ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಮಲೆನಾಡಿನಲ್ಲಿ ಮಳೆ

ಜೋಗ ಜಲಪಾತಕ್ಕೆ ಮತ್ತೆ ಕಳೆ
Last Updated 12 ಜುಲೈ 2014, 19:38 IST
ಅಕ್ಷರ ಗಾತ್ರ

ಸಾಗರ/ ಹುಬ್ಬಳ್ಳಿ/ ಮಡಿಕೇರಿ/ ಮಂಗ­ಳೂರು: ಬಯಲುಸೀಮೆಯ ಕೆಲ ಭಾಗ­ಗಳಲ್ಲಿ ಮತ್ತು ಕರಾವಳಿ, ಮಲೆನಾ­ಡು­ಗಳಲ್ಲಿ ಮುಂಗಾರು ಚುರುಕು­ಗೊಂಡಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ಸುರಿಯುತ್ತಿ­ರುವ ಪುನರ್ವಸು ಮಳೆಯಿಂದ ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ.

ರಾಜಾ, ರಾಣಿ, ರೋರರ್, ರಾಕೆಟ್ ಜಲಪಾತಗಳು ಭೋರ್ಗರೆಯಲು ಆರಂ­ಭಿ­ಸಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಲಿಂಗನಮಕ್ಕಿ ಜಲಾಶಯಕ್ಕೆ ಈಗ 2 ಅಡಿ ನೀರು ಬಂದಿದೆ. 2013ರ ಜುಲೈ ತಿಂಗಳಿನಲ್ಲಿ 1,706 ಮಿ.ಮೀ. ಮಳೆ ಸುರಿದು 1,787 ಅಡಿ ನೀರು ಸಂಗ್ರಹ­ವಾಗಿತ್ತು. ಈ ವರ್ಷ ಇದು ವರೆಗೆ ಕೇವಲ 677 ಮಿ.ಮೀ ಮಳೆ ಸುರಿದಿದೆ. ಹೀಗಾಗಿ ಈ ಸಲ ಕಳೆದ ಸಲಕ್ಕಿಂತ 38 ಅಡಿ ನೀರು ಕಡಿಮೆಯಿದೆ ಎಂದು ಕೆಪಿಸಿ ಅಧಿಕಾರಿ­ಗಳು ಮಾಹಿತಿ ನೀಡಿದ್ದಾರೆ.

ಮೋಡದ ವಾತಾವರಣ: ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಉತ್ತಮ ಮಳೆ­ಯಾಗುತ್ತಿದ್ದು ಮುಂಬೈ ಕರ್ನಾಟಕ ಭಾಗದ ಇತರ ಜಿಲ್ಲೆಗಳಲ್ಲಿ ಶನಿವಾರ ಮೋಡ ಕವಿದ ವಾತಾವರಣ ಇತ್ತು. ಜತೆಗೆ ಆಗಾಗ್ಗೆ ತುಂತುರು ಮಳೆ­ಯಾಗಿದೆ. ಮಂಗಳೂರಿನ ಬಹುತೇಕ ಕಡೆಗಳಲ್ಲಿ ಶನಿವಾರ ಮಳೆ ಸುರಿದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಉದ್ದಕ್ಕೂ ವರುಣನ ಅಬ್ಬರ ಹೆಚ್ಚಾಗಿದ್ದರೆ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶದಲ್ಲಿ ಮಳೆ ಕಡಿಮೆ ಇದೆ. ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರದಲ್ಲಿ ಇಡೀ ದಿನ ಆಗಾಗ ಮಳೆ ಬೀಳುತ್ತಿತ್ತು. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ತುಂತುರು ಮಳೆಯಾಗಿದೆ.

ಕಾಳಿ, ಗಂಗಾವಳಿ ಹಾಗೂ ಅಘ­ನಾಶಿನಿ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಗಾಳಿಯ ಅಬ್ಬರವೂ ಜಾಸ್ತಿಯಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ, ಭೀಮಗಡ, ನಾಗರಗಾಳಿ, ಲೋಂಡಾ ಹಾಗೂ ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಉಳಿದಂತೆ ಬೆಳಗಾವಿ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ.
ಕಲ್ಲುಬಂಡೆ ತೆರವು  ಚುರುಕು: ಕೊಡಗಿನ ಭಾಗಮಂಡಲ– ತಲಕಾವೇರಿ ರಸ್ತೆ ಮಧ್ಯೆ ಬಿದ್ದ ಬೃಹದಾಕಾರದ ಕಲ್ಲು­ಬಂಡೆ­ಗಳನ್ನು ತೆರವುಗೊಳಿಸುವ ಕಾಮ­ಗಾರಿ ಶನಿವಾರ ಚುರುಕಿನಿಂದ ನಡೆಯಿತು.
ಜೆಸಿಬಿ ಬಳಸಿ ಕಲ್ಲುಬಂಡೆಗಳನ್ನು ಹಾಗೂ ಮಣ್ಣನ್ನು ತೆಗೆಯುತ್ತಿದ್ದು ಕೆಲಸ ಪೂರ್ಣಗೊಳ್ಳಲು 2 ದಿನಗಳಾದರೂ ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಲಕಾವೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ 3– 4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಕಾರಣದಿಂದ ಮಣ್ಣು ಸಡಿಲಗೊಂಡು ಶುಕ್ರವಾರ ಬೃಹದಾಕಾರದ ಕಲ್ಲು ಬಂಡೆಗಳು ರಸ್ತೆಯ ಮೇಲೆ ಉರುಳಿ ಬಿದ್ದಿದ್ದವು. ಕಲ್ಲುಬಂಡೆಗಳು ಬಿದ್ದಿದ್ದರಿಂದ ರಸ್ತೆ ಹಾಳಾಗಿದೆ. ಅಲ್ಲದೇ, ಈ ರಸ್ತೆಗೆ ಆಸರೆಯಾಗಿ ನಿರ್ಮಿಸ­ಲಾಗಿರುವ ತಡೆಗೋಡೆಯ ಸದೃಢತೆ ಪರೀಕ್ಷಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾ­ಗುವುದು ಎಂದರು.

ದುರಸ್ತಿ ನಡೆಯುತ್ತಿರು ವುದರಿಂದ ಪ್ರವಾಸಿಗರ ವಾಹನಗಳನ್ನು ಭಾಗಮಂಡಲದಲ್ಲಿಯೇ ನಿಲ್ಲಿಸಲಾಗಿದೆ. ಮಡಿಕೇರಿ, ಭಾಗಮಂಡಲ, ನಾಪೋಕ್ಲು, ಅಮ್ಮತ್ತಿ, ಶ್ರೀಮಂಗಲ, ಗೋಣಿಕೊಪ್ಪ, ಶಾಂತಳ್ಳಿಯಲ್ಲಿ ಧಾರಾಕಾರವಾಗಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. 

ಉಕ್ಕಿದ ಕುಮಾರಧಾರಾ: ಕುಕ್ಕೆಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕುಮಾರಧಾರಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಸಂಜೆ ವೇಳೆಗೆ ಉಕ್ಕಿ ಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT