ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ವಿಭಜನೆ: ಮುಂದುವರಿದ ಟಿಡಿಪಿ ಕಣ್ಣಾಮುಚ್ಚಾಲೆ

ರಾಜ್ಯ ವಾರ್ತಾಪತ್ರ – ಆಂಧ್ರಪ್ರದೇಶ
Last Updated 17 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಐಎಎನ್ಎಸ್): ಆಂಧ್ರ­ಪ್ರದೇಶದ ಮಿಕ್ಕೆಲ್ಲಾ ರಾಜಕೀಯ ಪಕ್ಷಗಳೂ ರಾಜ್ಯ ವಿಭಜನೆ ಪ್ರಸ್ತಾವದ ಬಗ್ಗೆ ಸ್ಪಷ್ಟ ನಿಲುವು ತಳೆದಿದ್ದರೂ, ಪ್ರಮುಖ ಪ್ರತಿಪಕ್ಷವಾದ ತೆಲುಗು ದೇಶಂ (ಟಿಡಿಪಿ) ಮಾತ್ರ ಈ ಬಗ್ಗೆ ಇನ್ನೂ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿಲ್ಲ.

‘ಸಮಾನತೆ’ಯ ಮಂತ್ರ ಪಠಿಸುತ್ತಿರುವ ಟಿಡಿಪಿ ಪ್ರತ್ಯೇಕ ತೆಲಂಗಾಣ ರಚನೆಯ ಪರವಾಗಲೀ ಅಥವಾ ‘ಸಮೈಕ್ಯ ಆಂಧ್ರ’ (ಸಂಯುಕ್ತ ಆಂಧ್ರ) ಪರ­ವಾ­ಗಲೀ ಸ್ಪಷ್ಟ ನಿಲುವು ತೆಗೆದುಕೊಳ್ಳಲು ನಿರಾಕರಿ­ಸು­ತ್ತಿದೆ. ೨೦೧೪ರಲ್ಲಿ ನಡೆಯಲಿರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಟಿಡಿಪಿ, ಈ ವಿಷಯದಲ್ಲಿ ಯಾವುದೇ ಸ್ಪಷ್ಟ ನಿಲುವು ಪ್ರಕಟಿಸಿದರೂ ತೆಲಂಗಾಣದಲ್ಲಿ ಅಥವಾ ಸೀಮಾಂಧ್ರದಲ್ಲಿ (ರಾಯಲಸೀಮಾ ಮತ್ತು ಕರಾವಳಿ) ಜನಬೆಂಬಲ ಕಳೆದುಕೊಳ್ಳ­ಬಹುದೆಂಬ ಭೀತಿಯಲ್ಲಿದೆ.

ಕಾಂಗ್ರೆಸ್‌ ಪಕ್ಷವು ಕೇಂದ್ರ ಮಟ್ಟದಲ್ಲಿ ಪ್ರತ್ಯೇಕ ತೆಲಂಗಾಣ ರಚನೆ ನಿರ್ಧಾರ ತೆಗೆದುಕೊಂಡಿತು. ಆದರೆ ಅದೇ ಪಕ್ಷದ ರಾಜ್ಯ ಮುಖಂಡರು ಇಲ್ಲಿ ಪ್ರಾದೇಶಿಕ ಭಾವನೆಗಳನ್ನು ಆಧರಿಸಿ ಭಿನ್ನ ಭಿನ್ನ ನಿಲುವುಗಳನ್ನು ತಳೆದರು. ಈ ಮುನ್ನ ಪ್ರತ್ಯೇಕ ತೆಲಂಗಾಣ ರಚನೆಯನ್ನು ಬೆಂಬಲಿಸಿದ್ದ ವೈಎಸ್‌­ಆರ್‌ ಕಾಂಗ್ರೆಸ್‌ ಪಕ್ಷವು ಈಗ ತದ್ವಿರುದ್ಧ ನಿಲುವು ತಳೆದು ‘ಸಮೈಕ್ಯ ಆಂಧ್ರ’ಕ್ಕಾಗಿ ಒತ್ತಾಯಿಸುತ್ತಿದೆ.

ಆರಂಭದಲ್ಲಿ ರಾಜ್ಯ ವಿಭಜನೆಯನ್ನು ವಿರೋಧಿ­ಸಿದ್ದ ಮಜ್ಲಿಸ್‌ ಎ ಇತೇಹದುಲ್‌ ಮುಸ್ಲಿಮೀನ್‌ (ಎಂಐಎಂ) ಈಗ ಕೇಂದ್ರದ ನಿರ್ಧಾರವನ್ನು ಒಪ್ಪಿ­ಕೊಂಡಿದೆ. ಬಿಜೆಪಿ, ಸಿಪಿಐ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿಗಳು (ಟಿಆರ್‌ಎಸ್‌) ಪ್ರತ್ಯೇಕ ತೆಲಂಗಾಣದ ಪರವಾಗಿದ್ದರೆ, ಸಿಪಿಎಂ ರಾಜ್ಯ ವಿಭಜನೆ ಪ್ರಸ್ತಾವಕ್ಕೆ ವಿರುದ್ಧವಾಗಿದೆ.

ತೆಲುಗು ದೇಶಂ ಪಕ್ಷವು ೨೦೦೮ರಲ್ಲಿ ತೆಲಂಗಾಣ ರಾಜ್ಯ ರಚನೆ ಬೇಡಿಕೆಯನ್ನು ಬೆಂಬಲಿಸಿತ್ತು. ಆದರೆ, ತೆಲಂಗಾಣ ರಾಜ್ಯ ರಚಿಸಲು  ಕಾಂಗ್ರೆಸ್‌ ಪಕ್ಷವು ಜುಲೈ ೩೦ರಂದು ಹಾಗೂ  ಕೇಂದ್ರ ಸಚಿವ ಸಂಪುಟವು ಅ.೩ರಂದು ನಿರ್ಧಾರ ತೆಗೆದುಕೊಂಡ ಮೇಲೆ ಹಾಗೂ ನಂತರ ಇದರ ವಿರುದ್ಧ ಸೀಮಾಂಧ್ರ­ದಲ್ಲಿ ಪ್ರತಿಭಟನೆಗಳು ಭುಗಿಲೇಳು­ತ್ತಿದ್ದಂತೆ ಪ್ರಮುಖ ಪ್ರತಿಪಕ್ಷವು ಉಭಯಸಂಕಟಕ್ಕೆ ಸಿಲುಕಿತು.

ಈಗ ತೆಲುಗು ದೇಶಂ ಪಕ್ಷವು ಎರಡೂ ಪ್ರದೇಶ­ಗಳಲ್ಲಿ ರಾಜಕೀಯ ಎದುರಾಳಿಗಳಿಂದ ಕಟುಟೀಕೆಗೆ ಗುರಿಯಾಗಿದೆ. ಸೀಮಾಂಧ್ರ ಭಾಗದಲ್ಲಿ ‘ಸಮೈಕ್ಯ ಆಂಧ್ರ’ದ ಪರವಾಗಿ ಮಾತನಾಡದೇ ­ಇರುವುದಕ್ಕಾಗಿ ಟೀಕೆ ಎದುರಿಸುತ್ತಿದ್ದರೆ, ಪ್ರತ್ಯೇಕ ರಾಜ್ಯಕ್ಕಾಗಿ ಹಂಬಲಿಸುತ್ತಿರುವ ಜನರ ಭಾವನೆ­ಗಳನ್ನು ವಿರೋಧಿಸುತ್ತಿರುವ ಪಕ್ಷ ಎಂಬುದು ತೆಲಂಗಾಣ ಭಾಗದಲ್ಲಿನ ಟೀಕೆಯಾಗಿದೆ.

ಟಿಡಿಪಿಯು ಕೇಂದ್ರಕ್ಕೆ ಬರೆದ ಪತ್ರವೇ ರಾಜ್ಯ ವಿಭಜನೆಗೆ ನಾಂದಿಯಾಯಿತು ಎಂಬುದು ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಅಂಬಾಟಿ ರಾಂಬಾಬು ಅವರ ಆಪಾದನೆಯಾಗಿದೆ. ‘ಈಗ ಏಕೆ ಆ ಪತ್ರವನ್ನು ವಾಪಸ್‌ ಪಡೆದು ‘ಸಮೈಕ್ಯ ಆಂಧ್ರ’ದ ಪರವಾಗಿ ನಿಮ್ಮ ಬೆಂಬಲ ವ್ಯಕ್ತ­ಪಡಿಸುತ್ತಿಲ್ಲ’ ಎಂಬ ಪ್ರಶ್ನೆಯನ್ನು ರಾಂಬಾಬು ಅವರು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಮುಂದಿಟ್ಟಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯ ವಿಭಜನೆ ಪ್ರಯತ್ನ­ಗಳನ್ನು ತೀವ್ರಗೊಳಿಸಿ, ಹೊಸ ವರ್ಷಾರಂಭದಿಂದ ಪ್ರತ್ಯೇಕ ರಾಜ್ಯವು ವಾಸ್ತವವಾಗುವುದು ನಿಚ್ಚಳ­ವಾಗಿ ಗೋಚರಿಸುತ್ತಿರುವ ಈ ಸಂದರ್ಭದಲ್ಲೂ ಚಂದ್ರ­ಬಾಬು ನಾಯ್ಡು ಅವರು ಇನ್ನೂ  ತಮ್ಮ ನಿಲುವಿನ ಬಗ್ಗೆ ಏನನ್ನೂ ಪ್ರಕಟಿಸದೆ ತುಟಿ ಬಿಗಿಹಿಡಿದು­ಕೊಂಡೇ ಇದ್ದಾರೆ. ಈ ಅಸ್ಪಷ್ಟತೆಯ ನಡುವೆಯೇ ಸೀಮಾಂಧ್ರದಲ್ಲಿ ‘ತೆಲುಗು ಆತ್ಮಗೌರವ ಯಾತ್ರಾ’ ನಡೆಸಿದ್ದಾರಲ್ಲದೆ ರಾಷ್ಟ್ರ ರಾಜಧಾನಿಯಲ್ಲಿ ಅನಿರ್ದಿಷ್ಟ ಅವಧಿಯ ನಿರಶನವನ್ನೂ ನಡೆಸಿದ್ದಾರೆ.

ಮಾಧ್ಯಮಗಳು ತಮ್ಮ ಸ್ಪಷ್ಟ ನಿಲುವು ಪ್ರಕಟಿಸು­ವಂತೆ ಒತ್ತಾಯಿಸಿದ ಹಲವು ಸಂದರ್ಭಗಳಲ್ಲಿ ಚಂದ್ರಬಾಬು ಅವರು ಮುಜುಗರಕ್ಕೆ ಒಳಗಾಗಿದ್ದೂ ಉಂಟು. ಆದರೂ, ಅವರು ತಾವು ತೆಲುಗು ಜನತೆಯ ನ್ಯಾಯ ಹಾಗೂ ಸಮಾನತೆಯ ಪರ ಇರುವು­ದಾಗಿ ಜಾಣ್ಮೆಯ ಉತ್ತರ ಹೇಳಿ ನುಣುಚಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷವು ರಾಜಕೀಯ ಲಾಭಕ್ಕಾಗಿ ರಾಜ್ಯವನ್ನು ವಿಭಜಿಸುತ್ತಿದೆ ಎಂಬುದು ಮಾಜಿ ಮುಖ್ಯಮಂತ್ರಿಯವರ ಎಣಿಕೆಯಾಗಿದೆ. ಇದಕ್ಕಾಗಿ ಆ ಪಕ್ಷವು ತೆಲಂಗಾಣದಲ್ಲಿ ಟಿಆರ್‌ಎಸ್‌ ಪಕ್ಷವನ್ನು ಹಾಗೂ ಸೀಮಾಂಧ್ರದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದೂ ಅವರು ಆಪಾದಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ರಾಜ್ಯ ವಿಭಜನೆಯ ವಿಷಯ­ದಲ್ಲಿ ಏಕಪಕ್ಷೀಯವಾಗಿ ಮುಂದುವರಿಯುತ್ತಿದೆ; ತೆಲಂಗಾಣ ಮತ್ತು ಸೀಮಾಂಧ್ರದ ಜನರ ಭಾವನೆ­ಗಳನ್ನು ಹಾಗೂ ಅಲ್ಲಿನ ಪ್ರತಿನಿಧಿಗಳನ್ನು ಗಣನೆಗೇ ತೆಗೆದುಕೊಂಡಿಲ್ಲ ಎಂಬುದು ಚಂದ್ರಬಾಬು ಅವರ ಮತ್ತೊಂದು ಆಕ್ಷೇಪವಾಗಿದೆ. ಇದೇ ಕಾರಣವನ್ನು ಮುಂದೊಡ್ಡಿ ಸಚಿವರ ಸಮಿತಿ ಕರೆದಿದ್ದ ಸಭೆಗೂ ಅದು ಹಾಜರಾಗಲಿಲ್ಲ (ಇತರ ಏಳು ಪಕ್ಷಗಳು ಈ ಸಭೆಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದವು).

ಇದಕ್ಕೆ ಬದಲಾಗಿ ಚಂದ್ರಬಾಬು ಅವರು ರಾಷ್ಟ್ರ­ಪತಿ ಪ್ರಣವ್‌ ಮುಖರ್ಜಿ ಅವರಿಗೆ ಪತ್ರ ಬರೆದು, ಸೀಮಾಂಧ್ರ ಮತ್ತು ತೆಲಂಗಾಣ ಪ್ರತಿನಿಧಿ­ಗಳೊಂದಿಗೆ ಮಾತುಕತೆ ನಡೆಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು. ಚಂದ್ರಬಾಬು ಅವರು ಮೂಲತಃ ರಾಯಲಸೀಮಾ ವ್ಯಾಪ್ತಿಗೆ ಸೇರಿ­ದ­ವ­ರಾದರೂ, ಪಕ್ಷದ ಮುಖಂಡ­ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಎರಡೂ ಭಾಗ­ದವರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ.

ಸತತವಾಗಿ ಎರಡು ಚುನಾವಣೆಗಳಲ್ಲಿ ಸೋಲುಂಡಿರುವ ಚಂದ್ರಬಾಬು ಅವರಿಗೆ ಹಾಗೂ ಅವರ ಪಕ್ಷಕ್ಕೆ ೨೦೧೪ರ ಚುನಾವಣೆಯು ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ. ‘ಮುಂಬರುವ  ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಗೆಲುವು ಚಾರಿತ್ರಿಕ ಅಗತ್ಯ’ ಎಂದು ಚಂದ್ರಬಾಬು ಅವರೇ ಕೆಲವು ದಿನಗಳ ಹಿಂದೆ ಹೇಳಿದ್ದರು. ಹೀಗಾಗಿ ಅವರು ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ತೆಲಂಗಾಣ ಭಾಗದಲ್ಲಿ ತನ್ನ ಪ್ರಮುಖ ಮುಖಂಡರು ಟಿಆರ್‌ಎಸ್‌ ಪಾಳಯ ಸೇರಿರುವ ಸಂಗತಿ ಗೊತ್ತಿದ್ದರೂ, ಅಲ್ಲಿ ತನ್ನ ಕಾರ್ಯಕರ್ತರ ನೆಲೆ ಭದ್ರವಾಗಿದೆ ಎಂಬುದು ಚಂದ್ರಬಾಬು ಅವರಿಗೆ ಗೊತ್ತಿದೆ. ರಾಜ್ಯದ ಉದ್ದಗಲಕ್ಕೂ ಆ ಪಕ್ಷವು ತಳಮಟ್ಟದಲ್ಲಿ ಕಾರ್ಯಕರ್ತರ ಪ್ರಬಲ ಪಡೆಯನ್ನೂ ಹೊಂದಿದೆ.

ರಾಜ್ಯ ವಿಭಜನೆ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸದ ಚಂದ್ರಬಾಬು ಅವರು ಕಾದು ನೋಡುವ ತಂತ್ರ ಅನುಸರಿಸುತ್ತಿರುವಂತಿದೆ. ಅವರ ಈ ತಂತ್ರವು ಇದುವರೆಗೆ ತೆಲುಗು ದೇಶಂ ಪಕ್ಷಕ್ಕೆ ಯಾವ ಲಾಭವನ್ನೂ ತಂದುಕೊಟ್ಟಿಲ್ಲವಾದರೂ, ೨೦೧೪ರ ಚುನಾವಣೆ­ಯಲ್ಲಿ ಯಾರು ಯಶಸ್ವಿಯಾಗುತ್ತಾರೆ ಎಂಬುದಕ್ಕೆ ಕಾಲಗರ್ಭದಲ್ಲಿ ಮಾತ್ರ ಉತ್ತರ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT