ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ:ಅಂದುಕೊಂಡಷ್ಟು ನೀರಿಲ್ಲ

ಮುಖ್ಯಮಂತ್ರಿಗೆ ವಿಜ್ಞಾನಿ ರಾಮಚಂದ್ರ ಪತ್ರ
Last Updated 23 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎತ್ತಿನಹೊಳೆ ಯೋಜನೆಯು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ, ಹಣಕಾಸಿನ ದೃಷ್ಟಿಯಿಂದ ಕಾರ್ಯಸಾಧುವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪರಿಸರ ವಿಜ್ಞಾನ ಕೇಂದ್ರದ ಸದಸ್ಯ ಡಾ.ಟಿ.ವಿ. ರಾಮಚಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.

‘ಕರ್ನಾಟಕ ನೀರಾವರಿ ನಿಗಮ ಹೇಳಿದಂತೆ 24 ಟಿಎಂಸಿ ಅಥವಾ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಹೇಳಿದಂತೆ 22 ಟಿಎಂಸಿ ನೀರು ಎತ್ತಿನಹೊಳೆಯಲ್ಲಿ ಲಭ್ಯವಿಲ್ಲ. ಅಲ್ಲಿ ಲಭ್ಯವಿರುವುದು 8 ರಿಂದ 10 ಟಿಎಂಸಿ ನೀರು ಮಾತ್ರ. ಬಯಲು ಸೀಮೆಗೆ ಅಗತ್ಯವಿರುವ ನೀರು ಈ ಯೋಜನೆಯಿಂದ ದಕ್ಕುವುದಿಲ್ಲ’  ಎಂದು ಪತ್ರದಲ್ಲಿ  ಅವರು
ವಿವರಿಸಿದ್ದಾರೆ.

ಸಂಘರ್ಷ: ‘ಈ ಯೋಜನೆಯ ಅನುಷ್ಠಾನದಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯವರಿಗೆ ನೀರು ಸಿಗುವುದಿಲ್ಲ. ಅವರು ಒಣ ಕಾಲುವೆಗಳನ್ನು ನೋಡುತ್ತ ಕೂರಬೇಕಾಗುತ್ತದೆ. ಗುಂಡ್ಯ, ಮಂಗಳೂರು ಮತ್ತು ಹಾಸನ ಭಾಗದಲ್ಲೂ ನೀರಿನ ಕೊರತೆ ಎದುರಾಗುತ್ತದೆ. ಯೋಜನೆಯಿಂದ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ಎತ್ತಿನಹೊಳೆ ಪ್ರದೇಶವು ಸೂಕ್ಷ್ಮ ಜೀವವೈವಿಧ್ಯದ ತಾಣ, ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತೆ ಇಲ್ಲ. ತೆಲುಗು–ಗಂಗಾ ಯೋಜನೆಯ ಅನುಷ್ಠಾನದಿಂದ ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯಲ್ಲಿ ಆದಂತೆ, ಈ ಯೋಜನೆಯಿಂದ ಎತ್ತಿನಹೊಳೆ ಸುತ್ತಲಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗಲಿವೆ.ಅವರ ಜೀವನೋಪಾಯಕ್ಕೆ ಧಕ್ಕೆ ಒದಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಡಿಮೆ ಖರ್ಚಿನಲ್ಲಿ ಹೆಚ್ಚು ನೀರು
ಎತ್ತಿನಹೊಳೆ ಯೋಜನೆಗೆ ಖರ್ಚು ಮಾಡುವ ಹಣದಲ್ಲಿ ಒಂದು ಚಿಕ್ಕ ಪಾಲನ್ನು ಮಾತ್ರ ಬಳಸಿಕೊಂಡು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಜಲ ಮೂಲಗಳ ಪುನರುಜ್ಜೀವನ ಸಾಧ್ಯ. ಈ ಎರಡು ಜಿಲ್ಲೆಗಳಿಗೆ ಮಳೆಯಿಂದ ವಾರ್ಷಿಕ ತಲಾ 52 ಟಿಎಂಸಿಗಿಂತ ಹೆಚ್ಚು ನೀರು ಸಿಗುತ್ತದೆ ಎಂದು ರಾಮಚಂದ್ರ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT