ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನಿಘಂಟು ಪರಿಷ್ಕರಣೆಗೆ ಸಲಹೆ

ಕಸಾಪದಲ್ಲಿ ಸಾಹಿತಿಗಳೊಂದಿಗೆ ಮನು ಬಳಿಗಾರ್‌ ಸಭೆ
Last Updated 20 ಏಪ್ರಿಲ್ 2016, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಸ್ತ್ರ ಗ್ರಂಥಗಳನ್ನು ಗದ್ಯಾನುವಾದ ಮಾಡುವುದು, ಕನ್ನಡ ಪುಸ್ತಕಗಳನ್ನು ಆನ್‌ಲೈನ್‌ಗೆ ಅಳವಡಿಸುವುದು, ಕನ್ನಡ ನಿಘಂಟಿನ ಪರಿಷ್ಕರಣೆ ಸೇರಿದಂತೆ ಅನೇಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದರು.

ಹಿರಿಯ ಸಾಹಿತಿಗಳೊಂದಿಗೆ ಬುಧವಾರ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದರೂ ಆ ನಿಟ್ಟಿನಲ್ಲಿ ಆಗಬೇಕಿರುವ  ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ, ರಾಜ್ಯದಲ್ಲಿ ಸ್ವಾಯತ್ತ ಸಂಸ್ಥೆ ಸ್ಥಾಪಿಸಬೇಕು ಎಂದು  ಕೇಂದ್ರಕ್ಕೆ ಮನವಿ ಸಲ್ಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್‌. ಹನುಮಂತಯ್ಯ ಅವರೊಂದಿಗೆ ಏ. 25ರಂದು ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.

ಸಂಶೋಧನಾ ವಿದ್ಯಾರ್ಥಿಗಳಿಗೆ ಹಳೆಗನ್ನಡ ಗ್ರಂಥಗಳನ್ನು ಹಾಗೂ ಶಾಸನಗಳನ್ನು ಓದುವ  ರೀತಿಯ ಬಗ್ಗೆ ತರಬೇತಿ ಕಾರ್ಯಕ್ರವನ್ನು ತಕ್ಷಣವೇ ಕನ್ನಡ ಸಾಹಿತ್ಯ ಪರಿಷತ್ತಿನಿಂದ  ಆರಂಭಿಸಲಾಗುವುದು. ಮೊದಲ ಹಂತದಲ್ಲಿ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದೊಂದು ಜಿಲ್ಲೆಗಳಲ್ಲಿ ಈ ತರಬೇತಿಗೆ  ಉದ್ದೇಶಿಸಲಾಗಿದೆ. ಕ್ರಮೇಣ ಎಲ್ಲ ಜಿಲ್ಲೆಗಳಿಗೆ   ವಿಸ್ತರಿಸಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಆಯ್ದ 200 ಪುಸ್ತಕಗಳನ್ನು ಆನ್‌ಲೈನ್‌ಗೆ ಅಳವಡಿಸುವುದು, ಪರಿಷತ್ತಿನ ಗ್ರಂಥಾಲಯವನ್ನು ನವೀಕರಿಸುವುದು, ಸಾಹಿತ್ಯ ಚರಿತ್ರೆಯ ಪುಸ್ತಕಗಳನ್ನು ಮುದ್ರಿಸುವುದು, ತಿಂಗಳಿಗೊಮ್ಮೆ ಪುಸ್ತಕ ಸಂತೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪರಿಷತ್ತಿನ ಕಾರ್ಯಗಳಿಗೆ ಖಾಸಗಿಯವರ ನೆರವು ಪಡೆಯಲಾಗುವುದು. ಈ ನಿಟ್ಟಿನಲ್ಲಿ ಇನ್ಫೊಸಿಸ್‌ ಪ್ರತಿಷ್ಠಾನದ  ಸುಧಾ ಮೂರ್ತಿ ಅವರೊಂದಿಗೆ ಮಾತುಕತೆ ನಡೆದಿದೆ.  ಕನ್ನಡ ತಂತ್ರಾಂಶ ಅಭಿವೃದ್ಧಿಗೆ  ಆರ್ಥಿಕ ಸಹಾಯ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಚುನಾವಣೆ ಸುಧಾರಣೆಗೆ ಸಮಿತಿ: ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ, ಚುನಾವಣಾ ನಿಬಂಧನೆ ತಿದ್ದುಪಡಿಗೆ ಸಮಿತಿ ರಚಿಸಲಾಗಿದೆ.  ಕಾನೂನು ತಜ್ಞರಾದ ಹೇಮಲತಾ ಮಹಿಷಿ, ಪ್ರಮೀಳಾ ನೇಸರ್ಗಿ, ಎಂ.ಕೆ. ನಾರಾಯಣ ಮತ್ತು ಪರಿಷತ್ತಿನ ಚುನಾವಣಾಧಿಕಾರಿಯಾಗಿದ್ದ ನಾಗರಾಜ್‌ ಸಮಿತಿಯಲ್ಲಿದ್ದಾರೆ   ಎಂದರು. ಮಳೆ ಬಂದರೆ ಮಾತ್ರ ರಾಯಚೂರಿನಲ್ಲಿ ಸಮ್ಮೇಳನ. ಸಮಸ್ಯೆ ಇದ್ದರೆ ಬೇರೆಡೆ ನಡೆಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಳಿಗಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT