ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ ಬೆಲೆ: ಪ್ರತಿಗಾಮಿ ಹೆಜ್ಜೆ

Last Updated 12 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಔಷಧಗಳ ಬೆಲೆನಿಗದಿಗೆ ಸಂಬಂಧಿಸಿದಂತೆ ಕೇಂದ್ರದ ಎನ್‌ಡಿಎ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರಗಳು ವಿವಾದಾತ್ಮಕ. ಅಗತ್ಯ ಔಷಧಗಳ ಪಟ್ಟಿಗೆ ಸೇರದಂತಹ  ಔಷಧಗಳ ಬೆಲೆ ನಿಗದಿಗೆ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರಕ್ಕೆ (ಎನ್ ಪಿ ಪಿ ಎ) ಇದ್ದಂತಹ ಅಧಿಕಾರವನ್ನು ಈಗ ಹಿಂತೆಗೆದುಕೊಳ್ಳಲಾಗಿದೆ.

ಅಗತ್ಯ ಔಷಧಗಳ ಬೆಲೆ ನಿಯಂತ್ರಣದ ಅಧಿಕಾರ ಎನ್ ಪಿಪಿಎ ಗೆ ಇದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅಗತ್ಯ ಔಷಧ­ಗಳ ಪಟ್ಟಿಯಲ್ಲಿ ಇಲ್ಲದ ಔಷಧಗಳ ಬೆಲೆ ನಿಯಂತ್ರಣದ ಅಧಿಕಾರ­ವನ್ನೂ ಸಾರ್ವ­ಜನಿಕ ಹಿತದ ದೃಷ್ಟಿಯಿಂದ 2013ರ ಔಷಧ ಬೆಲೆ ನಿಯಂತ್ರಣ ಆದೇ­ಶ­ದ ಪ್ರಕಾರ ನೀಡಲಾಗಿತ್ತು. ಮಧುಮೇಹ ಹಾಗೂ ಹೃದಯ ಕಾಯಿಲೆ­ಗಳಿಗೆ ಸಂಬಂ­ಧಿಸಿದ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದ್ದ 108 ಔಷಧಗಳ ಮಾರಾಟ ಬೆಲೆ­ಯನ್ನು ನಿಯಂತ್ರಿಸಲು  ಈ ಅಧಿಕಾರವನ್ನು ಬಳಸಿ­ಕೊಳ್ಳ­ಲಾ­ಗಿತ್ತು. ಆದರೆ ಈ ಕ್ರಮಕ್ಕೆ ಔಷಧ ಕಂಪೆನಿಗಳಿಂದ ತೀವ್ರ ಪ್ರತಿರೋಧ­ವಿತ್ತು. ಇದರ ವಿರುದ್ಧ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನೂ ಸಲ್ಲಿಸಲಾಗಿದೆ. ಇಂತಹ ಸಂದರ್ಭ­ದಲ್ಲೇ 2013ರ ಆದೇಶದ ಪ್ರಕಾರ ಎನ್ ಪಿ ಪಿಎ ಗೆ ನೀಡ­ಲಾ­ಗಿದ್ದ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಕನಿಷ್ಠ ನ್ಯಾಯಾಲಯಗಳ ತೀರ್ಪು ಹೊರ ಬೀಳುವವರೆಗಾದರೂ ಸರ್ಕಾರ ಕಾಯಬಹುದಾಗಿತ್ತು.


ಔಷಧ ಕಂಪೆನಿಗಳ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂಬಂಥ ಅಭಿಪ್ರಾಯ ಈಗ ಚಾಲ್ತಿಯಲ್ಲಿದೆ. ಅದೂ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೆ ಮುಂಚೆ ಈ ವಿವಾದಾತ್ಮಕವಾದ ನಿರ್ಧಾರವನ್ನು ಪ್ರಕಟಿಸಲಾಗಿದೆ ಎಂಬು­ದನ್ನು ಗಮನಿಸಬೇಕು. ಔಷಧೋದ್ಯಮದಲ್ಲಿ ಅಮೆರಿಕದ ಬಹು­ರಾಷ್ಟ್ರೀಯ ಕಂಪೆನಿಗಳ ಪ್ರಾಬಲ್ಯವಿರುವುದು ಗೊತ್ತಿರುವ ಸಂಗತಿ. ಹಾಗೆಯೇ, ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಉನ್ನತ ಮಟ್ಟದ ಜಂಟಿ ಕಾರ್ಯ ತಂಡ ರಚನೆಯ ನಿರ್ಧಾರವನ್ನು ಮೋದಿಯವರ ಅಮೆರಿಕ ಭೇಟಿ ಸಮಯ­ದಲ್ಲಿ ಪ್ರಕಟಿಸಲಾಗಿದೆ. ಇದು ಭಾರತ–ಅಮೆರಿಕ ಜಂಟಿ ಹೇಳಿಕೆಯಲ್ಲೂ ಪ್ರಸ್ತಾ­ಪ­ವಾಗಿರುವುದು ಆತಂಕದ ಮತ್ತೊಂದು ಸಂಗತಿ.

ಅಮೆರಿಕ ಕಂಪೆನಿ­ಗಳಿಗೆ ಔಷಧ ಪೇಟೆಂಟ್‌ಗಳನ್ನು ಸುಲಭವಾಗಿ ಒದಗಿಸಲು ಭಾರತದ ಮೇಲೆ ಒತ್ತಡ ಹೇರುವುದಕ್ಕೆ ಇದೊಂದು ದಾರಿಯಾಗಬಹುದು ಎಂಬ ಭೀತಿ ಇದೆ. ಇದರಿಂದ ಭಾರತದ ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಸಾಮ್ರಾಜ್ಯ ದುರ್ಬಲ ಗೊಳ್ಳಬಹುದು.

ಭಾರತದ ಐಪಿಆರ್ ನಿಯಮಾವಳಿಗಳು ತಮ್ಮ ವಿರುದ್ಧ ತಾರ­ತಮ್ಯ ಮಾಡುತ್ತವೆ ಎಂದು ಅಮೆರಿಕ ಕಂಪೆನಿಗಳು ಹಿಂದಿನಿಂದಲೂ ದೂರುತ್ತಿವೆ. ಆದರೆ ಭಾರತದ ಐಪಿಆರ್ ನಿಯಮಾವಳಿಗಳು ಅಂತರ­ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿವೆ ಎಂದು ಭಾರತ ಸಮ­ರ್ಥಿಸಿ­ಕೊಳ್ಳು­ತ್ತಲೇ ಬಂದಿದೆ. ಆದರೆ ಈಗ ರಚನೆಯಾಗಲಿರುವ ಉನ್ನತ ಮಟ್ಟದ ಜಂಟಿ ಕಾರ್ಯ ತಂಡಕ್ಕೆ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತಂತೆ ನಿರ್ಧಾರ ಕೈಗೊಳ್ಳುವ ಅಧಿಕಾರವಿರುತ್ತದೆ. ಹೀಗಾಗಿ ಅಮೆರಿಕ ಕಂಪೆನಿಗಳ ಪರ ಪ್ರಚಾರಕ್ಕೆ ಇದು ವೇದಿಕೆಯಾಗಬಾರದು ಎಂಬ ಎಚ್ಚರ ಅತ್ಯಗತ್ಯ. ಜನ­ಸಾಮಾನ್ಯರ ಹಿತಕ್ಕೆ ಧಕ್ಕೆಯಾಗದಂತೆ ಕಾಳಜಿ ವಹಿಸಬೇಕಾದುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT