ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರಲ್ಲಿ ಆರ್ಥಿಕ ಪ್ರಜ್ಞೆಯ ಕೊರತೆ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಮ್ಮೇಳನದಲ್ಲಿ ಭೈರಪ್ಪ ಅಭಿಪ್ರಾಯ
Last Updated 12 ಜುಲೈ 2015, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡಿಗರಲ್ಲಿ ಆರ್ಥಿಕ ಪ್ರಜ್ಞೆಯ ಕೊರತೆ ಇರುವುದರಿಂದ ಕನ್ನಡಿಗರು ಹಾಗೂ ಕನ್ನಡ ಬೆಳೆಯಲು ಸಾಧ್ಯವಾಗುತ್ತಿಲ್ಲ’ ಎಂದು ಸಾಹಿತಿ ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಬೆಂಗಳೂರಿನ ಎಚ್‌.ಎಸ್‌.ಆರ್‌. ಬಡಾವಣೆಯಲ್ಲಿ ಆಯೋಜಿಸಿದ್ದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಬಹುಪಾಲು ಅರ್ಥ ವ್ಯವಸ್ಥೆ ಕನ್ನಡೇತರರ ನಿಯಂತ್ರಣದಲ್ಲಿ ಇದೆ. ಹಾಗಾಗಿ ಅವರನ್ನು ಕನ್ನಡ ಕಲಿಯಿರಿ ಎಂದು ಹೇಳಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು. ‘ಸ್ಥಳೀಯ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ನೌಕರಿ ಕೊಡಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸುವ ಅಗತ್ಯ ನಿಜಕ್ಕೂ ಇದೆಯೇ? ಅದರ ಬದಲು ನಾವೇ ಏಕೆ ಉದ್ದಿಮೆಗಳನ್ನು  ಸ್ಥಾಪಿಸಬಾರದು’ ಎಂದು ಪ್ರಶ್ನಿಸಿದರು.

‘ನಮ್ಮ ಮನೋಭಾವ ಬದಲಾಗಬೇಕು. ಜೊತೆಗೇ ಆರ್ಥಿಕವಾಗಿ ಗಟ್ಟಿಯಾಗಬೇಕು. ಇಲ್ಲದಿದ್ದರೆ ಕನ್ನಡಿಗರು ಉಳಿಯುವುದಿಲ್ಲ’ ಎಂದು ಹೇಳಿದರು.

‘ನಮ್ಮ ರಾಜ್ಯದಲ್ಲಿ ಹೆಚ್ಚಿನ ಭ್ರಷ್ಟಾಚಾರ ಭೂಮಿಗೆ ಸಂಬಂಧಿಸಿದ್ದಾಗಿರುತ್ತದೆ. ಏಕೆಂದರೆ ಹಣ ಮಾಡಲು ಭೂಮಿಯೊಂದೇ ದೊಡ್ಡ ದಾರಿ ಆಗಿದೆ. ಇದರಿಂದ ರಾಜಕಾರಣಿಗಳು ಉದ್ಯಮಿಗಳಿಗೆ ಬೆಲೆಬಾಳುವ ಭೂಮಿ ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ’ ಎಂದರು.

‘ಆದರೆ ಅದು ಅಷ್ಟಕ್ಕೆ ಕೊನೆಯಾಗುತ್ತದೆ. ಆ ಉದ್ಯಮಿ ಮಾತ್ರ ನಿರಂತರವಾಗಿ ಹಣ ಗಳಿಸುತ್ತಾನೆ.  ಇದರ ಬದಲಾಗಿ ರಾಜಕಾರಣಿಗಳು ತಾವೇ ಒಂದು ಉದ್ಯಮ ಆರಂಭಿಸಿದರೆ ಅವರಿಗೂ ಅನುಕೂಲವಾಗುತ್ತದೆ ಜೊತೆಗೇ ಸ್ಥಳೀಯರಿಗೂ ಉದ್ಯೋಗ ಸಿಗುತ್ತವೆ’ ಎಂದು ಹೇಳಿದರು.

‘ಗುಜರಾತಿಗಳಿಗೆ ಆರ್ಥಿಕ ಪ್ರಜ್ಞೆ ಇರುವುದರಿಂದಲೇ ಇಂದು ಅವರು ಜಗತ್ತಿನಾದ್ಯಂತ ನೆಲೆಸಿದ್ದಾರೆ. ಅಲ್ಲಿನ ಜನ ಬೆಳಗಾಗುತ್ತಲೇ ಪತ್ರಿಕೆಗಳಲ್ಲಿ ಷೇರು ಮಾರುಕಟ್ಟೆಯ ಸುದ್ದಿ ಓದುತ್ತಾರೆ. ಆದರೆ ನಮ್ಮವರು ಕ್ರಿಕೆಟ್‌ ಬಗ್ಗೆ ತಿಳಿದುಕೊಳ್ಳುತ್ತಾರೆ’ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆ ಬಹಳ ಅಗತ್ಯವಾಗಿತ್ತು. ಅದನ್ನು ನಮ್ಮವರು ಮಾಡಲಿಲ್ಲ. ಹಾಗಾಗಿ ದೆಹಲಿ ಮೂಲದವರು ಬಂದು ಆರಂಭಿಸಿದರು. ಇಂತಹ ಹಲವು ವಿಷಯಗಳ ಬಗ್ಗೆ ನಮ್ಮವರು ಸೂಕ್ಷ್ಮವಾಗಿ ಚಿಂತಿಸುವುದೇ ಇಲ್ಲ’ ಎಂದರು.

‘ಮಂಡ್ಯದಲ್ಲಿ ಕನ್ನಂಬಾಡಿ ಕಟ್ಟಿದ ಮೇಲೆ ಅದು ಶ್ರೀಮಂತ ಜಿಲ್ಲೆಯಾಗಿ ಬದಲಾಯಿತು. ಅಲ್ಲಿನ ಜನರೂ ಶ್ರೀಮಂತರಾದರು. ಆಗತಾನೇ ಬೆಂಗಳೂರು ಕೂಡ ಬೆಳೆಯುತ್ತಿತ್ತು. ಮಂಡ್ಯದ ಜನ ಬೆಂಗಳೂರಿನಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಸಾಕಷ್ಟು ಅವಕಾಶ ಇತ್ತು. ಆದರೆ ಹಾಗೇ ಮಾಡದೇ ಅಲ್ಲೇ ಉಳಿದುಕೊಂಡರು. ಬರು ಬರುತ್ತ ಅವರೇ ಇಂದು ದೊಡ್ಡ ಸಾಲಗಾರರಾಗಿದ್ದಾರೆ’ ಎಂದರು.

ಹಣ ಮಾಡಲು ರಾಜಕೀಯಕ್ಕೆ..: ‘ನಮ್ಮ ರಾಜಕಾರಣಿಗಳಿಗೆ ಉದ್ಯಮ ಆರಂಭಿಸಿ ಹಣ ಮಾಡಬೇಕು ಎಂಬ ಬುದ್ಧಿಯೇ ಇಲ್ಲ. ಇದರಿಂದ ಅವರು ರಾಜಕೀಯ ಪ್ರವೇಶಿಸುತ್ತಾರೆ. ಒಂದುವೇಳೆ ಸ್ವಂತ ಉದ್ಯಮ ಆರಂಭಿಸಿದರೆ ರಾಜಕೀಯ ಸೇರುವ ಪ್ರೇಮಯವೇ ಬರುವುದಿಲ್ಲ’ ಎಂದರು.
‘ಕೆಚ್ಚು, ಕಠಿಣ ಪರಿಶ್ರಮದಿಂದ ಕನ್ನಡಿಗರು ಕೆಲಸ ಮಾಡಬೇಕಾಗಿದೆ. ಕೆಲವೇ ಜನರು ಕಟ್ಟಿ ಬೆಳೆಸಿದ ಇನ್ಫೊಸಿಸ್‌ ಸಂಸ್ಥೆ ಇಂದು ಯಾವ ಮಟ್ಟಿಗೆ ಬೆಳೆದಿದೆ ಎಂಬುದು ನಮ್ಮ ಕಣ್ಣ ಮುಂದಿದೆ’ ಎಂದು ನಿದರ್ಶನ ನೀಡಿದರು.

‘ಯಾರು ಆರ್ಥಿಕವಾಗಿ ಗಟ್ಟಿಯಾಗಿ ಇರುತ್ತಾರೋ ಅಂತಹವರ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ.  ಜಗತ್ತಿನಾದ್ಯಂತ ನಡೆಯುವ ಆರ್ಥಿಕ ಚಟುವಟಿಕೆಗಳ  ಮೇಲೆ ಇಂಗ್ಲಿಷ್‌ನವರ ಪ್ರಭಾವ ಇದೆ. ಹಾಗಾಗಿಯೇ ಇಂದು ಇಂಗ್ಲಿಷ್‌ ಭಾಷೆಯನ್ನು ಬಹುತೇಕ ರಾಷ್ಟ್ರಗಳಲ್ಲಿ ಮಾತನಾಡುವುದನ್ನು ಕಾಣುತ್ತೇವೆ’ ಎಂದರು.

‘ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕನ್ನಡ ಮಾಯವಾಗುತ್ತಿದೆ ಎಂದು ಕಳವಳ ಪಡುವುದು ತಪ್ಪು. ನಾವು ಏನು ಮಾಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಮುಂಬೈನಲ್ಲಿ ಅನ್ಯ ಭಾಷಿಕರು ಇರಬಾರದು ಎಂದು ಶಿವಸೇನೆ ಆಗಾಗ ಗಲಾಟೆ ಮಾಡುತ್ತ ಇರುತ್ತದೆ. ಈ ವಾದವನ್ನು ನಾನು ಒಪ್ಪುವುದಿಲ್ಲ. ಇಂದು ಮುಂಬೈ ಬೆಳೆಯಬೇಕಾದರೆ ಎಲ್ಲ ರಾಜ್ಯದವರ ಪಾಲು ಇದೆ. ಹಾಗಾಗಿ ಅವರು ಇರಬಾರದು, ಇವರು ಇರಬಾರದು ಎಂದು ಹೇಳಲು ಆಗುವುದಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT