ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಷ್ಠ ಶಿಲ್ಪ ಕಲಾ ಶಿಬಿರಕ್ಕೆ ಚಾಲನೆ

ನೆಲಕ್ಕೆ ಉರುಳಿದ ಮರಗಳು ಕಲಾಕೃತಿಗಳ ರೂಪ ಪಡೆಯಲಿವೆ: ರಾಜೀವ್‌ ಚಾವ್ಲಾ
Last Updated 13 ಅಕ್ಟೋಬರ್ 2015, 19:53 IST
ಅಕ್ಷರ ಗಾತ್ರ

ಬೆಂಗಳೂರು: ತೋಟಗಾರಿಕೆ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಬ್ಬನ್‌ ಉದ್ಯಾನದಲ್ಲಿ ಹಮ್ಮಿಕೊಂಡಿರುವ ‘ಸಮಕಾಲೀನ ಕಾಷ್ಠ ಶಿಲ್ಪಕಲಾ’ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಚಾವ್ಲಾ, ‘ಉದ್ಯಾನದಲ್ಲಿ ಮಳೆ, ಬಿರುಗಾಳಿಗೆ ನೆಲಕ್ಕೆ ಉರುಳಿ ಬೀಳುತ್ತಿದ್ದ ಮರ ಹಾಗೂ ಅದರ ರೆಂಬೆಗಳು ಒಲೆಗೆ ಸೌದೆಯಾಗಿ ಬಳಕೆಯಾಗುತ್ತಿದ್ದವು.

ಈಗ ಅವುಗಳು ಕಲಾಕೃತಿಗಳ ರೂಪ ಪಡೆಯಲಿವೆ. ಜೊತೆಗೇ ಪರಿಸರದಲ್ಲಿ ಇಂಗಾಲ ಹರಡುವುದು ತಪ್ಪಲಿದೆ’ ಎಂದು ಹೇಳಿದರು. ‘ಬರುವ ದಿನಗಳಲ್ಲಿ ಹಂತ ಹಂತವಾಗಿ ನಗರದ ಇತರ ಉದ್ಯಾನಗಳಲ್ಲಿಯೂ ಈ ರೀತಿಯ ಕಾರ್ಯಾಗಾರಗಳನ್ನು ನಡೆಸುವ ಯೋಚನೆ ಇದೆ’ ಎಂದು ತಿಳಿಸಿದರು.

ಪರಿಸರವಾದಿ ಎ.ಎನ್‌. ಯಲ್ಲಪ್ಪ ರೆಡ್ಡಿ ಮಾತನಾಡಿ, ‘ಬೆಂಗಳೂರಿನಲ್ಲಿ ಪ್ರತಿ ವರ್ಷ ಸಾವಿರಾರು ಮರಗಳು ಉರುಳಿ ಬೀಳುತ್ತವೆ. ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಕತ್ತರಿಸಿ ಒಂದೆಡೆ ಇಡಬೇಕು.  ಬಳಿಕ ಕಾರ್ಯಾಗಾರ ಆಯೋಜಿಸಿ ಅವುಗಳಲ್ಲಿ ಕಲಾಕೃತಿ ನಿರ್ಮಿಸಬೇಕು. ಇದಕ್ಕಾಗಿ ಬಿಬಿಎಂಪಿ ಪ್ರತ್ಯೇಕವಾದ ವಿಭಾಗವನ್ನೇ ಸ್ಥಾಪಿಸಬೇಕು’ ಎಂದು ಸಲಹೆ ಮಾಡಿದರು.

‘ಮಕ್ಕಳ ಆಟಿಕೆಗಳಲ್ಲಿ ಸೀಸ ಸೇರಿ ಇತರ ವಿಷಕಾರಕ ಅಂಶಗಳು ಇರುತ್ತವೆ. ಹಾಗಾಗಿ ಕಟ್ಟಿಗೆಯಲ್ಲಿ ಆಟಿಕೆಗಳನ್ನು ತಯಾರಿಸಿದರೆ ಮಕ್ಕಳನ್ನು ಅಪಾಯದಿಂದ ದೂರ ಇಡಬಹುದು’ ಎಂದರು.

15 ದಿನಗಳ ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳ 30 ಕಲಾವಿದರು ಪಾಲ್ಗೊಂಡಿದ್ದಾರೆ. ಕಬ್ಬನ್‌ ಉದ್ಯಾನದ ಆವರಣದಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಒಳಾಂಗಣ, ಬ್ಯಾಂಡ್‌ ಸ್ಟ್ಯಾಂಡ್‌, ಕೇಂದ್ರೀಯ ಗ್ರಂಥಾಲಯದ ಸಮೀಪ ತಲಾ 10 ಕಲಾವಿದರನ್ನು ಒಳಗೊಂಡಂತೆ 3 ಕಡೆ ಶಿಬಿರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT