ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ಗೆಲುವಿನತ್ತ ಬಳಿಗಾರ್

Last Updated 28 ಫೆಬ್ರುವರಿ 2016, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 25ನೇ ಅಧ್ಯಕ್ಷರಾಗಿ ನಿವೃತ್ತ ಕೆಎಎಸ್‌ ಅಧಿಕಾರಿ ಮನು ಬಳಿಗಾರ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ ಬಳಿಗಾರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪ್ರೊ.ಬಿ. ಜಯಪ್ರಕಾಶ ಗೌಡ ಅವರಿಗಿಂತ 27 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು.

ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇಕಡ 57.8ರಷ್ಟು ಮತದಾನ ಆಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 35.48ರಷ್ಟು ಮತದಾನ ಆಗಿದೆ ಎಂದು ಸಾಹಿತ್ಯ ಪರಿಷತ್ ಚುನಾವಣಾ ಅಧಿಕಾರಿ ಕೆ. ನಾಗರಾಜು ತಿಳಿಸಿದರು.

ಗಡಿನಾಡು, ಹೊರನಾಡು ಮತ್ತು ಹೊರದೇಶಗಳಲ್ಲಿ ಒಟ್ಟು 1,738 ಮತಗಳಿವೆ. ಅಂಚೆ ಮೂಲಕ ಬರಲಿರುವ ಈ ಮತಗಳ ಎಣಿಕೆ ಬುಧವಾರ ನಡೆಯಲಿದೆ. ಅಂಚೆ ಮೂಲಕ ಬರುವ ಮತಪತ್ರಗಳ ಎಣಿಕೆ ಪೂರ್ಣಗೊಂಡ ನಂತರ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರ ಹೆಸರನ್ನು ಬುಧವಾರ ಅಧಿಕೃತವಾಗಿ ಘೋಷಿಸಲಾಗುತ್ತದೆ.

ಒಂದಿಷ್ಟು ಗೊಂದಲ: ಮತದಾನ ಆರಂಭಕ್ಕೂ ಮೊದಲು, 8 ಮತ್ತು 9ನೇ ಮತಗಟ್ಟೆಯ ಮತಪೆಟ್ಟಿಗೆಯಲ್ಲಿ ಏನೂ ಇಲ್ಲ ಎಂಬುದನ್ನು ಏಜೆಂಟರಿಗೆ ತೋರಿಸದ ಕಾರಣ ಬೆಂಗಳೂರಿನ ಮತಗಟ್ಟೆಯಲ್ಲಿ ಕೆಲ ಕಾಲ ಗೊಂದಲ ಉಂಟಾಗಿತ್ತು. ಅಲ್ಲದೆ, ಕೆಲವು ಮತಗಟ್ಟೆಗಳಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಮತದಾನಕ್ಕೆ ಅವಕಾಶ ನೀಡಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಯಿತು.

ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ.ಎಂ. ಚಿದಾನಂದಮೂರ್ತಿ, ಪ್ರೊ.ಜಿ. ವೆಂಕಟಸುಬ್ಬಯ್ಯ, ನರಹಳ್ಳಿ ಬಾಲಸುಬ್ರಹ್ಮಣ್ಯ, ಸಚಿವರಾದ ರೋಷನ್ ಬೇಗ್, ಉಮಾಶ್ರೀ, ಶಾಸಕಿ ಜಯಮಾಲಾ ಮತ್ತಿತರರು ಬೆಂಗಳೂರಿನಲ್ಲಿ ತಮ್ಮ ಮತ ಚಲಾಯಿಸಿದರು.

ಮೊದಲಿಂದಲೂ ಇದೆ ಪರಿಷತ್ತಿನ ನಂಟು
ಬಳಿಗಾರ್ ಅವರು ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದರು. ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಆಗಿಯೂ ಕೆಲಸ ಮಾಡಿದ್ದಾರೆ. ಅವರು ಅಂಕಣಕಾರ, ಕೃತಿಕಾರರೂ ಹೌದು. ಅಧ್ಯಕ್ಷ ಸ್ಥಾನದಲ್ಲಿ ಇರುವವರೆಗೆ ಪರಿಷತ್ತಿನಿಂದ ಗೌರವಧನ, ಸಂಭಾವನೆ ಪಡೆಯಲಾರೆ ಎಂದು ಅವರು ಈಗಾಗಲೇ ಘೊಷಿಸಿದ್ದಾರೆ.

ಐದು ಕಥಾಸಂಕಲನ, ಆರು ಕವನ ಸಂಕಲನ, ನಾಲ್ಕು ಲಲಿತ ಪ್ರಬಂಧ ಸಂಕಲನ, ನಾಲ್ಕು ಜೀವನ ಚರಿತ್ರೆಗಳು, ಒಂದು ನಾಟಕ, ಏಳು ಸಂಪಾದಿತ ಗ್ರಂಥ ಸೇರಿ ಒಟ್ಟು 27ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಕಥೆ, ಕವನಗಳು ಇಂಗ್ಲಿಷ್‌, ಹಿಂದಿ, ಒರಿಯಾ ಹಾಗೂ ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ.

‘ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಹೊಂದಿದ್ದೇನೆ. ಪರಿಷತ್ತಿನ ಅಧ್ಯಕ್ಷನಾಗಿ ಆಯ್ಕೆಯಾದರೆ ಕಲಬುರ್ಗಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಇರಾದೆ ಇದೆ’ ಎಂದೂ ಅವರು ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT