ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ವಿದ್ಯಾರ್ಥಿಗಳ ಕಂಪ್ಯೂಟರ್‌ ಶಿಕ್ಷಣ ಸ್ಥಗಿತ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಉಡುಪಿ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಂಪ್ಯೂ­ಟರ್‌ ಮೂಲ ಶಿಕ್ಷಣ ನೀಡಲು ಆರಂಭಿ­ಸಿದ್ದ ಮಾಹಿತಿ ಮತ್ತು ಗಣಕ ತರಬೇತಿ (ಐಸಿಟಿ) ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳಿಸಿದೆ.

ರಾಜ್ಯದ 708 ಸರ್ಕಾರಿ ಕಾಲೇಜು­ಗ­­­­ಳಲ್ಲಿ 2009–10ರಲ್ಲಿ ಐಸಿಟಿ ಆರಂಭ­­ವಾ­­ಗಿತ್ತು. ಪ್ರತಿ ವರ್ಷ ಸುಮಾರು 3 ಲಕ್ಷ ವಿದ್ಯಾರ್ಥಿ­ಗಳು ಈ ಕಾರ್ಯ­­­ಕ್ರಮದಡಿ ಕಂಪ್ಯೂ­ಟರ್‌ ಶಿಕ್ಷಣ ಮತ್ತು ಮಾಹಿತಿ ತಂತ್ರ­ಜ್ಞಾನದ ತರಬೇತಿ ಪಡೆಯು­ತ್ತಿದ್ದರು.

ಖಾಸಗಿ ಕಂಪೆನಿಯೊಂದಕ್ಕೆ ಈ ಕಾರ್ಯ­­ಕ್ರಮ ಜಾರಿಗೊಳಿಸುವ ಜವಾ­ಬ್ದಾರಿ ನೀಡಲಾಗಿತ್ತು. ಐದು ನೂರು ವಿದ್ಯಾರ್ಥಿ­ಗಳು ಇರುವ ಕಾಲೇಜಿಗೆ 10 ಕಂಪ್ಯೂಟರ್‌, ಇಂಟರ್‌ನೆಟ್‌ ಸಂಪರ್ಕ ಕಲ್ಪಿ­ಸಲಾಗಿತ್ತು. ಕಂಪೆನಿಯೇ ಕಂಪ್ಯೂ­ಟರ್‌ ಶಿಕ್ಷಕರನ್ನು ನೇಮಕ ಮಾಡಿತ್ತು. ಗುತ್ತಿಗೆ ಅವಧಿ ಮುಗಿದಿರುವ ಕಾರಣ ಐಸಿಟಿ ಕಾರ್ಯಕ್ರಮ ನಿಲ್ಲಿಸಿರು­ವುದ­ರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಲಿ­ಯು­ತ್ತಿರುವ ವಿದ್ಯಾರ್ಥಿ­ಗಳು ಕಂಪ್ಯೂಟರ್‌ ಶಿಕ್ಷಣ ವಂಚಿತ­ರಾಗಿದ್ದಾರೆ.

ಕಾಲೇಜುಗಳಿಗೆ ಒದಗಿಸಿರುವ ಸುಮಾರು 7 ಸಾವಿರ ಕಂಪ್ಯೂಟರ್‌, ಪ್ರಿಂಟರ್‌ಗಳು ಮತ್ತಿತರ ಸಾಮಗ್ರಿಗಳು ದೂಳು ಹಿಡಿಯುತ್ತಿವೆ.
ಖಾಸಗಿ ಕಾಲೇಜುಗಳ ದುಬಾರಿ ಶುಲ್ಕ ಭರಿಸಲಾಗದ ಗ್ರಾಮೀಣ ಪ್ರದೇ­ಶದ ಬಡ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ಸೇರುತ್ತಾರೆ. ಶುಲ್ಕ ಪಾವತಿಸಿ ಖಾಸಗಿ­ಯಾಗಿ ಕಂಪ್ಯೂಟರ್‌ ಶಿಕ್ಷಣ ಪಡೆಯು­ವಷ್ಟು ಆರ್ಥಿಕಶಕ್ತಿ ಇವರಲ್ಲಿ ಇರು­ವು­ದಿಲ್ಲ. ಆದ್ದರಿಂದ ಐಸಿಟಿ ಯೋಜನೆ ಬಡ ವಿದ್ಯಾರ್ಥಿಗಳಿಗೆ ವರದಾನವಾಗಿತ್ತು.

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಅವಧಿಯ (ಪೀರಿ­ಯಡ್‌) ಕಂಪ್ಯೂಟರ್‌ ಶಿಕ್ಷಣ ಮತ್ತು ಎರಡು ಅವಧಿಯ ಕಂಪ್ಯೂಟರ್‌ ಸಂಬಂಧಿ ವಿಷಯದ ತರಬೇತಿ ನೀಡ­ಲಾ­ಗು­ತ್ತಿತ್ತು. ದ್ವಿತೀಯ ಪಿಯುಸಿ ವಿದ್ಯಾರ್ಥಿ­ಗ­ಳಿಗೆ ವಾರದಲ್ಲಿ ಒಂದು ಅವಧಿ ಕಂಪ್ಯೂ­ಟರ್‌ ಮತ್ತು ಮೂರು ಅವಧಿಯ ಕಂಪ್ಯೂ­­ಟರ್‌ಗೆ ಸಂಬಂಧಿಸಿದ ತರಬೇತಿ ತರಗತಿ ನಡೆಸಲಾಗುತ್ತಿತ್ತು.

ಪಿಯುಸಿ ನಂತರ ವಿದ್ಯಾಭ್ಯಾಸ ಮುಂದು­­­ವರೆಸಲಾಗದ ವಿದ್ಯಾರ್ಥಿಗಳು ಖಾಸಗಿ ಕಂಪೆನಿಯಲ್ಲಿ ಕೆಲಸ ಪಡೆಯಲು ಅಥವಾ ಸ್ವಂತ ಉದ್ಯೋಗ ಮಾಡಲು ಇದ­­ರಿಂದ ಅನುಕೂ­ಲವಾಗುತ್ತಿತ್ತು. ಆಸಕ್ತಿ, ಸಾಮರ್ಥ್ಯ ಇರುವ ವಿದ್ಯಾರ್ಥಿ­­ಗಳು ಬೇಡಿಕೆ ಇರುವ ಕಂಪ್ಯೂಟರ್ ಕೋರ್ಸ್‌­­­ಗಳನ್ನು ಪೂರೈಸಿ ಉತ್ತಮ ಉದ್ಯೋಗ ಪಡೆಯಲೂ  ಸಹಕಾರಿಯಾಗಿತ್ತು.

‘ಯೋಜನೆ ಜಾರಿಗೊಳಿಸಲು ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. 2013­­–­14ನೇ ಸಾಲಿಗೆ ಗುತ್ತಿಗೆ ಅವಧಿ ಮುಗಿದಿದೆ. ಯೋಜನೆ ಮುಂದುವ­ರಿ­­ಸಲು ಮತ್ತೆ ಸರ್ಕಾರದ ಒಪ್ಪಿಗೆ ಬೇಕು. ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸು­ವಂತೆ ಸೂಚನೆ ಬಂದಿದೆ. ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ. ಆ ನಂತರ ಸರ್ಕಾರದ ಸೂಚನೆಯಂತೆ ಮುಂದುವ­ರಿಯ­ಲಾ­ಗು­ತ್ತದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾ­ಖೆಯ ಅಧಿಕಾರಿ­ಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸಕ್ತ ಸಾಲಿನ ಪಿಯುಸಿ ತರಗತಿಗಳು ಜೂನ್‌­ನ­ಲ್ಲಿಯೇ ಆರಂಭವಾಗಿವೆ. ಕ್ರಿಯಾ­­ಯೋಜನೆ ರೂಪಿಸಿ ಅದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿ ಮತ್ತೆ ಐಸಿಟಿ ಜಾರಿ­ಯಾ­ಗುವ ವೇಳೆಗೆ ಈ ವರ್ಷದ ತರಗತಿಗಳು ಮುಗಿದಿರುತ್ತವೆ ಎಂದು ಪಿಯುಸಿ ಕಾಲೇಜಿನ ಕೆಲವು ಉಪ­ನ್ಯಾ­ಸಕರು ಅಭಿಪ್ರಾಯ ಪಡು­ತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT