ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರು/ಆಗು/ಅಳಿ

ಕಥೆ
Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಆದರೆ ಈ ಸೃಷ್ಟಿಯಲ್ಲಿ ತಾನೊಬ್ಬನೆ ದುಃಖಿ­ಯಲ್ಲವೆಂದು ಮನದಟ್ಟಾದೊಡನೆ ಅವನಿಗೆ ತನ್ನ ಮೊದಲನೆ ಸಮಸ್ಯೆ ಇನ್ನಷ್ಟು ಕಠಿಣವಾಗಿ ಕಂಡಿತ್ತು.

ಒಂದು ದಿನ ಸಂಜೆಯ ಹೊತ್ತು ಎಲ್ಲೆಲ್ಲೂ ಮೌನ ಕವಿದಿತ್ತು. ರವಿ ಅಸ್ತಂಗತನಾಗುತ್ತಿದ್ದ, ಕಲಾವಿದ ಕಲ್ಲಿನ ತುಂಡೊಂದರ ಮುಂದೆ ಕುಳಿತು ತನ್ನ ಭಾವವನ್ನು ರೂಪಿಸುತ್ತಿದ್ದ. ಆಗ ಅವನ ಬೆನ್ನಹಿಂದೆ ದೂರದ ಗವಿಯೊಂದು ಬಾಯಿತೆರೆದು ‘ಬಾ’ ಎಂದು ಕರೆದಂತೆನಿಸಿತ್ತು. ಹಿಂದೆ ತಿರುಗಿ ನೋಡಿದ. ಏನು ವಿಚಿತ್ರ! ಗವಿ ಕರೆದು ಹೇಳಿತ್ತು.

‘ಇಲ್ಲಿ ಬಂದು ಮಲಗು ನಿನ್ನ ಸಮಸ್ಯೆ ಬಗೆಹರಿಯುತ್ತದೆ’.
‘ನೀನು ಯಾರು?’ ಕಲಾವಿದ ಕೇಳಿದ.
‘ನಿನ್ನನ್ನು ಕಾಡುತ್ತಿರುವ ಪ್ರಶ್ನೆಯನ್ನು, ಸೃಷ್ಟಿ ಮೊದಲು ನನ್ನಲ್ಲಿ ಹುದುಗಿಸಿಟ್ಟಿತ್ತು. ಸಾವು ನನ್ನ ಹೊಸ್ತಿಲ ಬಳಿ ಬಹಳ ಜಾಗರೂಕತೆಯಿಂದ ಈ ಗುಟ್ಟನ್ನು ಕಾಯುತ್ತ ನಿಂತಿದೆ’.
‘ಆಮೇಲೆ?’

‘ಸೃಷ್ಟಿ ಕಠೋರವಾಗಿ ಸಾವಿಗೆ ಹೀಗೆ ಅಪ್ಪಣೆ ಕೊಟ್ಟಿತ್ತು. ನೀನೇನಾದರೂ ನನ್ನ ಈ ಗುಟ್ಟನ್ನು ಬಯಲು ಮಾಡಿದರೆ, ಸ್ವಲ್ಪವೂ ಬಿಡುವಿಲ್ಲದಂತೆ ಜಗತ್ತಿನಲ್ಲೆಲ್ಲಾ ನನ್ನ ಮಕ್ಕಳ ದುಃಖವನ್ನು ಶಮನ ಮಾಡಲು ಸಂಚರಿಸಬೇಕಾಗುತ್ತದೆ. ನಿನಗೆ ಅನಂತವಾದ ವಿಶ್ರಾಂತಿಯಿಲ್ಲದ ದುಡಿತ ಪ್ರಾಪ್ತವಾಗುತ್ತದೆ’.

‘ಅನಂತರ?’
‘ಆದರೆ ಒಂದು ದಿನ ನೀನು ನನ್ನ ಬಳಿ ಸಂಚರಿಸುತ್ತಿದ್ದಾಗ ಫಕ್ಕನೆ ನಿನಗದು ಹೇಗೋ ಗೋಚರವಾಯಿತು. ನೀನು ಕಂಡ ಸತ್ಯದ ಅಂಶವನ್ನು ಹೋದೆಡೆಯಲ್ಲೆಲ್ಲಾ ಕಲ್ಲುಗಳ ಮೇಲೆ, ಮರದ ತುಂಡುಗಳ ಮೇಲೆ ಕೆತ್ತತೊಡಗಿದೆ. ಇದರಿಂದ ಎಲ್ಲರಿಗೂ ಆ ಗುಟ್ಟು ಬಯಲಾಯಿತು. ಆದರೆ ಸಮಸ್ಯೆ ಮಾತ್ರ ಉಳಿದಿದೆ... ಅದೊಂದು ಮಾತ್ರ ಏಕೆ ಉಳಿದಿರಬೇಕೆಂದು ನಾನು ನಿನಗೆ ಆಹ್ವಾನ ಕೊಟ್ಟಿದ್ದೇನೆ. ಇಲ್ಲಿ ಬಂದು ಮಲಗು. ನಿನಗೆಲ್ಲಾ ಆಗ ಬಗೆಹರಿಯುವುದು’.

ಕಲಾವಿದ ತನ್ನ ಕೆಲಸವನ್ನು ಅಲ್ಲಿಯೇ ಬಿಟ್ಟು ಮೆಲ್ಲನೆದ್ದು ಹೋಗಿ ಗವಿಯೊಳಗೆ ಹೊಕ್ಕನು.
ಕೂಡಲೆ ಅವನಿಗೆ ವಿಚಿತ್ರವಾದ ಅನುಭವವಾಯಿತು. ಶಬ್ದ ಪ್ರಪಂಚವೆಲ್ಲಾ ಬಂದು ಅವನ ಕಿವಿಯೊಡೆಯುವಂತೆ ಸದ್ದು ಮಾಡಿತು. ಜ್ಯೋತಿರ್ಲೋಕ ಅವನ ಕಣ್ಣುಗಳ ಮುಂದೆ ಬಂದು ನರ್ತಿಸತೊಡಗಿದವು. ಅವನ ಒಡಲಿನ ತಂತು ತಂತುಗಳಿಂದಲೂ ಏನೋ ಸಂಗೀತ ಧುಮುಕತೊಡಗಿತು. ಆಗ ಹೊರಗಡೆ ಎಲ್ಲೆಲ್ಲೂ ತಮ್ಮ ಗವಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ಜೀವಿಗಳು ಕಿವಿಗೊಟ್ಟು ಎಲ್ಲೆಲ್ಲಿದ್ದರೋ, ಅಲ್ಲಲ್ಲೇ ಮಂತ್ರ ಮುಗ್ಧ ಪಕ್ಷಿಗಳಂತೆ ನಿಂತರು. ಆ ವಿಚಿತ್ರವಾದ ಸಂಗೀತ ಎಲ್ಲಿಂದ ಬರುತ್ತಿತ್ತೋ ಅವರಿಗೆ ತಿಳಿಯಲಿಲ್ಲ. ತಮ್ಮಲ್ಲೂ ಅದು ಸಂಚರಿಸುತ್ತಿರುವಂತೆ ಅವರಿಗೆ ಭಾಸವಾಯಿತು.

ಸೃಷ್ಟಿಯ ಗುಟ್ಟನ್ನು ಮಾನವ ಅರಿಯುವ ಆ ರಾತ್ರೆ ಬ್ರಹ್ಮಾಂಡದಲ್ಲೆಲ್ಲಾ ಭಯಂಕರವಾದ ಕತ್ತಲು ಕವಿದಿತ್ತು.

ಹಾಗೆಯೇ ಆ ಕಲಾವಿದನಿಗೆ ತನ್ನಲ್ಲಿ ವಿಚಿತ್ರವಾದ ಶಕ್ತಿ ಉದಿಸಿದಂತಾಯ್ತು. ಆಗ ಅವನು ಸರ್ವಶಕ್ತನಾಗಿದ್ದ. ಸೃಷ್ಟಿಸುವ ದಿವ್ಯಶಕ್ತಿ ಅವನಲ್ಲಿ ಉದಿಸಿತ್ತು.

ಆ ಅದ್ಭುತವನ್ನು ಹೇಳಲಸದಳವಲ್ಲ. ಆ ಶಕ್ತಿ ಪ್ರಾಪ್ತವಾದೊಡನೆ ಅವನಿಗೆ ಅದನ್ನು ಕಾರ್ಯಗತ ಮಾಡಬೇಕೆಂಬ ಆಸೆ ಅಂಕುರಿಸಿತು. ಆದ್ದರಿಂದ ತನ್ನ ಎದುರು ಅದ್ಭುತವಾದ ಆಕಾರವುಳ್ಳ ದೇಶವೊಂದನ್ನು ನಿರ್ಮಿಸಿದ. ಅದು ಜಡವಾಗಿ ಬಿದ್ದಿತ್ತು.
ನಂತರ ನೀರನ್ನು ಸೃಷ್ಟಿಸಿದ. ಆದರೆ ಅದೂ ಹರಿಯದೆ ನಿಶ್ಚಲವಾಗಿ ನಿಂತಿತ್ತು.

ಆಮೇಲೆ ಗಾಳಿಯನ್ನು ಸೃಷ್ಟಿಸಿದ. ಆದರೆ ಅದೂ ಸಂಚರಿಸದೆ ನಿಂತಲ್ಲಿಯೇ ನಿಂತಿತ್ತು.
ಬೆಂಕಿಯನ್ನು ಸೃಷ್ಟಿಸಿದ. ಆದರೆ ಅದಕ್ಕೆ ಶಾಖವನ್ನು ಕೊಡುವ ಶಕ್ತಿಯಿರಲಿಲ್ಲ.
ರಮ್ಯ ಪ್ರಕೃತಿಯನ್ನು ಸೃಷ್ಟಿಸಿದ. ಅದು ತನ್ನ ಸೌಂದರ್ಯವನ್ನು ಕಾಣುವ ಕಣ್ಣುಗಳಿಲ್ಲದುದರಿಂದ ಅಳು ಮೋರೆ ಹೊತ್ತು ನಿಂತಿತು.
ಆಗ ಅವನ ಸುತ್ತಾಮುತ್ತಾ ಯಾವುದೋ ಒಂದು ಜೀವ ಸುಳಿಯುತ್ತಿದ್ದಿತು ಎನಿಸಿತು. ‘ಇರುವಿಕೆ’ಗೆ ಆಸೆ ಪಡುತ್ತಿದ್ದ ಅದಕ್ಕೆ ಇವನ ಸೃಷ್ಟಿಶಕ್ತಿಯ ಸ್ಪರ್ಶವಾಗಬೇಕಿತ್ತು. ತನ್ನ ಅದ್ಭುತ ಶಕ್ತಿಯ ಕೈಗಳಿಂದ ಅವನು ಮುಟ್ಟಿದ ಒಡನೆಯೇ ಅದು ಮಾನವ ರೂಪ ತಾಳಿ ಅವನ ಸೃಷ್ಟಿಯ ನಡುವೆ ನಿಂತಿತು.

ಆದರೆ ಯಾವುದೂ ಬದಲಾಗಲಿಲ್ಲ. ಆ ಮಾನವ ರೂಪ ಆ ಸೃಷ್ಟಿಯ ನಡುವೆ ಎಲ್ಲೆಲ್ಲೂ ಸಂಚರಿಸತೊಡಗಿತು.
ಗಾಳಿಯ ಬಳಿ ಹೋದರೆ ಗಾಳಿ ಸಂಚರಿಸಲಿಲ್ಲ.
ಅಗ್ನಿಯ ಬಳಿ ಹೋದರೆ ಅದು ಶಾಖವನ್ನು ಕೊಡಲಿಲ್ಲ.
ಪ್ರಕೃತಿಯ ಬಳಿ ಸುಳಿದರೆ ಅದೂ ತನ್ನ ಜಡತೆಯನ್ನು ಬಿಡಲಿಲ್ಲ.
ಸೃಷ್ಟಿಕರ್ತನಾಗಿದ್ದ ಕಲಾವಿದ ಇದೇಕೆ ಹೀಗೆ ಎಂದು ಆಲೋಚಿಸಿದ.
ಆಗ ಇವನೇ ಸೃಷ್ಟಿಸಿದ ಆ ಮಾನವ ರೂಪ ಇವನ ಕಿವಿಯಲ್ಲಿ ಬಂದು ಹೇಳಿತು.
ನನ್ನದು ಬರಿಯ ‘ಇರುವಿಕೆ’ ಮಾತ್ರ, ಎಲ್ಲವುದರಂತೆಯೇ ನಾನೂ ಇದ್ದೇನೆ. ನನ್ನನ್ನು ಜೀವಕ್ಕೆ ಸಾಯಿಸಬೇಕು. ಅದಕ್ಕೆ ನಿನ್ನೊಡನಿರುವ ಮತ್ತೊಂದು ಶಕ್ತಿಯ ಸ್ಪರ್ಶವಾಗಬೇಕು...

‘ಹಾಗೆಯೇ ಮಾಡಲೇ?’
‘ಹಾಗಾಗಬೇಕೆಂಬ ಆಸೆ ನನಗೇನೂ ಇಲ್ಲ. ನನಗೆ ಇದ್ದ ಒಂದೇ ಆಸೆಯೆಂದರೆ ‘ಇರುವಿಕೆ’ಯ ಆಸೆ. ‘ಜೀವಿಸು’ವ ಆಸೆಯೇನೂ ನನ್ನಲ್ಲಿಲ್ಲ. ಮಹತ್ತಿಗಾಗಿ ‘ಆಸೆ’–ಪ್ರೇಮ ನನ್ನಲಿಲ್ಲ. ಅದರಿಂದ ನನಗೆ ನೋವು ಆಗುವುದಿಲ್ಲ... ಆದ್ದರಿಂದಲೇ ಪೂರ್ಣತೆಗೆ ಪಡುವ ತವಕವಿಲ್ಲದೆ ಸೃಷ್ಟಿಯೆಲ್ಲ ನಿಶ್ಚಲವಾಗಿದೆ’.
‘ಆದರೆ ನೀನು ಚಿರಂಜೀವಿಯೇ?’

‘ಅಲ್ಲ ಹಾಗೂ ಅಲ್ಲ. ‘ಇರುವಿಕೆ’ಯಿಂದ ಜೀವಕ್ಕೆ ಸಾಯದಿದ್ದರೂ ಈ ಸೃಷ್ಟಿಯಲ್ಲಿ ‘ಇಲ್ಲದಿರುವಿಕೆಗೆ’ ನಾನು ಮಾರ್ಪಾಡಾಗುತ್ತೇನೆ. ನಂತರ ಪುನಃ ‘ಇರುವಿಕೆ’ಗೆ ನನ್ನ ಆಸೆ ಅಂಕುರಿಸಿ ನನ್ನನ್ನು ತಳ್ಳುತ್ತದೆ. ನನಗೆ ಆನಂದ, ದುಃಖ ಯಾವುದೂ ಇಲ್ಲ’.
ಮಾತನಾಡುತ್ತ ಆಡುತ್ತ ಅದು ಎಲ್ಲೆಲ್ಲೋ ಸಂಚರಿಸುತ್ತ ಅಹಂಕಾರದಿಂದ ಸ್ತಬ್ಧಗೊಂಡ ಒಂದು ಕರಿಬಣ್ಣದ ಮುಗಿಲ ಬಳಿ ಅಡಗಿತು.
ಆಗ ಸೃಷ್ಟಿಕರ್ತನಾದ ಕಲಾವಿದ ತನ್ನ ಸೃಷ್ಟಿಯ ಅಪೂರ್ಣತೆಯನ್ನು ಅರಿತು, ಹೆಚ್ಚು ಭವ್ಯವಾದ ಜೀವಿಯ ನಿರ್ಮಾಣದಲ್ಲಿ ತೊಡಗಿದನು.
ಹೊಸ್ತಿಲ ಬಳಿ ಕಾವಲಿದ್ದ ಸಾವಿನ ಸಾನ್ನಿಧ್ಯದಲ್ಲಿ ಅವನು ಸುಂದರವಾದ ಮಾನವನೊಬ್ಬನನ್ನು ನಿರ್ಮಿಸಿದನು.

ತುಂಬಾ ಸೂಕ್ಷ್ಮವಾದ ಹೃದಯ. ನೂರಾರು ಭಾವಗಳು ಸುಲಭವಾಗಿ ಸಂಚರಿಸಬಲ್ಲ ತೀಕ್ಷ್ಣವಾದ ಕಣ್ಣುಗಳು. ಆಸೆ ತುಂಬಿದ ಮನಸ್ಸು. ಹೀಗೆ ನಿರ್ಮಿಸುತ್ತಿದ್ದಂತೆಯೇ ಆ ಜೀವ ಕರ್ತನ ಕೈಯಿಂದ ವಿದ್ಯುತ್ತಿನಂತೆ ಛಂಗನೆ ನೆಗೆಯಿತು.
ಎಂತಹ ಅದ್ಭುತವಾದ ಸೃಷ್ಟಿಯದು. ಇರುವಿಕೆ ಪ್ರಾಪ್ತವಾದೊಡನೆ ಕರ್ತನ ಸೃಷ್ಟಿಯ ಮೋಹಕತೆಯನ್ನು ಒಮ್ಮೆ ದಿಟ್ಟಿಸಿ ಏನೋ ಅರಿಯದ ಆಸೆಯಿಂದ ಎಲ್ಲೆಡೆಯಲ್ಲೂ ಸಂಚರಿಸತೊಡಗಿತು.

ಏನೋ ನೋವಿನಿಂದ ಪಾದರಸದಂತೆ ನಿಂತಲ್ಲಿ ನಿಲ್ಲಲಾರದೆ ಸಂಚರಿಸಿತು. ನಾದದಂತೆ ಅಲೆಯಿತು.
‘ಏನಿದು ನಿನ್ನ ಆಸೆ? ಯಾವ ನೋವು ನಿನ್ನನ್ನು ಪೀಡಿಸುತ್ತಿದೆ?’ ಕರ್ತ ತನ್ನ ಸೃಷ್ಟಿಯನ್ನು ಕುರಿತು ಪ್ರಶ್ನಿಸಿದ.
‘ನಾನು ಎಲ್ಲೆಲ್ಲಿ ಹೋದರೂ ಅಪೂರ್ಣತೆ ನನ್ನನ್ನು ಬಾಧಿಸುತ್ತಿದೆ. ನಾನು ಪೂರ್ಣವಾಗಬೇಕು. ಆ ಆಸೆ ನನ್ನನ್ನು ನಿಲ್ಲದಂತೆ ಮಾಡಿ ಎಲ್ಲೆಡೆಯೂ ಅಲೆಸುತ್ತಿದೆ...’

‘ನಿನಗೆಂದು ಆನಂದ ಪ್ರಾಪ್ತವಾಗುತ್ತದೆ?’
‘ಎಂದೋ ಏನೋ... ನಾನು ‘ಇರುವಿಕೆ’ಯಿಂದ ಸತ್ತು ಜೀವಿಸಬೇಕು ಅಲ್ಲಿಯವರೆವಿಗೂ ನನಗೆ ಬಿಡುವಿಲ್ಲ...’
ಸೃಷ್ಟಿಕರ್ತ ತನ್ನ ನಿರ್ಮಾಣದ ವೈಚಿತ್ರ್ಯವನ್ನು ಬೆರಗಾಗಿ ನೋಡುತ್ತಿದ್ದ.
ಆ ಜೀವಿ ಮೊದಲು ಗಾಳಿಯ ಬಳಿ ಹೋಯಿತು. ಇನ್ನೊಂದರ ಇರುವಿಕೆಯನ್ನು ಕಂಡು ತನ್ನನ್ನು ಮರೆಯಿತು. ಗಾಳಿಯನ್ನು ತನ್ನ ಆನಂದದಿಂದ ನಡುಗುವ ಕೈಗಳಿಂದ ಮುಟ್ಟಿತು.

ಗಾಳಿ ಒಮ್ಮೆಗೇ ಪುಳಕಗೊಂಡು ಎಲ್ಲೆಡೆಯಲ್ಲೂ ನಿಲ್ಲದೆ ಸಂಚರಿಸತೊಡಗಿತು ಆಗ ರಮ್ಯ ನಿಸರ್ಗ ಪುಳಕಗೊಂಡಿತು.
ನಂತರ ಬೆಂಕಿಯ ಬಳಿ ಹೋಯಿತು. ಬೆಂಕಿಗೂ ದಿವ್ಯ ಸ್ಪರ್ಶವಾದಂತಾಗಿ ಅದೂ ಪುಳಕಿತವಾಗಿ ತನ್ನ ಸುಖವನ್ನು ಶಾಖವಾಗಿ ಸೂಸಿತು.
ಆ ಜೀವಿ ಆಮೇಲೆ ನೀರಿನ ಬಳಿ ಹೋಯಿತು. ನೀರು ತನ್ನ ಇರುವಿಕೆಯನ್ನು ಮರೆತು ಏನನ್ನೋ ಸೇರುವ ಆಸೆಯಿಂದ ಭೋರ್ಗರೆದು ಹರಿಯತೊಡಗಿತು.

ಜೀವಿ ನಿಧಾನವಾಗಿ ಸೃಷ್ಟಿಯ ವಿಚಿತ್ರ ಮಾರ್ಪಾಡುಗಳನ್ನು ಮರೆತು ರಮ್ಯ ಪ್ರಕೃತಿಯ ಬಳಿ ಬಂದಿತು. ಆ ಸೌಂದರ್ಯವನ್ನು ನೋಡಿ ಇನ್ನೂ ‘ತನ್ನತನ’ವನ್ನು ಮರೆಯಿತು. ಆಗ ಪ್ರಕೃತಿ ಆನಂದದಿಂದ ಮೈಮರೆತು ಆಸೆಯಂಕುರಿಸಿ ತನ್ನ ಕೃತಜ್ಞತೆ ಸೂಸುತ್ತ ಹೂವಾಗಿ ಅರಳಿತು...
ಎಲ್ಲೆಲ್ಲೂ ಅದ್ಭುತವೋ ಅದ್ಭುತ! ಸೃಷ್ಟಿಕರ್ತನೂ ಮೈಮರೆತು ನೋಡುತ್ತಿದ್ದ...

ಯುಗ, ಯುಗಗಳ ಮೇಲೆ ಯುಗ ಕಳೆಯಿತು. ಅವನು ಸೃಷ್ಟಿಸಿದ ಹೊಸ ಜೀವಿ ಆನಂದದಿಂದ ಮೈಮರೆತು ಬಗೆ ಬಗೆಯ ರೂಪ ತಾಳಿ ಸಂಚರಿಸುತ್ತಿತ್ತು.
‘ನನ್ನ ತಂದೆಯೇ, ಇವೆಲ್ಲವೂ ನಾನೇ, ಈ ಗಾಳಿ, ಈ ಬೆಂಕಿ, ಈ ನೀರು, ಈ ಪ್ರಕೃತಿ ಎಲ್ಲವೂ ನಾನೇ. ಆದರೂ ಏಕೋ ಒಮ್ಮೊಮ್ಮೆ ಒಂದು ಬಗೆಯ ನೋವಾಗುತ್ತದಲ್ಲಾ’.

ಕಲಾವಿದ ಆ ನೋವು ಏನಿರಬಹುದೆಂದು ಬೆರಗಿನಿಂದ ನೋಡುತ್ತಿದ್ದ. ಜೀವಿ ಎಲ್ಲೆಡೆಯೂ ಸಂಚರಿಸುತ್ತ ತೃಪ್ತಿಯಿಲ್ಲದೆ ಕೊನೆಗೆ ಆ ಮುಗಿಲಿನೆಡೆಗೆ ಅಹಮಿನಲ್ಲಿ ಮರೆಯಾಗಿದ್ದ ಇನ್ನೊಂದು ಜೀವಿಯ ಹತ್ತಿರ ಬಂದಿತು.
ತನ್ನಲ್ಲಿ ಹುದುಗಿದ್ದ ನೋವಿನ ಕಾರಣ ಆಗ ಅದಕ್ಕೆ ಅರಿವಾಯಿತು. ಯಾವ ರೀತಿಯ ಮೋಹವೂ ಇಲ್ಲದೆ ಇರುವಿಕೆಯಿಂದ ಇಲ್ಲದಿರುವಿಕೆಗೆ ಮತ್ತೆ ಇರುವಿಕೆಗೆ ಮಾರ್ಪಡುತ್ತಿದ್ದ ಆ ಜೀವಿಯನ್ನು ಉದ್ದೇಶಿಸಿ ಹೇಳಿತ್ತು.
‘ಬಾ. ನೀನೂ ಬಾ. ಇಲ್ಲದಿದ್ದರೆ ಈ ಸೃಷ್ಟಿ ಅಪೂರ್ಣವಾಗಿಯೇ ಉಳಿಯುತ್ತದೆ. ನನ್ನ ಸಂದೇಶವೂ ಅಪೂರ್ಣವಾಗಿ ಉಳಿಯುತ್ತದೆ. ನನ್ನ ನೋವೂ ಪರಿಹಾರವಾಗುವುದಿಲ್ಲ’.

ಆದರೆ ಆ ಮರೆಯಾಗಿದ್ದ ಶಕ್ತಿ ತಲೆಯಾಡಿಸಿ ಸಾಧ್ಯವಿಲ್ಲ ಎಂದು ಬಿಟ್ಟಿತು.
ಜೀವಿಗೆ ಆಗ ನೋವು ತಡೆಯಲಾಗಲಿಲ್ಲ. ಮತ್ತೆ ಪುನಃ ತನ್ನತನವನ್ನು ಕಾಪಿಟ್ಟುಕೊಳ್ಳಲು ಇಚ್ಚಿಸಿದ್ದ ಆ ಇನ್ನೊಂದು ಜೀವಿಯ ಜಡತೆಯ ದುರಹಂಕಾರವನ್ನು ತೊಲಗಿಸಲು ಯುಗ ಯುಗವೂ ಎಡಬಿಡದೆ ಅತೃಪ್ತಿಯಿಂದ ಸಂಚರಿಸತೊಡಗಿತು.
ಆದರೂ ಆ ಶಕ್ತಿ ಒಂದೇ ಹಟದಿಂದ ಹೇಳುತ್ತಿತ್ತು. ‘ನನ್ನತನ ಮರೆಯುವ ಆಸೆ ನನಗಿಲ್ಲ, ಪೂರ್ಣತೆಯ ಆಸೆ ನನಗಿಲ್ಲ’.
‘ಅದೇಕೆ ಹೀಗೆ?’

‘ಏಕೋ ಏನೋ? ಆದರೆ ನಾನಾರು ಎಂದು ತಿಳಿದಿದ್ದೀಯಾ? ನಾನು ನಿನ್ನ ಒಂದು ಭಾಗ, ನೀನು ಸಂಪೂರ್ಣ ನಿನ್ನನ್ನು ಮರೆತು ಸೃಷ್ಟಿಯ ಆನಂದದಲ್ಲಿ ಒಂದಾಗಲು, ಆಗಿ ಇಲ್ಲವಾಗಲು ಹವಣಿಸುತ್ತಿರುವುದನ್ನು ಎಡಬಿಡದೆ ತಡೆಯುತ್ತಿರುವ ಶಕ್ತಿ...’
ಈ ತಿಕ್ಕಾಟ ಮುಗಿಯದೆ ಮತ್ತೆ ಅನೇಕ ಯುಗಗಳು ಕಳೆದವು. ಸೃಷ್ಟಿಕರ್ತ ಕಲಾವಿದ ಆ ಆಟವನ್ನು ನೋಡುತ್ತಿದ್ದವನು ಹಿಂದೆ ತಿರುಗಿ ಗವಿಯ ಬಾಗಿಲಲ್ಲಿ ಕಾಯುತ್ತಿದ್ದ ‘ಸಾವಿನೆಡೆ’ ನೋಡಿದ.
ಕಲಾವಿದನ ಸಮಸ್ಯೆಯನ್ನರಿತು ‘ಸಾವು’ ಹೇಳಿತು.

‘ಇದು ಮುಗಿಯದ ಹೋರಾಟ. ತನ್ನ ಹೃದಯದಲ್ಲಿಯೂ ಗೊತ್ತಾಗದಂತೆ ನಡೆಯುತ್ತಿರುವ ಹೋರಾಟವನ್ನು ತಡೆಯಲಾರದೆ ಕೊನೆಗೆ ಆ ನಿನ್ನ ಜೀವಿ ನನ್ನನ್ನು ಮೊರೆ ಹೋಗುತ್ತಾನೆ...’
ಹಾಗೆಯೇ ಕೆಲಕಾಲ ಕಳೆಯಿತು. ‘ಇರುವಿಕೆ’ಯಿಂದ ಸತ್ತು ಜೀವಿಸಿದ್ದ ಆ ಜೀವಿ ಜೀವನದಿಂದ ಸತ್ತರೇನೇ ತನ್ನ ಹೋರಾಟ ಮುಗಿಯುವುದೆಂದು ಅರಿಯಿತು.

ತನ್ನ ಹೋರಾಟದಿಂದ ಜರ್ಝರಿತನಾದ ಆ ಜೀವಿ ಆಗ ಸಾವಿನೆಡೆ ಬಂದು ಕೇಳಿತು.
‘ನನ್ನ ಸಮಸ್ಯೆಯನ್ನು ಪರಿಹರಿಸು. ಪೂರ್ಣತೆಗಾಗಿ ಇರುವ ನನ್ನ ಈ ಹಂಬಲವನ್ನು ಪೂರೈಸು. ನಿನ್ನ ದಿವ್ಯ ಸ್ಪರ್ಶದಿಂದ ಈ ಹೋರಾಟವನ್ನು ಸಾಕುಮಾಡು’.

ಆದರೆ ಸಾವು ಎಂದಿತು:
‘ನಿನ್ನ ಆ ಪೂರ್ಣತೆಗಾಗಿ ಇರುವ ಆಸೆ ಆ ಪ್ರೇಮ ನನ್ನ ಸ್ಪರ್ಶದಿಂದ ಕೊನೆಯಾಗುವುದಿಲ್ಲ. ಆದರೆ ನನ್ನ ಒಡನಾಟದಿಂದ ನಿನಗೆ ಬಿಡುವು ಸಿಕ್ಕೀತು. ಆ ಹೋರಾಟಕ್ಕೆ ಮತ್ತೆ ಮರಳಲು ಹೆಚ್ಚು ಶಕ್ತಿ ದೊರೆತೀತು....’
ಸಾವಿನ ಉತ್ತರದಿಂದ ತೃಪ್ತನಾಗದಿದ್ದರೂ ಆ ಜೀವಿ ಆ ವಿರಾಮವನ್ನು ಆಶಿಸಿ ‘ಹೂ’ ಎಂದಿತು...
ಈ ವಿಚಿತ್ರ ಹೋರಾಟವನ್ನು ನೋಡುತ್ತಿದ್ದ ಕಲಾವಿದನಿಗೆ ಸ್ಮೃತಿ ತಪ್ಪಿದಂತಾಯ್ತು. ಕಣ್ಣು ಕತ್ತಲೆ ಕಟ್ಟಿತು.
ಅವನ ದೇಹದಾದ್ಯಂತ ವ್ಯಾಪಿಸಿದ್ದ ಸೃಷ್ಟಿಯ ಶಕ್ತಿ ಮಾಯವಾಯಿತು.

ಏನೋ ಭಯಂಕರವಾದ ನೋವು ಅವನ ದೇಹದಾದ್ಯಂತ ವ್ಯಾಪಿಸಿತು. ತನ್ನ ಮೊದಲಿನ ಸ್ಥಿತಿಗೇ ಅವನು ತೆರಳಿದ್ದ.
ಕಣ್ಣು ತೆರೆದು ಸುತ್ತಲೂ ಆಗ ನೋಡಿದನು ಎಂತಹ ವಿಚಿತ್ರ...!
ತನ್ನ ಸುತ್ತಮುತ್ತಲೂ ಕೋಟ್ಯಾನುಕೋಟಿ ಜೀವಿಗಳು ಭಯಂಕರ ನೋವಿನಿಂದ ನರಳುತ್ತ ಕಗ್ಗತ್ತಲೆಯಲ್ಲಿ ಎಡವುತ್ತ ತಡವುತ್ತಾ ನಡೆಯುತ್ತಿದ್ದಾರೆ.

ಪೂರ್ಣತೆಯ ಆಸೆಯಿಂದ ಚಂಚಲರಾಗಿ ದಿಕ್ಕೂ ಕಾಣದಿದ್ದಾರೆ, ಬೆಳಕಿಗಾಗಿ ಹವಣಿಸುತ್ತಿದ್ದಾರೆ.
ಹಾಗೆಯೇ ಯೋಚಿಸುತ್ತ ಮಲಗಿದ್ದ ಕಲಾವಿದನಿಗೆ ಫಕ್ಕನೆ ಹೊಳೆಯಿತು. ತನ್ನ ದೇಹದಾದ್ಯಂತ ಪ್ರಸರಿಸಿದ್ದ ನೋವನ್ನು ಇನ್ನೂ ಹೆಚ್ಚಾಗಿ ಅನುಭವಿಸಿದನು.

ಆಗ ನೋವು ರಕ್ತವಾಗಿ ಹರಿಯುತ್ತಿದ್ದ ಒಂದೊಂದೇ ತಂತುವನ್ನು ಅವನು ಕಿತ್ತನು, ತನ್ನ ಹೃದಯವನ್ನು ಕಿತ್ತನು. ರಕ್ತಮಯವಾಗಿದ್ದ ತನ್ನ ದೇಹದಿಂದಲೇ ಕಿತ್ತು ತೆಗೆದ ಎಲುಬುಗಳು, ನರಗಳು, ರಕ್ತನಾಳಗಳು, ಆಗ ಒಂದು ಬೆಳಕಿನ ಮುದ್ದೆಯಾಯಿತು.
ಅವನ ಎದೆಯಲ್ಲಿದ್ದ ನೋವೇ ಬೆಳಕಾಯಿತು. ಬೆಳಕು ಉರಿಯುತ್ತಲೆ ಇತ್ತು.

ಕತ್ತಲಲ್ಲಿ ತಡುವುತ್ತಿದ್ದ ನೊಂದ ಜೀವಿಗಳಿಗೆ ದಾರಿ ಕಾಣಿಸಿತು. ನೋವಿನ ಬೆಳಕಿನಲ್ಲಿಯೇ ತಮ್ಮ ಹೋರಾಟವನ್ನು ಹೊಸ ಉತ್ಸಾಹದಿಂದ ಅವರು ನಡೆಸತೊಡಗಿದರು.

ಜೀವನದ ಬಂಧನದಿಂದ ಬಿಡಿಸಿಕೊಳ್ಳಲು ಹವಣಿಸುತ್ತಿದ್ದ ಆ ಕೋಟಿ ಕೋಟಿ ಜೀವಿಗಳ ನಡುವೆ ಸಾವು ನಿರಂತರವಾಗಿ ವಿಶ್ರಾಂತಿಯಿಲ್ಲದೆ ಆ ಹೋರಾಟದಿಂದ ಬಿಡುವು ಮಾಡಿಕೊಡುತ್ತ ಸಂಚರಿಸುತ್ತಿತ್ತು.
ಅವನು ಎತ್ತಿ ಹಿಡಿದ ಆ ನೋವಿನ ಬೆಳಕಿನಲ್ಲಿ ಎಲ್ಲರೂ ಹೊಸ ಉತ್ಸಾಹದಿಂದ ಅಚಲ ಶ್ರದ್ಧೆಯಿಂದ ತಮ್ಮ ಪೂರ್ಣತೆಗಾಗಿ ಹೋರಾಟವನ್ನು ನಡೆಸುತ್ತಲೇ ಇದ್ದರು.

ಕಲಾವಿದನಿಗೆ ಎಚ್ಚರವಾಯಿತು. ಬೆಳಕಾಗಿತ್ತು. ಕಣ್ಣು ಬಿಟ್ಟು ನೋಡಿದಾಗ ಅವನು ತಾನು ಹಿಂದಿನ ಸಂಜೆ ಕೆತ್ತುತ್ತಿದ್ದ ಕಲ್ಲಿನ ಬಳಿ ಮಲಗಿದ್ದನು.

ತಾನು ಹಿಂದಿನ ರಾತ್ರಿ ಪಡೆದ ಅನುಭವವೇ ಬೆಳಕಾದಂತಿತ್ತು. ಪೂರ್ವ ದಿಗಂತದಲ್ಲಿ ಸೂರ್ಯ ರಕ್ತಮಯವಾಗಿ ಬೆಳಕು ಸುರಿಸುತ್ತಿದ್ದ. ಏನೋ ನೆನಪಾಯಿತು. ತನ್ನ ಕೈಗಳ ಕಡೆ ನೋಡಿದ. ಹಿಂದಿನ ರಾತ್ರಿ ತಾನು ಹಿಡಿದ ಬೆಳಕು ಅಲ್ಲಿರಲಿಲ್ಲ.
ಆದರೆ ಅದು ಪೂರ್ವ ದಿಗಂತದೆಡೆ ಹಾರಿತ್ತು. ಸೃಷ್ಟಿಕರ್ತನು ತನ್ನ ನೋವಿನಿಂದಲೇ ತನ್ನ ಸೃಷ್ಟಿಯ ಹೋರಾಟಕ್ಕೆ ಇತ್ತ ಬೆಳಕಿನಂತೆ ಸೂರ್ಯ ಮೂಡಣದಲ್ಲಿ ಉರಿಯುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT