ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ಕೆ ಸಮಿತಿ ಆಯ್ಕೆ ಮಾಡಿ ಆಯ್ಕೆಯಾದವರು!

Last Updated 5 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಿಂಡಿಕೇಟ್‌ ಸದಸ್ಯೆಯಾಗಿ ವಿಶ್ವ­ವಿದ್ಯಾಲ­ಯಗಳ ಬೋಧಕ ಸಿಬ್ಬಂದಿ ನೇಮಕಾತಿ ಸಮಿತಿಗೆ ಒಪ್ಪಿಗೆ ನೀಡಿ, ನಂತರ ಅದೇ ಸಮಿತಿ ಮುಂದೆ ಸಂದ­ರ್ಶನಕ್ಕೂ ಹಾಜರಾಗಿ ಪ್ರಾಧ್ಯಾಪಕಿ­ಯಾಗಿ ನೇಮಕಗೊಂಡ ಪ್ರಸಂಗ ಬೆಳ­ಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲ­ಯದಲ್ಲಿ ನಡೆದಿದೆ. ಈ ಸಂಬಂಧ ಎಲ್ಲ ದಾಖಲೆಗಳ ಸಹಿತ ದೂರು ಈಗ ರಾಜ್ಯಪಾಲರನ್ನು ತಲುಪಿದೆ.

‘ಶಿಕ್ಷಣ ವಿಭಾಗದ ಸಹ ಪ್ರಾಧ್ಯಾಪಕ ಹುದ್ದೆಗೆ ಸಂದರ್ಶನ ನಡೆಯುವ ಮುನ್ನಾ ದಿನದವರೆಗೂ ಸಿಂಡಿಕೇಟ್‌ ಸದಸ್ಯರಾಗಿದ್ದ ಡಾ.ಪೂರ್ಣಿಮಾ ಪಟ್ಟಣ ಶೆಟ್ಟಿ ಮಾರನೇ ದಿನ ಸಂದರ್ಶನಕ್ಕೆ ಹಾಜ­ರಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಆಗಿನ ಕುಲಪತಿ ಪ್ರೊ. ಬಿ.ಆರ್‌. ಅನಂತನ್‌ ಅವರು ಸಹಕರಿಸಿದ್ದರು’ ಎಂದೂ ಆರೋಪಿಸಲಾಗಿದೆ.

‘ಸಹ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸು­ವಾಗ ಡಾ.ಪೂರ್ಣಿಮಾ ಅವರು ತಾವು 1989­ರಿಂದ 1994ರವರೆಗೆ ಜೈನ ಮಹಿಳಾ ಮಂಡಲ ಮಹಿಳಾ ಬಿ.ಇಡಿ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದೆ ಎಂದು ಅನುಭವ ಪತ್ರ ಸಲ್ಲಿಸಿದ್ದಾರೆ. ಆದರೆ ಪೂರ್ಣಿಮಾ ಅವರು ಬಿ.ಇಡಿ ಮುಗಿಸಿದ್ದು 1989­ರಲ್ಲಿ ಹಾಗೂ ಅವರ ಎಂ.ಇಡಿ ಮುಗಿದಿದ್ದು 1992ರ­ಲ್ಲಿ. ಹೀಗಿರುವಾಗ ಅವರು 1989ರಿಂದ 94ರ­ವರೆಗೆ ಬಿ.ಇಡಿ ತರಗತಿಗೆ ಶಿಕ್ಷಕಿ­ಯಾಗಿದ್ದು ಹೇಗೆ’ ಎಂದು ಪ್ರಶ್ನಿಸಲಾಗಿದೆ.

‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿ ಹುದ್ದೆ ಪಡೆಯುವುದಕ್ಕಾಗಿಯೇ ಪೂರ್ಣಿಮಾ ಅವರು 1996ರ ಜೂನ್‌ 29ರಂದು ಜೈನ ಮಹಿಳಾ ಮಂಡಳ­ದಿಂದ ಅನುಭವ ಪತ್ರ ಪಡೆದುಕೊಂಡಿ­ದ್ದಾರೆ’ ಎಂದೂ ದೂರಲಾಗಿದೆ.

‘ಫಿಜಿಯೊಥೆರಪಿ, ನರ್ಸಿಂಗ್‌ ಕಾಲೇಜು ಹಾಗೂ ಕೆಲವು ವಸತಿ ಶಾಲೆಗಳಲ್ಲಿ ತಾವು ಶಿಕ್ಷಕಿಯಾಗಿದ್ದಾಗಿ ಅವರು ಅನುಭವ ಪತ್ರ ಒದಗಿಸಿದ್ದಾರೆ. ಆದರೆ, ಇವು ಯಾವುದೂ ವಿಶ್ವವಿದ್ಯಾಲ­ಯದ ಸಹ ಪ್ರಾಧ್ಯಾ­ಪಕ ಹುದ್ದೆಗೆ ಅಗತ್ಯವಾದ ಅನುಭವಗಳಲ್ಲ. ಅಲ್ಲದೆ ಅವರಿಗೆ ಸಾಕಷ್ಟು ಶೈಕ್ಷಣಿಕ ಸಾಧನಾ ಸೂಚ್ಯಂಕಗಳೂ ಇರಲಿಲ್ಲ.’

‘ಯುಜಿಸಿ ಮತ್ತು ಎನ್‌ಸಿಟಿಇ ನಿಯ­ಮದ ಪ್ರಕಾರ ಅರ್ಹತೆ ಇಲ್ಲದವರನ್ನೂ ಶಿಕ್ಷಣ ವಿಭಾಗಕ್ಕೆ ನೇಮಿಸಿಕೊಳ್ಳಲಾಗಿದೆ. ಎನ್‌ಸಿಟಿಇ ನಿಯಮದ ಪ್ರಕಾರ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹುದ್ದೆಗೆ ಕನಿಷ್ಠ 5 ವರ್ಷ ಬೋಧನಾ­ನುಭವ ಇರುವುದು ಕಡ್ಡಾಯ. ಅಲ್ಲದೆ ಸ್ನಾತಕೋತ್ತರ ಪದವಿಯಲ್ಲಿ ಶೇ 55ಕ್ಕಿಂತ ಹೆಚ್ಚು ಅಂಕ ಪಡೆದಿರಲೇ ಬೇಕು. ಆದರೆ ಎಂಎ ದಲ್ಲಿ ಶೇ 51.7 ಅಂಕ ಪಡೆದ ಡಾ.ಯರ್ರಿಸ್ವಾಮಿ, ಶೇ 53 ಅಂಕ ಪಡೆದ ಡಾ.ಸುಷ್ಮಾ ಅವರನ್ನು ಸಹ ಪ್ರಾಧ್ಯಾಪಕರನ್ನಾಗಿ ಆಯ್ಕೆ ಮಾಡ­ಲಾಗಿದೆ. ಶೇ 52 ಅಂಕ ಪಡೆದ ಡಾ.ಮಾರು­ತಿರಾವ್‌ ನಿಂಬಾಳ್ಕರ್‌ ಅವರನ್ನು ಸಂದರ್ಶನ ಪ್ರಾಧ್ಯಾಪಕರನ್ನಾಗಿ ನೇಮಿಸಲಾಗಿದೆ.’

‘ಇದನ್ನು ಗಮನಿಸಿದ ಎನ್‌ಸಿಟಿಇ ವಿಶ್ವವಿದ್ಯಾಲ­ಯಕ್ಕೆ 2012ರ ಆಗಸ್ಟ್ 30ರಂದು ನೋಟಿಸ್‌ ನೀಡಿದೆ. ಇದಕ್ಕೆ ವಿಶ್ವವಿದ್ಯಾಲಯ ಉತ್ತರವನ್ನೂ ಕೊಟ್ಟಿದೆ. ಆದರೆ 2012ರ ನವೆಂಬರ್‌ 21–22­ರಂದು ನಡೆದ ಎನ್‌ಸಿಟಿಇ 235ನೇ ಸಭೆಯಲ್ಲಿ ವಿಶ್ವ­ವಿದ್ಯಾಲಯ ನೀಡಿದ ಸಮರ್ಥನೆಯನ್ನು ತಿರಸ್ಕರಿಸಿದೆ.’

‘ಯುಜಿಸಿ ನಿಯಮದ ಪ್ರಕಾರ ವಿಶ್ವವಿದ್ಯಾಲ­ಯದ ಸಹ ಪ್ರಾಧ್ಯಾಪಕ­ರಾಗಲು 5 ವರ್ಷದ ಬೋಧನಾನುಭವ ಬೇಕು. ಎನ್‌ಸಿಟಿಇ ನಿಯಮದ ಪ್ರಕಾರ ಬೋಧನಾನುಭವ 8 ವರ್ಷ ಇರಬೇಕು. ಆದರೆ ಯರ್ರಿಸ್ವಾಮಿ ಅವರಿಗೆ ಕೇವಲ ಒಂದು ವರ್ಷದ ಬೋಧನಾನುಭವ ಮಾತ್ರ ಇತ್ತು. ಅವರಿಗೆ ಅಗತ್ಯವಾದ ಶೈಕ್ಷಣಿಕ ಸಾಧನಾ ಸೂಚ್ಯಂಕ ಕೂಡ ಇರಲಿಲ್ಲ’ ಎಂದು ಆರೋಪಿಸಲಾಗಿದೆ.

‘ಇದೇ ರೀತಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿಯೂ ಅರ್ಹತೆ ಇಲ್ಲದವರನ್ನೇ ನೇಮಕ ಮಾಡಿಕೊಳ್ಳಲಾಗಿದೆ. ಡಾ.ವಿನಾಯಕ ಬಂಕಾ­ಪುರ ಮತ್ತು ಡಾ.ಬಿ.ರವಿ ಅವರನ್ನು ಯಾವುದೇ ಬೋಧನಾ­ನುಭವ ಇಲ್ಲದಿದ್ದರೂ ಸಹ ಪ್ರಾಧ್ಯಾಪಕ­ರನ್ನಾಗಿ ನೇಮಿಸಲಾಗಿದೆ. ವಿನಾಯಕ ಬಂಕಾಪುರ ಅವರು ಸ್ನಾತಕೋತ್ತರ ಪದವಿಯಲ್ಲಿ ಶೇ 55ರಷ್ಟು ಅಂಕವನ್ನೂ ಪಡೆದಿರಲಿಲ್ಲ. ಅವರಿಗೆ ಶೈಕ್ಷಣಿಕ ಸಾಧನಾ ಸೂಚ್ಯಂಕವನ್ನೂ ಬೇಕಾಬಿಟ್ಟಿ­ಯಾಗಿ ನೀಡಲಾಗಿದ್ದು ಅರ್ಹರಾಗಿದ್ದ ಇತರರನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಲಾಗಿದೆ. ಇದೇ ರೀತಿ ಡಾ.ರವಿ ಅವರನ್ನೂ ನೇಮಕ ಮಾಡಲಾಗಿದೆ’ ಎಂದು ಆರೋಪಿಸಲಾಗಿದ್ದು ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ರಾಜ್ಯಪಾಲರಿಗೆ ನೀಡಲಾಗಿದೆ.

ಮೀಸಲು ಬದಲು: ‘ಶಾಸ್ತ್ರೀಯ ಕನ್ನಡ ಅಧ್ಯಯನ ವಿಭಾಗಕ್ಕೆ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳು­ವಾಗ ಮೀಸಲಾತಿಯನ್ನು ಬದಲಾಯಿಸಲಾಗಿದೆ. ಕನ್ನಡ ಅಧ್ಯಯನ ವಿಭಾಗಕ್ಕೆ 3 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಜಾಹೀರಾತು ನೀಡಲಾಗಿತ್ತು.

ಇದರಲ್ಲಿ ಒಂದು ಹುದ್ದೆ ಸಾಮಾನ್ಯ ಮಹಿಳೆ, ಒಂದು ಹುದ್ದೆ ವರ್ಗ–1 ಹಾಗೂ ಇನ್ನೊಂದು ಹುದ್ದೆಯನ್ನು ಸಾಮಾನ್ಯ ಮಹಿಳೆ–ಗ್ರಾಮೀಣಕ್ಕೆ ಮೀಸಲಾಗಿಡಲಾಗಿತ್ತು. ಒಟ್ಟಾರೆ 96 ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅದರಲ್ಲಿ 66 ಅಭ್ಯರ್ಥಿಗಳು ಗ್ರಾಮೀಣ ಮೀಸಲಾ­ತಿಯ ಅರ್ಹತೆಯನ್ನು ಹೊಂದಿದ್ದರು. ಆದರೆ ಡಾ.ಶೋಭಾ ಶಿವಪ್ರಸಾದ್‌ ನಾಯಕ್‌ ಮತ್ತು ಮೈತ್ರಾಯಿನಿ ಗದಿಗೆಪ್ಪಗೌಡರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಇಬ್ಬರೂ ಗ್ರಾಮೀಣ ಮೀಸ­ಲಾತಿ­ಯನ್ನು ಕೇಳಿರಲಿಲ್ಲ. ಆದರೂ ಇವರು ನೇಮಕ­ಗೊಂಡಿದ್ದಾರೆ.

ನೇಮಕಾತಿ ಸಮಿತಿ ನಡಾವಳಿಯಲ್ಲಿ ‘ಗ್ರಾಮೀಣ ಮೀಸಲು ಹುದ್ದೆಗೆ ಯಾರೂ ಅರ್ಹ ಅಭ್ಯರ್ಥಿಗಳು ಇಲ್ಲದೇ ಇರುವುದರಿಂದ ಹಾಗೂ ಸಂದರ್ಶನಕ್ಕೆ ಬಂದ ಗ್ರಾಮೀಣ ಮೀಸಲಾತಿಯ ಯಾವುದೇ ಅಭ್ಯರ್ಥಿಯೂ ಯೋಗ್ಯರಲ್ಲದ ಕಾರಣ ಗ್ರಾಮೀಣ ಮೀಸಲು ಅಭ್ಯರ್ಥಿ ಸ್ಥಾನಕ್ಕೆ ಸಾಮಾನ್ಯ ಮಹಿಳೆಯನ್ನು ಆಯ್ಕೆ ಮಾಡಲಾಗಿದ್ದು ಮುಂದಿನ ಬಾರಿ ಈ ಹುದ್ದೆಗೆ ನೇಮಕ ಮಾಡುವಾಗ ಅದನ್ನು ಗ್ರಾಮೀಣ ಮಹಿಳೆಗೆ ಮೀಸಲಿಡಬೇಕು’ ಎಂದು ಷರತ್ತು ವಿಧಿಸಲಾಗಿದೆ. ‘ಇದು ಕೂಡ ಯುಜಿಸಿ ನಿಯ­ಮಾವಳಿ ಹಾಗೂ ರಾಜ್ಯದ ಮೀಸಲಾತಿ ನಿಯಮಕ್ಕೆ ವಿರುದ್ಧ’ ಎಂದು ದೂರಲಾಗಿದೆ.
(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT