ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಮಾತಿಲ್ಲ: ವಾಕ್ಸಮರವೇ ಎಲ್ಲ !

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕಾರವಾರ: ಕೊನೆ ಗಳಿಗೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆದ ಕಾರಣ ಇಡೀ ರಾಜ್ಯದ ಗಮನ ಸೆಳೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈಗ ಉಳಿದದ್ದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ನೇರ ಪೈಪೋಟಿ ಮಾತ್ರ.

ಬಿಜೆಪಿಯಿಂದ ಹಾಲಿ ಸಂಸದ ಅನಂತಕುಮಾರ್ ಹೆಗಡೆ, ಕಾಂಗ್ರೆಸ್‌ನಿಂದ ರಾಜ್ಯದ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರ ಪುತ್ರ ಪ್ರಶಾಂತ ದೇಶಪಾಂಡೆ ಪರಸ್ಪರ ಎದುರಾಳಿಗಳು.

ಕಣದಲ್ಲಿ ಆಮ್ ಆದ್ಮಿ ಪಕ್ಷದ  ರಾಘವೇಂದ್ರ ಠಾಣೆ, ಬಹುಜನ ಸಮಾಜ ಪಕ್ಷದಿಂದ ಸಂತೋಷ ನಾಯ್ಕ, ಸರ್ವ ಜನತಾ ಪಕ್ಷದಿಂದ ಇಲಿಯಾಸ್‌ ಕಾಟಿ, ಬಹು­ಜನ ಮುಕ್ತಿ ಪಕ್ಷದಿಂದ ಓಲ್ವಿನ್‌ ಲೋಪಿಸ್‌, ರಾಣಿ ಚೆನ್ನಮ್ಮ ಪಕ್ಷದಿಂದ ಬಸವರಾಜ ಹಡಪದ, ಪಕ್ಷೇತರ­ರಾಗಿ ಅಶೋಕ ಚಲವಾದಿ, ಸದಾನಂದ ದೇಶಭಂಡಾರಿ ಇದ್ದಾರೆ.

ಈ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಕಾರವಾರ, ಯಲ್ಲಾಪುರ, ಹಳಿಯಾಳ, ಶಿರಸಿ–ಸಿದ್ದಾಪುರ ಮತ್ತು ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ವಿಧಾನಸಭಾ ಕ್ಷೇತ್ರಗಳಿವೆ.

ಮೋದಿಯೇ ಆಶಾಕಿರಣ: ನಾಲ್ಕು ಬಾರಿ ಸಂಸದರಾಗಿ­ರುವ ಅನಂತಕುಮಾರ್‌ ಹೆಗಡೆ ಬಗ್ಗೆ ಇಡೀ ಕ್ಷೇತ್ರದಲ್ಲಿ ವಿರೋಧಿ ಅಲೆ ಪ್ರಬಲವಾಗಿದೆ. ‘ಜನಸಾಮಾನ್ಯರು ಮತ್ತು ಪಕ್ಷದ ಕಾರ್ಯಕರ್ತರನ್ನು ಅನಂತಕುಮಾರ್‌ ನಿರ್ಲಕ್ಷಿಸುತ್ತಾರೆ. ಚುನಾವಣೆ ಬಂದಾಗ ಮಾತ್ರ ವೋಟು ಕೇಳಲು ಬರುತ್ತಾರೆ’ ಎಂಬುದು ಅವರ ವಿರು­ದ್ಧದ ಆಕ್ರೋಶಕ್ಕೆ ಮುಖ್ಯ ಕಾರಣ. ಉತ್ತರಕನ್ನಡ ಜಿಲ್ಲೆಯ ಬಿಜೆಪಿಯ ಏಕೈಕ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ–ಅನಂತಕುಮಾರ್‌ ನಡುವಿನ ಹಳೆಯ ವೈಮನಸ್ಸು ಈ ಚುನಾವಣೆಯಲ್ಲೂ ಮುಂದುವರಿದಿದೆ.

ಇವೆಲ್ಲ ಅಸಮಾಧಾನಗಳ ನಡುವೆಯೂ ಮೋದಿ ಗಾಳಿ ಇಡೀ ಕ್ಷೇತ್ರದಲ್ಲಿ ಪಸರಿಸಿದೆ. ಮೋದಿ ಗುಂಗಿನಲ್ಲಿರುವ ಪಕ್ಷದ ಕಾರ್ಯಕರ್ತರು ಅನಂತ­ಕುಮಾರ್‌ ಅವರನ್ನು ವೈಯಕ್ತಿಕ ನೆಲೆಯಲ್ಲಿ ನೋಡು­ತ್ತಿಲ್ಲ. ‘ಬಿಜೆಪಿ ಗೆಲ್ಲಿಸಬೇಕು, ಮೋದಿ ಅಧಿಕಾರಕ್ಕೆ ಬರಬೇಕು’ ಎಂಬ ಒಂದೇ ಜಪದಲ್ಲಿ ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಸಂಘ ಪರಿವಾರದ ಸದಸ್ಯರು ಪ್ರತಿ ಬೂತ್‌ನಲ್ಲಿ ಬಿಜೆಪಿ ಗೆಲುವಿಗೆ ಪಣತೊಟ್ಟು ಮತ ಯಾಚಿಸುತ್ತಿದ್ದಾರೆ. ಸುಶಿಕ್ಷಿತ ಮತದಾರರು, ‘ಮೋದಿಗೆ ನಮ್ಮ ವೋಟು’ ಎನ್ನುತ್ತಾರೆ. ಆದರೆ ಅನಂತಕುಮಾರ್‌ ವಿರೋಧಿ ಅಲೆಯ ಮುಂದೆ ಇದು ಎಷ್ಟು ಪರಿಣಾಮ­ಕಾರಿಯಾಗಿರುತ್ತದೆ ಎಂಬುದನ್ನು ಹೇಳಲಾಗದು. ಹಾಗಾಗಿ ಬಿಜೆಪಿಯ ಮತ ಗಳಿಕೆ ಪ್ರಮಾಣ ಕುಸಿಯ­ಬಹುದು ಎಂಬ ಭೀತಿ ಪಕ್ಷದ ಕಾರ್ಯಕರ್ತರಲ್ಲಿದೆ.

ಗೆಲುವಿನ ಭರವಸೆ: ಒಂದೂವರೆ ದಶಕದಿಂದ ಈಚೆಗೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿಕೊಂಡಿದ್ದ ಕೋಟೆಯನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಛಿದ್ರ ಮಾಡಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಹೀಗಾಗಿ ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಕಾಂಗ್ರೆಸ್‌ ಬೆಂಬಲಿತ ಇಬ್ಬರು ಪಕ್ಷೇತರ ಶಾಸಕರಿದ್ದಾರೆ. ಶಿರಸಿ–ಸಿದ್ದಾಪುರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಸ್ತಿತ್ವ ಉಳಿಸಿಕೊಂಡಿದೆ. ಕಿತ್ತೂರಿನಲ್ಲಿ ಕಾಂಗ್ರೆಸ್‌, ಖಾನಾಪುರ­ದಲ್ಲಿ ಎಂಇಎಸ್‌ ಶಾಸಕರಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ­ವಾರು ಮತಗಳಿಕೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದರೂ ಹೇಳಿಕೊಳ್ಳುವಂತಹ ಅಂತರ ಇರಲಿಲ್ಲ.

ಒಟ್ಟಾರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯವಿದ್ದರೂ ಆ ಪಕ್ಷದ ಆಂತರಿಕ ಭಿನ್ನಮತದಿಂದ ಕೆಲವು ಪ್ರಮುಖರು ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿಲ್ಲ. ಮಗನ ರಾಜಕೀಯ ಭವಿಷ್ಯ ಅರಳಿಸುವುದರ ಜೊತೆಗೆ ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಪಣತೊಟ್ಟಿರುವ ಸಚಿವ ದೇಶಪಾಂಡೆ ಪಕ್ಷದಲ್ಲಿನ ಆಂತರಿಕ ಭಿನ್ನಮತಕ್ಕೆ ತಾತ್ಕಾಲಿಕ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. 

ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ನೀಡಿದ್ದ ಕಿತ್ತೂರು, ಖಾನಾಪುರ ಕ್ಷೇತ್ರಗಳ ಮತ್‌ ಬ್ಯಾಂಕ್‌ ಮೇಲೆ ಕಣ್ಣಿಟ್ಟೇ ದೇಶಪಾಂಡೆ, ಆ ಊರು­ಗಳಿಗೆ ಹಲವಾರು ಅಭಿವೃದ್ಧಿ ಕಾಮಗಾರಿ ತಂದಿದ್ದಾರೆ. ಮೊದಲ ಬಾರಿಗೆ ಹಲಸಿಯಲ್ಲಿ ಕದಂಬೋತ್ಸವ ನಡೆಸಿ­ದ್ದಾರೆ. ಇದರಿಂದ ಇಲ್ಲಿ ಬಿಜೆಪಿಯ ಮತಗಳು ವಿಭಜನೆ­ಯಾಗುವ  ಸಾಧ್ಯತೆಗಳಿವೆ. ರಾಜಸ್ತಾನದ ರಾಜ್ಯಪಾಲೆ ಮಾರ್ಗರೆಟ್‌ ಆಳ್ವ ಪುತ್ರ ನಿವೇದಿತ್‌ ಆಳ್ವ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ವಂಚಿತರಾದ ಅವರು ಹಾಗೂ ಮಾರ್ಗರೆಟ್‌ ಆಳ್ವ ಬಣದ ಬೆಂಬಲಿಗರು ಸದ್ಯಕ್ಕೆ ತಟಸ್ಥರಾಗಿದ್ದಾರೆ. ಆ ಬಣದ ನಡೆ ಇನ್ನೂ ನಿಗೂಢವಾಗಿದೆ.

ಹಾಲಿ ಸಂಸದರ ವಿರುದ್ಧದ ಅಸಮಾಧಾನದ ಅಲೆ ಕಾಂಗ್ರೆಸ್‌ಗೆ ವರವಾದೀತು ಎಂಬ ಆತಂಕ ಸ್ವತಃ ಬಿಜೆಪಿಯವರಲ್ಲಿಯೇ ಇದೆ.  ಆದರೂ ಕಾಂಗ್ರೆಸ್‌ನ ಇಬ್ಬರು ಶಾಸಕರು, ಸ್ಥಳೀಯ ಮುಖಂಡರ ಅಂತರಂಗದ ಗುಟ್ಟು ಕಾಂಗ್ರೆಸ್‌ಗೆ ಮುಳ್ಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಅಜಗಜಾಂತರ: ಕಾಂಗ್ರೆಸ್‌ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ ಅವರು ತಂದೆ ಸಚಿವ ಆರ್.ವಿ. ದೇಶಪಾಂಡೆ­ಗಿಂತ ಮೃದುಸ್ವಭಾವದವರು. ಅಮೆರಿಕದ ಹಾರ್ವರ್ಡ್‌ ಕಾನೂನು ಶಾಲೆಯಲ್ಲಿ ಎಲ್‌ಎಲ್‌ಎಂ ಪದವಿ ಪಡೆದಿದ್ದಾರೆ. ಕೇಂದ್ರ ಸಚಿವ, ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲರ ಮಗಳನ್ನು ಮದುವೆಯಾಗಿದ್ದಾರೆ. ತಮ್ಮ ಕುಟುಂಬದ ‘ವಿ.ಆರ್‌. ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌’ ಮುಖಾಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರ ಮಾತುಗಳಲ್ಲಿ ಇನ್ನೊಬ್ಬರನ್ನು ತೇಜೋವಧೆ ಮಾಡುವ ಕಟು ನುಡಿಗಳಿಲ್ಲ. ಅವರೊಬ್ಬ ಸರಳ ನಡೆ­ನುಡಿಯ ವ್ಯಕ್ತಿ ಎಂಬುದನ್ನು ಅವರ ಎದುರಾಳಿಗಳೂ ಒಪ್ಪುತ್ತಾರೆ.

ಸಕ್ರಿಯ ರಾಜಕಾರಣಕ್ಕೆ ಬರಲು ಅವರು ಸಾಕಷ್ಟು ಪೂರ್ವತಯಾರಿ ಮಾಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲೇ ಟಿಕೆಟ್‌ಗೆ ಪೈಪೋಟಿ ನಡೆಸಿದ್ದರು. ಆದರೆ, ಆಗ ಟಿಕೆಟ್‌ ಹಿರಿಯ ರಾಜಕಾರಣಿ ಮಾರ್ಗರೆಟ್‌ ಆಳ್ವ ಅವರ ಪಾಲಾಗಿತ್ತು. ಈ ಸಲ ಮಾರ್ಗರೆಟ್‌ ಮಗನನ್ನು ಹಿಂದೆ ಸರಿಸಿ ಟಿಕೆಟ್‌ ಪಡೆಯುವಲ್ಲಿ ಸಫಲರಾದರು.

ಪ್ರಥಮ ಬಾರಿ ಚುನಾವಣೆ ಎದುರಿಸುತ್ತಿರುವ ಪ್ರಶಾಂತ (37 ವರ್ಷ) ತಮ್ಮ ಪ್ರತಿಸ್ಪರ್ಧಿ ಅನಂತ­ಕುಮಾರ್‌ ಹೆಗಡೆ ಅವರಿಗಿಂತಲೂ ಕಿರಿಯ ವಯಸ್ಸಿನವರು.
ಅನಂತಕುಮಾರ ಹೆಗಡೆ ಅವರು ತಮ್ಮ ಮಾತು­ಗಳಿಂದ ಜನರನ್ನು ಮೋಡಿ ಮಾಡುತ್ತಾರೆ. ಆದರೆ, ಅಲ್ಪಸಂಖ್ಯಾತರ ವಿರುದ್ಧದ ಕಟುನುಡಿಗಳು ಎಷ್ಟೋ ಸಲ ಅವರನ್ನು ವಿವಾದದಲ್ಲಿ ಸಿಕ್ಕಿ ಹಾಕಿಸಿವೆ. ಆದರೂ ಆ ಮೊನಚು ಅವರಲ್ಲಿ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಅವರದೇ ಆದ ಯುವ ಅಭಿಮಾನಿಗಳ ಒಂದು ವರ್ಗ ಅವರ ಬೆನ್ನಿಗಿದೆ.

ತಲೆಕೆಳಗಾದ ಜೆಡಿಎಸ್‌: ಜಿಲ್ಲೆಯಲ್ಲಿ ಹಿಂದಿನಿಂದಲೂ ದುರ್ಬಲವಾಗಿದ್ದ ಜೆಡಿಎಸ್‌ ಈ ಬಾರಿ ಚುನಾವಣೆ­ಯಲ್ಲಿ ತುರುಸಿನಿಂದ ಕಣಕ್ಕೆ ಇಳಿದಿತ್ತು. ಪ್ರಬಲ ನಾಮಧಾರಿ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಶಿವಾನಂದ ನಾಯ್ಕ ಅವರಿಗೆ ಟಿಕೆಟ್‌ ಕೊಟ್ಟಿತ್ತು. ಆದರೆ ಅವರು ಹೇಳದೆಕೇಳದೆ ನಾಮಪತ್ರ ಹಿಂಪಡೆದಿದ್ದು ಜೆಡಿಎಸ್‌ ಮುಖಂಡರಿಗೆ ನುಂಗಲಾರದ ತುತ್ತಾಗಿದೆ. ಮೇಲ್ನೋಟಕ್ಕೆ ಜೆಡಿಎಸ್‌ ತಟಸ್ಥವಾಗಿರುವುದಾಗಿ ಹೇಳಿಕೊಂಡಿದೆ. ಆದರೆ ಜೆಡಿಎಸ್‌ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‌ಗೆ ಲಾಭವಾದರೆ, ಶಿವಾನಂದ ನಾಯ್ಕ ಬೆಂಬಲಿಗರು, ಬಿಜೆಪಿ ಮೂಲದ ಜೆಡಿಎಸ್‌ ನಾಯಕರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಆಪ್ತರಾಗಿದ್ದ ಜೆಡಿಎಸ್‌ನ ಮಾಜಿ ಶಾಸಕ ಸುನೀಲ್‌ ಹೆಗಡೆ ಹಾಗೂ ಸಚಿವ ದೇಶಪಾಂಡೆ ಈಗ ಬದ್ಧ ರಾಜಕೀಯ ವೈರಿಗಳು. ದೇಶಪಾಂಡೆ ಅವರಿಗೇ ಒಮ್ಮೆ ಸೋಲಿನ ರುಚಿ ತೋರಿಸಿದ್ದ ಸುನೀಲ್‌ ಹೆಗಡೆ ಅವರಿಗೆ ಹಳಿಯಾಳದಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ. ಆ ಕಾರಣಕ್ಕಾಗಿ ಅಲ್ಲಿ ಬಿಜೆಪಿ ಅನಿರೀಕ್ಷಿತ ಮತಗಳನ್ನು ಜೋಳಿಗೆಗೆ ಹಾಕಿಕೊಳ್ಳಬಹುದು.

ಕರಾವಳಿ ಭಾಗದ ಅಂಕೋಲಾ, ಕಾರವಾರದಲ್ಲಿ ಕಾಂಗ್ರೆಸ್‌ ಗಾಳಿ ಜಾಸ್ತಿ ಇದ್ದರೆ ಹೊನ್ನಾವರ, ಕುಮಟಾ, ಭಟ್ಕಳದಲ್ಲಿ ಸಮಬಲ ಇದ್ದಂತಿದೆ. ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲಿ ಮಿಶ್ರ ವಾತಾವರಣ ಇದ್ದರೆ, ಮುಂಡಗೋಡ, ಜೊಯಿಡಾ­ದಲ್ಲಿ ಕಾಂಗ್ರೆಸ್‌ ಅಲೆ ಇದೆ. ಸಚಿವ ದೇಶಪಾಂಡೆ ಸ್ವಕ್ಷೇತ್ರ ಹಳಿಯಾಳದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ಇದೆ ಎಂಬುದು ಸದ್ಯಕ್ಕೆ ಮೇಲ್ನೋಟಕ್ಕೆ ಕಾಣುತ್ತಿರುವ ಅಂಶ. ಆದರೆ ರಾಜಕೀಯದ ಗಾಳಿ ಯಾವಾಗ, ಯಾರ ಕಡೆ ವಾಲುತ್ತದೆ ಎಂದು ಊಹಿಸುವುದು ಕಷ್ಟ.

ಮಾತೇ ಬಂಡವಾಳ
ರಾಜ್ಯ ಸರ್ಕಾರದ 10 ತಿಂಗಳ ಕಾರ್ಯಕ್ರಮ, ಅಪ್ಪನ ಸಾಧನೆ ಮುಂದಿಟ್ಟುಕೊಂಡು ಪ್ರಶಾಂತ ಮತದಾರರ ಮುಂದೆ ಹೋದರೆ, ಅನಂತ­ಕುಮಾರ್‌ ಅವರು ನರೇಂದ್ರ ಮೋದಿ, ಹಿಂದುತ್ವ, ರಾಷ್ಟ್ರೀಯತೆ ಆಧಾರದಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಇವೆಲ್ಲ ಮೀರಿ  ಮಾತಿನಲ್ಲಿ ಕೆಸರೆರಚಿಕೊಳ್ಳುವುದೇ ಇಬ್ಬರು ಯುವ ಸ್ಪರ್ಧಿಗಳ ಪ್ರಮುಖ ಅಸ್ತ್ರವಾಗಿದೆ.

‘ಚಿನ್ನದ ಲೋಟದಲ್ಲಿ ಹಾಲು ಕುಡಿದು ಬೆಳೆದವರಿಗೆ ಜನಸಾಮಾನ್ಯರ ಸಮಸ್ಯೆ ಹೇಗೆ ಗೊತ್ತಾಗಬೇಕು’ ಎಂದು ಹಳಿಯಾಳದ ಗೌಳಿಗರಿಬ್ಬರ ನಡುವಿನ ಚರ್ಚೆ ಅಭ್ಯರ್ಥಿಗಳ ನಡುವಿನ ವಾಕ್ಸಮರದ ಪ್ರಭಾವಕ್ಕೆ ಹಿಡಿದ ಕನ್ನಡಿ. ಕಿತ್ತೂರು, ಖಾನಾಪುರದಲ್ಲಿ ಬಿಜೆಪಿಯವರು ಒಗ್ಗಟ್ಟಾಗಿ ದುಡಿಯುತ್ತಿದ್ದರೂ, ಕೆಲವು ಸಾಂಪ್ರದಾಯಿಕ ಬಿಜೆಪಿ ಮತದಾರರು ಬದಲಾವಣೆ ಬಯಸಿದಂತಿದೆ.

ಕ್ಷೇತ್ರದಲ್ಲಿ ಒಟ್ಟು 14,21,488 ಮತದಾರರಿದ್ದಾರೆ. ಮರಾಠ, ಅಲ್ಪಸಂಖ್ಯಾತ, ನಾಮಧಾರಿ, ಬ್ರಾಹ್ಮಣರ ಮತಗಳು  ನಿರ್ಣಾಯಕವಾಗಿವೆ. ನಂತರದಲ್ಲಿ ಪರಿಶಿಷ್ಟರು, ಲಿಂಗಾಯತ, ಒಕ್ಕಲಿಗ ಮತದಾರರಿದ್ದಾರೆ. ಮರಾಠರ ಮತ ಇಬ್ಭಾಗವಾಗುವ ಸಾಧ್ಯತೆ ಇದ್ದು, ಅಲ್ಪಸಂಖ್ಯಾತರು ಕಾಂಗ್ರೆಸ್‌ ಕಡೆಗಿದ್ದಾರೆ. ಹವ್ಯಕರ ಹೆಜ್ಜೆ ಇನ್ನೂ ಸ್ಪಷ್ಟವಾಗಿಲ್ಲ. ಶಿವಾನಂದ ನಾಯ್ಕ ಕಣದಿಂದ ಹಿಂದಕ್ಕೆ ಸರಿದಿದ್ದರಿಂದ ಸ್ವಜಾತಿ ಅಭ್ಯರ್ಥಿ ಬೆಂಬಲಿಸುವ ಯೋಚನೆಯಲ್ಲಿದ್ದ ನಾಮಧಾರಿಗಳ ಮತ ವಿಭಜನೆ ಆಗಬಹುದು.

ಏನೆಲ್ಲ ಲೆಕ್ಕಾಚಾರ ಹಾಕಿದರೂ ಕೊನೆಯ ಮೂರು ದಿನದ ಕೈಚಳಕವೇ ಚುನಾವಣೆಯ ಫಲಿತಾಂಶ ನಿರ್ಧರಿಸುವ ಸಂಗತಿ ಎಂಬುದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಬಹುತೇಕ ಮತದಾರರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT