ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಭಾಷಿಕರೂ ಕನ್ನಡ ಸಾಹಿತ್ಯದಲ್ಲಿ ತೊಡಗಲಿ

‘ಕಾವ್ಯ ಸಪ್ತಾಹ’– ಜಿಲ್ಲಾ ಕವಿಗೋಷ್ಠಿಯಲ್ಲಿ ಧರಣಿದೇವಿ ಮಾಲಗತ್ತಿ ಅಭಿಮತ
Last Updated 3 ನವೆಂಬರ್ 2014, 6:37 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಿವಿಧ ಭಾಷೆಗಳನ್ನಾಡುವ ಜನರಿದ್ದಾರೆ. ಭಿನ್ನ ಭಾಷೆ, ವಿಭಿನ್ನ ಸಂಸ್ಕೃತಿ ಇದೆ ಎಂದಾಕ್ಷಣ ಬೇರೆಯಾಗಬೇಕು ಎಂದರ್ಥವಲ್ಲ. ಭಿನ್ನತೆ, ವೈವಿಧ್ಯತೆಯೇ ನಮ್ಮ ಶಕ್ತಿಯಾಗಲಿ. ಅನ್ಯಭಾಷಿಕರು ಕೂಡ ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡುವಂತಾಗಲಿ ಎಂದು ಲೇಖಕಿ ಡಾ.ಧರಣಿದೇವಿ ಮಾಲಗತ್ತಿ ಆಶಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ‘ಕಾವ್ಯ ಸಪ್ತಾಹ’ದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕನ್ನಡದ ಪ್ರಮುಖ ಸಾಹಿತಿಗಳಾದ ಪಂಜೆ ಮಂಗೇಶರಾಯರು, ದ.ರಾ. ಬೇಂದ್ರೆ ಸೇರಿದಂತೆ ಹಲವರ ಮಾತೃಭಾಷೆ ಬೇರೆಯಾಗಿದ್ದರೂ ಅವರು ಈ ನಾಡಿನ ಭಾಷೆಯಾದ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದರು. ಇದೇ ರೀತಿ ಕೊಡಗಿನಲ್ಲೂ ಕನ್ನಡ ಸಾಹಿತ್ಯ ಚಟುವಟಿಕೆಗಳು ಬೆಳೆಯಲಿ ಎಂದು ಹೇಳಿದರು.

ಕಾವ್ಯ ರಚನೆಯಲ್ಲಿ ತೊಡಗಿರುವವರೇ ಕಾವ್ಯ ವಿಮರ್ಶೆ ಮಾಡಿದರೆ ಒಳಿತು. ಯಾವತ್ತೂ ನೀರಿಗೆ ಇಳಿಯದೇ ಈಜಾಡುವುದರ ಬಗ್ಗೆ ವಿಮರ್ಶೆ ಮಾಡುವುದೆಂದರೆ ಹೇಗೆ? ನದಿಯ ದಂಡೆಯ ಮೇಲೆ ಕುಳಿತು ಮೀನಿಗೆ ಈಜು ಹೇಳಿಕೊಡುವುದರಲ್ಲಿ ಅರ್ಥವಿದೆಯೇ? ಎಂದು ಅವರು ಪ್ರಶ್ನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಥೆಗಾರ ಅಬ್ದುಲ್‌ ರಶೀದ್‌ ಮಾತನಾಡಿ, ಕೊಡಗಿನ ಕವಿಗಳು ಕವಿಗಳಂತೆ ಬದುಕುತ್ತಿಲ್ಲ, ಮನುಷ್ಯರಾಗಿ ಬದುಕುತ್ತಿದ್ದಾರೆ. ಹೀಗಾಗಿ ಅವರ ಕಾವ್ಯಗಳಲ್ಲಿ ದಿನನಿತ್ಯದ ಬದುಕಿನ ಚಿತ್ರಣವಿದೆ, ಸರಳತೆಯಿದೆ, ನೈಜತೆಯಿದೆ. ಬೆಂಗಳೂರಿನ ಸಾಹಿತಿಗಳಂತೆ ಆಡಂಬರ ಇಲ್ಲ ಎಂದು ಅವರು ಪ್ರಶಂಶಿಸಿದರು.

ಹುಟ್ಟಿ ಬೆಳೆದ ಹಳ್ಳಿಗಳನ್ನು ಬಿಟ್ಟು ಬೆಂಗಳೂರು ಸೇರುವ ಪ್ರವೃತ್ತಿ ಸಾಹಿತಿಗಳಲ್ಲಿ ಹೆಚ್ಚುತ್ತಿದೆ. ಪ್ರಶಸ್ತಿ, ಅಕಾಡೆಮಿ ಸ್ಥಾನ, ಸೈಟ್‌ ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಸಾಹಿತಿಗಳು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ ಅವರ ಕಾವ್ಯಗಳಲ್ಲಿ ಸತ್ವ ಕಡಿಮೆಯಾಗಿ, ಆಡಂಬರ, ಅಬ್ಬರ ಹೆಚ್ಚಾಗಿರುತ್ತದೆ ಎಂದು ವಿಷಾದಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್‌ ಮಾತನಾಡಿ, ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹೊಸಬರಿಗೆ ಅವಕಾಶ ನೀಡಲು ಹಿರಿಯ ಸಾಹಿತಿಗಳು ಮುಂದೆ ಬರಬೇಕು. ಪದೇ ಪದೇ ತಮಗೆ ಅವಕಾಶ ನೀಡಬೇಕೆಂದು ದುಂಬಾಲು ಬೀಳಬಾರದು.  ಮುಂಬರುವ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಜಿಲ್ಲೆಯ ಯುವಕವಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ.ಮೇಟಿ ಮುದಿಯಪ್ಪ ಆಶಯ ಭಾಷಣ ಮಾಡಿದರು. ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್‌.ಐ. ಮುನೀರ್‌ ಅಹ್ಮದ್‌ ನಿರೂಪಿಸಿದರು. ವಿರಾಜಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ಕೇಶವ ಕಾಮತ್‌, ಸೋಮವಾರಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ಪ್ರೇಮಕುಮಾರ್‌ವ ಉಪಸ್ಥಿತರಿದ್ದರು.

ಕಾವ್ಯ ವಾಚನ: ಸ್ಮಿತಾ ಅಮೃತರಾಜ್‌, ಪಿ.ಎ. ಸುಶೀಲ, ಸಂಗೀತಾ ರವಿರಾಜ್‌, ಮಿಲನ ಭರತ್‌, ಸ್ನೇಹಾ ಬಸಮ್ಮ, ಮುಲ್ಲೇಂಗಡ ರೇವತಿ ಪೂವಯ್ಯ, ಕೆ.ಕೆ.ಸುನಿತಾ ಲೋಕೇಶ್‌ ಸಾಗರ್‌, ಕೆರೊಟಿರ ಶ್ರೀಮತಿ ಶಶಿಸುಬ್ರಮಣಿ, ಪುಷ್ಪಲತಾ ಶಿವಪ್ಪ, ಪುದಿಯನೆರವನ ರೇವತಿ ರಮೇಶ್‌, ಬಿ.ಎ. ಷಂಶುದ್ದೀನ್‌, ಡಾ.ಶ್ರೀಧರ್‌ ಹೆಗಡೆ, ಬಿ.ಆರ್‌. ಜೋಯಪ್ಪ, ಡಾ.ಜೆ. ಸೋಮಣ್ಣ, ಕಾಜೂರು ಸತೀಶ್‌, ಕಿಗ್ಗಾಲು ಗಿರೀಶ್‌, ಎಂ.ಇ. ಮಹಮದ್‌, ಜಗದೀಶ್‌ ಜೋಡುಬೆಟ್ಟಿ ಹಾಗೂ ಮಣಜೂರು ಶಿವಕುಮಾರ್‌ ಕವನ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT