ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ನಿಂದ ಪುಸ್ತಕೋದ್ಯಮದ ಹಿತಾಸಕ್ತಿಗೆ ಧಕ್ಕೆ?

Last Updated 1 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆನ್‌ಲೈನ್‌ ಮಾರುಕಟ್ಟೆ ದೈತ್ಯ www.amazon.com  ಕಂಪೆನಿಯ ತಾಕತ್ತು ಅಪಾರ. ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆ ತರುವಷ್ಟು ಶಕ್ತಿಯನ್ನು ಅದು ಹೊಂದಿದೆ. ಇದು ಒಮ್ಮಿಂದೊಮ್ಮೆ ಬಂದಿರುವುದು ಎಂಬುದು ನನಗೆ ಗೊತ್ತು. ಆದರೆ ಬಹುಮುಖ್ಯ ವಿಷಯವನ್ನು ನೇರವಾಗಿ ಪ್ರಸ್ತಾಪಿಸುವುದು ನನ್ನ ಉದ್ದೇಶ. ಏಕೆಂದರೆ ಇತರ ವಿಚಾರಗಳ ಭರದಲ್ಲಿ ಅಮೆಜಾನ್‌ ಕುರಿತ ಚರ್ಚೆ ಬಹುಪಾಲು ಸಂದರ್ಭಗಳಲ್ಲಿ ಬದಿಗೆ ಸರಿದುಬಿಡುತ್ತದೆ.

ಇಡೀ ಅರ್ಥ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವ ತಾಕತ್ತಿರುವ ರಾಕ್ಷಸ ಈ ಅಮೆಜಾನ್‌ ಎಂದು ಅದರ ಟೀಕಾಕಾರರು ಹೇಳುತ್ತಾರೆ. ಇಂಥ ಮಾತುಗಳು ಅತಿಶಯ ಆಗಿರಬಹುದು. ಏಕೆಂದರೆ ಆನ್‌ಲೈನ್‌ ಮಾರುಕಟ್ಟೆಯನ್ನು ಅಮೆಜಾನ್‌ ಆಳುತ್ತಿಲ್ಲ. ಅದು ಮುಂದೆ ಆಗುವ ಸಾಧ್ಯತೆಯೂ ಕಡಿಮೆ. ಆದರೇನು, ಅಮೆಜಾನ್‌ ವಹಿಸುತ್ತಿರುವ ಪಾತ್ರದಿಂದ ತೊಂದರೆಯಂತೂ ಆಗಿದೆ.

ಅಮೆಜಾನ್‌ನ ಬೆಂಬಲಿಗರು ಅದರ ಆನ್‌ಲೈನ್‌ ಪುಸ್ತಕ ಮಾರಾಟ ವ್ಯವಸ್ಥೆಯನ್ನು ಹೊಗಳಲು ಆರಂಭಿಸುತ್ತಾರೆ. ಈ ವ್ಯವಸ್ಥೆಯಿಂದ ಅಮೆರಿಕದ ಹಲವರಿಗೆ ಲಾಭವಾಗಿದೆ ಎಂಬುದು ನಿಜ. ಖರೀದಿಸಿದ ವಸ್ತುಗಳನ್ನು ಎರಡು ದಿನಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಅಮೆಜಾನ್‌ ಪ್ರೈಮ್ ಸೇವೆಯನ್ನು ನಾನೂ ಬಳಸುತ್ತೇನೆ. ಆದರೆ, ಒಂದು ತಂತ್ರಜ್ಞಾನ ಮತ್ತು ಆ ತಂತ್ರಜ್ಞಾನವನ್ನು ಅಮೆಜಾನ್‌ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವುದು ಪ್ರಮುಖ ವಿಷಯವಲ್ಲ.

ಅಮೆಜಾನ್‌ ಕುರಿತು ಇತ್ತೀಚಿನ ಬೆಳವಣಿಗೆಗಳನ್ನು ನೀವು ಗಮನಿಸಿಲ್ಲವಾದರೆ, ಇದೊಂದು ಸಂಗತಿ ಗಮನಿಸಿ: ಕಳೆದ ಮೇ ತಿಂಗಳಲ್ಲಿ ಅಮೆಜಾನ್‌ ಮತ್ತು ಅಮೆರಿಕದ ಪ್ರಮುಖ ಪ್ರಕಾಶನ ಸಂಸ್ಥೆ ಹ್ಯಾಚೆಟ್ ನಡುವಿನ ತಿಕ್ಕಾಟ ಬಹಿರಂಗ ಮಾರುಕಟ್ಟೆ ಸಂಗ್ರಾಮವಾಗಿ ಪರಿವರ್ತನೆಯಾಯಿತು. ತನ್ನ ಮೂಲಕ ಮಾರಾಟ ಆಗುವ ಹ್ಯಾಚೆಟ್ ಸಂಸ್ಥೆಯ ಪುಸ್ತಕಗಳಿಗೆ ಹೆಚ್ಚಿನ ರಿಯಾಯಿತಿ ನೀಡಬೇಕು ಎಂದು ಅಮೆಜಾನ್‌ ಬೇಡಿಕೆ ಇಡುತ್ತ ಬಂದಿತ್ತು.

ಇದಕ್ಕೆ ಹ್ಯಾಚೆಟ್ ಒಪ್ಪದಿದ್ದಾಗ, ಅದರ ಪುಸ್ತಕಗಳ ಮಾರಾಟಕ್ಕೆ ಅಮೆಜಾನ್‌ ತಡೆಯೊಡ್ಡಲು ಆರಂಭಿಸಿತು. ಹಾಗಂತ, ಹ್ಯಾಚೆಟ್ ಪುಸ್ತಕಗಳ ಮಾರಾಟವನ್ನು ಅಮೆಜಾನ್‌ ಒಂದೇ ಏಟಿಗೆ ಬಹಿಷ್ಕರಿಸಲಿಲ್ಲ. ಆದರೆ ಆ ಪುಸ್ತಕಗಳನ್ನು ಗ್ರಾಹಕರಿಗೆ ತಡವಾಗಿ ತಲುಪಿಸುವುದು, ಹ್ಯಾಚೆಟ್ ಸಂಸ್ಥೆಯ ಪುಸ್ತಕಗಳ ಬೆಲೆ ಹೆಚ್ಚಿಸುವುದು ಮತ್ತಿತರ ತಂತ್ರಗಳನ್ನು ಹುಡುಕಿಕೊಂಡಿತು. ಇದರಿಂದಾಗಿ ಗ್ರಾಹಕರು ನಿಧಾನವಾಗಿ ಇತರ ಪ್ರಕಾಶನ ಸಂಸ್ಥೆಗಳ ಪುಸ್ತಕಗಳತ್ತ ಮುಖ ಮಾಡಿದರು.

ಇದೂ ಒಂದು ವ್ಯಾಪಾರ ತಂತ್ರ ಎಂದು ನೀವು ಕರೆಯಬಹುದು.  ಕೆಲವು ವ್ಯಾಪಾರ ತಂತ್ರಗಳು ಈಗಿನ ಕಾಲಕ್ಕೆ ಸರಿಬರುವುದಿಲ್ಲ ಎಂದು ಒಂದು ರಾಷ್ಟ್ರವಾಗಿ ನಾವು ನಿರ್ಧರಿಸಿದ್ದೇವೆ. 19ನೇ ಶತಮಾನದಲ್ಲಿ ನಾವು ಪಾಲಿಸುತ್ತಿದ್ದ ಮಾರುಕಟ್ಟೆ ತಂತ್ರಗಳನ್ನು ಇಂದಿಗೂ ಪಾಲಿಸಬೇಕೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ಇನ್ನೊಬ್ಬರನ್ನು ಶೋಷಣೆಗೆ ಒಳಪಡಿಸುವಂಥ ಮಾರುಕಟ್ಟೆ ಶಕ್ತಿಯನ್ನು ಅಮೆಜಾನ್‌ ಹೊಂದಿದೆಯೇ? ಪುಸ್ತಕಗಳ ಮಾರಾಟಕ್ಕೆ ಸಂಬಂಧಿಸಿದಂತೆ ಅಂಥದೊಂದು ಶಕ್ತಿ ಅದಕ್ಕೆ ನಿಜವಾಗಿಯೂ ಇದೆ.

ಆನ್‌ಲೈನ್‌ ಮೂಲಕ ಆಗುವ ಪುಸ್ತಕಗಳ ಮಾರಾಟದಲ್ಲಿ ಅಮೆಜಾನ್‌ ದೊಡ್ಡ ಪಾಲು ಹೊಂದಿದೆ. ಪುಸ್ತಕಗಳ ಒಟ್ಟು ಮಾರುಕಟ್ಟೆಯನ್ನು ಗಮನಿಸಿದರೂ ಅಮೆಜಾನ್‌ ದೊಡ್ಡ ಪಾಲು ಹೊಂದಿರುವುದು ತಿಳಿಯುತ್ತದೆ. ಇಲ್ಲಿಯವರೆಗೆ ಅಮೆಜಾನ್‌ ಕಂಪೆನಿ ಗ್ರಾಹಕರನ್ನು ಶೋಷಿಸಲು ಮುಂದಾಗಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ತನ್ನ ಮೂಲಕ ಮಾರಾಟವಾಗುವ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಟ್ಟದಲ್ಲಿ ಇರಿಸಿದೆ. ಮಾರುಕಟ್ಟೆಯಲ್ಲಿ ತಾನು ಹೊಂದಿರುವ ಶಕ್ತಿ ಬಳಸಿ, ಪ್ರಕಾಶನ ಸಂಸ್ಥೆಗಳ ಮೇಲೆ ಒತ್ತಡ ತರುತ್ತಿದೆ. ಪ್ರತಿ ಪುಸ್ತಕಕ್ಕೆ ತಾನು ಪ್ರಕಾಶನ ಸಂಸ್ಥೆಗೆ ನೀಡಬೇಕಿರುವ ಮೊತ್ತವನ್ನು ಕಡಿಮೆ ಮಾಡಿಸುತ್ತಿದೆ.

ಹ್ಯಾಚೆಟ್ ಜೊತೆಗೆ ಅಮೆಜಾನ್‌ ನಡೆಸಿದ ಸಂಗ್ರಾಮ ಕೂಡ ಇದೇ ಸ್ವರೂಪದ್ದು. ಮಾರುಕಟ್ಟೆ ಪರಿಭಾಷೆಯಲ್ಲಿ ಹೇಳಬೇಕು ಎಂದಾದರೆ, ಪುಸ್ತಕಗಳ ಬೆಲೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ದೈತ್ಯನ ರೀತಿ ಅಮೆಜಾನ್‌ ಇದುವರೆಗೆ ಕೆಲಸ ಮಾಡಿಲ್ಲ. ಆದರೆ, ಪುಸ್ತಕಗಳ ಬೆಲೆಯನ್ನು ತೀರಾ ಕಡಿಮೆ ಮಾಡುವ ಶಕ್ತಿ ಇರುವ ಅತಿದೊಡ್ಡ ಗ್ರಾಹಕನಂತೆ ಅದು ವರ್ತಿಸುತ್ತಿದೆ. ಬೆಲೆ ಕಡಿಮೆ ಮಾಡುವ ವಿಚಾರದಲ್ಲಿ ಅಮೆಜಾನ್‌ನ ಶಕ್ತಿ ಅಗಾಧ. ಬಹುಶಃ, ಮಾರುಕಟ್ಟೆಯಲ್ಲಿ ಅದು ಹೊಂದಿರುವ ಪಾಲಿಗಿಂತ ಹೆಚ್ಚು ಶಕ್ತಿಯುತ. ಜನರ ಬಾಯಲ್ಲಿ ಎಷ್ಟು ಒಳ್ಳೆಯ ಮಾತು ಬರುತ್ತದೆ ಎಂಬುದನ್ನು ಆಧರಿಸಿ ಪುಸ್ತಕಗಳ ವ್ಯಾಪಾರ ನಡೆಯುತ್ತದೆ.

ನೀವು ಕೇಳಿದ, ಇನ್ನೊಬ್ಬರು ಓದುತ್ತಿರುವುದಾಗಿ ಹೇಳಿದ, ಜನ ಚರ್ಚಿಸುತ್ತಿರುವ, ಟಾಪ್ ಪುಸ್ತಕಗಳ ಸಾಲಿನಲ್ಲಿ ಇರುವ ಪುಸ್ತಕಗಳನ್ನು ಸಾಮಾನ್ಯವಾಗಿ ನೀವು ಕೊಳ್ಳುತ್ತೀರಿ. ಒಂದು ಪುಸ್ತಕದ ಬಗ್ಗೆ ಜನ ಮಾತನ್ನೇ ಆಡದಂತೆ ಮಾಡುವ ಶಕ್ತಿ ಅಮೆಜಾನ್‌ಗೆ ಇದೆ. ಅಮೆಜಾನ್‌ನಲ್ಲಿ ಲಭ್ಯವಿಲ್ಲದೆ ಇದ್ದರೂ, ನೀವು ಬೇರೆಯವರಿಂದ ಕೇಳಿದ ಒಂದು ಪುಸ್ತಕವನ್ನು ಖರೀದಿಸಲು ಸಾಧ್ಯವಿದೆ. ಅದಕ್ಕೆ ತುಸು ಹೆಚ್ಚು ಶ್ರಮ ಬೇಕಾಗಬಹುದು. ಆದರೆ ಅಮೆಜಾನ್‌ನಲ್ಲಿ ಲಭ್ಯವಿಲ್ಲದ ಪುಸ್ತಕಗಳು ಬೇರೊಬ್ಬರ ಬಾಯಲ್ಲಿ ಬರುವ ಸಾಧ್ಯತೆಗಳೇ ಕಡಿಮೆಯಾಗಿವೆ.

ತಾನು ಸಂಪಾದಿಸಿರುವ ಶಕ್ತಿಯನ್ನು ಅಮೆಜಾನ್‌ ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ನಂಬಬಹುದೇ? ಊಹೂಂ, ನಂಬಲಾಗದು ಎಂಬ ಉತ್ತರವನ್ನು ಹ್ಯಾಚೆಟ್ ಪ್ರಕರಣ ನೀಡಿದೆ. ಇದು ಹಣವೊಂದಕ್ಕೆ ಮಾತ್ರ ಸಂಬಂಧಿಸಿದ ವಿಚಾರ ಅಲ್ಲ. ಪ್ರಕಾಶನ ಸಂಸ್ಥೆಗಳ ಮೇಲೆ ಅಸಾಧ್ಯ ಒತ್ತಡ ಹೇರುವ ಮೂಲಕ ಅಮೇಜಾನ್ ಕಂಪೆನಿ, ಲೇಖಕರು ಮತ್ತು ಓದುಗರ ಹಿತಾಸಕ್ತಿಗೂ ಧಕ್ಕೆ ತಂದಿದೆ.
ಹ್ಯಾಚೆಟ್ ಪ್ರಕಾಶನ ಸಂಸ್ಥೆಯ ಪುಸ್ತಕಗಳ ವಿಚಾರದಲ್ಲಿ ಅಮೆಜಾನ್‌ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ. ಆದರೆ ಇಲ್ಲಿ ಅಮೆಜಾನ್‌ ಒಂದೆರಡು ಪುಸ್ತಕಗಳಿಗೆ ರಿಯಾಯಿತಿ ತೋರಿಸಿದಂತಿದೆ.

ಗ್ರಾಹಕರಿಗೆ ಏನು ಬೇಕೋ ಅದನ್ನೇ ಅಮೆಜಾನ್‌ ನೀಡುತ್ತಿದೆ ಎಂಬ ಮಾತನ್ನು ನನಗೆ ಹೇಳಬೇಡಿ. ಅಮೆಜಾನ್‌ ಬಳಿ ಅಗಾಧ ಶಕ್ತಿಯಿದೆ, ಅದನ್ನು ಅಮೆಜಾನ್‌ ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ ಎಂಬುದು ಮುಖ್ಯ ಪ್ರಶ್ನೆ. ಹೌದು, ಅದು ದುರ್ಬಳಕೆ ಮಾಡಿಕೊಳ್ಳುತ್ತದೆ, ಮಾಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT