ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ ಬಿಟ್ಟು ಬೇರೆ ದಾರಿ ಏನಿದೆ?

ಕಷ್ಟದಲ್ಲಿ ಅನ್ನದಾತ
Last Updated 13 ಜುಲೈ 2015, 19:44 IST
ಅಕ್ಷರ ಗಾತ್ರ

ತುಮಕೂರು: ‘ಶೇಂಗಾ ಬಿಟ್ರೆ ಭೂಮೀಲಿ ಬೇರೆ ಬೆಳೆ ಬರೋಲ್ಲ. ಬೇರೆ ಬೆಳೆ ಬೆಳೆಯಲೆಂದು ತೊಗರಿ ಇಟ್ರೆ ಅದರಲ್ಲಿ ಕಾಳು ಕಟ್ಟಲಿಲ್ಲ. ಮಳೆ ಬರೋದಿಲ್ಲ, ಭೂಮಿಯೊಳಗೆ ನೀರು ಸಿಗೋದಿಲ್ಲ. ಏನ್‌ ಬೆಳೆ ಬೆಳೆಯೋದು ನೀವೆ ಹೇಳಿ...’

–ಶಿರಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಮಾಡಿಕೊಂಡಿರುವ ಗೌಡನಗೆರೆ ಹೋಬಳಿ ಬಂದಕುಂಟೆ ಗ್ರಾಮದಲ್ಲಿ ಹೊಸದಾಗಿ ಆರಂಭಗೊಂಡಿರುವ ಗ್ರಾಮ ಪಂಚಾಯಿತಿ ಕಚೇರಿ ಎದುರು ಕುಳಿತಿದ್ದ ರೈತರು ಮುಂದಿಟ್ಟ ಪ್ರಶ್ನೆ ಇದು.

ವಾರದ ಹಿಂದೆಯಷ್ಟೇ ಗ್ರಾಮದ ಯುವ ರೈತ ರಾಮಕೃಷ್ಣಯ್ಯ ಅವರು ಪುಟಾಣಿ ಮಗನನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ದುಃಖದಿಂದ ಈ ಗ್ರಾಮ ಇನ್ನೂ ಹೊರಬಂದಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ವರ್ಷ ಇಲ್ಲಿ ಒಬ್ಬರು– ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಕಾರಣ ಜನರು   ಹತಾಶರಾಗಿದ್ದಾರೆ.

ಸುಮಾರು 2500 ಮನೆಗಳಿರುವ ಗ್ರಾಮಸ್ಥರು ಶೇಂಗಾ ನಂಬಿಯೇ ಬದುಕಿದ್ದಾರೆ. ಅಂತರ್ಜಲ ಹುಡುಕುವ ಸಾಹಸದಲ್ಲಿ ಬದುಕು, ಮನೆ–ಜಮೀನು ಕಳೆದುಕೊಂಡವರ ಪಟ್ಟಿ ಆಂಜನೇಯನ ಬಾಲದಂತೆ ಬೆಳೆಯುತ್ತಾ ಸಾಗುತ್ತದೆ.

ಗ್ರಾಮದ ಸುತ್ತಮುತ್ತ ಸುಮಾರು 300 ಕೊಳವೆ ಬಾವಿಗಳು ಜೀವಂತವಾಗಿವೆ. ನೀರು ನೀಡುವ ಸಾಮರ್ಥ್ಯ ಕಳೆದುಕೊಂಡ ಕೊಳವೆ ಬಾವಿಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು. ನೀರು ಕೊಡುವ ಕೊಳವೆ ಬಾವಿಗಳೂ ಮಳೆ ಬಂದಾಗ ಮಾತ್ರ ಜೀವ ತಳೆಯುತ್ತವೆ. ಉಳಿದಂತೆ ಅವನ್ನೂ, ಒಣಗುವ ಬೆಳೆಗಳನ್ನೂ ನೋಡುತ್ತಾ ರೈತ ಭೂಮಿಗೆ ಕಣ್ಣೀರು ಹರಿಸಬೇಕು.

‘ಕೊಳವೆಬಾವಿ ಕೊರೆಯಲೆಂದು ಮಾಡಿದ ಸಾಲ ತೀರಿಸಲು ಸಾಧ್ಯವಾಗದೇ ಇದ್ದ ಒಬ್ಬ ಮಗ ಮನೆ ಬಿಟ್ಟು ಹೋದ. ರೈತರ ಕಷ್ಟ ಯಾರು ಕೇಳ್ತಾರೆ?’ ಎಂದು ಹೇಳುವ ಮೊದಲು 80ರ ಹಿರಿಯಜ್ಜ ಹನುಮಂತಪ್ಪ ಗಳಗಳನೆ ಅತ್ತರು. ಉಳಿದವರು ಅಜ್ಜನನ್ನು ಸಮಧಾನ ಪಡಿಸಿದರು. ಊರಿನಲ್ಲಿ ಅಜ್ಜ ಈಗ ಒಬ್ಬಂಟಿ. ಇಂಥ ಒಬ್ಬಂಟಿ ಅಜ್ಜ, ಅಜ್ಜಿಯರ ಸಂಖ್ಯೆ ಈ ಭಾಗದ ಹಳ್ಳಿಗಳಲ್ಲಿ ಹುಡುಕಿದಷ್ಟೂ ಇದೆ.

ಒಂದು ವರ್ಷ ಬರ ಬಂದರೆ, ಮತ್ತೊಂದು ವರ್ಷ ಯಥೇಚ್ಛ ಮಳೆ. ಎರಡರಿಂದಲೂ ಬೆಳೆ ಹಾಳಾಗುತ್ತಿದೆ. ಹೀಗಾಗಿ ಇಲ್ಲಿನ ಜನರು ನಿರಂತರ ಕಷ್ಟಕ್ಕೆ ಸಿಲುಕುತ್ತಲೇ ಬಂದಿದ್ದಾರೆ. ರೈತರ ಮನೆಯ ಚಿನ್ನಾಭರಣಗಳು ಗಿರವಿ ಅಂಗಡಿಗಳಲ್ಲಿವೆ. ರೈತ ಮಹಿಳೆಯರಿಗೆ ಚಿನ್ನದ ತಾಳಿ ಎಂಬುದು ಐಷಾರಾಮಿ ಪದದಂತೆ ಕೇಳುತ್ತದೆ.

ಸರ್ಕಾರದ ಕೈಯಲ್ಲಿ ನೀರು ಕೊಡಲು, ಮಳೆ ಬರಿಸಲು ಸಾಧ್ಯವಿಲ್ಲ. ಆತ್ಮಹತ್ಯೆ ತಡೆಯಬೇಕಾದರೆ ಏನು ಮಾಡಬೇಕೆಂಬ ಪ್ರಶ್ನೆಗೆ ಗ್ರಾಮಸ್ಥರು ಹೇಳುವ ಒಕ್ಕೊರಲ ಉತ್ತರ ‘ಕೆಲಸ ಕೊಡಿ’.

‘ಕಡೇ ಪಕ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಿದರೆ ಖಂಡಿತಾ ರೈತರು ಆತ್ಮಹತ್ಯೆ  ತಡೆಯಬಹುದು. ತಿಂಗಳಿಗೆ  ರೂ2ರಿಂದ 3 ಸಾವಿರ ಸಿಕ್ಕರೆ ಬದುಕಿನ ಮೇಲೆ ವಿಶ್ವಾಸ ಮೂಡಲಿದೆ. ನೀರು ಕೊಡಬೇಕು, ಇಲ್ಲದಿದ್ದರೆ ಕೆಲಸವಾದರೂ ಕೊಡಬೇಕು. ಎರಡೂ ಕೊಡದಿದ್ದಾಗ ಆತ್ಮಹತ್ಯೆ  ದಾರಿ ಅಲ್ಲದೇ ಬೇರೆ ದಾರಿ ಏನಿದೆ’ ಎನ್ನುತ್ತಾರೆ ರೈತರು.

ಅನ್ನಭಾಗ್ಯ ಯೋಜನೆಯ ಅಕ್ಕಿಯ ಪ್ರಮಾಣವನ್ನೂ ಪ್ರತಿ ವ್ಯಕ್ತಿಗೆ 3 ಕೆ.ಜಿ.ಗೆ ಇಳಿಸಿದ್ದಾರೆ. 3 ಕೆ.ಜಿ. ಅಕ್ಕಿಯಿಂದ ಬದುಕು ಸಾಗಿಸಲು ಸಾಧ್ಯವೇ?  ಹದಿನೈದು ದಿನದಿಂದ ಲೀಟರ್‌ ಹಾಲಿನ ಬೆಲೆಯನ್ನು ರೂ4 ಕಡಿಮೆ ಮಾಡಲಾಗಿದೆ. ಮನೆ ಸಾಮಾನು, ಮಕ್ಕಳ ವಿದ್ಯಾಭ್ಯಾಸಕ್ಕೂ ಸಾಲ ಮಾಡಬೇಕಾಗಿದೆ ಎಂಬ ನೋವು ಮಲ್ಲೇಶಪ್ಪ ಅವರದು.

ಸಾಲವು ಶೇಂಗಾ ನಾಡಿನ ಜನರ ಪ್ರಾಣ ಕೇಳುತ್ತಿದೆ. ಬ್ಯಾಂಕ್‌ಗಳು, ಗಿರವಿ ಅಂಗಡಿಗಳು, ಕೈ ಸಾಲದಿಂದ ಇಲ್ಲಿನ ಜನರು ನಲುಗುತ್ತಿದ್ದಾರೆ. ಹಳೆ ಸಾಲ ತೀರಿಸಲು ಹೊಸ ಸಾಲ ಮಾಡಬೇಕಾದ ಅನಿವಾರ್ಯತೆಯು ಸಾಲ ಹೆಚ್ಚುವಂತೆ ಮಾಡುತ್ತಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ  ನಾಗಭೂಷಣ್‌.

ಐದು ವರ್ಷದಿಂದ ಈ ಹೋಬಳಿಯಲ್ಲಿ ಬೆಳೆ ನಷ್ಟವಾಗುತ್ತಿದೆ. ಪ್ರತಿ ವರ್ಷ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಬೆಳೆವಿಮೆಯ ಹಣ

ಬರುತ್ತಿಲ್ಲ. ಪಕ್ಕದ ಹುಲಿಕುಂಟೆಗೆ ಬೆಳೆವಿಮೆ ಘೋಷಿಸಿದ ಕಂಪೆನಿ, ಬಂದಕುಂಟೆಯನ್ನು ಕೈಬಿಡುತ್ತಾ ಬಂದಿದೆ ಎನ್ನುತ್ತಾರೆ.

ಎರಡು ವಿಭಿನ್ನ ಭೌಗೋಳಿಕ ನೆಲೆ: ಈ ಜಿಲ್ಲೆ ಎರಡು ವಿಭಿನ್ನ ಭೌಗೋಳಿಕ ನೆಲೆ ಹೊಂದಿದೆ. ಬೆಳೆ ವೈಫಲ್ಯ, ಬೆಲೆ ಇಳಿಕೆ ಈ ಎರಡೂ ಅಂಶಗಳು ಇಲ್ಲಿನ ರೈತರ ಸಾವಿಗೆ ಪ್ರಧಾನ ಕಾರಣ. ದಶಕದಿಂದಲೂ ಜಿಲ್ಲೆ ಮಳೆಯೊಂದಿಗೆ ಜೂಜಾಟ ನಡೆಸುತ್ತಲೇ ಬಂದಿದೆ. ಸತತ ಐದು ವರ್ಷಗಳಿಂದ ಜಿಲ್ಲೆ ಬರಪೀಡಿತವಾಗಿದೆ.

ಕಾವೇರಿ ಮತ್ತು ಕೃಷ್ಣಾ ಕೊಳ್ಳದ ನಡುವೆ ಭೂ ಪ್ರದೇಶ ಹಂಚಿಕೆಯಾಗಿದೆ.  ಹೇಮಾವತಿ ನೀರಿನ ಸೌಲಭ್ಯ ಹೊಂದಿರುವ ತುರುವೇಕೆರೆ, ಗುಬ್ಬಿ, ತಿಪಟೂರು, ತುಮಕೂರು, ಕುಣಿಗಲ್‌ ತಾಲ್ಲೂಕಿನಲ್ಲಿ ಬಹುತೇಕ ಭಾಗದ ರೈತರು ತೆಂಗು, ಅಡಿಕೆ ಅವಲಂಬಿಸಿದ್ದಾರೆ. ನೀರಾವರಿ ಇಲ್ಲದ ಕೃಷ್ಣಾ ಕೊಳ್ಳದ ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ಭಾಗದಲ್ಲಿ ಶೇಂಗಾ ಬೆಳೆಯಲಾಗುತ್ತದೆ.

ಜಿಲ್ಲೆಯಲ್ಲಿ 2003ರ ನಂತರ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದೆ. ನೀರಾವರಿ ಪ್ರದೇಶದಲ್ಲಿ ರೈತರ ಆತ್ಮಹತ್ಯೆ ಕಾಣಸಿಗುತ್ತಿಲ್ಲ. ಆದರೆ ಒಣಭೂಮಿ, ಮಳೆಯಾಶ್ರಿತ ಪ್ರದೇಶಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚು.

ಶೇಂಗಾ ಬೆಳೆಯುವ ಪ್ರದೇಶಗಳಲ್ಲೇ ಅತಿ ಹೆಚ್ಚು ಆತ್ಮಹತ್ಯೆ ಕಂಡುಬರುತ್ತದೆ. ಜಿಲ್ಲೆಯಲ್ಲಿ ಈವರೆಗೆ ಆಗಿರುವ ಆತ್ಮಹತ್ಯೆಗಳಲ್ಲಿ ಶಿರಾ ತಾಲ್ಲೂಕು ಅಗ್ರಸ್ಥಾನದಲ್ಲಿದೆ. ಹೇಮಾವತಿ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳ ಮೂಲಕ ನೀರು ಹರಿಸುವ ಹೋರಾಟ, ಮಾತುಗಳು ಎರಡು ದಶಕಗಳಿಂದಲೂ ಕೇಳಿಬರುತ್ತಿವೆ. ಆದರೆ ನೀರು ಮಾತ್ರ ಬಂದಿಲ್ಲ. ಶಾಶ್ವತ ನೀರಾವರಿ ಯೋಜನೆ ಸಾಕಾರವಾದರೆ ಮಾತ್ರ ರೈತರ ಜೀವ ಕಾಪಾಡಬಹುದಾಗಿದೆ.

ಪರ್ಯಾಯ ಬೆಳೆ ಸಾಧ್ಯವಿಲ್ಲ: ಪರ್ಯಾಯ ವಾಣಿಜ್ಯ ಬೆಳೆಯಾಗಿ ಕೆಲವು ಕಡೆಗಳಲ್ಲಿ ದಾಳಿಂಬೆ ಬೆಳೆಯಲು ಆರಂಭಿಸಿದ್ದಾರೆ. ಆದರೆ ದಾಳಿಂಬೆ ಕೃಷಿ ದುಬಾರಿಯಾಗಿರುವ ಕಾರಣ ಸಣ್ಣ, ಅತಿ ಸಣ್ಣ ರೈತರ ಪಾಲಿಗೆ ಇದು ಕನಸಿನ ಗಂಟು. ಎರಡು ವರ್ಷದಿಂದ ಶೇಂಗಾ ಬದಲು ತೊಗರಿ ಬೆಳೆಯಲು ಕೃಷಿ ಇಲಾಖೆ ರೈತರನ್ನು ಪ್ರೋತ್ಸಾಹಿಸಿದೆ. ರೈತರ ಪ್ರಯತ್ನಕ್ಕೆ ನಿಸರ್ಗ ತಣ್ಣೀರು ಎರಚಿದೆ.

ಎರಡು– ಮೂರು ಮಳೆ ಬಂದರೆ ಶೇಂಗಾ ಕೈ ಸೇರುತ್ತದೆ. ಆದರೆ ಬೇರೆ ಬೆಳೆಗಳಿಗೆ ಮಳೆ ಹೆಚ್ಚು ಬೇಕಾಗಿರುವ ಕಾರಣ ಪರ್ಯಾಯ ಬೆಳೆ ಇಲ್ಲಿಗೆ ಹೊಂದುತ್ತಿಲ್ಲ. ಶೇಂಗಾ ಹೊಟ್ಟನ್ನು ಹಸು, ಕುರಿಗೆ ಆಹಾರವಾಗಿ ಬಳಸಲಾಗುತ್ತದೆ. ಆದರೆ ತೊಗರಿ ಬಳಸಲು ಸಾಧ್ಯವಿಲ್ಲ. ಹೀಗಾಗಿ ಜಾನುವಾರು ಬೇಕೆಂದರೆ ಶೇಂಗಾ ಬೆಳೆಯಬೇಕೆಂಬ ಇಕ್ಕಟ್ಟಿಗೆ ರೈತರು ಸಿಲುಕಿದ್ದಾರೆ.

ತೆಂಗು ಬೆಳೆಯುವ ತಾಲ್ಲೂಕುಗಳಲ್ಲಿ ನೀರಾವರಿ ಆಶ್ರಯ ಇಲ್ಲದ ಪ್ರದೇಶಗಳ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಬರಗಾಲದ ಕಾರಣ ಮಳೆಯಾಶ್ರಿತ ತೆಂಗು ಒಣಗಿಹೋಗಿದ್ದು, ರೋಗ ಬಾಧೆಗೆ ಸಿಲುಕಿದೆ. ಸಾಲ ತೀರಿಸಲಾಗದೆ ಈ ಭಾಗದ ರೈತರು ಕೂಡ  ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಜ್ಜಪ್ಪ.

ಅಪ್ಪ ಮಾಡಿದ ಸಾಲ...
‘ಕೊಳವೆ ಬಾವಿ ಕೊರೆಸಲು ನಮ್ಮಪ್ಪ ಮಾಡಿದ ಸಾಲ. ಹದಿನೈದು ವರ್ಷ ಆತು. ನನ್ನ ತಮ್ಮ ಸಾಯಲು ಸಾಲ ಅಲ್ಲದೆ ಇನ್ನೇನು ಸ್ವಾಮಿ ಕಾರಣ?’ ಎಂದು ಶಿರಾ ತಾಲ್ಲೂಕಿನ ಬಂದಕುಂಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರಾಮಕೃಷ್ಣಯ್ಯ ಅವರ ಸೋದರ ಹನುಮಂತಯ್ಯ ಪ್ರಶ್ನಿಸಿದರು.ಸೋದರ ಸತ್ತ ಬಳಿಕ ಕಾರಣ ಕೇಳಿಕೊಂಡು ಮನೆ ಬಾಗಿಲಿಗೆ ಬರುವವರ ಕಂಡು ಅವರು ಸಿಟ್ಟಾಗಿದ್ದರು. ಮೊದಲಿಗೆ ಮಾತೇ ಆಡದಿದ್ದ ಅವರು ನಂತರ ಮಾತನಾಡಿದರು.

2001ರಲ್ಲಿ ಕುಟುಂಬ ಕೆನರಾ ಬ್ಯಾಂಕ್‌ನಲ್ಲಿ ರೂ1.50 ಲಕ್ಷ ಸಾಲ ಮಾಡಿತ್ತು. ಇದರಲ್ಲಿ ರೂ75 ಸಾವಿರವನ್ನು ಸರ್ಕಾರ ಈ ಹಿಂದೆ ಮನ್ನಾ ಮಾಡಿತ್ತು. ಕುಟುಂಬ ಇಬ್ಭಾಗವಾದ ನಂತರ ರೂ75 ಸಾವಿರ ಸಾಲದ ಹೊರೆ ರಾಮಕೃಷ್ಣಯ್ಯನವರ ಪಾಲಿಗೆ ಬಂದಿತ್ತು. ‘ಅವನಾದ್ರೂ ಹೇಗೆ ಸಾಲ ತೀರಿಸ್ತಾನೆ. ಮೂರು ಎಕರೆ ಹೊಲ ಇದೆ. ಎರಡು ಕೊಳವೆಬಾವಿ ಒಣಗಿವೆ. ಒಂದು ಕೊಳವೆಬಾವಿಯಲ್ಲಿ ಅಷ್ಟಿಷ್ಟು ನೀರು ಬರುತ್ತಿತ್ತು’ ಎಂದು ಹನುಮಂತಯ್ಯ ಹೇಳಿದರು.

‘ಪಿಯುಸಿವರೆಗೂ ಓದಿದ್ದ. ಒಮ್ಮೆ ಕಲ್ಲಂಗಡಿ ಬೆಳೆದ, ಇನ್ನೊಮ್ಮೆ ಸೌತೆ ಬೆಳೆದ, ಎಲ್ಲವೂ ಕೈಕೊಟ್ಟವು. ಕಳೆದ 15 ವರ್ಷದಲ್ಲಿ ಅಣ್ಣನಿಗೆ ರೂ75 ಸಾವಿರ ಸಾಲ ತೀರಿಸಲು ಸಾಧ್ಯವಾಗಿಲ್ಲ ಎಂದರೆ ಕೃಷಿಯಲ್ಲಿ ಎಷ್ಟು ಹುಟ್ಟುವಳಿ ಆಗಿರಬಹುದು ಎಂಬುದನ್ನು ನೀವೇ ಲೆಕ್ಕಾಹಾಕಿ’ ಎಂದರು.

ಮೃತ ರಾಮಕೃಷ್ಣಯ್ಯ ಅವರ ಪತ್ನಿ ಮೀನಾಕ್ಷಿ ಎಸ್‌ಎಸ್‌ಎಲ್‌ಸಿ ವರೆಗೂ ಓದಿದ್ದಾರೆ. ನೋಡಿದರೆ ರಕ್ತಹೀನತೆಯಿಂದ ಬಳಲುತ್ತಿರುವವರಂತೆ ಕಾಣುತ್ತಾರೆ. ಮಾತು ಆಡದ ಸ್ಥಿತಿಯಲ್ಲಿದ್ದಾರೆ. ಮೈಮೇಲೆ ಗುಲಗಂಜಿಯಷ್ಟು ಚಿನ್ನಾಭರಣ ಇರಲಿಲ್ಲ. ಎಲ್ಲವನ್ನೂ ಅಡವಿಟ್ಟು ಕೃಷಿಗೆ ಬಂಡವಾಳ ಹೂಡಿದ್ದಾರೆ. ಈ ವಿಷಯ ಹೇಳಲೂ ಅವರಿಗೆ ಹಿಂಜರಿಕೆ.

ಶಿಶುವಿಹಾರಕ್ಕೆ ಹೋಗುವ ಮಗನನ್ನು ನೆನೆದು ಆಕಾಶದತ್ತ ದೃಷ್ಟಿ ಹರಿಸಿದ ಅವರು ಕೆಲ ನಿಮಿಷಗಳ ನಂತರ ಮುಖ ಕೆಳಕ್ಕೆ ಹಾಕಿ ಅತ್ತರು. ‘ಬ್ಯಾಂಕ್‌ ಸಾಲವಲ್ಲದೇ ಎರಡು–ಮೂರು ಕಡೆ ಕೈ ಸಾಲ ಮಾಡಿದ್ದೆವು. ಒಮ್ಮೆ ರೂ35 ಸಾವಿರಕ್ಕೆ ಒಂದಿಷ್ಟು ಒಡವೆ, ಇನ್ನೊಮ್ಮೆ ರೂ3 ಸಾವಿರಕ್ಕೆ, ಮಗದೊಮ್ಮೆ ರೂ5 ಸಾವಿರಕ್ಕೆ ಒಡವೆ ಗಿರವಿ ಇಟ್ಟಿದ್ದೇವೆ. ಗ್ರಾಮಶಕ್ತಿ ಮತ್ತು ಗ್ರಾಮೀಣ ಕೂಟ ಸ್ವಹಾಯ ಸಂಘದಿಂದಲೂ ತಲಾ ರೂ25 ಸಾವಿರ ಸಾಲ ಪಡೆದು ಎಲ್ಲವನ್ನೂ ಕೃಷಿಗೆ ಹಾಕಿದ್ದೆವು. ಬ್ಯಾಂಕ್‌ನವರು ಸಾಲ ಕಟ್ಟುವಂತೆ ನೋಟಿಸ್‌ ನೀಡಿದ್ದರು. ಸಾಲಕ್ಕೆ ಹೆದರಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

ಸ್ತ್ರೀ ಶಕ್ತಿ ಸಂಘ ತಂದ ಸಾವಿನ ಕುಣಿಕೆ
ಹುಲುಸಾಗಿ ಬೆಳೆಯುತ್ತಿರುವ ಸ್ತ್ರೀ ಶಕ್ತಿ ಸಂಘಗಳು ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿವೆ ಎಂಬುದು ಗ್ರಾಮಸ್ಥರ ಬಲವಾದ ವಾದವಾಗಿವೆ. ಸ್ತ್ರೀಶಕ್ತಿ ಸಂಘಗಳಲ್ಲದೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಜ್ಜೀವನ್‌, ಗ್ರಾಮೀಣ ಕೂಟ ಸೇರಿದಂತೆ ಏಳೆಂಟು ಸರ್ಕಾರೇತರ ಸಂಸ್ಥೆಗಳು ಜಿಲ್ಲೆಯಲ್ಲಿ ಮಹಿಳೆಯರ ಗುಂಪು ರಚಿಸಿ ಸಾಲ ನೀಡುತ್ತಿವೆ.

ಸುಲಭವಾಗಿ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಎರಡು– ಮೂರು ಸಂಘಗಳಿಗೆ ಸದಸ್ಯೆಯಾಗಿ ಸಾಲ ಪಡೆಯುವ ಮೂಲಕ ಸಾಲದ ಬಲೆಗೆ ಬೀಳುತ್ತಿರುವುದು ಕಂಡು ಬಂದಿದೆ.‘ನಮ್ಮೂರಲ್ಲಿ ರೈತರ ಸಾವಿಗೆ ಸ್ತ್ರೀಶಕ್ತಿ ಸಂಘಗಳೇ ಕಾರಣ. ಆರಕ್ಕೂ ಹೆಚ್ಚು ಸಂಸ್ಥೆಗಳು ಸಂಘಗಳನ್ನು ಸಂಘಟಿಸಿವೆ. ಒಬ್ಬೊಬ್ಬರು ಎರಡು–ಮೂರು ಸಂಘಗಳಿಗೆ ಸದಸ್ಯರಾಗಿದ್ದಾರೆ. ಪ್ರತಿ ಸಂಘವೂ ಸದಸ್ಯರಿಗೆ ತಲಾ ರೂ25ರಿಂದ 50 ಸಾವಿರದವರೆಗೂ ಸಾಲ ನೀಡಿದೆ. ಒಂದು ಸಂಘದ ಸಾಲ ತೀರಿಸಲು ಮತ್ತೊಂದು ಸಂಘದಿಂದ ಸಾಲ ತೆಗೆಯುತ್ತಾರೆ. ಕೊನೆಗೆ ಸಾಲದ ಬಲೆಗೆ ಸಿಲುಕುತ್ತಾರೆ’ ಎನ್ನುತ್ತಾರೆ ಶಿರಾ ತಾಲ್ಲೂಕು ಬಂದಕುಂಟೆ ಗ್ರಾಮದ ಕುಂಟೇಗೌಡ.

ಸಾಲ ವಸೂಲಿ ವಿಚಾರದಲ್ಲಿ ಬ್ಯಾಂಕ್‌ಗಳಿಗಿಂತಲೂ ಈ ಸಂಘಗಳ ಕಿರುಕುಳವೇ ಹೆಚ್ಚು. ಹದಿನೈದು ದಿನ ಅಥವಾ ತಿಂಗಳಿಗೊಮ್ಮೆ ಸಾಲದ ಕಂತು ಕಟ್ಟಲೇಬೇಕು. ಮಾಸಿಕ ಶೇ 2ರ (ವರ್ಷಕ್ಕೆ ಶೇ 24) ಬಡ್ಡಿ ದರದಲ್ಲಿ ಸದಸ್ಯೆಯರಿಗೆ ಸಾಲ ನೀಡುತ್ತವೆ. ಸದಸ್ಯರಲ್ಲದವರು ಸದಸ್ಯರ ಜಾಮೀನು ಪಡೆದು, ಮಾಸಿಕ ಶೇ 3ರ (ವಾರ್ಷಿಕ ಶೇ 36) ಬಡ್ಡಿಯಲ್ಲಿ ಸಾಲ ಪಡೆಯಬಹುದು. ಸಾಲದ ಕಂತನ್ನು ಸಕಾಲಕ್ಕೆ ಕಟ್ಟಲು ಸಾಧ್ಯವಾಗದೇ ಅನೇಕ ಕುಟುಂಬಗಳು ಭೂಮಿ ಮಾರಿಕೊಂಡಿವೆ. 20ಕ್ಕೂ ಹೆಚ್ಚು ಕುಟುಂಬ ಊರು ಬಿಟ್ಟು ಹೋಗಿವೆ ಎನ್ನುತ್ತಾರೆ ಗ್ರಾಮಸ್ಥರು.

ಕುರಿ ಸಾಕಿದ್ರೂ ಲಾಭವಿಲ್ಲ

ಕೃಷಿ ಜೊತೆಗೆ ಉಪ ಕಸುಬಾಗಿ ಕುರಿ ಸಾಕಣೆ ಮಾಡಿದರೂ ಪ್ರಯೋಜನವಾಗುವುದಿಲ್ಲ. ಕುರಿಮರಿಯನ್ನುರೂ3 ಸಾವಿರ ನೀಡಿ ಖರೀದಿಸಬೇಕು. ಒಂದು ವರ್ಷ ಸಾಕಿದರೆ ರೂ5 ಸಾವಿರಕ್ಕೆ ಮಾರಾಟವಾಗುತ್ತದೆ. 5 ಕುರಿ ಮಾರಿದರೆ ರೂ10 ಸಾವಿರ ಉಳಿಯಬಹುದು. ಅದರಿಂದ ಬದುಕು ಹಸನಾಗದು. ಕುರಿಗಳಿಗೆ ವಿಪರೀತ ರೋಗ. ಅವು ಸತ್ತರೆ ಮತ್ತಷ್ಟು ಸಾಲದ ಹೊರೆ ಹೊತ್ತುಕೊಳ್ಳಬೇಕು. ಅಸಲಿಗೆ ಕುರಿ ಸಾಕಲು ನೀರು, ಜಾಗ ಬೇಡವೇ? ಕುರಿ ಸಾಕಲು ಆಗದೆ ನಾವುಗಳೇ ಕಸುಬು ಬಿಡುತ್ತಿದ್ದೇವೆ.
-ಆನಂದ್‌, ಕುರಿ ಸಾಕಣೆದಾರ, ರಂಗಾಪುರ




ಹೆದರಿಕೆಯೇ ಕಾರಣ
ಅದಾಲತ್‌ನಲ್ಲಿ ಸಾಲ ವಿವಾದ ಬಗೆಹರಿಸಿಕೊಳ್ಳುವಂತೆ ರೈತರಿಗೆ ಬ್ಯಾಂಕ್‌ಗಳು ನೋಟಿಸ್ ನೀಡುತ್ತಿವೆ. ಗಿರವಿ ಅಂಗಡಿಗಳಿಂದಲೂ

ರೈತರಿಗೆ ನೋಟಿಸ್‌ ಬರುತ್ತಿವೆ. ಒತ್ತಡಕ್ಕೆ ಒಳಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರ ಪರಿಸ್ಥಿತಿಯ ಕಾರಣ ಬೆಳೆ ಕೈ ಹಿಡಿಯುತ್ತಿಲ್ಲ. ರೈತರಿಗೆ ಬೇರೆ ಆದಾಯ ಮೂಲಗಳೂ ಇಲ್ಲವಾಗಿವೆ.
-ನಾಗರಾಜ್‌, ಸಹಾಯಕ ಕೃಷಿ ನಿರ್ದೇಶಕ, ಶಿರಾ ತಾಲ್ಲೂಕು

ನಮ್ಗೇನು ಗೊತ್ತಾಗುತ್ತೆ ಸ್ವಾಮಿ. ಮಳೆ ಇಲ್ಲ, ಬೆಳೆ ಇಲ್ಲ. ಕೆಲಸವೂ ಇಲ್ಲ. ಸಾಲದ ಕಾರಣದಿಂದಲೇ ಜನ್ರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಕೆಲಸವಾದ್ರು ಕೊಟ್ರೆ ಉಳಿಬೋದು ನೋಡಿ
-ಮಂಜುನಾಥ್‌, ಕೃಷಿಕ


ಸಾಲ ಮರು ಪಾವತಿಗೆ ಬ್ಯಾಂಕ್‌ನವರು ರೈತರನ್ನು ಹೆದರಿಸುತ್ತಿಲ್ಲ. ಸಾಲವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ಲೋಕ

ಅದಾಲತ್ ಮೂಲಕ ನೋಟಿಸ್‌ ನೀಡಲಾಗುತ್ತಿದೆ. ಇಷ್ಟಕ್ಕೆ ರೈತರು ಹೆದರಬೇಕಾಗಿಲ್ಲ
-ಜಯರಾಮಯ್ಯ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT