ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಮನೆಗೆ ‘ಸ್ಮಾರಕ ಭಾಗ್ಯವಿಲ್ಲ’!

ಸಾಲಿ ರಾಮಚಂದ್ರರಾಯರ ಮನೆ ಖಾಸಗಿಯವರ ಪಾಲು
ಅಕ್ಷರ ಗಾತ್ರ

ಧಾರವಾಡ: ರಾಮಾಯಣ ಕುರಿತು ಕನ್ನಡದಲ್ಲಿ ಮೊದಲ ಲೇಖನ ಬರೆದ ಹಾಗೂ ಪ್ರಥಮ ಶೋಕಗೀತೆ ರಚಿಸಿದ ಹೊಸಗನ್ನಡ ಸಾಹಿತ್ಯದ ಆರಂಭ ಕಾಲದ ಮಹತ್ವದ ಲೇಖಕರು ಸಾಲಿ ರಾಮಚಂದ್ರರಾಯರು. ಅವರು ಬದುಕಿ ಬಾಳಿದ ಮನೆ ಈಗ ಅನ್ಯರ ಪಾಲಾಗಿದೆ.

ಸಪ್ತಾಪುರ ಬಡಾವಣೆಯಲ್ಲಿ 24.5 ಗುಂಟೆ ಜಾಗದಲ್ಲಿರುವ ‘ಶ್ರೀನಿಕೇತನ ವಿ.ವ.1837’ ಇದು ಸಾಲಿ ರಾಮಚಂದ್ರರಾಯರು ವಾಸವಾಗಿದ್ದ ಮನೆ. ಇಲ್ಲಿಯೇ ಅವರು ತಮ್ಮ ಅಮೂಲ್ಯ ಕೃತಿಗಳನ್ನು ರಚಿಸಿದ್ದರು. ಅವರ ಮೂರನೇ ತಲೆಮಾರಿನವರು ವಿದೇಶ ಹಾಗೂ ಇತರ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಅವರಿಗೆ ಈ ಕಟ್ಟಡ ಮತ್ತು ಜಾಗೆಯ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದ್ದರಿಂದ ಆಸ್ತಿಯನ್ನು ಖಾಸಗಿ ನಿರ್ಮಾಣ ಸಂಸ್ಥೆಗೆ ಮಾರಾಟ ಮಾಡಿದ್ದಾರೆ. ಇಳಿ ವಯಸ್ಸಿನಲ್ಲಿರುವ ರಾಮಚಂದ್ರರಾಯರ ಮೊಮ್ಮಕ್ಕಳು ಈಗ ಮರಿಮಕ್ಕಳ ಆಶ್ರಯದಲ್ಲಿರುವುದರಿಂದ ಈ ಜಾಗವನ್ನು ಬೇರೆಯವರಿಗೆ ಮಾರುವುದು ಅನಿವಾರ್ಯವಾಗಿತ್ತು ಎನ್ನುತ್ತಾರೆ ಅವರು.

ರಾಮಚಂದ್ರರಾಯರ ಮೊಮ್ಮಗ ಡಾ.ಆನಂದ ದೇಸಾಯಿ ಹಾಗೂ ಅವರ ಪತ್ನಿ ಡಾ.ಶಾಂತಾ ದೇಸಾಯಿ ತಮಗಾಗಿ ಇದೇ ಆವರಣದಲ್ಲಿ ಕಟ್ಟಿಸಿಕೊಂಡಿದ್ದ ಮನೆಯನ್ನು ಭಾನುವಾರ ಖಾಲಿ ಮಾಡಿದರು. ಜತೆಗೆ ಅಜ್ಜ ಇದ್ದ ಮನೆಯಲ್ಲಿರುವ ವಸ್ತುಗಳನ್ನು ಅವರ ಆಪ್ತೇಷ್ಟರು ತೆಗೆದುಕೊಂಡು ಹೋಗಬಹುದು ಎಂದೂ ಸೂಚಿಸಿದ್ದರು. ಇದರಿಂದ ಸ್ಮಾರಕವಾಗಿ, ಶ್ರೇಷ್ಠ ಸಾಹಿತಿಯ ಜೀವನವನ್ನು ಅರಿಯಲು
ಸಹಕಾರಿಯಾಗಬೇಕಿದ್ದ ಅವರ ವಸ್ತುಗಳು ಇಂದು ಅನ್ಯರ ಪಾಲಾಗಿವೆ.

‘ಅವರು ಬಳಸಿದ ಲೇಖನಿ, ಪಡೆದ ಪದವಿ ಪ್ರಮಾಣಪತ್ರ– ಪ್ರಶಸ್ತಿಗಳು, ಭಾವಚಿತ್ರಗಳು, ರೇಖಾ ಚಿತ್ರಗಳು, ಬಳಸುತ್ತಿದ್ದ ವಸ್ತುಗಳು, ಅಮೂಲ್ಯ ಹಸ್ತಪ್ರತಿಗಳು, ಅನೇಕ ಪುಸ್ತಕಗಳನ್ನು ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದು’ ಎಂದೂ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರನ್ನು ಬಲ್ಲವರು, ಅವರ ಅಭಿಮಾನಿಗಳು ಬಂದು ಆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ರಾಮಚಂದ್ರರಾಯರು ಬಳಸಿದ ವಸ್ತುಗಳು ಮನೆಯೊಳಗೆ ಇಲ್ಲದೇ ಮನೆ ಖಾಲಿಯಾಗಿದೆ.

‘ಈ ನಿರ್ಧಾರ ತೀವ್ರ ನೋವಿನ ಸಂಗತಿಯಾದರೂ ನಮಗೆ ಅನಿವಾರ್ಯವಾಗಿದೆ. ನಾವು ನಮ್ಮ ಮಕ್ಕಳಿಗೆ ಹೇಳಿದ್ದೇವಾದರೂ ಅವರು ಅಜ್ಜನನ್ನು ನೋಡಿಲ್ಲ. ಜತೆಗೆ ಕನ್ನಡ ಹಾಗೂ ಕರ್ನಾಟಕದ ಸಂಬಂಧವೂ ಅವರಿಗೆ ಕಡಿಮೆಯಾಗಿದೆ. ಹೀಗಾಗಿ ಈ ನಿವೇಶನವನ್ನು ಮಾರಲು ಐದೂ ಜನ ಮೊಮ್ಮಕ್ಕಳು, ಮಕ್ಕಳು ತೀರ್ಮಾನಿಸಿ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಸ್ಥಳ ತೆರವು ಮಾಡಲು ಅಂತಿಮ ಸಿದ್ಧತೆಯಲ್ಲಿದ್ದ ಸಾಲಿ ಅವರ ಮೊಮ್ಮಗ ಡಾ.ಆನಂದ ದೇಸಾಯಿ ಅವರ ಪತ್ನಿ ಡಾ.ಶಾಂತಾ ದೇಸಾಯಿ ಪ್ರತಿಕ್ರಿಯಿಸಿದರು.

ತೀವ್ರ ಬಡತನದಲ್ಲಿ ಬದುಕಿದ ರಾಮಚಂದ್ರರಾಯರಿಗೆ ಮೂವರು ಮಕ್ಕಳು. ಮಗ ಅತ್ಯಂತ ಕಿರಿಯ ವಯಸ್ಸಿನಲ್ಲೇ ತೀರಿಕೊಂಡಿದ್ದರಿಂದ ತೀವ್ರವಾಗಿ ಜರ್ಝರಿತರಾಗಿದ್ದರು. ಈ ಸಂದರ್ಭದಲ್ಲೇ  ‘ತಿಲಾಂಜಲಿ’ ಎಂಬ ಶೋಕ ಕವಿತೆಯನ್ನು ರಚಿಸಿದರು. ಇದು ಕನ್ನಡದ ಮೊದಲ ಶೋಕ ಕವಿತೆ ಎಂದು ವಿಮರ್ಶಕರು ಉಲ್ಲೇಖಿಸುತ್ತಾರೆ. ಸಾಹಿತಿಗಳು ಸಾಹಿತ್ಯ ಕ್ಷೇತ್ರದ ಗಣ್ಯರು ಈ ಮನೆಯಲ್ಲಿ ತಂಗಿದ್ದನ್ನು ಅವರ ಮಗಳು ಸುಬ್ಬಕ್ಕ ತಮ್ಮ ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ. ಆ ಸಮಯದಲ್ಲಿ ಈ ಮನೆ ಸಾಹಿತ್ಯ ಚರ್ಚೆಗಳ ಪ್ರಮುಖ ಕೇಂದ್ರವಾಗಿತ್ತು.

ಕೈಲಾಸಂ, ಮಂಜೇಶ್ವರ ಗೋವಿಂದ ಪೈ, ಶಿವರಾಮ ಕಾರಂತರು ಈ ಮನೆಯಲ್ಲಿ ತಂಗಿದ್ದಾರೆ. ವಿಮರ್ಶಕ ಡಾ.ಜಿ.ಎಸ್‌.ಆಮೂರ ಅವರೂ ಇದೇ ಮನೆಯ ಹಿಂಭಾಗದಲ್ಲಿ ಬಾಡಿಗೆಗೆ ಇದ್ದರು ಎಂದು ಸಾಲಿ ಅವರ ಮೊಮ್ಮಗ ಆನಂದ ದೇಸಾಯಿ ನೆನಪಿಸಿಕೊಳ್ಳುತ್ತಾರೆ.

ಸ್ನೇಹಿತರು ನೀಡಿದ್ದ ಮನೆ
ಸ್ವಾತಂತ್ರ್ಯಪೂರ್ವದಲ್ಲಿ ಸಾಲಿ ಅವರು ಸ್ನೇಹಿತರಾಗಿದ್ದ ಪ್ರೊ.ಆರ್‌.ಎ.ಜಹಗೀರದಾರ (ಕರ್ನಾಟಕ ವಿ.ವಿಯ ಮೊದಲ ಕುಲಪತಿ) ಹಾಗೂ ಶಂಕರ ಮೊಕಾಶಿ ಪುಣೇಕರ್‌ ಮತ್ತಿತರ ಸ್ನೇಹಿತರು ಒಂದಷ್ಟು ಹಣ ಸೇರಿಸಿ ಈ ಜಾಗ ಕೊಡಿಸಿದ್ದರಂತೆ. ನಂತರ ತಮಗೆ ಬರುತ್ತಿದ್ದ ಸಂಬಳದಲ್ಲಿ ಪ್ರತಿ ತಿಂಗಳು ಒಂದಷ್ಟು ಹಣ ನೀಡುತ್ತಾ ಸಾಲಿ ಅವರು ಸಾಲ ಹಿಂದಿರುಗಿಸಿದ್ದನ್ನು ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ನೆನಪಿಸಿಕೊಳ್ಳುತ್ತಾರೆ.

ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ ಸಾಲಿ ರಾಮಚಂದ್ರರಾಯರ ಮನೆಯನ್ನು ಸ್ಮಾರಕ ಮಾಡುವತ್ತ ಯಾರೊಬ್ಬರೂ ಚಿಂತಿಸದಿರುವುದು ಅತ್ಯಂತ ನೋವಿನ ಸಂಗತಿ
ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ,
ಹಿರಿಯ ಕವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT