ್ಟಿದ್ದಾರೆ.  ಅವರ ಈ ವ್ಯಾಕರಣ ಗ್ರಂಥ ಜಗತ್ತಿನ ಭಾಷೆಗಳಿಗೆ ತರ್ಜುಮೆ ಆಗಬೇಕು. ಕನ್ನಡ ಛಂದಶ್ಶಾಸ್ತ್ರದಲ್ಲಿ ನಾಗವರ್ಮನ  ‘ಛಂದೋಂ­ಬುಧಿ’ ಅಪೂರ್ವ ಗ್ರಂಥ. ದ್ರಾವಿಡ ಛಂದಸ್ಸು ಎಂದರೆ ತಮಿಳು ಛಂದಸ್ಸು ಎಂದು ಹೊರಜಗತ್ತಿನಲ್ಲಿ  ಪ್ರಚಾರ ಆಗಿದೆ. ಹಾಗಿ­ರುವಾಗ  ಕನ್ನಡದ ಅಂಶಗಣಗಳು ಮತ್ತು ಅವುಗಳಿಂದ ರಚಿತ­ವಾದ ಕನ್ನಡದ ದೇಸಿ ಮಟ್ಟುಗಳು ಪ್ರಾಚೀನವಾದವು ಎನ್ನುವು­ದನ್ನು ನಾವು ಸಾರಬೇಕು.

ಕ್ರಿ.ಶ. 7ನೇ ಶತಮಾನದ ಬಾದಾ­ಮಿಯ ಶಾಸನದಲ್ಲೇ ಅಂಶ ಗಣದ ತ್ರಿಪದಿಗಳ ಬಳಕೆ ಆಗಿರು­ವುದು ನಮಗೆಲ್ಲ ಚಿರಪರಿಚಿತ; ಆದರೆ ಅದು  ಕನ್ನಡದ ಅನನ್ಯತೆ ಎಂದು ಪ್ರಚಾರ ಮಾಡಿಲ್ಲ. ಗ್ರೀಕ್ ಪ್ರಹಸನದಲ್ಲಿ ಕನ್ನಡ ಪದಗಳಿವೆ ಎಂದು ಗೋವಿಂದ ಪೈ, ಬಿ.ಎ.ಸಾಲೆತ್ತೂರು, ಶಾಮಾ ಶಾಸ್ತ್ರಿ, ಬಾರ್ನೆಟ್ ಮುಂತಾ­ದವರು ಹೇಳಿ ಬಹಳ ಕಾಲ ಸಂದಿದೆ. ಆ ಭಾಷೆಯ ಪ್ರಾಚೀನ ಪ್ರಯೋಗಗಳ ಮರು ಅಧ್ಯಯ­ನದ ಮೂಲಕ ಆ ಪ್ರಮೇಯ­ವನ್ನು ಗಟ್ಟಿಗೊಳಿಸಲು ಇದು ಸಕಾಲ. ಅನ್ಯ ಭಾಷೆಗಳ ಶಾಸನ­ಗಳಲ್ಲಿನ ಕನ್ನಡ ಉಲ್ಲೇಖಗಳ ಶೋಧಕ್ಕಾಗಿ ಬಹುಶಿಸ್ತೀಯ ಪಡೆಯೊಂದರ ನಿರ್ಮಾಣ ಅಗತ್ಯ.

ಅಂತರ್ಜಾಲದಲ್ಲಿ ಶಾಸ್ತ್ರೀಯ ಕನ್ನಡದ ಪ್ರಸರಣ ತುಂಬಾ ದುರ್ಬಲವಾಗಿದೆ. ಆಸಕ್ತ ಕನ್ನಡಿಗರು ವೈಯಕ್ತಿಕ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಅಷ್ಟೆ. ಈ ದೃಷ್ಟಿಯಿಂದ ವಿಕಿಪೀಡಿಯ­ವನ್ನು ಇನ್ನಷ್ಟು ಅಧ್ಯಯನದ ನೆಲೆಯಿಂದ, ಪ್ರಮಾಣಗಳ ಬಲದಿಂದ ಪುಷ್ಟಿ­ಗೊಳಿಸ­ಬೇಕಾದ ಅಗತ್ಯವಿದೆ. ತಮಿಳರು ಅಮೆರಿಕದ ಭಾಷಾ ತಜ್ಞರನ್ನು ಬಳಸಿಕೊಂಡು, ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಹಕ್ಕಿನಿಂದ ಪಡೆಯುತ್ತಾರೆ. ನಾವು ದೇಶದ ಒಳಗಿನ ಮತ್ತು ಹೊರ­ಗಿನ ಭಾಷಾ ತಜ್ಞರನ್ನು ಕನ್ನಡ ಪರವಾದ  ‘ಭಾಷಾ ವಕೀಲ’­ರನ್ನಾಗಿ ಬಳಸಿಕೊಳ್ಳಬೇಕು. ಶಾಸ್ತ್ರೀಯ ಕನ್ನಡ ಮತ್ತು ನಮ್ಮ ಇಂದಿನ ಕನ್ನಡ ಬೇರೆ ಬೇರೆ ಅಲ್ಲ; ಕನ್ನಡ ಕೂಡು ಕುಟುಂಬದ ಸಂತಾನ ನಕ್ಷೆಯಲ್ಲಿ ನಮ­ಗೆಲ್ಲ-­ರಿಗೂ ಸಮ ಪಾಲು, ಸಮ ಬಾಳು ಇದೆ ಮತ್ತು ಇರಬೇಕು.

(ಲೇಖಕರು ಕನ್ನಡದ ಹಿರಿಯ ಚಿಂತಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT