ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಲ್ಲಿ ಕರೆಂಟ್

Last Updated 13 ಜುಲೈ 2015, 19:44 IST
ಅಕ್ಷರ ಗಾತ್ರ

ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಭೈರನಹಟ್ಟಿ ಗ್ರಾಮದ ಕಾಡಿನ ಮಧ್ಯೆ ಇರುವ ಕುಟೀರವೊಂದರಲ್ಲಿ ಸದಾ ಬೆಳಕು. ಊರೆಲ್ಲ ಲೋಡ್‌ಶೆಡ್ಡಿಂಗ್‌ ತಲೆಬಿಸಿಯಲ್ಲಿದ್ದರೂ ಇಲ್ಲಿ ಮಾತ್ರ ವಿದ್ಯುದ್ದೀಪ ಸದಾ ಉರಿಯುತ್ತದೆ. ಈ ಕುಟುಂಬದ ಮಂದಿಗೆ ಲೋಡ್‌ಶೆಡ್ಡಿಂಗ್‌    ಅರಿವೇ ಇಲ್ಲ. ‘ನಮಗ್ಯಾವ ವಿದ್ಯುತ್ ಅಭಾವರೀ, ಬಳಕೆಯಾಗಿ ಕರೆಂಟ್ ಮಿಕ್ಕುತ್ತದೆ. ಬೇಕಾದ್ರ ನೀವೊಂದಿಷ್ಟು ತೊಗೊಂಡು ಹೋಗ್ರಿ’ ಎನ್ನುವ ಮಾತು!

ಇಂಥದ್ದೊಂದು ಚಮತ್ಕಾರ ಮಾಡಿದ್ದಾರೆ 46 ವರ್ಷದ ರೈತ ಸಿದ್ದಪ್ಪ ಹುಲಜೋಗಿ. ಸ್ವತಃ ವಿದ್ಯುತ್‌ ತಯಾರಿಸುತ್ತಿರುವುದೇ ಇದರ ಹಿಂದಿನ ರಹಸ್ಯ. ಮನೆಯಲ್ಲಿನ ಕಚ್ಚಾವಸ್ತುಗಳಿಂದ ತಾವೇ ನಿರ್ಮಿಸಿಕೊಂಡಿರುವ ಪವನಯಂತ್ರದ ಮೂಲಕ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ನಿರುಪಯುಕ್ತ ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್‌ ಬಿಡಿ ಭಾಗಗಳೇ ಇವರ ಕಚ್ಚಾಸಾಮಗ್ರಿಗಳು. ಒಟ್ಟಿನಲ್ಲಿ ಶೂನ್ಯ ಬಂಡವಾಳದಲ್ಲಿ ದೊರಕಿದ ಗಾಳಿ ವಿದ್ಯುತ್ ಇದು!

ಸಾಧನೆಯ ಹಿಂದೆ...
ಸಿದ್ದಪ್ಪನವರು ಭೈರನಹಟ್ಟಿ ಗ್ರಾಮದವರು. ಆದರೆ ಸುಮಾರು 25 ವರ್ಷಗಳಿಂದ ಮನೆ ಮಾಡಿಕೊಂಡು ಒಣ ಬೇಸಾಯದ ಜಮೀನಿನಲ್ಲಿಯೇ ವಾಸವಿದ್ದಾರೆ. ಕಾಡಿನ ಮಧ್ಯೆ ಇರುವ ಒಂಟಿ ಮನೆಯಲ್ಲಿ ಮೊದಲು ಸೀಮೆಎಣ್ಣೆಯ ದೀಪ ಬೆಳಗಿಸಿಕೊಂಡವರು, ಎಣ್ಣೆ ಖಾಲಿಯಾಗಿ ದೀಪ ಆರಿದಾಗ ಕತ್ತಲೆಯಲ್ಲಿಯೇ ಬದುಕು ನಡೆಸಿದವರು. ಈ ಸಮಸ್ಯೆಯೇ ಬೇಡ ಎಂದು ಅದೆಷ್ಟೋ ವರ್ಷಗಳವರೆಗೆ ಸಂಜೆಯಾಗುತ್ತಿದ್ದಂತೆ ಉಂಡು ಮಲಗುವ ಕುಟುಂಬ ಅದಾಗಿತ್ತು.

ಆದರೆ ಮಕ್ಕಳು ಕಾಲೇಜಿಗೆ ಹೋಗತೊಡಗಿದಾಗ ಹೆಚ್ಚಿನ ಅಭ್ಯಾಸಕ್ಕೆ ರಾತ್ರಿ ಕೂಡ ಬೆಳಕಿನ ಅಗತ್ಯ ಕಂಡುಬಂದಿತು. ಅದಕ್ಕಾಗಿ ಅವರು ಅದೊಂದು ದಿನ ತಮ್ಮ ಮನೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವಂತೆ ಕೋರಿ ವಿದ್ಯುತ್‌ ಪ್ರಸರಣ ನಿಗಮಕ್ಕೆ ಅರ್ಜಿ ಗುಜರಾಯಿಸಿದರು. ಆದರೆ ‘ಕಾಡಿನ ನಡುವೆ ನಿರ್ಮಿಸಿರುವ ನಿಮ್ಮ ಮನೆಗೆ ಯಾವುದೇ ದಾಖಲೆಗಳಿಲ್ಲ, ಸಮೀಪದಲ್ಲಿ ವಿದ್ಯುತ್‌ ಕಂಬಗಳೂ ಇಲ್ಲ, ವಿದ್ಯುತ್‌ ಕೊಡುವುದು ಹೇಗೆ, ಅದು ಸಾಧ್ಯವೇ ಇಲ್ಲ’ ಎಂಬ ಉತ್ತರ ಬಂತು.

ಇನ್ನೇನು ತಮಗೆ ವಿದ್ಯುತ್ ಎಂಬುದು ಕನಸಿನ ಮಾತೇ ಎಂದುಕೊಂಡಿದ್ದ ಸಿದ್ದಪ್ಪನವರ ಮನದಲ್ಲಿ ಅದೇನೋ ವಿಚಾರ ಹೊಳೆಯಿತು. ಹತ್ತಾರು ವರ್ಷಗಳಿಂದ ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರಗಳನ್ನು ಬಳಸಿದ ಅನುಭವ ಇವರಲ್ಲಿದ್ದರಿಂದ ಸಹಜವಾಗಿ ತಾಂತ್ರಿಕ ಜ್ಞಾನವೂ ಇತ್ತು. ಹೊರಗಿನ ಸಂಪರ್ಕವಿಲ್ಲದೇ ಬೆಳಕು ಒದಗಿಸುವ ಈ ಯಂತ್ರಗಳಿರುವಂತೆ ತಾವೇ ಏಕೆ ಇದೇ ರೀತಿ ಗಾಳಿಯಿಂದ ವಿದ್ಯುತ್ ತಯಾರಿಸಬಾರದು ಎಂಬ ಯೋಚನೆ ಹೊಳೆಯಿತು. ಅದಕ್ಕೆ ಪೂರಕವಾಗಿ ತಮ್ಮ ಹೊಲದ ಸೀಮೆಯ ಬೆಟ್ಟದಲ್ಲಿ ನಿರ್ಮಾಣವಾಗಿದ್ದ ಪವನ ಯಂತ್ರಗಳ ಚಿತ್ರ ಕಣ್ಮುಂದೆ ಬಂತು.

ಪರಿಣಾಮವಾಗಿ, ಮನೆಯ ಮುಂದೆ ಕೆಟ್ಟು ಬಿದ್ದಿದ್ದ ಟ್ರ್ಯಾಕ್ಟರ್‌, ಜೋಪಡಿಯ ಮುಂದೆ ಹೊದಿಕೆಯಾಗಿದ್ದ ತಗಡು, ಕೆಲಸ ಮಾಡಲು ಅಸಮರ್ಥವಾಗಿದ್ದ ರಾಶಿ ಯಂತ್ರಗಳ ಬಿಡಿಭಾಗಗಳು ಒಂದೆಡೆ ಸೇರಿದವು. ‘ನಾನು ಮನದಲ್ಲಿ ಅಂದುಕೊಂಡದ್ದು ಆಗಬಹುದೇ ಎಂಬ ಆತಂಕದಲ್ಲಿಯೇ ಪ್ರಯತ್ನ ಆರಂಭಿಸಿದೆ. ಪ್ರಾಯೋಗಿಕವಾಗಿ ಟ್ರ್ಯಾಕ್ಟರ್‌ನ ಎಕ್ಸೆಲ್‌ಗೆ ತಗಡುಗಳನ್ನು ರೆಕ್ಕೆಗಳಂತೆ ಬಿಗಿದು ಕಟ್ಟಿಗೆಗೆ ನೇತು ಬಿಟ್ಟೆ. ತಗಡಿನ ಚಕ್ರ ಎಂಟು ಸುತ್ತು ಸುತ್ತುವುದರೊಳಗೆ ನೋಡನೋಡುತ್ತಿದ್ದಂತೆಯೇ ಬ್ಯಾಟರಿಯಲ್ಲಿ ಹಳದಿ ಬಲ್ಬ್‌ ಹೊತ್ತಿ ಉರಿಯಿತು. ನನ್ನ ಪ್ರಯತ್ನಕ್ಕೆ ಯಶ ಸಿಕ್ಕಿತು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಿದ್ದಪ್ಪ.

ಇದೇ ಸೂತ್ರವನ್ನು ಮೂಲವಾಗಿಟ್ಟುಕೊಂಡು ತಮ್ಮ ಪ್ರಯತ್ನ ಮುಂದುವರಿಸಿದ್ದರ ಫಲವಾಗಿ ಐದು ವರ್ಷಗಳಿಂದ ಅವರ ಮನೆಯಲ್ಲಿ ವಿದ್ಯುತ್‌ ಕೊರತೆ ಇಲ್ಲ, ಟಿ.ವಿ, ಟೇಪ್‌ರೆಕಾರ್ಡರ್ ಸೇರಿದಂತೆ ಎಲ್ಲ ಎಲೆಕ್ಟ್ರಿಕ್‌ ಸಾಮಗ್ರಿಗಳು ಕೆಲಸ ನಿರ್ವಹಿಸುತ್ತಿವೆ. ವಿದ್ಯುತ್‌ ಬಿಲ್‌ ಕಟ್ಟುವ ತಾಪತ್ರಯವೂ ಅವರಿಗೆ ಇಲ್ಲ. ಏಕೆಂದರೆ ಕಾಡಿನ ಮಧ್ಯೆ ವಿದ್ಯುತ್ ನಿಗಮದ ಸಿಬ್ಬಂದಿ ಹೋಗುವುದಿಲ್ಲ.

ವಿಚಿತ್ರ ವಿದ್ಯುತ್ ಸೆಟ್
ಸಿದ್ದಪ್ಪನ ವಿದ್ಯುತ್ ಉತ್ಪಾದನಾ ಸೆಟ್ಟೇ ವಿಚಿತ್ರವಾಗಿದೆ. ಜಮೀನಿನ ಎತ್ತರದ ಸ್ಥಳದಲ್ಲಿ ಮರದ ಐದು ಕಂಬಗಳನ್ನು ನೆಟ್ಟು ಅದರ ಮೇಲೊಂದು ಆರು ಕಾಲಿನ ಕಟ್ಟಿಗೆ ಅಟ್ಟ ನಿರ್ಮಿಸಿದ್ದಾರೆ. ಇಲ್ಲಿ ಬಳಸಲಾದ ಬ್ಯಾಟರಿ, ಬೆಲ್ಟ್, ಬೇರಿಂಗ್, ತಂತಿ, ನಟ್-ಬೋಲ್ಟ್... ಹೀಗೆ ಎಲ್ಲವೂ ಮನೆಯ ಮೂಲೆಯಲ್ಲಿ ನಿರುಪಯುಕ್ತವಾಗಿ ಗುಜರಿಗೆ ಹೋಗಬೇಕಾಗಿದ್ದ ವಸ್ತುಗಳು ಎಂಬುದು ವಿಶೇಷ. ಮಾರುಕಟ್ಟೆಯಿಂದ ತಂದ ಯುನಿಟರ್ ಒಂದನ್ನು ಬಿಟ್ಟರೆ ಮತ್ತಿನ್ನೇನೂ ಹೊರಗಿನಿಂದ ಸಾಮಗ್ರಿಗಳನ್ನು ತಂದಿಲ್ಲ. ಇದಕ್ಕೆ ತಗುಲಿದ ಖರ್ಚು ಎರಡು ಸಾವಿರ ರೂಪಾಯಿಗಳು ಮಾತ್ರ.

ಕಟ್ಟಿಗೆ ಅಟ್ಟದ ಮೇಲೆ ಎಕ್ಸೆಲ್ಲನ್ನು ಅಳವಡಿಸಿದ್ದಾರೆ. ಇದರ ಒಂದು ತುದಿಗೆ ದುಂಡನೆಯ ಕಬ್ಬಿಣದ ರಿಂಗ್ ಜೋಡಿಸಿ ನಾಲ್ಕು ತಗಡುಗಳನ್ನು ಫಿಕ್ಸ್‌ ಮಾಡಿದ್ದಾರೆ. ಇನ್ನೊಂದು ತುದಿಗೆ ಅಳವಡಿಸಿರುವ ಬೆಲ್ಟ್‌ ಮೋಟರ್ ತಿರುಗಿಸುತ್ತದೆ. ಸ್ವಲ್ಪ ಗಾಳಿ ಬೀಸಿದರೆ ಸಾಕು ದಡ್... ದಡ್ ಎಂದು ತಗಡುಗಳು ತಿರುಗುತ್ತವೆ. ತಗಡುಗಳು ತಿರುಗುತ್ತಿದ್ದಂತೆ ಮೋಟರ್ ತಿರುಗುತ್ತಾ ಅದರ ಪಕ್ಕದ ಒಂದು ದೊಡ್ಡ ಚಕ್ರ ತಿರುಗಿಸುತ್ತದೆ, ಆ ದೊಡ್ಡ ಚಕ್ರ ಮತ್ತೊಂದು ಸಣ್ಣ ಚಕ್ರವನ್ನು ಸ್ಪೀಡ್ ಆಗಿ ತಿರುಗುವಂತೆ ಮಾಡುತ್ತದೆ. ಹೀಗೆ ನಾಲ್ಕಾರು ಸನ್ನೆಗಳ ಮೂಲಕ ತಿರುಗುತ್ತಾ ಕೊನೆಯ ಚಕ್ರ ಭಾರಿ ವೇಗದಲ್ಲಿ ಡೈನಮೊ ಅನ್ನು ತಿರುಗಿಸುತ್ತದೆ.

ಯಾವಾಗ ಡೈನಮೊ ತಿರುಗುತ್ತದೆಯೋ ಆಗ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹ ಕಾರ್ಯ ಆರಂಭವಾಗುತ್ತದೆ. ಇಲ್ಲಿಂದ ವಿದ್ಯುತ್‌ ಯುನಿಟರ್‌ಗೆ ಹಾಯಿಸಿ ಅಲ್ಲಿಂದ ವೈರ್‌ಗಳ ಮೂಲಕ ಮನೆಗೆ ಸಾಗಿಸುತ್ತಾರೆ. ತಗಡಿನ ಚಕ್ರ ನೂರು ಸುತ್ತು ತಿರುಗಿದರೆ ಸಾಕು ಸಿದ್ದಪ್ಪನಿಗೆ ಆರು ಗಂಟೆ ವಿದ್ಯುತ್ ದೊರೆತಂತೆ.  ಈ ತಂತ್ರದಿಂದ 80 ರಿಂದ 100 ವಾಟ್ಸ್‌ ವಿದ್ಯುತ್ ಸಿಗುತ್ತದೆ. ‘ಗಾಳಿಗೆ ಚಕ್ರ ಒಂದು ಸುತ್ತು ತಿರುಗಿದರೆ ಡೈನಮೊ ಚಕ್ರ 150 (ಆರ್.ಪಿ.ಎಂ) ಸುತ್ತು ತಿರುಗಬೇಕು, ಗಂಟೆಗೆ 10ಕಿ.ಮೀ. ಗಿಂತಲೂ ವೇಗವಾಗಿ ಗಾಳಿ ತಿರುಗಿದರೆ ಮಾತ್ರ ವಿದ್ಯುತ್ ಉತ್ಪಾದನೆ ಆಗುತ್ತದೆ’ ಎನ್ನುತ್ತಾರೆ ಸಿದ್ದಪ್ಪ.

‘ಆರಂಭದಲ್ಲಿ ಪವನ ಯಂತ್ರ ನಿರ್ಮಿಸಲು ಕಟ್ಟಿಗೆ ಅಟ್ಟ ನಿರ್ಮಿಸುವುದನ್ನು ನೋಡಿದ ವ್ಯಕ್ತಿಯೊಬ್ಬರು ಅಪಹಾಸ್ಯ ಮಾಡಿದ್ದರು. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಬದಲಿಗೆ ಜಮೀನಿಗೆ ಬಂದು ಹೋಗುವವರಿಗೆಲ್ಲ ನಾನು ಇಲ್ಲೇ ವಿದ್ಯುತ್ ತಯಾರು ಮಾಡಿಯೇ ತೀರುತ್ತೇನೆ ಎನ್ನುತ್ತಲೇ ಇದ್ದೆ. ವಾರಗಟ್ಟಲೇ ಬಿಸಿಲು-ನೆರಳೆನ್ನದೇ ತಾತ್ಕಾಲಿಕ ಕಟ್ಟಿಗೆ ಅಟ್ಟ ನಿರ್ಮಿಸಿ ತಗಡಿನ ರೆಕ್ಕೆ ಜೋಡಿಸಿದ್ದೆ.

ಒಮ್ಮೆ ಬೀಸಿದ್ದ ಗಾಳಿಗೆ ಅಟ್ಟ, ಫ್ಯಾನ್ ಮುರಿದುಕೊಂಡು ಅನಾಥವಾಗಿ ನೆಲಕ್ಕೆ ಬಿದ್ದವು. ಮಾರನೇ ದಿನ ಗಟ್ಟಿ ಮುಟ್ಟಾದ ಕಂಬಗಳನ್ನು ನೆಟ್ಟು ಮುರಿದು ಬಿದ್ದಿದ್ದ ತಗಡುಗಳನ್ನು ಕಟ್ಟಿದೆ. ಎರಡೇ ದಿನಗಳಲ್ಲಿ ಮನೆಯ ತುಂಬ ಬೆಳಕು ಬಂತು’ ಎಂದು ತಾವು ಪಟ್ಟ ಪಡಿಪಾಟಲನ್ನು ವಿವರಿಸುವ ಸಿದ್ದಪ್ಪ, ತಮ್ಮನ್ನು ಅಪಹಾಸ್ಯ ಮಾಡಿದ ವ್ಯಕ್ತಿಯ ಕೈಯಿಂದಲೇ ಲೈಟ್ ಆನ್‌ ಮಾಡಿಸಿದರಂತೆ!

ಬೇಸರಿಸಿದ್ದ ಪತ್ನಿ
ಕೃಷಿ ಕೆಲಸ ಬಿಟ್ಟು ವಿದ್ಯುತ್‌ ಉತ್ಪಾದನೆಯ ಸಾಹಸಕ್ಕೆ ಕೈಹಾಕಿದ್ದ ಸಿದ್ದಪ್ಪ ಅವರನ್ನು ಕಂಡಿದ್ದ ಅವರ ಪತ್ನಿ ಭೀಮವ್ವ ಗಾಬರಿಯಾಗಿದ್ದರಂತೆ. ‘ಹೊಲಕ್ಕೆ ಹೋಗೋ ಬದ್ಲು ಸ್ಪ್ಯಾನರ್ ಹಿಡ್ದು ಬಿಸ್ಲಲ್ಲಿ ಅಟ್ಟ ಏರಿ ಕುಳಿತುಕೊಳ್ತಿದ್ರು. ನನಗೋ ಗಾಬರಿ. ಎಲ್ರೂ ನನ್ನ ಗಂಡನ ಕೆಲ್ಸ ನೋಡಿ ಬೈಯೋರೆ ಆಗಿದ್ರು, ಆದ್ರ ಇವತ್ತ ನಮ್ಮ ಮನ್ಯಾಗ ಅಮವಾಸ್ಯೆ ಹೋಗಿ ಹುಣ್ಣಿಮಿ ಬೆಳದಿಂಗಳ ತುಂಬಿಕೊಂಡೈತಿ. ಬುಡ್ಡಿ ದೀಪದ ಬೆಳಕಿನಲ್ಲಿ ಓದಲು ಬ್ಯಾಸ್ರ ಮಾಡ್ಕೋತಿದ್ದ ಮಕ್ಳೀಗ ಇಡೀ ರಾತ್ರಿ ಕುಳಿತು ಓದ್ತಾರಿ’ ಎನ್ನುತ್ತಾರೆ ಭೀಮವ್ವ.
*
ಬದುಕಲು ಕಲಿಸಿದ ಬಡತನ
ಸಿದ್ದಪ್ಪನವರ ಬಾಲ್ಯ ಕಳೆದದ್ದು ತಂದೆಯ ಜೊತೆಗೂಡಿ ಆಡು ಕುರಿ ಮೇಯಿಸಿ. ಶಾಲೆಗೆ ಹೋಗಬೇಕು, ಎಲ್ಲರಂತೆ ಅಕ್ಷರ ಕಲಿಯಬೇಕೆಂಬ ಅದಮ್ಯ ಹಂಬಲ. ಹಳ್ಳಿಯ ಮಕ್ಕಳು ಶಾಲೆಗೆ ಹೋಗುವ ದೃಶ್ಯವನ್ನು ದೂರದಲ್ಲೇ ನಿಂತು ಆಸೆಗಣ್ಣಿನಿಂದ ನೋಡುತ್ತ ‘ಅಪ್ಪಾ... ನಾನೂ ಪಾಟಿ -ಪೇಣೆ ತೊಗೊಂಡು ಶಾಲೆಗೆ ಹೋಕ್ತೀನಿ’ ಅಂದಿದ್ದಕ್ಕೆ ‘ತಾಸೊತ್ತಾತು ಕುರಿ ಹಸಿದು ಒಂದ ಸವನ ಬ್ಯಾ... ಬ್ಯಾ... ಅಂತ ಒದರಾಕತ್ಯಾವ ಅದನ್ನ ಬಿಟ್ಟು ಶಾಲೆಗೋಕ್ತಿಯಾ’ ಎಂದು ಹಸಿ ಬರಲಿನಿಂದ ಹೊಡೆದು ಕುರಿ ಹಿಂಡಿನೊಂದಿಗೆ ಇವರನ್ನೂ ದಬ್ಬಿದ್ದರಂತೆ.

ಅಕ್ಷರ ಕಲಿಯುವ ಅಂದಿನ ಅವರ ಕನಸನ್ನು ಮಕ್ಕಳು ಇಂದು ನನಸು ಮಾಡುತ್ತಿದ್ದಾರೆ. ಕಾಲೇಜಿಗೆ ಹೋಗಿ ಬಂದ ನಂತರ ಮಕ್ಕಳಿಂದ ಅಪ್ಪನಿಗೆ ಅಕ್ಷರ ಪಾಠ. ಇದರಿಂದ ಸಿದ್ದಪ್ಪ ಈಗ ಓದುವುದನ್ನೂ ಕಲಿತಿದ್ದಾರೆ. ಈಗ ಸಿದ್ದಪ್ಪನವರ ಜಮೀನಿನ ಸುತ್ತ ಜನರ ದೌಡು. ಶಿಕ್ಷಕರು ಶಾಲಾ ಮಕ್ಕಳನ್ನು ಕರೆದುಕೊಂಡು ಬಂದು ಪವನ ಯಂತ್ರದಿಂದ ವಿದ್ಯುತ್‌ ಉತ್ಪಾದನೆ ಹೇಗೆ ಮಾಡಬೇಕೆಂಬ ಪಾಠವನ್ನು ಇಲ್ಲೇ ಹೇಳುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದಪ್ಪ ಸದಾ ಸಿದ್ಧ.

ಸಿದ್ದಪ್ಪನವರ ಸಂಪರ್ಕಕ್ಕೆ: 9902221933.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT