ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಿ ಉರಿ ಉರಿಯೋ ಹುಡುಗನ ಕಾವ್ಯ ಸಂಸಾರ

Last Updated 21 ಜೂನ್ 2014, 19:30 IST
ಅಕ್ಷರ ಗಾತ್ರ

ಖಚಿತ ತಾತ್ವಿಕ ಆಕರದ ನೆರವಿನೊಂದಿಗೆ ಕಥನ ರಾಜಕಾರಣ ಮಾಡುವ ಸಾಹಿತ್ಯ ಪರಂಪರೆಯೊಂದು ಕನ್ನಡದಲ್ಲಿ ದೀರ್ಘಕಾಲದಿಂದ ಚಾಲ್ತಿಯಲ್ಲಿದೆ. ಸಂಭ್ರಮದ ಬದುಕಿಗೆ ಬೇಕಾಗುವ ಎಲ್ಲ ಅಧಿಕಾರಗಳನ್ನು ಅದು ಒದಗಿಸಿಕೊಂಡಿದೆ. ತಾತ್ವಿಕ ರಾಜಕಾರಣ ಮಾಡದ ಒಂದೇ ಒಂದು ಸಾಲು ಕವಿತೆಯನ್ನು ಪು.ತಿ.ನ ಆಗಲೀ, ಸಾಂಸ್ಕೃತಿಕ ರಾಜಕಾರಣ ಮಾಡದ ಒಂದೇ ಒಂದು ಕತೆಯನ್ನು ಮಾಸ್ತಿಯಾಗಲೀ ಬರೆದಿಲ್ಲ. ಸಾಮಾಜಿಕ ಬದುಕಿನಲ್ಲಿನ ಅಧಿಕಾರ ಹಂಚಿಕೆಯ ಪ್ರಕ್ರಿಯೆಯನ್ನು ನಿಯಂತ್ರಿಸುವ ಇಚ್ಛೆ ಬರಹಕ್ಕೆ ಎಂದಿನಿಂದಲೂ ಇದೆ. ಆ ಕಾರಣದಿಂದಾಗಿಯೇ ಅಧಿಕಾರ ರೂಢಿಸಿಕೊಡುವ ಅಕ್ಷರಕ್ಕಾಗಿ ನಾನಾ ರೀತಿಯಲ್ಲಿ ಬಡಿದಾಡುವುದು ನಡೆದೇ ಇದೆ.

ಅಕ್ಷರ ದಕ್ಕಿಸಿಕೊಂಡ ಬಹುಪಾಲು ಎರಡನೆಯ ಪೀಳಿಗೆಯ, ದೀರ್ಘಕಾಲದ ಅಪಮಾನಿತ ಲೋಕದಿಂದ ಉರಿಯುತ್ತ ಬಂದ ಪ್ರತಿನಿಧಿಯಂತಿರುವ ಹುಲಿಕುಂಟೆ ಮೂರ್ತಿಯ ‘ನೀಲಿಗ್ಯಾನ’ ಕವನ ಸಂಕಲನ ತನ್ನನ್ನು ಬೀದಿಗಿಳಿದು ಓದಲು ಒತ್ತಾಯಿಸುತ್ತದೆ. ನಡೆದ ದಾರಿಯಲ್ಲಿ ಎಡವಿ ಆದ ಗಾಯಗಳ ಜಮಾ–ಖರ್ಚಿನ ತಃಖ್ತೆಯನ್ನು ತೆರೆಯುತ್ತದೆ. ಈವರೆಗೆ ಹೊತ್ತು ತಂದಿರುವ ಗಂಟನ್ನೊಮ್ಮೆ ಬಿಚ್ಚಿ ಹರವಿಕೊಳ್ಳಲು ಪ್ರೇರೇಪಿಸುತ್ತದೆ. ಆ ದಾರಿಯಲ್ಲಿ ನಡೆದವರ ಬಟ್ಟೆಗಳನ್ನು ಈ ಕವಿಯೂ ತೊಟ್ಟು ನಿಲ್ಲುತ್ತಾನೆ.
ಕಣ್ಣ ಬೇಗುದಿಯಲ್ಲೇ ಅಕ್ಷರಕ್ಷರ ಬೇಸಿ
ಎದೆಯ ಬಿಕ್ಕುಗಳಿಗೆಲ್ಲಾ
ಸೂಟು ತೊಡಿಸಿದ ಧೀರ
ಅವನೊಂದಿಗೆ
ಅದೇ ಆ ಬರಿಮೈ ಫಕೀರ
ಹರಿದ ಅಂಗಿಯನೆಲ್ಲಾ
ಹಸಿವಲ್ಲೇ ಒಲೆದೋನು       
(ಕಂಡಿರಾ ಇವಳ ಕಣ್ಣ ಮಿಟುಕನ್ನಾ?)

ಹರಿದ ಅಂಗಿ ಹೊಲೆದದ್ದು, ಫರಂಗಿಯವನಿಗೆಂದು ಒಂದು ಜೊತೆ ಜೋಡು ಹೊಲಿದದ್ದು – ಯಾವುದೇ ಪಾತ್ರವನ್ನು ಗಾಂಧೀಜಿ ನಿರ್ವಹಿಸುವಾಗಲೂ ಲಾಭ ನಷ್ಟದ ಹೊಂದಾಣಿಕೆಯನ್ನು ಬಲು ಎಚ್ಚರದಿಂದ ಮಾಡುತ್ತಿದ್ದರು. ಈ ಚೌಕಾಸಿಯಲ್ಲಿ ಯಾವಾಗಲೂ ಸೋತದ್ದು ಯಾರೆಂದು ಚರಿತ್ರೆ ಬಲ್ಲ ಎಲ್ಲರಿಗೂ ಗೊತ್ತು. ಗಾಂಧೀಜಿ ಮತ್ತು ಅಂಬೇಡ್ಕರ್ ಸಾಲಾಗಿ ಕುಂತು ಜೋಡು ಹೊಲಿಯುವ ಚಿತ್ರವೊಂದನ್ನು ಕಣ್ಣೆದುರಿಗೆ ತೂಗುಹಾಕಿದರೆ ಅದು ಬುದ್ಧಿಗಮ್ಯವಾಗುವ ಮುನ್ನ ಮನಸ್ಸಿನಿಂದ ಒಂದು ತೀರ್ಮಾನ ಪ್ರಕಟವಾಗುತ್ತದೆ– ಒಬ್ಬರದ್ದು ಪಾತ್ರವಾದರೆ ಇನ್ನೊಬ್ಬರದ್ದು ಬದುಕು! ಇಬ್ಬರೂ ಪ್ರತಿ ಹೆಜ್ಜೆಯನ್ನೂ ತೂಗಿ ಇಟ್ಟವರು. ಆದರೆ ಈ ಎಚ್ಚರದ ನಡೆಯನ್ನು ದಲಿತ ಚಳವಳಿ ತನ್ನದಾಗಿಸಿಕೊಳ್ಳಲಿಲ್ಲ.
ಅವನು ದೇವಾ ಹೊರಗಿನವನು...
ಅಲ್ಲಲ್ಲ ಒಳಗಿನೊಳಗಿನ ವೈರ
ದೂರ ಮಡಿದ ಅಣ್ಣ
ಆಕೆ ಕನಸಕ್ಕ ಅಕ್ಕ
ಎಲ್ಲ ಬಿಡಿಸಿದವಳು
ಬಿಡಿಸಿ ತೊಡಿಸಿದವಳು
ಇದ್ದಳಿಲ್ಲೇ ಪಕ್ಕ
ಅವಳ ಜತೆಯಲ್ಲೇ ಆ ಮಾಯ್ಕಾರ
ಮಾಯೆ ಮಾಯದ ಬಯಲುಗಣ್ಣಿನ
ಯುವಕ ಗಾಯವಾಗದ
ಮೈಯ ಮಂದಿಯ ಪ್ರಭು ದೇವಾ
... ಅರೆ, ಅದೋ ಅವರೆಲ್ಲಾ
ಮತ್ತೆ ಇತ್ತಲೇ ಬರುತ್ತಿದ್ದಾರೆ.  
(ಕಂಡಿರಾ ಇವಳ ಕಣ್ಣ ಮಿಟುಕನ್ನಾ?)

ದೀರ್ಘಕಾಲೀನ ಪರಿಣಾಮದ ದೃಷ್ಟಿಯಿಂದ ವಚನ ಚಳವಳಿಯ ಯಶಸ್ಸನ್ನು ಅಳೆಯುವುದು ಇಕ್ಕಟ್ಟಿನ ಸಂಗತಿ. ಆದರೆ ಆ ಚಳವಳಿಗೆ ಅಗತ್ಯವಾದ ತಾತ್ವಿಕ ಆಕರವೊಂದನ್ನು ಕಟ್ಟಿಕೊಳ್ಳುವಾಗ ವ್ಯಕ್ತವಾದ ಎಚ್ಚರ ಮಾತ್ರ ಇಂದಿಗೂ ಒಂದು ಮಾದರಿಯೇ. ಕರ್ನಾಟಕದ ದಲಿತ ಚಳವಳಿಯನ್ನು ಈ ನಿಟ್ಟಿನಿಂದ ನೋಡಿದಾಗ ತಾತ್ವಿಕ ಆಕರವೊಂದನ್ನು ರೂಪಿಸಿಕೊಳ್ಳುವಲ್ಲಿ ಅದು ಕಂಡ ದಯನೀಯ ಸೋಲಿನ ಪರಿಣಾಮವನ್ನು ಈ ಪೀಳಿಗೆಯವರು ಅನುಭವಿಸುವಂತಾಗಿದೆ. ಇನ್ನು, ರೈತ ಚಳವಳಿ ಅಂತಹ ಒಂದು ಆಕರವನ್ನು ರೂಪಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಈ ಎರಡೂ ಚಳವಳಿಗಳು ಚಿಂದಿ ಚಿಂದಿಯಾಗಲು ಬೇರೆಲ್ಲಾ ಕಾರಣಗಳಿಗಿಂತ ಸಾಂಸ್ಕೃತಿಕ ರಾಜಕಾರಣವನ್ನು ನಿರ್ವಹಿಸಲಾರದ ತಾತ್ವಿಕ ದಾರಿದ್ರ್ಯವೇ ಮುಖ್ಯ ಕಾರಣವೆನ್ನಿಸುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಹೆಸರುಗಳು ಸಾಲು ಸಾಲಾಗಿ ಬಂದುಹೋದವೇ ಹೊರತು ಒಂದು ಸಾಂಸ್ಕೃತಿಕ ಸಂವಿಧಾನವಾಗಿ ಪರಿವರ್ತಿತವಾಗ ಲಿಲ್ಲ. ತಾತ್ವಿಕತೆಯನ್ನು ಅರಿತು ನಿರ್ವಹಿಸಲಾ ರದ ಈ ಅಸಹಾಯಕತೆ ದುರ್ಬಲ ಸಿಟ್ಟಾಗಿದೆ:
ಅಳಿಸಲಾಗದ ಲಿಪಿಯನು
ಬರೆಯಬಾರದಂತೆ...
ಹಾಳಾಗಿ ಹೋಗಲಿ
ಅಳಿಸಲಾಗದ್ದಕ್ಕೆ ಅಳಿವಿಲ್ಲವೇನು..?
(ಟಾಗೂರರಿಗೆ)
ಕಡಿಯಲಾಗದ ಕತ್ತಿ
ಉಳುಮೆಯಾಗದ ಭಿತ್ತಿ
ತ್ರಾಣವಿಲ್ಲದ ಪ್ರಾಣ ಪ್ರಾಣವಿಲ್ಲದ ಬಾಣ
ನನ್ನ ಸಿಟ್ಟದು ಬದುಕಿಗೆ ಮೂಲ
ತಲೆಮಾರು ಸವೆದರೂ
ಬಿಡಿಸಲಾಗದ ಒಗಟು.

ನಾನು ಭೂಮಿ, ಆಕಾಶ, ನದಿ, ಮರ ಎನ್ನುತ್ತ ಅವುಗಳ ಲೀಲೆಯನ್ನು ಧ್ಯಾನಿಸುವುದಷ್ಟೆ ಸಾಧ್ಯವಿರುವ ಈ ತಳ ಸಮುದಾಯದ ಕವಿ ಅವುಗಳ ‘ಪಾತ್ರ’ವನ್ನು ನಿರ್ವಹಿಸಬಹುದೇ ಹೊರತು ತಾನೇ ಅವುಗಳಾಗಲು ನಿಜ ಬದುಕಿನಲ್ಲಿ ಈವರೆಗೆ ಸಾಧ್ಯವಾಗಿಲ್ಲ.
ನಾನೊಂದು ನದಿ
ಮಣ್ಣ ಮಡಕೆಯನ್ನೊತ್ತು
ಇಡೀ ನದಿಯನ್ನೇ ತುಂಬಿಕೊಳ್ಳುವವಳಂತೆ
ನೀರಿಗಿಳಿಯುವ ಹೊಲತಿಯ ಮೀನಖಂಡ
ಕಂಡು ತಣ್ಣಗೆ ಬೆವರುತ್ತೇನೆ...

ಈ ಉರಿ ಉರಿ ಉರಿಯೋ ಹುಡುಗನ ಸಂತೈಸಿ ಕವಿಯಾಗಿಸುವ ‘ಇವಳು’ ಈ ಕವನಗಳ ಜೀವಾಳ. ಇವಳಿಂದಾಗಿ ಕವಿ ಬಯಲಿಗೆ ಬರುತ್ತಾನೆ. ಬಯಲು ಮಾತೃಗರ್ಭವೆನ್ನುವುದು ಕವಿಗೆ ಅರಿವಾಗಿದೆ. ಅಂತ ಕಡೆ ‘ಅಂದರೆ ಅಂದುಕೊಳ್ಳಿ’ ಎನ್ನುವ ಮಾತಾಳಿ ಗುಣ ಸುಮ್ಮನಾಗುತ್ತದೆ.
ಬಯಲು  / ಹಡೆಯುತ್ತಲೇ ಇರುತ್ತದೆ
ಮೌನವಾಗಿ / ಸಹಸ್ರ ಅಲ್ಲಮರನು
ನಿನ್ನ ಕಣ್ಣುಗಳಂತೆ

ಸಂಕಲನದ ಒಂದು ನಿಧಾನದ ಓದು ಸದ್ಯದ ತಳ ಸಮುದಾಯ ರೂಢಿಸಿಕೊಳ್ಳಲಾಗದ ತಾತ್ವಿಕ ಸೋಲಿನ ಚಿತ್ರಣ ನೀಡುತ್ತದೆ. ‘ನೀಲಿಗ್ಯಾನ’ ಮಂಟೇದಲ್ಲಮನನ್ನು, ಅವನು ನಡೆಸಿದ ತಾತ್ವಿಕ ಸಮರವನ್ನು ನೆನಪಿಸುತ್ತದೆ. ಇಂತಹ ಅನೇಕ ತಾತ್ವಿಕ ಸಂಘರ್ಷಗಳ ವಾರಸುದಾರ ರಾದ ತಳ ಸಮುದಾಯದ ಕವಿಗಳು ಅದನ್ನು ಕಾವ್ಯ ರಾಜಕಾರಣವನ್ನಾಗಿ ರೂಢಿಸಿಕೊಳ್ಳುವ ಗಂಭೀರ ಪ್ರಯತ್ನ ಮಾಡಬೇಕಾಗಿದೆ. ಕನ್ನಡದ ಅಸ್ಮಿತೆಯ ಎಚ್ಚರದ ಪ್ರತೀಕಗಳಲ್ಲಿ ಒಂದಾಗಿರುವ ಮಂಟೇದ ಗುರುವಿನ ಜೊತೆ ಸ್ವಲ್ಪ ದೂರವಾದರೂ ಸಾಗುವ ಕವಿಯ ಆಶಯ ಈಡೇರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT